

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ಸ್ ಮಾರಾಟ ಜಾಲವನ್ನು ಬೇರುಸಹಿತ ಕಿತ್ತೊಗೆಯಲು ಪೊಲೀಸರ ಸಮರ ಸಾರಿದ್ದು, ಒಟ್ಟು ಎಂಟು ವಿದೇಶಿಯರು ಸೇರಿದಂತೆ 39 ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಸುಮಾರು 55.80 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಡ್ರಗ್ಸ್ ವಿರುದ್ಧ ಆರಂಭಿಸಿರುವ 'ಬೇಡ ಬ್ರೋ' ಕಾರ್ಯಾಚರಣೆಯ ಭಾಗವಾಗಿ ಸಿಸಿಬಿ ಸೇರಿದಂತೆ ಒಟ್ಟು 16 ಪೊಲೀಸ್ ಯೂನಿಟ್‌ಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 55.8 ಕೋಟಿ ರೂಪಾಯಿ ಮೌಲ್ಯದ 200 ಕೆಜಿಗೂ ಅಧಿಕ ಡ್ರಗ್ಸ್ ಜಪ್ತಿ ಮಾಡಲಾಗಿದೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು, ಮಿಷನ್ ರೈಸ್ ಮತ್ತು ಬೇಡ ಬ್ರೋ ಅಭಿಯಾನದಡಿ ಬೆಂಗಳೂರು ಮತ್ತು ಇತರ ರಾಜ್ಯಗಳಾದ ದೆಹಲಿ, ನೋಯ್ಡಾ, ಗುರುಗ್ರಾಮ್ ಹಾಗೂ ಕೇರಳದ ವಿವಿಧ ಸ್ಥಳಗಳಿಂದ 55 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ವಶಪಡಿಸಿಕೊಂಡ ವಸ್ತುಗಳಲ್ಲಿ ಎಂಡಿಎಂಎ, ಹೈಡ್ರೊ ಗಾಂಜಾ, ಕೊಕೇನ್ ಮತ್ತು ಗಾಂಜಾ ಸೇರಿವೆ.
"ಈ ಕಾರ್ಯಾಚರಣೆಯಲ್ಲಿ ಎಂಟು ವಿದೇಶಿಯರು, 21 ಇತರ ರಾಜ್ಯಗಳು ಮತ್ತು 10 ಸ್ಥಳೀಯರು ಸೇರಿದಂತೆ 39 ಜನರನ್ನು ಬಂಧಿಸಲಾಗಿದೆ. ಇದು ಸಿಸಿಬಿ ಸೇರಿದಂತೆ ನಗರ ಪೊಲೀಸರ 16 ಘಟಕಗಳು ಕೈಗೊಂಡ ಪ್ರಮುಖ ಕಾರ್ಯಾಚರಣೆಯಾಗಿದೆ" ಎಂದು ಅವರು ಹೇಳಿದರು.
ಕಳೆದ ಹತ್ತು ದಿನಗಳಿಂದ ಸತತ ಕಾರ್ಯಾಚರಣೆ ನಡೆಸಿದ ಪೊಲೀಸರು ಅಮೃತಹಳ್ಳಿ, ಗಿರಿನಗರ, ಕೆಐಎ (ವಿಮಾನ ನಿಲ್ದಾಣ), ಯಶವಂತಪುರ, ಯಲಹಂಕ, ಹೆಬ್ಬಾಳ, ನಂದಿನಿ ಲೇಔಟ್, ಕಾಡುಗೋಡಿ, ಮಲ್ಲೇಶ್ವರಂ, ಗೋವಿಂದಪುರ, ಬಾಗಲೂರು, ಮಹದೇವಪುರ, ಮಹಾಲಕ್ಷ್ಮೀ ಲೇಔಟ್, ಬೇಗೂರು ಹಾಗೂ ಕೊತ್ತನೂರು ಠಾಣಾ ವ್ಯಾಪ್ತಿಯಲ್ಲಿ ಮಾದಕ ದಂಧೆಕೋರರ ಜಾಲವನ್ನು ಭೇದಿಸಿದ್ದಾರೆ. ಬಂಧಿತರಿಂದ 17 ಲಕ್ಷ ರೂಪಾಯಿ ನಗದು, 22 ಮೊಬೈಲ್ ಫೋನ್‌ಗಳು ಹಾಗೂ 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೃಹತ್ ಪ್ರಮಾಣದ ಡ್ರಗ್ಸ್ ಜಪ್ತಿ
ಎಂಡಿಎಂಎ: 21 ಕೆಜಿ 641 ಗ್ರಾಂ ಗಾಂಜಾ: 184 ಕೆಜಿ 625 ಗ್ರಾಂ ಹೈಡ್ರೋ ಗಾಂಜಾ: 4 ಕೆಜಿ 493 ಗ್ರಾಂ ಅಫೀಮು: 1 ಕೆಜಿ 65 ಗ್ರಾಂ ಕೊಕೇನ್: 738 ಗ್ರಾಂ ಮಾರ್ಫಿನ್: 25 ಗ್ರಾಂ