

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಮಹಿಳಾ ಸಿಬ್ಬಂದಿಯ ಬೆರಳು ವಿದ್ಯುತ್ ಚಾಲಿತ ತುರಿಯುವ ಯಂತ್ರದಲ್ಲಿ ಸಿಲುಕಿಕೊಂಡು ಸಂಭವಿಸಬಹುದಾಗಿದ್ದ ಭಾರೀ ಅನಾಹುತವನ್ನು 5ನೇ ತರಗತಿ ವಿದ್ಯಾರ್ಥಿಯೊಬ್ಬನ ಸಮಯಪ್ರಜ್ಞೆ ತಪ್ಪಿಸಿದೆ.
ಮೂಲಗಳ ಪ್ರಕಾರ ನರಿಕೊಂಬು ಗ್ರಾಮದಲ್ಲಿರುವ ಶಾಲೆಯಲ್ಲಿ ಬುಧವಾರ ಈ ಘಟನೆ ನಡೆದಿದೆ. ಅಕ್ಷರ ದಾಸೋಹದ ಮಹಿಳಾ ಸಿಬ್ಬಂದಿಯೊಬ್ಬರು ತೆಂಗಿನಕಾಯಿ ತುರಿಯುವ ಯಂತ್ರವನ್ನು ನಿರ್ವಹಿಸುತ್ತಿದ್ದಾಗ ಅವರ ಬೆರಳು ಅದರಲ್ಲಿ ಸಿಲುಕಿಕೊಂಡಿತ್ತು. ನೋವಿನಿಂದ ಅವರು ಸಹಾಯಕ್ಕಾಗಿ ಕೂಗಿಕೊಂಡಿದ್ದು, ಇದನ್ನು ಕೇಳಿದ ವಿದ್ಯಾರ್ಥಿಗಳು ಹಾಗೂ ಶಾಲೆಯಲ್ಲಿದ್ದ ಇತರರು ತಕ್ಷಣ ಅವರ ನೆರವಿಗೆ ಧಾವಿಸಿದ್ದಾರೆ.
ಈ ವೇಳೆ ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ 5ನೇ ತರಗತಿ ವಿದ್ಯಾರ್ಥಿ ಮಾನ್ವಿತ್, ಸಹಾಯಕ್ಕಾಗಿ ಕೇಳಿಬಂದ ಕೂಗನ್ನು ಕೇಳಿ ಕೂಡಲೇ ಸ್ಥಳಕ್ಕೆ ಓಡಿ ಬಂದಿದ್ದಾನೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪರಿಸ್ಥಿತಿಯ ಅಪಾಯವನ್ನು ಅರಿತ ಮಾನ್ವಿತ್, ಯಾವುದೇ ಸಮಯ ವ್ಯರ್ಥ ಮಾಡದೆ ಯಂತ್ರದ ಬಳಿಗೆ ತೆರಳಿ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿದ್ದಾನೆ. ಇದರಿಂದ ಸಿಬ್ಬಂದಿಯ ಬೆರಳಿಗೆ ಮತ್ತಷ್ಟು ಗಾಯವಾಗುವುದನ್ನು ತಡೆಯಲು ಸಾಧ್ಯವಾಗಿದೆ. ಬಳಿಕ ಇತರರು ಸಿಬ್ಬಂದಿಯ ಬೆರಳನ್ನು ಹೊರಕ್ಕೆ ತೆಗೆದು ಪ್ರಥಮ ಚಿಕಿತ್ಸೆ ನೀಡಿದ್ದಾರೆ.
ಬಾಲಕನ ಸಮಯಪ್ರಜ್ಞೆಗೆ ಶ್ಲಾಘನೆ
ಮಾನ್ವಿತ್‌ನ ತಕ್ಷಣದ ನಿರ್ಧಾರ ಹಾಗೂ ಸಮಯಪ್ರಜ್ಞೆಯನ್ನು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ರವಿ ಅಂಚನ್ ಹಾಗೂ ಸದಸ್ಯರು ಶ್ಲಾಘಿಸಿದ್ದಾರೆ. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನೋನಯ್ಯ ನಾಯಕ್ ಹಾಗೂ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಜ್ಯೋತಿ ಕೂಡ ಶಾಲೆಗೆ ಭೇಟಿ ನೀಡಿ, ಸಮಯಪ್ರಜ್ಞೆ ಮೆರೆದ ಮಾನ್ವಿತ್‌ನನ್ನು ಅಭಿನಂದಿಸಿದ್ದಾರೆ.