ಖುಷಿ

ಅಗ್ಗದ ಜಗ್ಗಾಟ

ಅಗ್ಗದ ಜಗ್ಗಾಟ
Published On :

'ಆ್ಯನ್ ಆ್ಯಪಲ್ ಎ ಡೇ ಕೀಪ್ಸ್ ದಿ ಡಾಕ್ಟರ್ ಅವೇ' ಎನ್ನುವುದು ಹಳೆಯ ಮಾತು. ಆದರೆ ಸ್ಯಾಮ್‌ಸಂಗ್ ಕಂಪನಿಯ ಆ್ಯಂಡ್ರಾಯ್ಡ್ ಮೊಬೈಲ್‌ಗಳು ಬಂದಮೇಲೆ 'ಆ್ಯನ್ ಆ್ಯಂಡ್ರಾಯ್ಡ್ ಮೊಬೈಲ್ ಫಾರ್ ಎ ಡೇ ಕೀಪ್ಸ್ ಆ್ಯಪಲ್ ಅವೇ' ಎನ್ನುವಂತೆ ಆ್ಯಪಲ್ ಕಂಪನಿಯ ದುಬಾರಿ ಐಫೋನ್‌ಗಳಿಗೆ ಬದಲಾಗಿ ಸ್ಯಾಮ್‌ಸಂಗ್
ಮೊಬೈಲ್‌ಗಳಿಗೆ ಮೊರೆ ಹೋಗಿದ್ದರು ಮೊಬೈಲ್ ಗ್ರಾಹಕರು. ಹಾಗಾಗಿ ಮೊಬೈಲ್‌ನ ಬೆಲೆ ಕಡಿಮೆ ಮಾಡಿದರೆ ತನ್ನ ಬೆಲೆಯೇನೂ ಕಡಿಮೆಯಾಗುವುದಿಲ್ಲ ಎಂಬ ನಂಬಿಕೆಯಲ್ಲಿ, ಆ್ಯಪಲ್ ಕಂಪನಿ ಮೊಟ್ಟ ಮೊದಲ ಬಾರಿಗೆ ಎನ್ನುವಂತೆ ಅಗ್ಗದ ಐಫೋನ್‌ಗಳನ್ನು ತರುವ ಪ್ರಯತ್ನ ಮಾಡಿದೆ. ಹಾಗಾಗಿ ಈರುಳ್ಳಿ ಬೆಲೆ ಕಡಿಮೆ ಆಗದಿದ್ದರೂ ಸದ್ಯಕ್ಕೆ ಆ್ಯಪಲ್ ಬೆಲೆಯಂತೂ ಕಡಿಮೆ ಆಗಿದೆ ಎನ್ನಬಹುದು. ಆದರೆ ಅಗ್ಗದ ಬೆಲೆ ಎಂದರೆ ಎಷ್ಟು ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ. ಏಕೆಂದರೆ ಇತ್ತೀಚಿನ ಆ್ಯಪಲ್ ಕಂಪನಿಯ ಜಾಹೀರಾತುಗಳನ್ನು ನೋಡಿದರೆ ಸುಮಾರು 42 ಸಾವಿರದ ಮೊಬೈಲನ್ನು ಅಗ್ಗದ ಐಪೋನ್ ಎಂದು ಬಿಂಬಿಸಲಾಗುತ್ತಿದೆ. ಈ ರೀತಿಯ ಅಗ್ಗದ ಫೋನ್‌ನಿಂದ ಆ್ಯಪಲ್‌ಗೆ ಅದೆಷ್ಟು ಲಾಭವಾಗುತ್ತದೋ ಗೊತ್ತಿಲ್ಲ.
ತನ್ನ ಲೇಟೆಸ್ಟ್ ಸರಣಿಯಲ್ಲಿ ಆ್ಯಪಲ್ ಎರಡು ಐ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಒಂದು ಎಂದಿನಂತೆ ದುಬಾರಿ ಐಫೋನ್, ಇನ್ನೊಂದು ಆ್ಯಪಲ್ ಕಂಪನಿಯ ಪ್ರಕಾರ ಅಗ್ಗದ ಐಫೋನ್. ಐಫೋನ್ 5ಎಸ್ ಮತ್ತು ಐಫೋನ್ ಸಿ ಎಂಬ ಈ ಎರಡು ಫೋನ್‌ಗಳು ಈಗಾಗಲೇ ಮಾರುಕಟ್ಟೆ ಪ್ರವೇಶ ಮಾಡಿವೆ.  ಈ ಪೈಕಿ ಐಫೋನ್ 5ಎಸ್ ಮಾದರಿ ಈ ಹಿಂದಿನ 4ಎಸ್ ಮಾದರಿಯ ಹೊಸ ಅವತಾರ. ಹೊರಗಿನಿಂದ ನೋಡಿದರೆ ಅಷ್ಟೇನೂ ವ್ಯತ್ಯಾಸ ಕಾಣಿಸದ ಈ ಮಾಡೆಲ್‌ನಲ್ಲಿ 64 ಬಿಟ್ಸ್‌ನ ಎ7 ಚಿಪ್ ಮತ್ತು ಎಮ್7 ಮೋಷನ್ ಕೋಪ್ರೊಸೆಸರ್ ಇದೆ ಇದೆ ಎಂಬುದು ವಿಶೇಷ. 5ಸಿ ಮಾದರಿಯಲ್ಲಿ ಎ6 ಚಿಪ್ ಅನ್ನು ಬಳಸಲಾಗಿದೆ. ಉಳಿದಂತೆ ಈ ಎರಡೂ ಮೊಬೈಲ್‌ಗಳಲ್ಲಿ ಬಹುತೇಕ ಅದೇ ಫೀಚರ್‌ಗಳಿದ್ದು ಐಫೋನ್ 5ಸಿ ಮಾದರಿ ಪ್ಲಾಸ್ಟಿಕ್ ಬಾಡಿ ಹೊಂದಿದೆ. ಅಲ್ಲದೆ 5 ಕಲರ್‌ಫುಲ್ ಬಾಡಿ ಕಲರ್‌ಗಳ ಆಯ್ಕೆ ಐಫೋನ್ ಸಿ ಮಾದರಿಯಲ್ಲಿದೆ. ವಿಶೇಷ ಎಂದರೆ ಗ್ರಾಹಕರು ಈ ಎರಡೂ ಮೊಬೈಲ್‌ಗಳಲ್ಲಿ ನ್ಯಾನೋ ಸಿಮ್ ಅನ್ನು ಮಾತ್ರ ಬಳಸಬಹುದು.  ಆದರೆ ಬೆಲೆಯ ವಿಷಯದಲ್ಲಿ ಐಫೋನ್ ಎಸ್ ಮೊಬೈಲ್‌ಗೆ ಗ್ರಾಹಕರು ಸುಮಾರು 52,000 ರುಪಾಯಿಗಳನ್ನು ತೆರಬೇಕಾದರೆ, ಐಫೋನ್ ಸಿಯ ಬೆಲೆ ಸುಮಾರು 42,000 ರುಪಾಯಿಗಳು.  ಅಂದಹಾಗೆ, ಆ್ಯಪಲ್ ಅಗ್ಗದ ಐಫೋನ್ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿಕೊಂಡು ಬೀಗುತ್ತಿದ್ದುದು ಇದೇ ಐಫೋನ್ ಸಿ ಮಾಡೆಲ್ ಬಗ್ಗೆ. ಆ್ಯಪಲ್ ಲೆಕ್ಕದಲ್ಲಿ ಅಗ್ಗ ಎಂದರೆ 42 ಸಾವಿರ ರುಪಾಯಿಗಳು ಎಂಬುದು ಈಗ ಮೊಬೈಲ್‌ಪ್ರಿಯರ ಅರಿವಿಗೆ ಬಂದಿದೆ. ಇನ್ನು ಆ್ಯಪಲ್ ಉಂಟು, ಕೊಂಡುಕೊಳ್ಳುವವರುಂಟು.



- ಹರಿ
harikannadaprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.