ಬೆಂಗಳೂರು: ನಗರದ ಪಬ್ ಒಂದರಲ್ಲಿ ತಡರಾತ್ರಿ ನಡೆಸಿದ ಪರಿಶೀಲನೆ ವೇಳೆ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಅವರ ಸಹೋದ್ಯೋಗಿಗಳನ್ನು ನಿಂದಿಸಿದ ಮತ್ತು ಹಲ್ಲೆ ನಡೆಸಿದ ಆರೋಪದ ಮೇಲೆ ಆಂಧ್ರಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿ ಹಾಗೂ ಇತರ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಅಕ್ಟೋಬರ್ 10 ರಂದು ನಸುಕಿನ ಜಾವ ಸುಮಾರು 1.30ರ ಸುಮಾರಿಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ಪಬ್‌ನಲ್ಲಿ ನಡೆಸಿದ ದಿಢೀರ್ ಪರಿಶೀಲನೆ ವೇಳೆ ಈ ಘಟನೆ ನಡೆದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕಳೆದ ಆರು ತಿಂಗಳುಗಳಿಂದ ಸಿಸಿಬಿ (CCB) ವಿಶೇಷ ತನಿಖಾ ತಂಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು, ಐಎಎಸ್ ಅಧಿಕಾರಿ ವಿಕಾಸ್ ಮಾರ್ಮಟ್ ಮತ್ತು ಇತರ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಫ್‌ಐಆರ್ ಪ್ರಕಾರ, ಕಬ್ಬನ್ ಪಾರ್ಕ್ ಮತ್ತು ಅಶೋಕ್ ನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ಬಾರ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ತಡರಾತ್ರಿ ಸಂಶಯಾಸ್ಪದ ವ್ಯಕ್ತಿಗಳನ್ನು ಪರಿಶೀಲಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ನೀಡಿದ ಆದೇಶದ ಮೇರೆಗೆ ಅಕ್ಟೋಬರ್ 9 ರಂದು ಈ ಪರಿಶೀಲನೆ ನಡೆಸಲಾಗಿತ್ತು.
ಇತರ ಅಧಿಕಾರಿಗಳೊಂದಿಗೆ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿ, ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪಬ್‌ವೊಂದಕ್ಕೆ ಭೇಟಿ ನೀಡಿದರು. ಗ್ರಾಹಕರ ವಯಸ್ಸನ್ನು ಖಚಿತಪಡಿಸಿಕೊಳ್ಳಲು ಅವರ ಗುರುತಿನ ಚೀಟಿಗಳನ್ನು ಪರಿಶೀಲಿಸುತ್ತಿದ್ದಾಗ, ನಾಲ್ವರು ವ್ಯಕ್ತಿಗಳು ಕ್ಷುಲ್ಲಕ ವಿಷಯವೊಂದಕ್ಕೆ ಸಂಬಂಧಿಸಿದಂತೆ ಅವರೊಂದಿಗೆ ಜಗಳಕ್ಕಿಳಿದು, ಅವರಿಗೂ ಹಾಗೂ ಅವರ ಸಹೋದ್ಯೋಗಿಗಳಿಗೂ ನಿಂದಿಸಿದ್ದಾರೆ ಎನ್ನಲಾಗಿದೆ.
ಇನ್ಸ್‌ಪೆಕ್ಟರ್‌ಗೆ ಕರ್ತವ್ಯ ನಿರ್ವಹಣೆಗೆ ಅಡ್ಡಿ, ಪೊಲೀಸ್ ಸಿಬ್ಬಂದಿಯನ್ನು ನಿಂದಿಸಿ, ಹಲ್ಲೆ ನಡೆಸಿದ್ದಾರೆ ಹಾಗೂ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದ ಮೇಲೆ ವಿಕಾಸ್ ಮರ್ಮತ್, ಅಭಯ್ ಉದಯಸಿಂಗ್, ನಿತೀಶ್ ಮತ್ತು ರೋಶನ್ ವಿರುದ್ಧ ದೂರು ದಾಖಲಾಗಿದೆ.
ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 115(2) (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 351(2) (ಅಪರಾಧದ ಬೆದರಿಕೆ), 352 (ಶಾಂತಿ ಭಂಗ ಉಂಟುಮಾಡುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), 132 (ಸಾರ್ವಜನಿಕ ಸೇವಕರನ್ನು ಕರ್ತವ್ಯ ನಿರ್ವಹಣೆಯಿಂದ ತಡೆಯಲು ಹಲ್ಲೆ ಅಥವಾ ಅಪರಾಧದ ಬಲ ಪ್ರಯೋಗ) ಮತ್ತು 3(5) (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂದಿನ ತನಿಖೆ ನಡೆಯುತ್ತಿದೆ.