

ಬೆಂಗಳೂರು: ಮೈಸೂರು ದಸರಾ ಸಂದರ್ಭದಲ್ಲಿ ನಂದಿಧ್ವಜ ಪೂಜೆಗೆ ತೆರಳುತ್ತಿದ್ದ ಕೆಲವು ಸಚಿವರನ್ನು ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ತಡೆದ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಈ ನಡುವೆ ಪೊಲೀಸ್ ಅಧಿಕಾರಿಗಳ ನಡೆಯನ್ನು ದೊಡ್ಡ ವಿವಾದವನ್ನಾಗಿ ಮಾಡಬಾರದು. ಇಂತಹ ಸಂದರ್ಭಗಳಲ್ಲಿ ಸಣ್ಣಪುಟ್ಟ ತಪ್ಪುಗಳು ಸಹಜ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮತ್ತು ಆರೋಗ್ಯ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾ ವೀಕ್ಷಣೆಗೆ ಹತ್ತು ದಿನಗಳಲ್ಲಿ 15ರಿಂದ 20 ಲಕ್ಷ ಜನರು ಆಗಮಿಸಿದ್ದಾರೆ. ಇಷ್ಟೊಂದು ಜನಸಂದಣಿಯನ್ನು ಪೊಲೀಸರು ಸಮರ್ಥವಾಗಿ ನಿರ್ವಹಿಸಿದ್ದಾರೆ. ಇಂತಹ ಸಂದರ್ಭದಲ್ಲಿ ನಡೆದ ಒಂದು ಘಟನೆಯನ್ನೇ ದೊಡ್ಡ ವಿಷಯವನ್ನಾಗಿ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಘಟನೆಯ ವಿಡಿಯೋವನ್ನು ನಾನು ವೀಕ್ಷಿಸಿದ್ದೇನೆ. ಸಚಿವರ ಮೇಲೆ ಹಲ್ಲೆ ಅಥವಾ ಬಲಪ್ರಯೋಗ ನಡೆದಿರುವುದು ಕಂಡುಬಂದಿಲ್ಲ. ಸಚಿವರನ್ನು ತಡೆದಿರುವುದು ಮಾತ್ರ ಕಾಣಿಸಿದೆ ಎಂದು ಹೇಳಿದ್ದಾರೆ.
ಪೊಲೀಸರು ತಮಗೆ ನೀಡಿದ ನಿರ್ದೇಶನಗಳನ್ನು ಪಾಲಿಸುತ್ತಾರೆ. ಮುಖ್ಯಮಂತ್ರಿ ಮಾತ್ರ ಮುಂದೆ ಸಾಗಬೇಕು ಎಂಬ ಶಿಷ್ಟಾಚಾರ ಇದ್ದಿದ್ದರೆ, ಅದರಂತೆ ಪೊಲೀಸರು ನಡೆದುಕೊಂಡಿರಬಹುದು ಎಂಬುದು ತಮ್ಮ ಊಹೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನು ದಲಿತ ಸಚಿವರಿಗೆ ಮಾಡಿದ ಅವಮಾನ ಎಂದು ಬಣ್ಣಿಸುತ್ತಿರುವ ವಿಚಾರಕ್ಕೂ ಪ್ರತಿಕ್ರಿಯಿಸಿದ ಪರಮೇಶ್ವರ್ ಅವರು, ಪ್ರತಿಯೊಂದು ವಿಚಾರದಲ್ಲೂ ದಲಿತ ಸಚಿವರು ಎಂದು ಯಾಕೆ ಹೇಳುತ್ತೀರಿ? ಬೇರೆ ಸಚಿವರನ್ನು ಅವರ ಜಾತಿಯ ಆಧಾರದಲ್ಲಿ ಕರೆಯುತ್ತೀರಾ? ಎಂದು ಪ್ರಶ್ನಿಸಿದರು.
ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಮಾತನಾಡಿ, ಇಂತಹ ಸಂದರ್ಭಗಳಲ್ಲಿ ಮಾನವ ಸಹಜ ತಪ್ಪುಗಳು ಸಂಭವಿಸುವುದು ಸಹಜ. ಪೊಲೀಸರು ಒಂದು ತಿಂಗಳಿಂದ ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಊಟ, ತಿಂಡಿಗೂ ಸರಿಯಾಗಿ ಸಮಯ ಸಿಕ್ಕಿಲ್ಲ. ಇಂತಹ ಸಂದರ್ಭದಲ್ಲಿ ಸಣ್ಣ ತಪ್ಪು ಸಂಭವಿಸಿದರೆ ಅದನ್ನು ದೊಡ್ಡದಾಗಿ ಬಿಂಬಿಸಬಾರದು. ಭದ್ರತೆಯ ದೃಷ್ಟಿಯಿಂದ ಪೊಲೀಸರು ಕ್ರಮ ಕೈಗೊಳ್ಳುವಾಗ ಪ್ರತಿಯೊಂದು ಸಣ್ಣ ವಿಚಾರವನ್ನೂ ವಿವಾದವನ್ನಾಗಿ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.