ಸುಹಾಸ್ ಶೆಟ್ಟಿ ಕೊಲೆ ಕೇಸ್: ಆರೋಪಿಗಳ ಪತ್ತೆಗೆ 4 ತಂಡ ರಚನೆ; ಶಾಂತಿ ಕಾಪಾಡುವಂತೆ ಗೃಹ ಸಚಿವ ಪರಮೇಶ್ವರ್ ಮನವಿ

ಮಂಗಳೂರಿನಲ್ಲಿ ಗುರುವಾರ ರಾತ್ರಿ 8.30 ಗಂಟೆಗೆ ಈ ಘಟನೆ ನಡೆದಿದೆ. ಸುಹಾಸ್ ಶೆಟ್ಟಿ ಎಂಬ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಈಗಾಗಲೇ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ.
G Parameshwar
ಗೃಹ ಸಚಿವ ಜಿ ಪರಮೇಶ್ವರ್
Updated on: 

ಬೆಂಗಳೂರು: ಹಿಂದೂ ಸಂಘಟನೆ ಕಾರ್ಯಕರ್ತ ಹಾಗೂ ರೌಡಿಶೀಟರ್ ಸುಹಾಸ್‌ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳ ಪತ್ತೆ 4 ತಂಡಗಳನ್ನು ರಚಿಸಲಾಗಿದೆ. ಮಂಗಳೂರಿನಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಜನತೆ ಶಾಂತಿ ಕಾಪಾಡಬೇಕೆಂದು ಗೃಹ ಸಚಿವ ಪರಮೇಶ್ವರ್ ಅವರು ಶುಕ್ರವಾರ ಮನವಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಗುರುವಾರ ರಾತ್ರಿ 8.30 ಗಂಟೆಗೆ ಈ ಘಟನೆ ನಡೆದಿದೆ. ಸುಹಾಸ್ ಶೆಟ್ಟಿ ಎಂಬ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಈಗಾಗಲೇ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಯಾರು ಈ ಕೆಲಸ ಮಾಡಿದ್ದಾರೆ ಅವರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ. ಮಂಗಳೂರಿನಲ್ಲಿ ನಡೆದ ಎರಡು ಕೊಲೆ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದೆ. ನಾವು ಯಾವುದೇ ಕಾರಣಕ್ಕೂ ಆರೋಪಿಗಳನ್ನು ಬಿಡುವುದಿಲ್ಲ. ಆರೋಪಿಗಳ ಪತ್ತೆಗೆ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದೆ ಎಂದು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಜನರು ಶಾಂತಿ ಕಾಪಾಡಬೇಕು. ಸರ್ಕಾರ ನಿಮ್ಮ ಜೊತೆಗಿದೆ. ಪೊಲೀಸ್ ಇಲಾಖೆಯೂ ನಿಮ್ಮ ಜೊತೆಗಿದೆ. ಈಗಾಗಲೇ ಹಿರಿಯ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ಆಗಬಾರದು. ಘಟನೆಯ ಬಗ್ಗೆ ವರದಿ ಕೇಳಲಾಗಿದೆ.

ಇಂತಹ ಘಟನೆಗಳನ್ನು ಯಾವ ಕಾರಣಕ್ಕೂ ಬೆಳೆಯುವುದಕ್ಕೆ ಬಿಡುವುದಿಲ್ಲ. ಯಾವುದೇ ರಾಜಕೀಯ ಪಕ್ಷ ಆದರೂ ಆರೋಪಿಗಳನ್ನು ಬಿಡುವುದಿಲ್ಲ. ಯಾವ ಸರ್ಕಾರವೂ ಕೂಡಾ ಕೊಲೆ ಆಗುವುದಕ್ಕೆ ಬಯಸುವುದಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಜವಾಬ್ದಾರಿ. ಯಾವುದೇ ಇಂತಹ ಘಟನೆಗಳು ಮುಂದೆ ಆಗಲು ಬಿಡುವುದಿಲ್ಲ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.

G Parameshwar
ಸುಹಾಸ್ ಶೆಟ್ಟಿ ಹತ್ಯೆ: ದಕ್ಷಿಣ ಕನ್ನಡಿಗರನ್ನು ಮತ್ತೆ ನೆನಪಿಸಿದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ

ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ ನಲ್ಲಿ ಹಿಂದೂಗಳಿಲ್ಲವೇ? ಬಿಜೆಪಿಯ ಆರೋಪದಲ್ಲಿ ಅರ್ಥ ಇಲ್ಲ ಎಂದು ತಿರುಗೇಟು ನೀಡಿದರು.

ಹಿಂದುತ್ವಪರ ಕಾರ್ಯಕರ್ತ, ರೌಡಿ ಶೀಟರ್‌ ಸುಹಾಸ್‌ ಶೆಟ್ಟಿಯನ್ನು ದುಷ್ಕರ್ಮಿಗಳ ತಂಡವು ಬಜಪೆಯ ಕಿನ್ನಿಪದವಿನಲ್ಲಿ ತಲವಾರಿನಿಂದ ಕೊಚ್ಚಿ ಗುರುವಾರ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಬಜಪೆಯ ಸುಹಾಸ್ ಶೆಟ್ಟಿ ವಿರುದ್ಧ ಎರಡು ಕೊಲೆ ಪ್ರಕರಣಗಳೂ ಸೇರಿದಂತೆ ಐದು ಪ್ರಕರಣಗಳು ದಾಖಲಾಗಿದ್ದವು. ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆಯಾದ ಬೆನ್ನಲ್ಲೇ ಸುರತ್ಕಲ್‌ನಲ್ಲಿ 2022ರ ಜುಲೈ 28ರಂದು ನಡೆದಿದ್ದ ಕಾಟಿಪಳ್ಳ ಮಂಗಳಪೇಟೆಯ ಮಹಮ್ಮದ್‌ ಫಾಝಿಲ್ ಹತ್ಯೆ ಪ್ರಕರಣದಲ್ಲಿ ಸುಹಾಸ್ ಶೆಟ್ಟಿ ಪ್ರಮುಖ ಆರೋಪಿಯಾಗಿದ್ದ. ಕಳೆದ ವರ್ಷ ಜಾಮೀನಿನ ಮೇಲೆ ಹೊರಗೆ ಬಂದಿದ್ದ ಎಂದು ತಿಳಿದುಬಂದಿದೆ.

‘ಸುಹಾಸ್ ಶೆಟ್ಟಿ ಇನ್ನೊವಾ ಕಾರಿನಲ್ಲಿ ಸಹಚರರಾದ ಸಂಜಯ್‌, ಪ್ರಜ್ವಲ್‌, ಅನ್ವಿತ್‌, ಲತೀಶ್‌ ಹಾಗೂ ಶಶಾಂಕ್‌ ಜೊತೆ ತೆರಳುತ್ತಿದ್ದಾಗ ಐದಾರು ಮಂದಿ ದುಷ್ಕರ್ಮಿಗಳ ತಂಡ ಸ್ವಿಫ್ಟ್‌ ಕಾರು ಹಾಗೂ ಪಿಕಪ್ ವಾಹನದಲ್ಲಿ ಹಿಂಬಾಲಿಸಿತ್ತು.

ಬಜಪೆ ಠಾಣೆ ವ್ಯಾಪ್ತಿಯ ಕಿನ್ನಿಪದವಿನಲ್ಲಿ ರಾತ್ರಿ 8.27ಕ್ಕೆ ಕಾರನ್ನು ಏಕಾಏಕಿ ಅಡ್ಡಗಟ್ಟಿ ಸುಹಾಸ್ ಶೆಟ್ಟಿ ಮೇಲೆ ಹಲ್ಲೆ ನಡೆಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಎ.ಜೆ.ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ, ಅಷ್ಟರಲ್ಲೇ ಆತ ಕೊನೆಯುಸಿರೆಳೆದಿದ್ದ ಎಂದು ವರದಿಗಳು ತಿಳಿಸಿವೆ.

ಇನ್ನು ಘಟನೆಯಲ್ಲಿ ಸುಹಾಸ್‌ ಶೆಟ್ಟಿಯ ಸಹಚರನೊಬ್ಬ ಗಾಯಗೊಂಡಿದ್ದು, ಆತ ಎ.ಜೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಜಪೆ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com