ಉತ್ತಮ ಅಂಕ ಗಳಿಸಲು ದೈಹಿಕ ಮಾನಸಿಕವಾಗಿ ಆರೋಗ್ಯವಾಗಿರಬೇಕಾದ್ದು ಅತಿ ಅವಶ್ಯಕ. 'ಸೌಂಡ್ ಮೈಂಡ್ ಇನ್ ಎ ಸೌಂಡ್ ಬಾಡಿ' ಎನ್ನುವಂತೆ ಆರೋಗ್ಯವಂತ ವಿಚಾರಗಳು, ಆಲೋಚನೆಗಳು ಬರಬೇಕಾದಲ್ಲಿ ಆರೋಗ್ಯವಂತ ಶರೀರವು ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಲು ಈ ಸಪ್ತ(7) ಸೂತ್ರಗಳು ನಿಮಗೆ ಉಪಯುಕ್ತವಾಗಬಹುದು.
ದಿನಕ್ಕೆ ಒಂದು ಘಂಟೆ ಕಾಲ ದೇಹಕ್ಕೆ ವ್ಯಾಯಾಮ ನೀಡುವ ಯೋಗಾಸನ, ವಾಕಿಂಗ್, ಜಾಗಿಂಗ್, ಈಜು, ಆಟ ಯಾವುದಾದರೂ ಇರಲಿ. ಬೆಳಿಗ್ಗೆ ಅಥವಾ ಸಂಜೆ 1 ಘಂಟೆ ಕಾಲ ದೈಹಿಕ ಕಸರತ್ತು ನಿಮ್ಮ ದಿನಚರಿಯ ಒಂದು ಭಾಗವಾಗಿರಲಿ.
ದಿನಕ್ಕೆ ಎರಡು ಬಾರಿ ಕನಿಷ್ಠ 10 ನಿಮಿಷವಾದರೂ ದೇವರ ಧ್ಯಾನ ಮಾಡಿ. ಧ್ಯಾನ ಎಂದರೆ, ದೇವರಲ್ಲಿ ನನಗೆ ಅದು ಕೊಡು ಇದು ಕೊಡು ಎಂದು ಡಿಮಾಂಡ್ ಇಡುವುದಲ್ಲ. ಬದಲಿಗೆ ಅವನು ನಮಗೆ ಕೊಟ್ಟಿರುವುದಕ್ಕೆ ಥ್ಯಾಂಕ್ಸ್ ಹೇಳುವುದು.
ದಿನಕ್ಕೆ ಮೂರು ಬಾರಿ ಮಾತ್ರ ಹಿತಮಿತವಾಗಿ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ಸಂತೋಷದಿಂದ ಸೇವಿಸಿ. ಊಟ ಎನ್ನುವುದು ಬರೀ ಹೊಟ್ಟೆ ತುಂಬಿಸುವ ಕ್ರಿಯೆ ಅಲ್ಲ. ಮನೆಯ ಹಿರಿಯ ಕಿರಿಯ ಸದಸ್ಯರೊಂದಿಗೆ ಸಂತಸವನ್ನು ಹೆಚ್ಚಿಸಿಕೊಳ್ಳುತ್ತ ಊಟ ಮಾಡಿ. ಕರಿದ, ಬೇಯಿಸಿದ ಪದಾರ್ಥಗಳಿಗಿಂತ ಹಸಿ ತರಕಾರಿಗಳು, ಹಣ್ಣುಗಳು ನಿಮ್ಮ ಮೆನುವಿನಲ್ಲಿ ಇರಲಿ.
ದಿನಕ್ಕೆ ಸುಮಾರು ನಾಲ್ಕು ಲೀಟರ್ ನೀರನ್ನು ಕುಡಿಯಿರಿ. ಒಮ್ಮೆಗೇ ಅಲ್ಲ. ಓದುವ ಸಂದರ್ಭದಲ್ಲಿ ಪಕ್ಕದಲ್ಲೇ ಶುದ್ಧವಾದ ನೀರನ್ನು ಇಟ್ಟುಕೊಂಡು ಆಗಾಗ್ಗೆ ಕುಡಿಯುವುದು ಉತ್ತಮ. ಧಾರಾಳವಾಗಿ ನೀರು ಕುಡಿಯುವುದರಿಂದ ಮಲಬದ್ಧತೆ ಹಾಗೂ ಅಜೀರ್ಣ ದೂರವಿಡಬಹುದು.
ದಿನಕ್ಕೆ ಐದು ಘಂಟೆ ಕಾಲ ಅಭ್ಯಾಸ ಮಾಡಿ. ಅಂದರೆ ಶಾಲಾ ಕಾಲೇಜಿನ ಅವಧಿ ಬಿಟ್ಟು ಬೆಳಿಗ್ಗೆ ಎರಡು ಗಂಟೆ ಹಾಗೂ ಸಂಜೆ ಮೂರು ಗಂಟೆ ಅಭ್ಯಾಸಕ್ಕಾಗಿ ಮೀಸಲಿಡಿ. ಪ್ರತಿ ದಿನ ತರಗತಿಯಲ್ಲಿ ಮಾಡಿದ ಪಾಠಗಳನ್ನು ಅದೇ ದಿನ ಮನೆಯಲ್ಲಿ ಒಂದೆರಡು ಬಾರಿ ಓದಿ, ಬರೆದು ಮನನ ಮಾಡಿಕೊಳ್ಳಿ.
ದಿನಕ್ಕೆ ಆರು ಘಂಟೆ ಮಾತ್ರ ನಿದ್ರೆ ಮಾಡಿ. ರಾತ್ರಿ 10.30ಕ್ಕೆ ಮಲಗುವುದಾದರೆ ಬೆಳಿಗ್ಗೆ 4.30ಕ್ಕೆ ಅಥವಾ 5ಕ್ಕೆ ಏಳಲೇಬೇಕು. ಹೆಚ್ಚು ನಿದ್ರೆ ಸೋಮಾರಿತ ಉಂಟುಮಾಡುತ್ತದೆ.
ವಾರದಲ್ಲಿ ಏಳು ದಿನವೂ ಇವನ್ನೆಲ್ಲ ತಪ್ಪದೆ ಪಾಲಿಸುವುದು ಅವಶ್ಯಕ. ಇವು ನಿಮ್ಮನ್ನು ಕ್ರಿಯಾಶೀಲರನ್ನಾಗಿ ಇಡಲು, ಮುಂಬರುವ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಲು ಸಹಕಾರಿಯಾಗುತ್ತದೆ.
-ನವಿಲೂರು ಪ್ರಕಾಶ್