
ಬೆಂಗಳೂರು: ಮಾಜಿ ಪ್ರಿಯಕರಿನೊಬ್ಬ ನಡುರಸ್ತೆಯಲ್ಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ.
ವನಜಾಕ್ಷಿ (25) ಮೃತ ಮಹಿಳೆ. ಲಿವಿಂಗ್ ಟುಗೆದರ್ ನಲ್ಲಿದ್ದಾಕೆ ನಂತರ ತನ್ನಿಂದ ಅಂತರ ಕಾಯ್ದುಕೊಂಡು ಮತ್ತೊಬ್ಬನ ಜೊತೆ ಸಲುಗೆ ಬೆಳೆಸಿದಳು ಎಂಬ ಕಾರಣಕ್ಕೆ ಆರೋಪಿ ವಿಟ್ಠಲ್, ವನಜಾಕ್ಷಿ ಅವರ ಮೇಲೆ ನಡುರಸ್ತೆಯಲ್ಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ.
ಬಳಿಕ ಸ್ಥಳೀಯರು ಆಕೆಯನ್ನು ರಕ್ಷಿಸಿ, ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಮಹಿಳೆ ಶೇ.60ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾರೆ.
ಆರೋಪಿ ಕ್ಯಾಬ್ ಚಾಲಕನಾಗಿದ್ದು, ವನಜಾಕ್ಷಿಯವರು ಮೂರು ವರ್ಷಗಳ ಹಿಂದೆ ತನ್ನ ಪತಿಯಿಂದ ದೂರಾಗಿ ಆರೋಪಿಯೊಂದಿಗೆ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದರು. ಇನ್ನು ವಿಠ್ಠಲ್ ಅವರ ಮೊದಲ ಪತ್ನಿ ಆರೋಗ್ಯ ಸಮಸ್ಯೆಗಳಿಂದ ಸಾವನ್ನಪ್ಪಿದ್ದರೆ, ಎರಡನೇ ಪತ್ನಿ ಕೆಲವು ವರ್ಷಗಳ ಹಿಂದೆ ಪತಿಯನ್ನು ತೊರೆದಿದ್ದರು.
ಈ ನಡುವೆ ವಿಟ್ಠಲ್ ಜೊತೆಗಿನ ಸಂಬಂಧ ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ವನಜಾಕ್ಷಿಯವರೂ ನಾಲ್ಕು ತಿಂಗಳ ಹಿಂದೆ ಈತನನ್ನು ತೊರೆದು ಮುನಿಯಪ್ಪ ಎಂಬುವವರೊಂದಿಗೆ ವಾಸವಿರಲು ಪ್ರಾರಂಭಿಸಿದ್ದರು ಎನ್ನಲಾಗಿದೆ.
ಆರೋಪಿ ವಿಟ್ಠಲ್ ಮದ್ಯದ ಅಮಲಿನಲ್ಲಿ ವನಜಾಕ್ಷಿ ಅವರಿಗೆ ಆಗಾಗ್ಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಆಕೆಯ ಮೇಲೆ ಹಲ್ಲೆ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಹೀಗಾಗಿ ವನಜಾಕ್ಷಿಯವರು ಈತನಿಂದ ದೂರಾಗಿದ್ದರು ಎಂದು ಹೇಳಲಾಗುತ್ತಿದೆ.
ಇದರಿಂದ ಕೋಪಗೊಂಡಿದ್ದ ವಿಟ್ಠಲ್, ಶನಿವಾರ ಮಧ್ಯಾಹ್ನ ಮುನಿಯಪ್ಪ ಮತ್ತು ಸಂಬಂಧಿಯೊಂದಿಗೆ ಆಸ್ಪತ್ರೆಗೆ ಹೋಗುತ್ತಿದ್ದ ವನಜಾಕ್ಷಿ ಇದ್ದ ಕಾರನ್ನು ನಿಲ್ಲಿಸಿ, ಕಾರಿನ ಮೇಲೆ ಪೆಟ್ರೋಲ್ ಸುರಿದಿದ್ದ, ಈ ವೇಳೆ ಮುನಿಯಪ್ಪ ಹಾಗೂ ವನಜಾಕ್ಷಿ ಕಾರಿನಿಂದ ಇಳಿದು ಓಡಲು ಪ್ರಾರಂಭಿಸಿದ್ದರು. ಬಳಿಕ ಆರೋಪಿ ವನಜಾಕ್ಷಿ ಅವರನ್ನು ಬೆನ್ನಟ್ಟಿದ್ದು, ಕೆಳಗೆ ಬೀಳುತ್ತಿದ್ದಂತೆಯೇ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ.
ಘಟನೆ ಬಳಿಕ ಶನಿವಾರ ರಾತ್ರಿ ಆರೋಪಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು, ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದರು, ಆರಂಭದಲ್ಲಿ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿದ್ದರು. ಇದೀಗ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement