

ಧಾರವಾಡ: ಕಾಲೇಜು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಇಂಗ್ಲಿಷ್‌ನಲ್ಲಿ ಮಾತನಾಡುವಂತೆ ಪ್ರೋತ್ಸಾಹಿಸಬೇಕು ಎಂಬ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಧಾರವಾಡದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭವಿಷ್ಯದ ಸ್ಪರ್ಧೆಯನ್ನು ಎದುರಿಸಲು ಭಾಷಾ ಕೌಶಲ್ಯ ಬಹಳ ಮುಖ್ಯ. ಆದ್ದರಿಂದ ಕಾಲೇಜು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಇಂಗ್ಲಿಷ್ ಮಾತನಾಡುವಂತೆ ಪ್ರಾಂಶುಪಾಲರು ಉತ್ತೇಜಿಸಬೇಕು ಎಂದು ಸೂಚಿಸಿದರು.
ಕನ್ನಡ ನಮ್ಮ ಮಾತೃಭಾಷೆ ನಿಜ. ಆದರೆ, ಇಂದು ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಮುನ್ನುಗ್ಗಬೇಕು ಎಂದರೆ ಅವರಿಗೆ ಆಂಗ್ಲ ಭಾಷೆಯ ಮೇಲೆ ಹಿಡಿತ ಸಾಧಿಸುವುದು ಅತ್ಯಗತ್ಯ. ತರಬೇತಿ ಪಡೆದ ಪ್ರತಿಯೊಬ್ಬ ಪ್ರಾಂಶುಪಾಲರು ತಮ್ಮ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಆಂಗ್ಲ ಭಾಷೆಯಲ್ಲಿಯೇ ಸಂವಹನ ಮಾಡಬೇಕು. ಆ ರೀತಿ ಅವರನ್ನು ಪ್ರೇರೇಪಿಸಬೇಕು ಎಂದು ಹೇಳಿದರು.
ಸಚಿವರ ಈ ಹೇಳಿಕೆಗೆ ಕನ್ನಡ ಪರ ಸಂಘಟನೆಗಳ ಹೋರಾಟಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆಯ ಮೂಲಕ ಕನ್ನಡ ಭಾಷೆಯ ಮಹತ್ವವನ್ನು ಕಡಿಮೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಕನ್ನಡದಲ್ಲೇ ಮಾತನಾಡುವ ವಿದ್ಯಾರ್ಥಿಗಳು ಕೂಡ ಸ್ಪರ್ಧೆಯನ್ನು ಎದುರಿಸಬಹುದು. ಇಂಗ್ಲಿಷ್ ಅನ್ನು ಪ್ರತ್ಯೇಕವಾಗಿ ಉತ್ತೇಜಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಕಾಂಗ್ರೆಸ್ ಪಕ್ಷದ ಕೆಲ ನಾಯಕರು ಸಚಿವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸಚಿವರು ತಾಯಿಭಾಷೆಯನ್ನು ನಿರ್ಲಕ್ಷ್ಯ ಮಾಡುವಂತೆ ಹೇಳಿಲ್ಲ. ಇಲ್ಲಿ ಅನೇಕರು ಇಂಗ್ಲಿಷ್ ತಿಳಿದಿದ್ದರೂ ಮಾತನಾಡಲು ಹಿಂಜರಿಯುತ್ತಾರೆ. ಕ್ಯಾಂಪಸ್‌ನಲ್ಲಿ ಕೆಲ ಗಂಟೆಗಳಾದರೂ ಇಂಗ್ಲಿಷ್ ಮಾತನಾಡುವಂತೆ ಪ್ರೋತ್ಸಾಹಿಸಿದರೆ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಹೇಳಿದ್ದಾರೆ.
Advertisement