

ಬೆಂಗಳೂರು: ಸೂಕ್ತ ಪರವಾನಗಿ ಇಲ್ಲದೆ ಅಕ್ರಮವಾಗಿ ಏಳು ಜೀವಂತ ಗುಂಡುಗಳನ್ನು (Live Bullets) ಹೊಂದಿದ್ದ ಆರೋಪದ ಮೇಲೆ ಅಮೆರಿಕ ಮೂಲದ ಅನಿವಾಸಿ ಭಾರತೀಯನೊಬ್ಬನನ್ನು ಬೆಂಗಳೂರಿನ ಜೆ.ಸಿ. ನಗರ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತ ಆರೋಪಿಯನ್ನು ಅಮೆರಿಕದ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಅರ್ಮಾನ್ ಮುತಾಹರ್ (34) ಎಂದು ಗುರುತಿಸಲಾಗಿದೆ.
ಆರೋಪಿ ಅರ್ಮಾನ್ ಏಪ್ರಿಲ್ 27 ರಂದು ಬೆಂಗಳೂರಿನ ಜಯಮಹಲ್ ಪ್ಯಾಲೇಸ್ ಹೋಟೆಲ್‌ನಲ್ಲಿ ಕೊಠಡಿ ಪಡೆದಿದ್ದನು. ಏಪ್ರಿಲ್ 28 ರಂದು ಆತ ಕೊಠಡಿಯನ್ನು ಖಾಲಿ ಮಾಡಿ ತೆರಳಿದ್ದನು.
ಹೋಟೆಲ್‌ನಿಂದ ಹೊರಟ ನಂತರ ಆರೋಪಿ ಹೋಟೆಲ್ ಸಿಬ್ಬಂದಿಗೆ ಕರೆ ಮಾಡಿ, ತಾನು ತಂಗಿದ್ದ ಕೊಠಡಿಯಲ್ಲಿ 7 ಜೀವಂತ ಗುಂಡುಗಳಿರುವ 'ರೂಗರ್' (Ruger) ಕಂಪನಿಯ ಮ್ಯಾಗಜೀನ್ ಅನ್ನು ಮರೆತು ಬಿಟ್ಟಿರುವುದಾಗಿ ತಿಳಿಸಿದ್ದನು.
ಅದನ್ನು ಸುರಕ್ಷಿತವಾಗಿ ಇಡುವಂತೆ ಹಾಗೂ ಒಂದು ಗಂಟೆಯಲ್ಲಿ ಬಂದು ಪಡೆದುಕೊಳ್ಳುವುದಾಗಿ ಹೇಳಿದ್ದನು. ಹೋಟೆಲ್ ಆಡಳಿತ ಮಂಡಳಿ ಆತನನ್ನು ಮರಳಿ ಸಂಪರ್ಕಿಸಲು ಯತ್ನಿಸಿದರೂ ಆತ ಬಾರದಿದ್ದಾಗ, ಅನುಮಾನಗೊಂಡ ಹೋಟೆಲ್ ಮ್ಯಾನೇಜರ್ ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ.
ಹೋಟೆಲ್ ಮ್ಯಾನೇಜರ್ ನೀಡಿದ ದೂರಿನನ್ವಯ ಜೆ.ಸಿ. ನಗರ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ (Arms Act) ಪ್ರಕರಣ ದಾಖಲಿಸಿದ್ದಾರೆ.
ವಿಚಾರಣೆಗಾಗಿ ನ್ಯಾಯಾಲಯವು ಆರೋಪಿಯನ್ನು ಮೇ 7 ರಿಂದ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ಸದ್ಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ತನಿಖೆಯ ಭಾಗವಾಗಿ ಆತನ ಪಾಸ್‌ಪೋರ್ಟ್, ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆ ವಿಚಾರಣೆ ವೇಳೆ ಆರೋಪಿ, ಆರ್.ಟಿ. ನಗರದಲ್ಲಿರುವ ತನ್ನ ಸಹೋದರಿಯನ್ನು ಭೇಟಿ ಮಾಡಲು ಭಾರತಕ್ಕೆ ಬರುವಾಗ ಆಕಸ್ಮಿಕವಾಗಿ ಲಗೇಜ್‌ನಲ್ಲಿ ಈ ಮ್ಯಾಗಜೀನ್ ಬಂದಿರುವುದಾಗಿ ಹೇಳಿದ್ದಾನೆಂದು ತಿಳಿದುಬಂದಿದೆ.
ವ್ಯಕ್ತಿ ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿಲ್ಲ ಎಂದು ತಿಳಿದುಬಂದಿದೆ. ಆದರೆ, ಯಾವುದೇ ಪರವಾನಗಿ ಇಲ್ಲದೆ, ಮೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳ ಅತ್ಯಂತ ಕಟ್ಟುನಿಟ್ಟಿನ ಭದ್ರತಾ ತಪಾಸಣೆಗಳನ್ನು ದಾಟಿ ಈತ ಬೆಂಗಳೂರಿಗೆ ಜೀವಂತ ಗುಂಡುಗಳನ್ನು ತಂದಿದ್ದು ಹೇಗೆ ಎಂಬುದು ಈಗ ಭದ್ರತಾ ಸಂಸ್ಥೆಗಳಿಗೆ ದೊಡ್ಡ ಪ್ರಶ್ನೆಯಾಗಿದೆ. ಈ ಗಂಭೀರ ಭದ್ರತಾ ಲೋಪದ ಕುರಿತು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
Advertisement