News Headlines 06-05-25 | ಅಕ್ರಮ ಗಣಿಕಾರಿಕೆ: ಜನಾರ್ದನ ರೆಡ್ಡಿಗೆ 7 ವರ್ಷ ಜೈಲು; CSK vs RCB: IPS ಅಧಿಕಾರಿ ಮಕ್ಕಳಿಗೆ ಕಿರುಕುಳ; RCB ಅಭಿಮಾನಿಗಳ ಬಂಧನ; ನಾಳೆ ಬೆಂಗಳೂರು ಸೇರಿ ರಾಜ್ಯದ 3 ಕಡೆ ಮಾಕ್ ಡ್ರಿಲ್!

News Headlines 06-05-25 | ಅಕ್ರಮ ಗಣಿಕಾರಿಕೆ: ಜನಾರ್ದನ ರೆಡ್ಡಿಗೆ 7 ವರ್ಷ ಜೈಲು; CSK vs RCB: IPS ಅಧಿಕಾರಿ ಮಕ್ಕಳಿಗೆ ಕಿರುಕುಳ; RCB ಅಭಿಮಾನಿಗಳ ಬಂಧನ; ನಾಳೆ ಬೆಂಗಳೂರು ಸೇರಿ ರಾಜ್ಯದ 3 ಕಡೆ ಮಾಕ್ ಡ್ರಿಲ್!

1. ಅಕ್ರಮ ಗಣಿಕಾರಿಕೆ: ಜನಾರ್ದನ ರೆಡ್ಡಿಗೆ 7 ವರ್ಷ ಜೈಲು

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಓಬಳಾಪುರಂನಲ್ಲಿ ಒಎಂಸಿ ಕಂಪನಿಯ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಗಂಗಾವತಿ ಹಾಲಿ ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಸಿಬಿಐ ವಿಶೇಷ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ. ಒಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ-ಪ್ರತಿವಾದ ಆಲಿಸಿದ್ದ ಹೈದರಾಬಾದ್ ಸಿಬಿಐ ನ್ಯಾಯಾಲಯ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ 13 ವರ್ಷಗಳಿಂದ ನಡೆದ ಸುದೀರ್ಘ ವಿಚಾರಣಾ ಪ್ರಕ್ರಿಯೆಯಲ್ಲಿ 3,400ಕ್ಕೂ ಹೆಚ್ಚು ದಾಖಲೆಗಳನ್ನು ಪರಿಶೀಲಿಸಲಾಗಿದ್ದು 219 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಜನಾರ್ದನ ರೆಡ್ಡಿ ಏಳು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದು ಹೀಗಾಗಿ ಅವರ ಶಾಸಕ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಇನ್ನು ಇದೇ ಪ್ರಕರಣದಲ್ಲಿ ವಿ.ಡಿ ರಾಜಗೋಪಾಲ್, ರಾವ್ ಲಿಂಗಾರೆಡ್ಡಿ, ಮೆಹಫೂಸ್ ಅಲಿ ಖಾನ್ ಕೂಡ ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿದೆ.

2. ನಾಳೆ ಬೆಂಗಳೂರು ಸೇರಿ ರಾಜ್ಯದ 3 ಕಡೆ ಮಾಕ್ ಡ್ರಿಲ್

ಪಹಲ್ಗಾಮ್ ಉಗ್ರ ದಾಳಿ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನ ನಡುವಣ ಉದ್ವಿಗ್ನ ಪರಿಸ್ಥಿತಿ ನಡುವೆ ಭಾರತೀಯ ಸೇನೆಯು ನಾಳೆ ರಾಜ್ಯದ ಮೂರು ನಗರಗಳಲ್ಲಿ ತುರ್ತು ಸನ್ನದ್ಧತೆಗೆ ಮಾಕ್ ಡ್ರಿಲ್ ನಡೆಸಲಿದೆ. ಅದರಲ್ಲಿ ಬೆಂಗಳೂರು ನಗರವೂ ಸೇರಿದೆ. ಇದು ಹಲವಾರು ರಕ್ಷಣಾ ಸ್ಥಾಪನೆಗಳನ್ನು ಹೊಂದಿರುವ ಮಹಾನಗರ ಪ್ರದೇಶವಾಗಿದೆ ಮತ್ತು ಕರ್ನಾಟಕದ ಅತ್ಯಂತ ಸೂಕ್ಷ್ಮ ಜಿಲ್ಲೆಯಾಗಿದೆ". "ಎರಡನೇ ಸ್ಥಳ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಇದು ಕೈಗಾ ಪರಮಾಣು ವಿದ್ಯುತ್ ಸ್ಥಾವರದ ನೆಲೆಯಾಗಿದೆ. ಮೂರನೆಯದು ರಾಯಚೂರು, ಅಲ್ಲಿ ಥರ್ಮಲ್ ವಿದ್ಯುತ್ ಸ್ಥಾವರ ಇರುವುದರಿಂದ ಆಯ್ಕೆ ಮಾಡಲಾಗಿದೆ" ಎಂದು ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಠಾಕೂರ್ ಹೇಳಿದರು. ವಾಯುದಾಳಿ ಎಚ್ಚರಿಕೆ ಸೈರನ್ ಗಳ ಸಕ್ರಿಯಗೊಳಿಸುವಿಕೆ, ಮೂಲಭೂತ ನಾಗರಿಕ ರಕ್ಷಣಾ ತಂತ್ರಗಳಲ್ಲಿ ವಿದ್ಯಾರ್ಥಿಗಳು ಸೇರಿದಂತೆ ನಾಗರಿಕರಿಗೆ ತರಬೇತಿ, ಕ್ರ್ಯಾಶ್ ಬ್ಲ್ಯಾಕೌಟ್ ಪ್ರೋಟೋಕಾಲ್ ಗಳ ಅನುಷ್ಠಾನ ಸೇರಿದಂತೆ ಯುದ್ಧ ಸನ್ನದ್ಧತೆ ಮತ್ತು ಅವುಗಳನ್ನು ಕಾರ್ಯಗತಗೊಳಿಸುವಿಕೆಯನ್ನು ಮೌನ್ಯಮಾಪನ ಮಾಡುವುದು ಸೇರಿದೆ. ಬೆಂಗಳೂರಿನಲ್ಲಿ 35 ಸೈರನ್‌ಗಳನ್ನು ನಿಯೋಜಿಸಲಾಗಿದ್ದು, ಅವುಗಳಲ್ಲಿ 32 ಕಾರ್ಯನಿರ್ವಹಿಸುತ್ತಿದ್ದು, ಪ್ರತಿಯೊಂದೂ ಸುಮಾರು 3 ಕಿ.ಮೀ ವ್ಯಾಪ್ತಿ ಕೇಳಿಸುತ್ತದೆ. ಸೈರನ್ ಕೇಳಿದಾಗ ಜನರು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ತಿಳಿದಿರಬೇಕು ಎಂದು ಠಾಕೂರ್ ತಿಳಿಸಿದರು. ನಾಳೆ ದೇಶದಲ್ಲಿ ಅಧಿಕೃತವಾಗಿ ಗೊತ್ತುಪಡಿಸಿದ 244 ನಾಗರಿಕ ರಕ್ಷಣಾ ಜಿಲ್ಲೆಗಳಲ್ಲಿ ರಾಷ್ಟ್ರೀಯ ಮಟ್ಟದ ನಾಗರಿಕ ರಕ್ಷಣಾ ಪೂರ್ವಾಭ್ಯಾಸ ನಡೆಯಲಿದೆ.

3. ಹುಬ್ಬಳ್ಳಿಯಲ್ಲಿ ಅಪಘಾತ ಐವರ ಸಾವು

ಲಾರಿ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿ, ವಿಜಯಪುರ ರಾಷ್ಟ್ರೀಯ ಹೆದ್ದಾರಿಯ ಇಂಗಳಹಳ್ಳಿ ಕ್ರಾಸ್ ಬಳಿ ಸಂಭವಿಸಿದೆ. ಮೃತರನ್ನು ಶಿವಮೊಗ್ಗ ಜಿಲ್ಲೆಯ ಸಾಗರದ ಶ್ವೇತ, ಅಂಜಲಿ, ಸಂದೀಪ್, ವಿಠ್ಠಲ್ ಹಾಗೂ ಶಶಿಕಲಾ ಎಂದು ಗುರುತಿಸಲಾಗಿದೆ. ವಿಜಯಪುರ ಕಡೆಯಿಂದ ಹುಬ್ಬಳ್ಳಿಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಎದುರುಗಡೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.

4. CSK vs RCB: IPS ಅಧಿಕಾರಿ ಮಕ್ಕಳಿಗೆ ಕಿರುಕುಳ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ಹಿರಿಯ ಐಪಿಎಸ್ ಅಧಿಕಾರಿಯ ಮಕ್ಕಳಿಗೆ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದ್ದು, ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣ ದಾಖಲಾಗಿದೆ. ಮೇ 3ರಂದು ಚೆನ್ನೈ ಮತ್ತು ಬೆಂಗಳೂರಿನ ನಡುವೆ ನಡೆದ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಡೈಮಂಡ್ ಬಾಕ್ಸ್‌ನಲ್ಲಿ ರಾತ್ರಿ 9.40ರ ಸುಮಾರಿಗೆ ಅಪರಿಚಿತ ವ್ಯಕ್ತಿಗಳು ಐಪಿಎಸ್ ಅಧಿಕಾರಿಯ ಮಗನನ್ನು ನಿಂದಿಸಿ ಮಗಳನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ಅಧಿಕಾರಿಯ ಪತ್ನಿ ದೂರು ದಾಖಲಿಸಿದ್ದಾರೆ. ಮತ್ತೊಂದೆಡೆ ಚೆನ್ನೈ ವಿರುದ್ಧ ಬೆಂಗಳೂರು ತಂಡ 2 ರನ್ ಗಳಿಂದ ರೋಚಕ ಗೆಲುವು ಸಾಧಿಸಿದ್ದನ್ನು ಸಂಭ್ರಮಿಸಿದ್ದ ಯುವಕರ ಗುಂಪು ವಿರಾಟ್ ಕೊಹ್ಲಿಯ ಕಟೌಟ್ ಮುಂದೆ ಎರಡು ಮೇಕೆಗಳನ್ನು ಬಲಿ ನೀಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರನಲ್ಲಿ ಘಟನೆ ನಡೆದಿದ್ದು RCB ಅಭಿಮಾನಿಗಳಾದ ಸಣ್ಣ ಪಾಲಯ್ಯ, ಜಯಣ್ಣ ಮತ್ತು ತಿಪ್ಪೆ ಸ್ವಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com