

ಬೆಂಗಳೂರು:ವಿಮಾನ ಕ್ಯಾಬಿನ್ ಒಳಾಂಗಣ ಕ್ಷೇತ್ರದ ಜಾಗತಿಕ ಮುಂಚೂಣಿ ಸಂಸ್ಥೆ ಜಮ್ಕೊ (Jamco) ಬೆಂಗಳೂರಿನಲ್ಲಿ ತನ್ನ ಉತ್ಪನ್ನ ಎಂಜಿನಿಯರಿಂಗ್ ಕೇಂದ್ರ ಸ್ಥಾಪಿಸುವುದಾಗಿ ಪ್ರಕಟಿಸಿದೆ. ಈ ಪೂರ್ಣ ಪ್ರಮಾಣದ ಉತ್ಪನ್ನ ಎಂಜಿನಿಯರಿಂಗ್ ಕೇಂದ್ರ ಸ್ಥಾಪಿಸುವ ಮೂಲಕ ಜಮ್ಕೊ, ಕರ್ನಾಟಕದಲ್ಲಿ ತನ್ನ ಎಂಜಿನಿಯರಿಂಗ್ ವಹಿವಾಟನ್ನು ಬಲಪಡಿಸಲಿದೆ.
ರಾಜ್ಯದಲ್ಲಿ ವಿಪುಲ ಪ್ರಮಾಣದಲ್ಲಿ ಲಭ್ಯರಿರುವ ಪರಿಣತ ಎಂಜಿನಿಯರಿಂಗ್ ಉದ್ಯೋಗಿಗಳು ಮತ್ತು ಭದ್ರವಾಗಿ ನೆಲೆವೂರಿರುವ ವೈಮಾಂತರಿಕ್ಷ ವಲಯವು ಜಾಗತಿಕ ಹೂಡಿಕೆ ಆಕರ್ಷಿಸುತ್ತಿರುವುದಕ್ಕೆ ಜಮ್ಕೊದ ಹೂಡಿಕೆಯು ಮತ್ತೊಂದು ನಿದರ್ಶನವಾಗಿದೆ ಎಂದು ಕೈಗಾರಿಕಾ ಆಯುಕ್ತರಾದ ಗುಂಜನ್ ಕೃಷ್ಣ ತಿಳಿಸಿದ್ದಾರೆ.
ಕಂಪನಿಯ ಸಿಒಒ ಸಂಜೀವ್ ಸೆನ್ ಮತ್ತು ನಿರ್ದೇಶಕ ಮಂಡಳಿ ಅಧ್ಯಕ್ಷೆ ಕೇಟ್ ಷೆಫರ್ ನೇತೃತ್ವದ ತಂಡ ಆಯುಕ್ತರನ್ನು ಭೇಟಿ ಮಾಡಿ ಹೂಡಿಕೆ ಬಗ್ಗೆ ಮಾಹಿತಿ ನೀಡಿದರು. ಭೇಟಿ ಬಳಿಕ ಬೆಂಗಳೂರಿನಲ್ಲಿ ಕಂಪನಿಯ ಉತ್ಪನ್ನ ಎಂಜಿನಿಯರಿಂಗ್ ಕೇಂದ್ರ ಸ್ಥಾಪಿಸುವ ನಿರ್ಧಾರವನ್ನು ಆಯುಕ್ತರು ಪ್ರಕಟಿಸಿದ್ದಾರೆ.
ಬೆಂಗಳೂರಿನ ಈ ಎಂಜಿನಿಯರಿಂಗ್ ಕೇಂದ್ರವು ಬೋಯಿಂಗ್, ಏರ್‌ಬಸ್ ಮತ್ತು ಇತರ ಜಾಗತಿಕ ವಿಮಾನಯಾನ ಸಂಸ್ಥೆಗಳ ವಿಮಾನಗಳ ಒಳಾಂಗಣದಲ್ಲಿ ಬಳಕೆಯಾಗುವ ಪರಿಕರಗಳನ್ನು ಪೂರ್ಣ ಪ್ರಮಾಣದಲ್ಲಿ ತಯಾರಿಸಲಿದೆ.
ʼಜಾಗತಿಕವಾಗಿ ಪ್ರಮಾಣಿಕೃತ ವೈಮಾಂತರಿಕ್ಷ ಉತ್ಪನ್ನ ತಯಾರಿಸುವ ಸಾಮರ್ಥ್ಯ ವೃದ್ಧಿಸಲು ರಾಜ್ಯದಲ್ಲಿ ಮಾಡುತ್ತಿರುವ ಈ ಹೂಡಿಕೆಯು ಕರ್ನಾಟಕದ ಬಗೆಗಿನ ನಮ್ಮ ದೀರ್ಘಕಾಲೀನ ಬದ್ಧತೆಗೆ ನಿದರ್ಶನವಾಗಿದೆ. ಭಾರತದ ವಿಮಾನಯಾನ ಮಾರುಕಟ್ಟೆ ಕ್ಷಿಪ್ರಗತಿಯಲ್ಲಿ ವಿಸ್ತರಣೆಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕವು ಈ ಪ್ರಗತಿಗೆ ಗಮನಾರ್ಹ ಕೊಡುಗೆ ನೀಡುತ್ತಿದೆ. ಜಮ್ಕೊ-ದ ನೆರವಿನಿಂದ ವಿಮಾನಗಳಲ್ಲಿ ಹೊಸ ತಲೆಮಾರಿನ ಕ್ಯಾಬಿನ್ ನಾವೀನ್ಯತೆ ರೂಪಿಸಲು ನೆರವಾಗುತ್ತಿದೆ. ಜೊತೆಗೆ ವಿಶ್ವದ ಅತ್ಯಾಧುನಿಕ ವೈಮಾಂತರಿಕ್ಷ ಎಂಜಿನಿಯರಿಂಗ್ ಕೇಂದ್ರವಾಗಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ. ಕರ್ನಾಟಕ ಸರ್ಕಾರ ನೀಡುತ್ತಿರುವ ಬೆಂಬಲ ಮತ್ತು ವೈಮಾಂತರಿಕ್ಷ ಕ್ಷೇತ್ರದಲ್ಲಿನ ರಾಜ್ಯದ ನಾಯಕತ್ವವನ್ನು ಕೇಟ್ ಷೆಫರ್ ಅವರು ಶ್ಲಾಘಿಸಿದ್ದಾರೆ.
Advertisement