
ಬೆಂಗಳೂರು: ಕ್ರೋಕ್ಸ್ ಚಪ್ಪಲಿಯಲ್ಲಿ ಅಡಗಿದ್ದ ವಿಷಕಾರಿ ಹಾವು ಕಚ್ಚಿ ಟೆಕ್ಕಿಯೊಬ್ಬರು ಸಾವನ್ನಪ್ಪಿರುವ ಘಟನೆಯೊಂದು ಬೆಂಗಳೂರು ಹೊರವಲಯದ ಬನ್ನೇರುಘಟ್ಟದ ರಂಗನಾಥ ಬಡಾವಣೆಯಲ್ಲಿ ನಡೆದಿದೆ.
ಮಂಜು ಪ್ರಕಾಶ್ (41) ಮೃತ ದುರ್ವೈವಿ. ಅಪಘಾತದಲ್ಲಿ ಕಾಲಿನ ಸ್ಪರ್ಶಶಕ್ತಿ ಕಳೆದುಕೊಂಡಿದ್ದರಿಂದ ಹಾವು ಕಚ್ಚಿದ್ದನ್ನು ಗಮನಿಸಲಾಗದೆ ಮಂಜು ಪ್ರಕಾಶ್ ಅವರು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಮೃತ ವ್ಯಕ್ತಿಯ ಕಿರಿಯ ಸಹೋದರ ಹರೀಶ್ ಮಾತನಾಡಿ, ಶುಕ್ರವಾರ ಮಧ್ಯಾಹ್ನ 12.45 ರ ಸುಮಾರಿಗೆ ಸಹೋದರ ಚಪ್ಪಲಿ ಧರಿಸಿ ಕಬ್ಬಿನ ಜ್ಯೂಸ್ ತರಲು ಹೊರ ಹೋಗಿದ್ದ. ಕೆಲವು ನಿಮಿಷಗಳ ನಂತರ ಹಿಂತಿರುಗಿದ್ದ. ನಂತರ ರೂಮಿಗೆ ಹೋಗಿ ಮಲಗಿದ್ದ. ಸುಮಾರು ಒಂದು ಗಂಟೆಯ ನಂತರ, ಕೆಲಸಗಾರನೊಬ್ಬ ಚಪ್ಪಲಿಯೊಳಗೆ ಹಾವು ಇರುವುದನ್ನು ಗಮನಿಸಿ ಕುಟುಂಬಕ್ಕೆ ನೀಡಿದ್ದಾರೆ.
ನನ್ನ ತಂದೆ ಚಪ್ಪಲಿಯನ್ನು ಪರಿಶೀಲಿಸಿದಾಗ ಕೊಳಕು ಮಂಡಲದ ಮರಿ ಹಾವು ಸತ್ತಿರುವುದು ಕಂಡು ಬಂದಿದೆ. ನಂತರ ಚಪ್ಪಲಿ ಧರಿಸಿ ಸಹೋದರ ಹೊರಗೆ ಹೋಗಿ ಬಂದಿದ್ದು ನಮಗೆ ಅರಿವಾಯಿತು. ಕೂಡಲೇ ರೂಮಿಗೆ ಹೋಗಿ ಪರಿಶೀಲಿಸಿದಾಗ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದುಸ ಬಾಯಿಯಿಂದ ನೊರೆ ಬಂದಿರುವುದು ಕಂಡು ಬಂದಿತ್ತು. ಮೂಗಿನಲ್ಲೂ ರಕ್ತ ಬಂದಿತ್ತು. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆವು. ಅದರೆ, ಆತ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದರು ಎಂದು ಕಣ್ಣೀರು ಹಾಕಿದ್ದಾರೆ.
ಮೃತ ವ್ಯಕ್ತಿಗೆ ಹಾವು ಕಚ್ಚಿದ ಅನುಭವ ಆಗಿಲ್ಲವೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 2016ರಲ್ಲಿ ಬಸ್ ಅಪಘಾತ ಸಂಭವಿಸಿ, ಸಹೋದರ ಗಾಯಗೊಂಡಿದ್ದ. ಈ ವೇಳೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಅದರಿಂದ ಕಾಲಿನ ಸಂವೇದನೆಯನ್ನು ಕಳೆದುಕೊಂಡಿದ್ದ ಎಂದು ಹೇಳಿದ್ದಾರೆ. ಈ ಸಂಬಂಧ ಬನ್ನೇರುಘಟ್ಟ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement