ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ತಿಳಿಸಿದ್ದಾರೆ. ಬಂಧಿತ 8 ಮಂದಿಯನ್ನು ಅಬ್ದುಲ್ ಸಫ್ವಾನ್, ನಿಯಾಜ್, ಎಂಡಿ ಮುಜಾಮಿಲ್, ಕಲಂದರ್ ಶಫಿ, ಆದಿಲ್ ಮೆಹರೂಫ್, ನಾಗರಾಜ್, ಎಂಡಿ ರಿಜ್ವಾನ್ ಮತ್ತು ರಂಜಿತ್ ಎಂದು ಗುರುತಿಸಲಾಗಿದೆ. ಮಂಗಳೂರಿಗೆ ಇಂದು ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತೇವೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಒಂದು ನಿರ್ಧಾರಕ್ಕೆ ಬಂದಿದೆ. ಇಂತಹ ಘಟನೆಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳಲು, ನಾವು ಎರಡೂ ಜಿಲ್ಲೆಗಳಲ್ಲಿ ಕೋಮು ವಿರೋಧಿ ಕಾರ್ಯಪಡೆಯನ್ನು ರಚಿಸುತ್ತಿದ್ದೇವೆ. ಈ ಕಾರ್ಯಪಡೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲಿದೆ. ಕೋಮುವಾದವನ್ನು ಬೆಂಬಲಿಸುವ ಅಥವಾ ಉತ್ತೇಜಿಸುವವರ ವಿರುದ್ಧ ಕೋಮು ವಿರೋಧಿ ಕಾರ್ಯಪಡೆ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದರು.
ಕನ್ನಡಿಗರ ಭಾವನೆಗಳಿಗೆ ನೋವುಂಟು ಮಾಡಿದ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಖ್ಯಾತ ಗಾಯಕ ಸೋನು ನಿಗಮ್ ವಿರುದ್ಧ ಬೆಂಗಳೂರಿನ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎ.ಧರ್ಮರಾಜ ಸೋನು ನಿಗಮ ವಿರುದ್ಧ ವಿಡಿಯೋ ಸಮೇತ ಪೊಲೀಸರಿಗೆ ದೂರು ನೀಡಿದ್ದರು. ಕರ್ನಾಟಕ ರಕ್ಷಣಾ ವೇದಿಕೆ ನೀಡಿದ ದೂರಿನ ಆಧಾರದ ಮೇಲೆ ಬಿಎನ್‌ಎಸ್ ಸೆಕ್ಷನ್ 352(1), 352(2), ಮತ್ತು 353ರ ಅಡಿಯಲ್ಲಿ ಸೋನು ನಿಗಮ್ ವಿರುದ್ಧ ಕೇಸ್ ದಾಖಲಿಸಲಾಗಿದೆ. ಸೋನು ನಿಗಮ್ ಇತ್ತೀಚೆಗೆ ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಪಹಲ್ಗಾಮ್ ಉಗ್ರ ದಾಳಿಯನ್ನು ಉಲ್ಲೇಖಿಸಿ ಕನ್ನಡ ವಿರೋಧಿ ಹೇಳಿಕೆ ನೀಡಿದ್ದರು. ಇದು ಕನ್ನಡಿಗರು ಕೆರಳುವಂತೆ ಮಾಡಿತ್ತು.
ಕೆಪಿಎಸ್‌ಸಿ ಪರೀಕ್ಷೆಯಲ್ಲಿನ ಎಡವಟ್ಟುಗಳ ಸರಣಿ ಮುಂದುವರೆದಿದ್ದು, ಇದೀಗ ಮೇ 2ರಂದು ಮಧ್ಯರಾತ್ರಿ ಕೆಪಿಎಸ್‌ಸಿ ಪರೀಕ್ಷೆ ಹಾಲ್ ಟಿಕೆಟ್ ಬಿಡುಗಡೆ ಮಾಡಿರುವುದು ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಮೇ 3ರಂದು ನಡೆಯಲಿರುವ ಕೆಎಎಸ್ ಗೆಜೆಟೆಡ್ ಪ್ರೊಬೇಷನರಿ ಮುಖ್ಯ ಪರೀಕ್ಷೆಯನ್ನು ತೆಗೆದುಕೊಳ್ಳಲು ಹೈಕೋರ್ಟ್ ಅನುಮತಿ ನೀಡಿತ್ತು. ಕಳೆದ ಡಿಸೆಂಬರ್ ನಲ್ಲಿ ನಡೆದಿದ್ದ ಪೂರ್ವಭಾವಿ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆಗಳ ಭಾಷಾಂತರದ ಗೊಂದಲದಿಂದಾಗಿ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯದಿದ್ದ 120 ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆ ಬರೆಯಲು ಹೈಕೋರ್ಟ್ ಅನುಮತಿ ನೀಡಿತ್ತು. ಮೇ 3ರಂದು ನಡೆಯಲಿದ್ದ ಪರೀಕ್ಷೆಗಾಗಿ ಕರ್ನಾಟಕ ಲೋಕಸೇವಾ ಆಯೋಗ ಕಳೆದ ತಡರಾತ್ರಿ 3 ಗಂಟೆಗೆ ಹಾಲ್ ಟಿಕೆಟ್ ಹಂಚಿಕೆ ಮಾಡಲಾಗಿದ್ದು ಬೆಳಗ್ಗೆ 8 ಗಂಟೆಗೆ ಪರೀಕ್ಷೆ ಬರೆಯುವಂತೆ ಸೂಚಿಸಿತ್ತು.
ಬೆಂಗಳೂರಿನ ಕೆಂಗೇರಿ ಠಾಣೆ ವ್ಯಾಪ್ತಿಯ ನೈಸ್ ರಸ್ತೆಯಲ್ಲಿ ವಕೀಲರೊಬ್ಬರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಮೇ 2ರಂದು ರಾತ್ರಿ 8 ಗಂಟೆ ಸುಮಾರಿಗೆ ಬನ್ನೇರುಘಟ್ಟ-ಕನಕಪುರ ಮಾರ್ಗದ ನೈಸ್ ರಸ್ತೆಯಲ್ಲಿ ಜಗದೀಶ್ ಎಂಬುವವರ ಮೃತದೇಹ ಪತ್ತೆಯಾಗಿದ್ದು, ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಳವಳ್ಳಿ ಮೂಲದ ಜಗದೀಶ್ ಬೆಂಗಳೂರಿನ ಉಲ್ಲಾಳದಲ್ಲಿ ವಾಸವಿದ್ದರು. ಶುಕ್ರವಾರ ಜಗದೀಶ್ ಅವರು ತೆರಳುತ್ತಿದ್ದ ಕಾರಿನಿಂದ 100 ಮೀಟರ್ ದೂರದಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಕಾರಿನ ಒಂದೆರಡು ಕಡೆಗಳಲ್ಲಿ ಸಣ್ಣ ಪ್ರಮಾಣದ ಅಪಘಾತವಾದ ಗುರುತುಗಳಿವೆ. ಆದರೆ ಇದು ಅಪಘಾತವೋ ಅಥವಾ ಕೊಲೆಯೊ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವೇಗವಾಗಿ ಬಂದ KSRTC ಬಸ್ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗೊಂಡಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಶಾಂತಿನಗರ ಗ್ರಾಮದ ಬಳಿ ನಡೆದಿದೆ. ಮೃತರನ್ನು ಶಾಂತಿನಗರ ಗ್ರಾಮದ ಶ್ರೀನಿವಾಸ್, ಪುಟ್ಟಮ್ಮ, ವರ್ಷಿಣಿ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಲೇಖನ ಎಂಬ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ. ಮತ್ತೊಂದೆಡೆ ತಿರುಪತಿಗೆ ತೆರಳುತ್ತಿದ್ದ ಬೆಂಗಳೂರಿನ ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿದ್ದು, ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಾಶಿಪೆಂಟ್ಲಾ ಹೆರಿಟೇಜ್ ಬಳಿ ನಡೆಸಿದೆ. ಗಾಯಾಳುಗಳನ್ನು ತಿರುಪತಿಯ ರುಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement