ಲಕ್ಕುಂಡಿ 101 ದೇವಾಲಯ-101 ಬಾವಿಗಳ ಅನ್ವೇಷಣೆಗೆ ಉಪಗ್ರಹ ತಂತ್ರಜ್ಞಾನ ಬಳಕೆ: NIAS ನೆರವು ಪಡೆಯಲು ರಾಜ್ಯ ಸರ್ಕಾರ ಮುಂದು..!

2023ರಿಂದ ಆರಂಭವಾದ ಪುರಾತತ್ವ ಅನ್ವೇಷಣೆಯಲ್ಲಿ ಈಗಾಗಲೇ 70 ಸ್ಮಾರಕಗಳು ಪತ್ತೆಯಾಗಿವೆ. ಅವುಗಳಲ್ಲಿ 32 ದೇವಾಲಯಗಳು, 28 ಬಾವಿಗಳು ಹಾಗೂ ಇತರೆ ಪುರಾವಸ್ತುಗಳು ಸೇರಿವೆ. ಇದೇ ವರ್ಷದ ಡಿಸೆಂಬರ್ 31ರೊಳಗೆ 101 ಬಾವಿಗಳು ಮತ್ತು 101 ದೇವಾಲಯಗಳನ್ನು ಅನಾವರಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ.
Lakkundi
ಲಕ್ಕುಂಡಿ
Updated on

ಬೆಂಗಳೂರು: ಗಂಗರ, ಕಲ್ಯಾಣ ಚಾಲುಕ್ಯರ ಕಾಲದ ಪ್ರಸಿದ್ಧ ಐತಿಹಾಸಿಕ ತಾಣವಾದ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಕಳೆದುಹೋಗಿರುವ 101 ಬಾವಿ ಮತ್ತು 101 ದೇವಸ್ಥಾನಗಳನ್ನು ಪತ್ತೆಹಚ್ಚಲು ಮತ್ತು ಉತ್ಖನನ ನಡೆಸಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.

ಈ ಮಹತ್ವಾಕಾಂಕ್ಷಿ ಯೋಜನೆಗಾಗಿ ರಾಜ್ಯ ಸರ್ಕಾರ ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ (NIAS) ಜೊತೆ ಕೈಜೋಡಿಸಿದ್ದು, ವಿಜ್ಞಾನಿಗಳು ಮತ್ತು ತಜ್ಞರೊಂದಿಗೆ ಬುಧವಾರ ಮಹತ್ವದ ಸಭೆ ನಡೆಸಿದೆ.

ಈ ಕುರಿತು ಮಾಹಿತಿ ನೀಡಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು, ಉಪಗ್ರಹ ತಂತ್ರಜ್ಞಾನದ ಸಹಾಯದಿಂದ 101 ಬಾವಿಗಳು ಮತ್ತು 101 ದೇವಾಲಯಗಳನ್ನು ಪತ್ತೆಹಚ್ಚುವ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

2023ರಿಂದ ಆರಂಭವಾದ ಪುರಾತತ್ವ ಅನ್ವೇಷಣೆಯಲ್ಲಿ ಈಗಾಗಲೇ 70 ಸ್ಮಾರಕಗಳು ಪತ್ತೆಯಾಗಿವೆ. ಅವುಗಳಲ್ಲಿ 32 ದೇವಾಲಯಗಳು, 28 ಬಾವಿಗಳು ಹಾಗೂ ಇತರೆ ಪುರಾವಸ್ತುಗಳು ಸೇರಿವೆ. ಇದೇ ವರ್ಷದ ಡಿಸೆಂಬರ್ 31ರೊಳಗೆ 101 ಬಾವಿಗಳು ಮತ್ತು 101 ದೇವಾಲಯಗಳನ್ನು ಅನಾವರಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.

ಲಕ್ಕುಂಡಿಯನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಹಾಗೂ ಯುನೆಸ್ಕೋಗೆ ಪ್ರಸ್ತಾವನೆ ಕಳುಹಿಸುವ ಕಾರ್ಯವೂ ನಡೆಯುತ್ತಿದೆ ಎಂದಿದ್ದಾರೆ.

Lakkundi
ಲಕ್ಕುಂಡಿಗೆ ಶೀಘ್ರದಲ್ಲೇ UNESCO ಪಾರಂಪರಿಕ ತಾಣದ ಸ್ಥಾನಮಾನ: ಪ್ರವಾಸೋದ್ಯಮ ಸಚಿವ ಹೆಚ್.ಕೆ ಪಾಟೀಲ್

ಮೊದಲ ಹಂತದ ಅನ್ವೇಷಣೆಯಿಂದ 1,500ಕ್ಕೂ ಹೆಚ್ಚು ಪುರಾತತ್ವ ಅವಶೇಷಗಳು ಪತ್ತೆಯಾಗಿದ್ದರೆ, ಮೇ 2ರಿಂದ ಆರಂಭವಾದ ಎರಡನೇ ಹಂತದಲ್ಲಿ ಈಗಾಗಲೇ ಸುಮಾರು 1,800 ಪುರಾವಸ್ತುಗಳು ಸಿಕ್ಕಿವೆ. ಜೂನ್ ಅಂತ್ಯದೊಳಗೆ ಇನ್ನೂ 5,000ಕ್ಕೂ ಹೆಚ್ಚು ಪುರಾವಸ್ತುಗಳು ಪತ್ತೆಯಾಗುವ ಸಾಧ್ಯತೆ ಇದೆ.

ಪತ್ತೆಯಾಗುತ್ತಿರುವ ಪುರಾತನ ವಸ್ತುಗಳನ್ನು ಸಂರಕ್ಷಿಸಿ, ಸಾರ್ವಜನಿಕ ಪ್ರದರ್ಶನಕ್ಕಾಗಿ ಓಪನ್ ಏರ್ ಮ್ಯೂಸಿಯಂ ಸ್ಥಾಪಿಸುವ ಯೋಜನೆಯೂ ರೂಪಿಸಲಾಗಿದೆ. ಲಕ್ಕುಂಡಿ ದೇವಾಲಯಗಳಿಗೆ ಹೊಸ ರೂಪ ನೀಡುವ ಉದ್ದೇಶದಿಂದ 2026ರ ಫೆಬ್ರವರಿಯಲ್ಲಿ ಐದು ದೇವಾಲಯಗಳು ಮತ್ತು ಬಾವಿಗಳನ್ನು ಅನಾವರಣಗೊಳಿಸಲಾಗಿತ್ತು. ಈಗ ಮತ್ತಷ್ಟು 10 ದೇವಾಲಯಗಳು ಮತ್ತು ಬಾವಿಗಳ ಅನ್ವೇಷಣಾ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.

ಆರು ಸ್ಮಾರಕಗಳ ಸಂರಕ್ಷಣಾ ಕಾರ್ಯವನ್ನು ರೂ,10 ಕೋಟಿ ವೆಚ್ಚದಲ್ಲಿ ಆರಂಭಿಸಲಾಗಿದ್ದು, 2026-27ನೇ ಸಾಲಿನಲ್ಲಿ ಇನ್ನೂ 10 ಸ್ಮಾರಕಗಳ ಸಂರಕ್ಷಣೆಗೆ ಕಾರ್ಯಯೋಜನೆ ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಮಾಜಿ ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್ ಕೂಡ ಲಕ್ಕುಂಡಿಯನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಉಪಗ್ರಹ ತಂತ್ರಜ್ಞಾನದ ಮೂಲಕ 101 ದೇವಾಲಯಗಳು ಮತ್ತು 101 ಬಾವಿಗಳನ್ನು ಪತ್ತೆಹಚ್ಚುವ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com