ಹಿಂದಿರುಗಿ ನೋಡಿದಾಗ...

ಹಿಂದಿರುಗಿ ನೋಡಿದಾಗ...
Updated on: 

ಕಪ್ಪು ಬಿಳುಪು ಚಿತ್ರಗಳ ಯುಗದಿಂದಲೂ ಬಾಲಿವುಡ್‌ನ ವೇಷಭೂಷಣಗಳು, ಸ್ಟೈಲುಗಳು, ಮ್ಯಾನರಿಸಂಗಳು ಎಲ್ಲವೂ ಭಾರತೀಯರಿಗೆ ಅನುಕರಣೀಯವೇ. ಅದರಲ್ಲೂ ಹಿಂದಿಯ ನಟೀಮಣಿಯರು ಉಟ್ಟುಬಿಟ್ಟು ಹೋದ ಪ್ರತಿ ದಿರಿಸೂ ಭಾರತೀಯ ನಾರಿಯರ ಪಾಲಿಗೆ ಮಾಯಾವಸ್ತ್ರಗಳೇ. ಆ ಲೆಕ್ಕದಲ್ಲಿ ಬಾಲಿವುಡ್, ಫ್ಯಾಷನ್ ಲೋಕದಲ್ಲಿ ಟ್ರೆಂಡ್ ಸೆಟ್ ಮಾಡುತ್ತಲೇ ಬರುತ್ತಿದೆ. ಅಂದಿನ 'ಮುಘಲ್ ಇ ಆಜಮ್‌' ಕಾಲದಿಂದ ನಿನ್ನೆ ಮೊನ್ನೆವರೆಗಿನ 'ಜಬ್ ವಿ ಮೆಟ್‌' ವರೆಗಿನ ತನಕ ಒಂದು ರೆಟ್ರೋ ಸವಾರಿ ಮಾಡಿಬರೋಣ. ಜಬ್ ವಿ ಮೆಟ್ ಯುಗದ ನಂತರ ಬಾಲಿವುಡ್‌ಗೆ ಸನ್ನಿ ಲಿಯೋನ್‌ಳ  ಎಂಟ್ರಿ ಆಗಿದೆ. ವೀಣಾ ಮಲಿಕ್, ಪೂನಂ ಪಾಂಡೆ ಕೂಡ ಸ್ಪರ್ಧೆಗೆ ಕೈ ಮಿಲಾಯಿಸಿದ್ದಾರೆ. ಆದರೆ ಈ ಯುಗದ ಬಟ್ಟೆಗಳು ಇನ್ನಾದರೂ ಭಾರತ ನಾರಿಯರಿಗೆ ನಿರ್ಭಿಢೆಯಿಂದ ಧರಿಸಬಲ್ಲ ಕಂಫರ್ಟ್ ನೀಡಿಲ್ಲ. ಹಾಗಾಗಿ ಅವುಗಳ್ಯಾವುವನ್ನೂ ಫ್ಯಾಷನ್ ಟ್ರೆಂಡ್ ಸೆಟ್ಟರ್ ಅನ್ನಲಾಗುವುದಿಲ್ಲ.

ಅನಾರ್ಕಲಿ ಸ್ಟೈಲ್
ಮುಘಲ್ ಇ ಆಜಮ್ ಚಿತ್ರದಲ್ಲಿ 'ಪ್ಯಾರ್ ಕಿಯಾ ತೋ ಡರ್ನಾ ಕ್ಯಾ...' ಅಂತ ಹಾಡಿ ಕುಣಿದು ತನ್ನ ನಗುವಿಂದಲೇ ಮೋಡಿ ಮಾಡಿದ ಬೆಡಗಿ ಮಧುಬಾಲಾಳನ್ನು ಮರೆಯಲು ಸಾಧ್ಯವಿದೆಯೆ? ಆ ಹಾಡಿನಲ್ಲಿ ಮಧುಬಾಲಾ ಧರಿಸಿದ್ದ ತಿಳಿನೀಲಿ ಮತ್ತು ಕೆಂಪುಬಣ್ಣದ ಜಗಮಗವೆನ್ನುವ ದಿರಿಸು ಅಂದಷ್ಟೇ ಅಲ್ಲ ಇಂದಿಗೂ ಬಾಲಿವುಡ್  ಮಂದಿಯ ಫೇವರಿಟ್. 'ಅನಾರ್ಕಲಿ ಸ್ಟೈಲ್‌' ಅಂತಲೇ ಖ್ಯಾತವಾಗಿದ್ದ ಆ ಫ್ಯಾಷನನ್ನು ಸರಿಸುಮಾರು ಎಪ್ಪತ್ತರ ದಶಕದ ಕೊನೆಯವರೆಗೂ ಹೆಂಗಳೆಯರು ತಮ್ಮದಾಗಿಸಿಕೊಂಡಿದ್ದರು.

ಮುಮ್ತಾಜ್ ಸೀರೆ
ಮುಮ್ತಾಜ್ ಸೀರೆ ಅಂತೂ ತೀರಾ ಮೊನ್ನೆ ಮೊನ್ನೆವರೆಗೂ ಚಾಲ್ತಿಯಲ್ಲಿದ್ದ ಬ್ರಾಂಡು. ಬ್ರಹ್ಮಚಾರಿ ಚಿತ್ರದ 'ಆಜ್ ಕಲ್ ತೇರೆ ಮೇರೆ ಪ್ಯಾರ್‌ಕೆ...' ಹಾಡಿನಲ್ಲಿ ಶಮ್ಮಿ ಕಪೂರ್‌ನೊಂದಿಗೆ ನರ್ತಿಸಿ ರಸಿಕರ ಮನಸೆಳೆದಿದ್ದ ನಟಿ  ಮುಮ್ತಾಜ್ ಧರಿಸಿದ್ದ ಸೀರೆ ಆಗಿನ ಕಾಲದಲ್ಲಿ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಹೋಗಿತ್ತೆಂಬ ಸುದ್ದಿಯಿತ್ತು.

ಸಾಧನಾ ಸ್ಯಾರಿ
ವಕ್ತ್ ಚಿತ್ರದ 'ಸಾಧನಾ ಸ್ಯಾರಿ' ಆಗಿನ ಹೆಂಗಳೆಯರಲ್ಲಿ ಹಾಗೂ ಕಾಲೇಜು ಕನ್ಯೆಯರಲ್ಲಿ ಸಂಚಲನ ಸೃಷ್ಟಿಸಿದ ಸೀರೆ. ಸಾಧನ ರೀತಿಯೇ ಕೇಶವಿನ್ಯಾಸ ಮಾಡಿಕೊಂಡು ಸಾಧನಾ ಸೀರೆಯನ್ನು ಉಟ್ಟು ಕನ್ನಡಿಯೆದುರು ನಿಲ್ಲುತ್ತಿದ್ದ ಚೆಲುವೆಯರಲ್ಲಿ ನಾನೇ ನಟಿ ಸಾಧನಾ ಎಂಬ ಆತ್ಮವಿಶ್ವಾಸ!

ಶ್ರೀದೇವಿ ಸೀರೆ
ಥಂಡರ್ ಥೈಸ್ ಕ್ವೀನ್ ಅಂತಲೇ ಬಿರುದಾಂಕಿತಳಾದವಳು ದಕ್ಷಿಣದಿಂದ ಬಿ ಟೌನ್‌ಗೆ ವಲಸೆ ಹೋದ ಮಿಸ್ಟರ್ ಇಂಡಿಯಾದ ಹವಾ ಹವಾಯಿ ಖ್ಯಾತಿಯ ಶ್ರೀದೇವಿ. ಈಕೆ ಬಾಲಿವುಡ್‌ನಲ್ಲಿ ನಂಬರ್ ಒನ್ ಪಟ್ಟ ಹಲವು ವರ್ಷ ಕಾದಿಟ್ಟುಕೊಂಡಿದ್ದೇ ಮಿಸ್ಟರ್ ಇಂಡಿಯಾ ಚಿತ್ರದಿಂದ. ಮಳೆಯಲ್ಲಿ ಒದ್ದೆಮುದ್ದೆಯಾಗಿ ಅನಿಲ್ ಕಪೂರ್ ಜೊತೆ ಕಾಟೇ ನಹಿ ಕಟ್ತೆ ಯೆ ದಿನ್ ಯೆ ರಾತ್.... ಅಂತ ಕುಣಿದು ಹದಿಹರೆಯದವರನ್ನು ಬೆಚ್ಚಗಾಗಿಸಿದ ಶ್ರೀದೇವಿ, ಯುವತಿಯರಲ್ಲಿ ಸೀರೆಯ ಬಗ್ಗೆ ಅತೀವ ಆಸಕ್ತಿ ಹುಟ್ಟುವಂತೆ ಮಾಡಿದ್ದು ಇದೇ ಹಾಡಿನಿಂದ. ಮಾಮೂಲಿ ತಿಳಿ ನೀಲಿ ಶಿಫಾನ್ ಸೀರೆ ಈ ಮಟ್ಟಕ್ಕೆ ಮೋಡಿ ಮಾಡಿ ಟ್ರೆಂಡ್‌ಸೆಟ್ ಮಾಡಬಹುದೆಂದು ಯಾರೂ ಊಹಿಸಿಯೂ ಇರಲಿಲ್ಲ. ಆ ನಂತರ ತೋಫಾ ಸೀರೆ, ನಗೀನ ಗಾಗ್ರಾ ಹೀಗೆ ಹಲವು ಶ್ರೀದೇವಿ ಬ್ರಾಂಡ್ ಬಂದರೂ ಮಿಸ್ಟರ್ ಇಂಡಿಯಾದ ನೀಲಿ ಸೀರೆಯ ಮೋಡಿ ಮಾತ್ರ ಎವರ್ ಗ್ರೀನ್.

ಧಕ್ ಧಕ್ ಚೋಲಿ
ಚೋಲಿ ಕೆ ಪೀಚೆ ಕ್ಯಾ ಹೈ, ಧಕ್ ಧಕ್ ಕರ್‌ನೇ ಲಗಾ, ಹೀಗೆ ಪಟ್ಟಿ ಮಾಡಿ ಮುಗಿಯದಷ್ಟು ಸುಪರ್ ಹಿಟ್ ಹಾಡುಗಳ ಒಡತಿ ಮಾಧುರಿ ಭರ್ಜರಿ ಅನ್ನುವಂಥ ಸಿಕ್ಸರ್ ಹೊಡೆದದ್ದು ಮಾತ್ರ ಹಮ್ ಆಪ್ ಕೆ ಹೈ ಕೌನ್ ಚಿತ್ರದಲ್ಲೇ. ದೀದಿ ತೇರಾ ದೇವರ್ ದಿವಾನ ಹಾಡಿನಲ್ಲಿ ಆಕೆಯ ತುಂಟತನ ಮರೆಯಲು ಸಾಧ್ಯವೆ? ಸಲ್ಮಾನ್ ಖಾನ್ ಜೋಡಿಯಾಗಿ ಕಾಣಿಸಿಕೊಂಡ ಆ ಚಿತ್ರದ ಅವಳ ಪ್ರತಿ ಸೀರೆ, ಗಾಗ್ರಾ ಚೋಲಿ, ಟಾಪ್ ಕೂಡ ಟ್ರೆಂಡ್ ಸೆಟ್ ಮಾಡಿದ್ದು ಸುಳ್ಳಲ್ಲ. ಆದರೆ ಎಲ್ಲಕ್ಕಿಂತ ಹೆಚ್ಚು ಆಕರ್ಷಿಸಿದ್ದು ಕಡುನೀಲಿ ಬಣ್ಣದ ಡಿಸೈನರ್ ಸೀರೆ ರವಿಕೆ. ಸುಮಾರು ವರ್ಷ ಈ ಟ್ರೆಂಡ್ ಭಾರತನಾರಿಯರ ವಸ್ತ್ರಭಂಡಾರವನ್ನು ಆಳಿತು.

ಶರ್ಮಿಳಾ ಸೂಟ್
ನವಾಬ್ ಪಟೌಡಿಯವರ ಮನದನ್ನೆ ಶರ್ಮಿಳಾ ಟಾಗೋರಳ ಸೂಜಿಗಲ್ಲ ನಗುವಿಗೆ ಮರುಳಾಗದೆ ಇದ್ದವರು ಯಾರು? ಆ ಕಾಲದ ಅತ್ಯಂತ ಸುಂದರಿ ಯಾರು ಎಂಬ ಪ್ರಶ್ನೆಗೆ ತತ್‌ಕ್ಷಣ ಬರುತ್ತಿದ್ದ ಉತ್ತರ ಶರ್ಮಿಳಾ ಟಾಗೋರ್. ಆ್ಯನ್ ಈವನಿಂಗ್ ಇನ್ ಪ್ಯಾರಿಸ್ ಚಿತ್ರದಲ್ಲಿ ಶರಮ್ ಇಲ್ಲದೆ ನೀಲವರ್ಣದ ಸ್ವಿಮ್ ಸೂಟಿನಲ್ಲಿ  ತನ್ನ ಬಳುಕು ದೇಹವನ್ನು ಪ್ರದರ್ಶಿಸಿದ್ದೇ ತಡ ಬಾಲಿವುಡ್‌ನಲ್ಲಿ ಹೊಸದೊಂದು ಶಕೆ ಪ್ರಾರಂಭವಾಯಿತು. ಸ್ವಿಮ್ ಸೂಟ್ ಹಾಗೂ ಬಿಕಿನಿಗೆ ದಿಢೀರ್ ಡಿಮ್ಯಾಂಡ್ ಶುರುವಾಗಿದ್ದೇ ಶರ್ಮಿಳಾ ಸ್ವಿಮ್ ಸೂಟ್ ಧರಿಸಿದ ನಂತರ.

ಮುಜರಾ ಲುಕ್
ಭಾರತ ಚಿತ್ರರಂಗದ ಚಿರಯುವತಿ ರೇಖಾ ಏನೇ ಮಾಡಿದರೂ, ಏನೂ ಮಾಡದೆ ಸುಮ್ಮನೇ ಇದ್ದರೂ ಅದು ಸಂಚಲನಕ್ಕೆ ಕಾರಣವಾಗುತ್ತಿದ್ದ ಕಾಲವೊಂದಿತ್ತು. ಈಗಲೂ ರೇಖಾ ಎಂಬ ಹೆಸರು ಮಾಜಿ ಯುವಕ ಯುವತಿಯರಲ್ಲಿ ಬೇರೆ ಬೇರೆ ಕಾರಣಕ್ಕೆ ಹುಚ್ಚೆಬ್ಬಿಸುವುದು. ಉಮ್ರಾವ್ ಜಾನ್ ಚಿತ್ರದಲ್ಲಿ ಮುತ್ತುರತ್ನಗಳಿಂದ  ಪೋಣಿಸಲ್ಪಟ್ಟ ಅದ್ಧೂರಿ ಡ್ರೆಸ್ಸು, ಬಾಲಿವುಡ್ ಮತ್ತು ಇತರೆ ಭಾಷೆಗಳ ಚಿತ್ರರಂಗವನ್ನು ಹಲವು ವರ್ಷಗಳ ಕಾಲ ಆವರಿಸಿತು. ಉಮ್ರಾವ್ ಜಾನ್ ಚಿತ್ರದ ಪ್ರತಿ ವಿಷಯವೂ ದಾಖಲಾರ್ಹವೇ. ಮುಜರಾ ಲುಕ್ ಅಂತಲೇ ಖ್ಯಾತವಾಗಿದ್ದ ಈ ಪೋಷಾಕನ್ನು ಮದುವಣಗಿತ್ತಿಯರು ಕೂಡ ಕಾಪಿ ಮಾಡಿದ್ದುಂಟು.

ಡಿಂಪಲ್ ಸ್ಕರ್ಟ್
ಬಾಬ್ಬಿ ಚಿತ್ರದಿಂದ ಚಿತ್ರರಂಗಕ್ಕೆ ಧುಮುಕಿದ ಡಿಂಪಲ್ ಕಪಾಡಿಯಾಳ ಕಪಡಾ ಬಾಲಿವುಡ್ ದುನಿಯಾದಲ್ಲಿ ಕಾಸ್ಟೂಮ್ ಡಿಪಾರ್ಟಮೆಂಟಿನ ಮನ್ವಂತರಕ್ಕೆ ಕಾರಣವಾಯಿತು. ಶಾರ್ಟ್ ಮತ್ತು ಸೆಕ್ಸಿ ಎನಿಸುವ ಸ್ಕರ್ಟ್‌ಗಳು ಎಪ್ಪತ್ತರ ದಶಕದ ಹದಿಹರೆಯದ ಚೆಲುವೆಯರ ಫೇವರಿಟ್ ಡ್ರೆಸ್ ಆಗಿ ಹೋಯಿತು.

ಊಮೀಳಾ  ಪೀಸ್
ಯಾಯಿರೇ ಯಾಯಿರೆ.. ರಂಗೀಲಾ ರೇ... ಅಂತ ನುಲಿನುಲಿದು ಬಂದ ಊರ್ಮಿಳಾ ಮಾತೊಂಡ್ಕರ್‌ಳ ಕಿರು ಉಡುಪುಗಳು ಹೊಸ ಟ್ರೆಂಡ್ ಸೆಟ್ ಮಾಡಿದ್ದಷ್ಟೇ ಅಲ್ಲ, ಹಿಂದಿ ಚಿತ್ರ ಜಗತ್ತಿಗೆ ಮನೀಶ್ ಮಲ್ಹೋತ್ರ ಎಂಬ ಜೀನಿಯಸ್ ವಸ್ತ್ರವಿನ್ಯಾಸಕನನ್ನೂ ಕೊಡುಗೆಯನ್ನಾಗಿ ನೀಡಿತು. ರಂಗೀಲಾದಲ್ಲಿ ಊರ್ಮಿಳಾ ಧರಿಸಿದ ಉಡುಪುಗಳು ಅನುಕರಣೀಯವಾಗಿರಲಿಲ್ಲ ಅನ್ನೋದು ಸತ್ಯವೇ ಆದರೂ ಹೆಣ್ಮಕ್ಕಳು ಕೊಂಚ ಮಟ್ಟಿಗೆ ಸಂಕೋಚದ ಪರದೆಯಿಂದ ಹೊರಬಂದು ಆಧುನಿಕ ಉಡುಪುಗಳತ್ತ ಕೈ ಚಾಚುವಂತೆ ಮಾಡುವಂತೆ ಆಗಿದ್ದು ಹೌದು.

ಬಂಟಿ ಬಬ್ಲಿ ಸೂಟ್ಸ್
ಬಂಟಿ ಔರ್ ಬಬ್ಲಿ ಸ್ಟೈಲು ಅಂದ್ರೆ ನಿಮ್ಮ ಕಣ್ಣೆದುರು ನಿಲ್ಲೋ ಚಿತ್ರ ರಾಣಿ ಮುಖರ್ಜಿ ಮತ್ತು ಅವಳ ಗಿಡ್ಡನೆಯ ಕಾಲರ್ ಅಂಗಿ, ಪಟಿಯಾಲ, ಫ್ಯಾನ್ಸಿ ಕ್ರಾಸ್ ಬ್ಯಾಗ್, ಈ ಕಾಂಬಿನೇಶನಿನದ್ದು! ಬಂಟಿ ಬಬ್ಲಿ ಸೂಟ್ಸ್ ಅಂತಲೇ ಈ ಫ್ಯಾಷನ್‌ಗೆ ಹೆಸರು. ಡೀಸೆಂಟಾಗಿದೆ ಅನ್ನೋ ಕಾರಣಕ್ಕೆ ಕಾಲೇಜು ತರುಣಿಯರು ಈಗಲೂ ಈ ಫ್ಯಾಷನ್ ಫಾಲೋ ಮಾಡ್ತಿರೋದನ್ನು ಗಮನಿಸಬಹುದು.

ಕರೀನಾ ಪಟಿಯಾಲ
ಛೋಟಾನವಾಬ ಸೈಫ್ ಖಾನ್‌ನ ಮನದೊಡತಿ ಕರೀನಾ ತನ್ನ ಹಳೆಯ ಪ್ರಿಯಕರ ಶಾಹಿದ್ ಕಪೂರ್ ಜೊತೆ ನಟಿಸಿದ ಸುಪರ್ ಹಿಟ್ ಚಿತ್ರ ಜಬ್ ವಿ ಮೆಟ್ ಯಾರಿಗೆ ನೆನಪಿಲ್ಲ? ಕರೀನಾ ವೃತ್ತಿ ಬದುಕಿನ ದೊಡ್ಡ ಹಿಟ್ ಹಾಗೂ ಆಕೆಯನ್ನು ನಟಿ ಅಂತ ಒಪ್ಪಿಕೊಳ್ಳಲು ಸಿಕ್ಕ ಮೊದಲ ಕಾರಣ ಜಬ್ ವಿ ಮೆಟ್ ಅಂದ್ರೆ ಅತಿಶಯೋಕ್ತಿ ಅಲ್ಲ. ಈ ಚಿತ್ರದಲ್ಲಿ ಆಕೆ ಧರಿಸಿದ ಪಟಿಯಾಲದೊಂದಿಗೆ ಉದ್ದ ನಿಲುವಂಗಿ ಥರದ ಟಿ ಶರ್ಟ್‌ನ ಕಾಂಬಿನೇಶನ್ ಕಳೆದ ಮೂರು ನಾಲ್ಕು ವರ್ಷಗಳಿಂದ ಹುಡ್ಗೀರು ಅಪ್ಪಿಕೊಂಡಿರೋ ಟ್ರೆಂಡು.




-  ನವೀನ್ ಸಾಗರ್‌
naveen2709@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com