

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ವಿರೋಧಿಸಿ ಶನಿವಾರ ಸಂಜೆ ಬೆಂಗಳೂರಿನ ಟೌನ್ ಹಾಲ್ ಬಳಿ ಪ್ರತಿಭಟನೆ ನಡೆಸಲು ಮುಂದಾದ ಸುಮಾರು 75ರಿಂದ 80 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ದಾರೆ.
ಈ ವೇಳೆ ಪೊಲೀಸರು ಬಲಪ್ರಯೋಗ ಮಾಡಿ ಪ್ರತಿಭಟನಾಕಾರರನ್ನು ಸ್ಥಳದಿಂದ ತೆರವುಗೊಳಿಸಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ. ಘಟನೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ನಾಯು ನೋವು ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
ಅಖಿಲ ಭಾರತ ವಿದ್ಯಾರ್ಥಿ ಸಂಘದ (ಎಐಎಸ್ಎ) ಸದಸ್ಯರು ಮಾತನಾಡಿ, ಪ್ರತಿಭಟನಾಕಾರರು ಸ್ಥಳದಲ್ಲಿ ಧ್ವಜಗಳನ್ನು ಹಿಡಿದು ಘೋಷಣೆಗಳನ್ನು ಕೂಗಲು ಆರಂಭಿಸಿದ ಬಳಿಕ ಪೊಲೀಸರು ಅವರನ್ನು ವಶಕ್ಕೆ ಪಡೆಯಲು ಮುಂದಾದರು. ಈ ವೇಳೆ ಕೆಲವರ ಬಟ್ಟೆಗಳು ಹರಿದಿವೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಗುರುತಿನ ಚೀಟಿ ತೋರಿಸುವಂತೆ ಕೇಳಿದರೂ ಕೆಲವು ಮಹಿಳಾ ಪೊಲೀಸ್ ಸಿಬ್ಬಂದಿ ತಮ್ಮ ಗುರುತಿನ ಬ್ಯಾಡ್ಜ್ಗಳನ್ನು ಧರಿಸಿರಲಿಲ್ಲ ಎಂದು ದೂರಿದ್ದಾರೆ.
ಪ್ರತಿಭಟನಾಕಾರರನ್ನು ಚಾಮರಾಜಪೇಟೆ ಪೊಲೀಸ್ ಠಾಣೆಗೆ ಕರೆದೊಯ್ದು ಸುಮಾರು ಒಂದು ಗಂಟೆಯ ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ಎಐಎಸ್ಎ ಸದಸ್ಯರೊಬ್ಬರು ತಿಳಿಸಿದ್ದಾರೆ. ಪ್ರತಿಭಟನೆ ಶಾಂತಿಯುತವಾಗಿತ್ತು ಮತ್ತು ಮೆರವಣಿಗೆ ನಡೆಸುವ ಯಾವುದೇ ಉದ್ದೇಶ ಇರಲಿಲ್ಲ ಎಂದು ಹೇಳಿದ್ದಾರೆ.
ಟೌನ್ ಹಾಲ್ ನಗರದ ಕೇಂದ್ರ ಭಾಗದಲ್ಲಿದ್ದು, ಸಾರ್ವಜನಿಕ ಪ್ರತಿಭಟನೆಗಳ ಪ್ರಮುಖ ಸ್ಥಳವಾಗಿರುವ ಕಾರಣ ಅದನ್ನು ಪ್ರತಿಭಟನೆಗೆ ಆಯ್ಕೆ ಮಾಡಲಾಗಿತ್ತು ಎಂದು ಸಂಘಟಕರು ತಿಳಿಸಿದ್ದಾರೆ.
ಫ್ರೀಡಂ ಪಾರ್ಕ್ಗೆ ಮಾತ್ರ ಪ್ರತಿಭಟನೆಗಳನ್ನು ಸೀಮಿತಗೊಳಿಸುವ ಬದಲು ಟೌನ್ ಹಾಲ್ ಮತ್ತು ಮೈಸೂರು ವೃತ್ತದಂತಹ ಸಾರ್ವಜನಿಕ ಸ್ಥಳಗಳಲ್ಲೂ ಶಾಂತಿಯುತ ಸಭೆಗಳಿಗೆ ಅವಕಾಶ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಿಂದ ವಲಸೆ ಕಾರ್ಮಿಕರು, ಮಹಿಳೆಯರು, ಮುಸ್ಲಿಮರು ಹಾಗೂ ಇತರ ಅಂಚಿನಲ್ಲಿರುವ ಸಮುದಾಯಗಳ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯುವ ಅಪಾಯವಿದೆ ಎಂದು ಆರೋಪಿಸಿ ಈ ಪ್ರತಿಭಟನೆ ಆಯೋಜಿಸಲಾಗಿತ್ತು.
ಮತದಾನದ ಹಕ್ಕು ಮತ್ತು ಪ್ರಜಾಸತ್ತಾತ್ಮಕ ಸ್ವಾತಂತ್ರ್ಯಗಳನ್ನು ರಕ್ಷಿಸುವ ಹೋರಾಟ ಇದಾಗಿದೆ ಎಂದು ಎಐಎಸ್ಎ ಸದಸ್ಯರು ಹೇಳಿದ್ದಾರೆ. ಈ ಆಂದೋಲನಕ್ಕೆ ಹೆಚ್ಚಿನ ಜನರು ಕೈಜೋಡಿಸಬೇಕು ಎಂದೂ ಕರೆ ನೀಡಿದ್ದಾರೆ.
ಆದರೆ, ಅನುಮತಿ ನಿರಾಕರಿಸಿದ್ದರೂ ಪ್ರತಿಭಟನಾಕಾರರು ಸ್ಥಳದಲ್ಲಿ ಜಮಾಯಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಮಚೀಂದ್ರ ಮಾತನಾಡಿ, ನ್ಯಾಯಾಲಯದ ನಿರ್ದೇಶನಗಳನ್ನು ಉಲ್ಲೇಖಿಸಿ ಶುಕ್ರವಾರವೇ ಪ್ರತಿಭಟನೆಗೆ ಅನುಮತಿ ನಿರಾಕರಿಸಲಾಗಿತ್ತು. ಶನಿವಾರ ಟೌನ್ ಹಾಲ್ ಬಳಿ ಸೇರಿದವರನ್ನು ಫ್ರೀಡಂ ಪಾರ್ಕ್ಗೆ ತೆರಳುವಂತೆ ಸೂಚಿಸಲಾಗಿತ್ತು. ನ್ಯಾಯಾಲಯದ ನಿರ್ದೇಶನಗಳನ್ನು ಉಲ್ಲೇಖಿಸಿ ಶುಕ್ರವಾರವೇ ಅನುಮತಿ ನಿರಾಕರಿಸಿದ್ದೆವು. ಆದರೂ ಶನಿವಾರ ಸಂಜೆ ಅವರು ಟೌನ್ ಹಾಲ್ ಬಳಿ ಸೇರಿದ್ದರು.
ನ್ಯಾಯಾಲಯದ ನಿರ್ದೇಶನಗಳನ್ನು ಮತ್ತೊಮ್ಮೆ ನೆನಪಿಸಿ ಫ್ರೀಡಂ ಪಾರ್ಕ್ಗೆ ತೆರಳುವಂತೆ ಸೂಚಿಸಲಾಯಿತು. ಆದೇಶ ಉಲ್ಲಂಘಿಸಿದರೆ ವಶಕ್ಕೆ ಪಡೆಯುವುದಾಗಿ ಎಚ್ಚರಿಕೆ ನೀಡಿದ್ದೆವು. ಸೂಚನೆ ಪಾಲಿಸದ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಲಾಯಿತು ಎಂದು ತಿಳಿಸಿದ್ದಾರೆ.
ಈ ಘಟನೆಯು ಬೆಂಗಳೂರಿನಲ್ಲಿ ಪ್ರತಿಭಟನೆಗಳಿಗೆ ಸಾರ್ವಜನಿಕ ಸ್ಥಳಗಳ ಬಳಕೆಯ ಕುರಿತು ಮತ್ತೆ ಚರ್ಚೆ ಹುಟ್ಟುಹಾಕಿದೆ.
ಶಾಂತಿಯುತವಾಗಿ ಸಭೆ ಸೇರುವ ಹಕ್ಕಿನ ಮೇಲೆ ನಿರ್ಬಂಧ ವಿಧಿಸಲಾಗುತ್ತಿದೆ ಎಂದು ಕಾರ್ಯಕರ್ತರು ಪ್ರಶ್ನಿಸಿದ್ದು, ನಗರದ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಲು ಹೆಚ್ಚಿನ ಸ್ವಾತಂತ್ರ್ಯ ನೀಡಬೇಕೆಂದು ಆಗ್ರಹಿಸಿದ್ದಾರೆ.