ಬಸ್‌ಗಳ ಕನಿಷ್ಠ ನಿರ್ವಹಣೆ, ಕಾರ್ಯಾಚರಣೆಗೆ ಸರ್ಕಾರದ ಬಳಿ ಕಾಸಿಲ್ಲವೇ? ಕಣ್ಣಿಗೆ ಕಾಣದ ಯಾವ ಹಳ್ಳಕ್ಕೆ ಸಾರ್ವಜನಿಕರ ಹಣ ಬಿದ್ದಿದೆ?

ಕೇಂದ್ರ ಸರ್ಕಾರ ಮಂಜೂರು ಮಾಡಿರುವ ಬರೋಬ್ಬರಿ 4,500 ಇ-ಬಸ್‌ಗಳನ್ನು ರಾಜ್ಯ ಸರ್ಕಾರ ಇನ್ನೂ ರಸ್ತೆಗಿಳಿಸದೆ ಧೂಳು ತಿನ್ನಿಸುತ್ತಿರುವುದೇಕೆ? ಬಸ್‌ಗಳ ಕನಿಷ್ಠ ನಿರ್ವಹಣೆ ಮತ್ತು ಕಾರ್ಯಾಚರಣೆಗೆ ಸರ್ಕಾರದ ಬಳಿ ಕಾಸಿಲ್ಲವೇ?
Tejasvi Surya
ತೇಜಸ್ವಿ ಸೂರ್ಯonline desk
Updated on: 

ಬೆಂಗಳೂರು: ಕೆಟ್ಟ ಚಾಲನೆ-ಅಪಘಾತಗಳ ನೆಪವೊಡ್ಡಿ ಬಸ್‌ಗಳ ಸಂಖ್ಯೆ ಹೆಚ್ಚಿಸದೇ ಇರುವುದು, ಮೂಗಿನ ಸಮಸ್ಯೆಗೆ ಮೂಗನ್ನೇ ಕತ್ತರಿಸಿಕೊಂಡಂತೆ, ಇದು ಆಡಳಿತದ ಬೇಜವಾಬ್ದಾರಿತನ ಮತ್ತು ಜಾರಿಕೊಳ್ಳುವ ತಂತ್ರವಲ್ಲದೆ ಮತ್ತೇನೂ ಅಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಕಿಡಿ ಕಾರಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಅಪಘಾತಗಳು ಮತ್ತು ಬೇಜವಾಬ್ದಾರಿ ಚಾಲನೆ ಗಂಭೀರ ಸಮಸ್ಯೆಯೇ ಸರಿ, ಆದರೆ ಅದನ್ನೇ ನೆಪ ಮಾಡಿಕೊಂಡು ಹೊಸ ಬಸ್‌ಗಳನ್ನು ರಸ್ತೆಗೆ ಇಳಿಸದೇ ಸಾರ್ವಜನಿಕರನ್ನು ಸಜೀವ ನರಕಕ್ಕೆ ತಳ್ಳುತ್ತಿರುವುದು ಯಾವ ನ್ಯಾಯ? ಸರ್ಕಾರದ ಈ ದ್ವಂದ್ವ ನಿಲುವಿನಿಂದ ಪ್ರಯಾಣಿಕರಿಗೆ ಎರಡೂ ಕಡೆ ಚಾಟಿ ಬೀಸಿದಂತಾಗಿದೆ. ಇತ್ತ ಪ್ರಯಾಣಿಸಲು ಬಸ್‌ಗಳೂ ಇಲ್ಲ, ಅತ್ತ ರಸ್ತೆಯಲ್ಲಿ ಸುರಕ್ಷತೆಯೂ ಇಲ್ಲ ಎಂದು ಕಿಡಿ ಕಾರಿದ್ದಾರೆ.

ಕೇಂದ್ರ ಸರ್ಕಾರ ಮಂಜೂರು ಮಾಡಿರುವ ಬರೋಬ್ಬರಿ 4,500 ಇ-ಬಸ್‌ಗಳನ್ನು ರಾಜ್ಯ ಸರ್ಕಾರ ಇನ್ನೂ ರಸ್ತೆಗಿಳಿಸದೆ ಧೂಳು ತಿನ್ನಿಸುತ್ತಿರುವುದೇಕೆ? ಬಸ್‌ಗಳ ಕನಿಷ್ಠ ನಿರ್ವಹಣೆ ಮತ್ತು ಕಾರ್ಯಾಚರಣೆಗೆ ಸರ್ಕಾರದ ಬಳಿ ಕಾಸಿಲ್ಲವೇ? ಕಣ್ಣಿಗೆ ಕಾಣದ ಯಾವ ಹಳ್ಳಕ್ಕೆ ಸಾರ್ವಜನಿಕರ ಹಣ ಬಿದ್ದಿದೆ? ಎಂದು ಪ್ರಶ್ನಿಸಿದ್ದಾರೆ.

ಇಂದು ಲಕ್ಷಾಂತರ ಬೆಂಗಳೂರಿಗರು ಕಿಕ್ಕಿರಿದು ತುಂಬಿದ ಬಸ್‌ಗಳಿಗಾಗಿ ಗಂಟೆಗಟ್ಟಲೆ ನಿಲ್ದಾಣಗಳಲ್ಲಿ ಕಾಯುತ್ತಾ ರಕ್ತ ಕಣ್ಣೀರು ಸುರಿಸುತ್ತಿದ್ದಾರೆ. 'ಶಕ್ತಿ' ಯೋಜನೆ ಬಂದ ಮೇಲೆ ಮಹಿಳಾ ಪ್ರಯಾಣಿಕರ ಸಂಖ್ಯೆ ಶೇ. ೧೫೦ ರಷ್ಟು ಜಿಗಿದಿದೆ, ಆದರೆ ರಸ್ತೆಯಲ್ಲಿ ಇಂದಿಗೂ 3,700 ಕ್ಕೂ ಹೆಚ್ಚು ಬಸ್‌ಗಳ ಭಾರೀ ಕೊರತೆಯಿದೆ! ಜನರ ತಾಳ್ಮೆಗೂ ಒಂದು ಮಿತಿಯಿದೆ ಎಂದಿದ್ದಾರೆ.

ರಾಜ್ಯ ಸರ್ಕಾರ ಇನ್ನಾದರೂ ತನ್ನ ಕುಂಭಕರ್ಣ ನಿದ್ರೆಯಿಂದ ಎಚ್ಚೆತ್ತುಕೊಂಡು, ಹೊಸ ಬಸ್‌ಗಳನ್ನು ಯುದ್ಧೋಪಾದಿಯಲ್ಲಿ ರಸ್ತೆಗಿಳಿಸುತ್ತಾ? ಇಲ್ಲವೇ ಸಾರ್ವಜನಿಕರ ಆಕ್ರೋಶದ ಜ್ವಾಲೆಗೆ ಕಾಯುತ್ತಾ ಕೂರುತ್ತಾ? ಬಸ್‌ಗಳು ಯಾವಾಗ ರಸ್ತೆಗೆ ಬರುತ್ತವೆ ಎನ್ನುವುದಕ್ಕೆ ಸರ್ಕಾರ ತಕ್ಷಣವೇ ಉತ್ತರಿಸಬೇಕು ಎಂದು ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.

Tejasvi Surya
'ಸುರಂಗ ರಸ್ತೆ'ಗೆ ಮರ ಕಡಿಯಲು ತಡೆ: ಹೈಕೋರ್ಟ್ ಆದೇಶ ಸ್ವಾಗತಿಸಿದ ತೇಜಸ್ವಿ ಸೂರ್ಯ; Video

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com