

ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗೆ ಬುಧವಾರ ಪ್ರಮಾಣವಚನ ಸ್ವೀಕರಿಸಲಿರುವ 10 ರಿಂದ 12 ಮಂದಿ ಶಾಸಕರ ಅಂತಿಮ ಪಟ್ಟಿ ಮಂಗಳವಾರ ಪ್ರಕಟವಾಗುವ ಸಾಧ್ಯತೆಯಿದ್ದು, ಬುಧವಾರ ಸಂಜೆ 4.05ಕ್ಕೆ ಲೋಕಭವನದ ಗ್ಲಾಸ್ ಹೌಸ್‌ನಲ್ಲಿ ಪ್ರಮಾಣವಚನ ಸಮಾರಂಭ ನಡೆಯಲಿದೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆಸಿ ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರೊಂದಿಗೆ ಸಭೆ ನಡೆಸಿ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ.
ಈ ಸಭೆ ಸೋಮವಾರ ಸಂಜೆ ನಡೆಯಬೇಕಾಗಿದ್ದರೂ, ಜಯಪುರದಲ್ಲಿದ್ದ ರಾಹುಲ್ ಗಾಂಧಿ ದೆಹಲಿಗೆ ತಡವಾಗಿ ತಲುಪಿದ್ದರಿಂದ ಮಂಗಳವಾರಕ್ಕೆ ಮುಂದೂಡಲಾಯಿತು ಎಂದು ಮೂಲಗಳು ತಿಳಿಸಿವೆ. ಇದರಿಂದ ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಕರ್ನಾಟಕದ ಶಾಸಕರಲ್ಲಿ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
ಮೂಲಗಳ ಪ್ರಕಾರ, ಈ ಉನ್ನತ ಮಟ್ಟದ ಸಭೆಯಲ್ಲಿ ಸಿದ್ದರಾಮಯ್ಯ ಸಲ್ಲಿಸಿದ ಪಟ್ಟಿಯಲ್ಲಿರುವ 12 ಮಂದಿಯಲ್ಲಿ 10 ಮಂದಿಯನ್ನು ಹಾಗೂ ಶಿವಕುಮಾರ್ ಸಲ್ಲಿಸಿದ 15 ಮಂದಿಯ ಪಟ್ಟಿಯಿಂದ 12 ಮಂದಿಯನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಉಳಿದ ಸಚಿವ ಸ್ಥಾನಗಳನ್ನು ಜೂನ್ 18ರಂದು ನಡೆಯಲಿರುವ ನಾಲ್ಕು ರಾಜ್ಯಸಭೆ ಹಾಗೂ ಏಳು ವಿಧಾನ ಪರಿಷತ್ ಸ್ಥಾನಗಳ ಚುನಾವಣೆಯ ನಂತರ ಭರ್ತಿ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಸೋಮವಾರ ರಾತ್ರಿ ಖರ್ಗೆ ಅವರ ನಿವಾಸದಲ್ಲಿ ಖರ್ಗೆ ಮತ್ತು ಕೆ.ಸಿ. ವೇಣುಗೋಪಾಲ್ ಸುಮಾರು ಅರ್ಧ ಗಂಟೆ ಪ್ರಾಥಮಿಕ ಚರ್ಚೆ ನಡೆಸಿದರು. ಈ ವೇಳೆ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಸಲ್ಲಿಸಿದ ಪಟ್ಟಿಗಳನ್ನು ಪರಿಶೀಲಿಸಲಾಯಿತು ಎಂದು ಮೂಲಗಳು ಹೇಳಿವೆ.
ಸಚಿವ ಸ್ಥಾನಕ್ಕೆ ಪರಿಗಣನೆಯಲ್ಲಿರುವ ಪ್ರಮುಖರು
ಸಚಿವ ಸ್ಥಾನಕ್ಕೆ ಪರಿಗಣನೆಯಲ್ಲಿರುವವರಲ್ಲಿ ಯತೀದ್ರ ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆ, ಎಚ್.ಸಿ.ಮಹದೇವಪ್ಪ, ಸಂತೋಷ್ ಲಾಡ್ ಮತ್ತು ಜಮೀರ್ ಅಹಮದ್ ಖಾನ್ ಅವರ ಹೆಸರುಗಳು ಕೇಳಿಬರುತ್ತಿವೆ.
ಪಕ್ಷದ ಮೂಲಗಳ ಪ್ರಕಾರ, ಹೊಸ ಸಚಿವ ಸಂಪುಟದಲ್ಲಿ ಅನುಭವಿ ನಾಯಕರು ಮತ್ತು ಹೊಸ ಮುಖಗಳ ಮಿಶ್ರಣ ಇರಲಿದ್ದು, ಜಾತಿ ಸಮೀಕರಣ, ಪ್ರಾದೇಶಿಕ ಸಮತೋಲನ ಹಾಗೂ ವಿಶೇಷವಾಗಿ ಸಿದ್ದರಾಮಯ್ಯ ಬಣದ ರಾಜಕೀಯ ನಿಷ್ಠೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, "ನಾವು ತೀರ್ಮಾನ ಮಾಡಬೇಕಿದೆ" ಎಂದು ಸಚಿವ ಸಂಪುಟ ರಚನೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಇದರ ನಡುವೆ ಅವರು ದಿನವಿಡೀ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಸಭೆ ನಡೆಸುವಲ್ಲಿ ನಿರತರಾಗಿದ್ದರು.
ಮತ್ತೆ ಸಚಿವೆಯಾಗುವ ವಿಶ್ವಾಸದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್
ಮುಖ್ಯಮಂತ್ರಿ-ನಿಯೋಜಿತ ಡಿ.ಕೆ. ಶಿವಕುಮಾರ್, ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಎಂ.ಸಿ.ಸುಧಾಕರ್ ಅವರೊಂದಿಗೆ ಹಿರಿಯ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರನ್ನು ಭೇಟಿ ಮಾಡಿ ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನ ನೀಡಿದರು.
ಹಿಂದಿನ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಏಕೈಕ ಮಹಿಳಾ ಸಚಿವೆಯಾಗಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಮಗೆ ಮತ್ತೊಮ್ಮೆ ಸಚಿವ ಸ್ಥಾನ ದೊರೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ನನಗೆ ಮೊದಲ ಬಾರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಮೂರು ವರ್ಷಗಳ ಕಾಲ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ಕೆಲಸ ಮಾಡಿದ್ದೇನೆ. ನನ್ನ ಕಾರ್ಯಕ್ಷಮತೆಯ ಆಧಾರದ ಮೇಲೆ ಹೈಕಮಾಂಡ್ ಮತ್ತೆ ಅವಕಾಶ ನೀಡಲಿದೆ ಎಂಬ ವಿಶ್ವಾಸವಿದೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ವಿಶೇಷ ವಿಮಾನದಲ್ಲಿ ದೆಹಲಿಗೆ ಪ್ರಯಾಣ
ಸೋಮವಾರ ಬೆಳಿಗ್ಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಎಚ್.ಸಿ. ಮಹದೇವಪ್ಪ ಹಾಗೂ ಕೆ. ಜೆ. ಜಾರ್ಜ್ ವಿಶೇಷ ವಿಮಾನದಲ್ಲಿ ನವದೆಹಲಿಗೆ ತೆರಳಿದರು. ಶಿವಕುಮಾರ್ ಅವರು ದೆಹಲಿಯ ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡಿದರೆ, ಸಿದ್ದರಾಮಯ್ಯ ಮತ್ತು ಕೆ.ಜೆ. ಜಾರ್ಜ್ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದರು.
ನಂತರ ಅವರು ಮಹದೇವಪ್ಪ ಅವರ ಪುತ್ರ ಹಾಗೂ ಸುನಿಲ್ ಬೋಸ್ ಅವರ ನಿವಾಸದಲ್ಲಿ ಭೋಜನ ಮಾಡಿದರು. ಸಚಿವ ಸಂಪುಟ ರಚನೆ ಕುರಿತ ಅಂತಿಮ ನಿರ್ಧಾರ ಮಂಗಳವಾರದ ಸಭೆಯಲ್ಲಿ ಹೊರಬೀಳುವ ನಿರೀಕ್ಷೆ ಇದ್ದು, ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲ ಮನೆ ಮಾಡಿದೆ.
Advertisement