ಈ ಕುಟುಂಬದಲ್ಲಿ ಜನಿಸಿದ ನಾನು ಪುನೀತ!

ಪುನೀತ್ ಅಂದ್ರೆ ರಾಜ್ಕುಮಾರ್ ಅವರ ಮನೆಮಗನಷ್ಟೇ ಅಲ್ಲ. ಕನ್ನಡದ ಎಲ್ಲರ ಮನೆ ಹುಡುಗ. ಅವರಿಗೆ ಇಂಥ ಇಮೇಜ್ ತಂದುಕೊಟ್ಟದ್ದು ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ಮಾತ್ರವೇ ಅಲ್ಲ. ತಮ್ಮ ಸಿನೆಮಾಗಳಲ್ಲೂ ಅವರು ತಮ್ಮ ತಂದೆಯ ಪಾತ್ರಗಳಿಗೆ ಸಮರ್ಥ ಉತ್ತರಾಧಿಕಾರಿಯೇ. ಅಲ್ಲಿ ಕಂಡದ್ದು ಕೌಟುಂಬಿಕ ಹಾಗೂ ಸಾಮಾಜಿಕ ಮೌಲ್ಯಗಳ ಸಮರ್ಥ ಪ್ರತಿಬಿಂಬ. ಕೋಟ್ಯಧಿಪತಿ ಕಾರ್ಯಕ್ರಮದಲ್ಲಂತೂ ಅವರು ಕರ್ನಾಟಕದ ಮೂಲೆ ಮೂಲೆಗಳಿಂದ ಬಂದು ಹಾಟ್ಸೀಟ್ನಲ್ಲಿ ಕುಳಿತ ಅಭ್ಯರ್ಥಿಗಳನ್ನು ಅಕ್ಕರೆಯಿಂದ ಮಾತನಾಡಿಸಿದರು. ಅವರು ಗೆದ್ದರೆ ತಾವೇ ಗೆದ್ದಂತೆ ಬೀಗಿದರು. ಇಂಥ ಪುನೀತನ ಮನದಲ್ಲೇನಿದೆ?
ನಿಮ್ಮ ಡ್ಯಾನ್ಸ್, ಫೈಟ್ಸ್, ಅಭಿನಯ ಮತ್ತು ಕಾಣುತ್ತಿರುವ ಯಶಸ್ಸು, ಇವುಗಳ ಹಿಂದೆ ಪರಿಶ್ರಮದ ಪಾಲೆಷ್ಟಿದೆ?
ಅಫ್ಕೋರ್ಸ್... ಪ್ರತಿಯೊಂದು ಕೆಲಸಾನೂ ಶ್ರದ್ಧೆಯಿಂದ ಮಾಡ್ಬೇಕು, ಎರಡನೇ ಮಾತೇ ಇಲ್ಲ. ಡ್ಯಾನ್ಸ್ ತರಬೇತಿ ಏನೂ ತಗೊಂಡಿಲ್ಲ. ಚಿಕ್ಕಂದಿಂದ ಡ್ಯಾನ್ಸ್ ಅಂದ್ರೆ ತುಂಬಾ ಇಷ್ಟ. ಹುಚ್ಚು ಅಂತಾನೇ ಹೇಳ್ಬೇಕು. ಇನ್ನು ಫೈಟಿಂಗ್ ಬಗ್ಗೆ, ಮೊದಲಿಂದ್ಲೂ ಮಾರ್ಷಲ್ ಆರ್ಟ್ಸ್ ಅಭ್ಯಾಸ ಮಾಡ್ತಿದ್ದೆ. ನನಗೆ ಸ್ಪೂರ್ತಿ ಬ್ರೂಸ್ಲೀ ಮತ್ತು ಜಾಕಿ ಚಾನ್. ಅವರ ಸಿನಿಮಾ ನೋಡ್ತಾ ಬೆಳ್ದೆ. ನನ್ನ ಪ್ರಿಯಾರಿಟಿ ಇದ್ದದ್ದು ತೆಳ್ಳಗಾಗಬೇಕು ಅಂತ. ಸಣ್ಣ ಆಗ್ಬೇಕು ಅಂತಾನೇ ಇದ್ನೆಲ್ಲಾ ಕಲ್ತೆ. ಆ್ಯಕ್ಟಿಂಗ್ ಬಂದದ್ದು ಆಕಸ್ಮಿಕ ಅಂತಾನೇ ಹೇಳ್ಬೇಕು. ಚಿಕ್ಕವನಾಗಿದ್ದಾಗ ಆ್ಯಕ್ಟ್ ಮಾಡಿದ್ದಷ್ಟೆ. 99ರಲ್ಲಿ ಮದುವೆ ಆಯ್ತು, ಆಗ ಗ್ರಾನೈಟ್ ವ್ಯವಹಾರ ಮಾಡ್ತಿದ್ದೆ. ಯಾಕೋ ಯಾವ್ದೂ ಸರಿ ಬರ್ಲಿಲ್ಲ. ನಮ್ಮ ಪ್ರೊಡಕ್ಷನ್ನಲ್ಲಿ ಹಂಚಿಕೆ ನೋಡ್ಕೋತಿದ್ದೆ. ಆಗ, ಯಾಕೆ ಒಂದು ಬಾರಿ ಟ್ರೈ ಮಾಡ್ಬಾರ್ದು ಅನ್ನಿಸ್ತು. ದೇವರ ದಯೆಯಿಂದ ಮೊದಲ ಫಿಲ್ಮ್ ಹಿಟ್ ಆಯ್ತು. ನಂಗೂ ಇಷ್ಟ ಆಯ್ತು.
ಅಪ್ಪು ಫಿಲ್ಮ್ ಮಾಡಿದಾಗ, ಸೂಪರ್ ಸ್ಟಾರ್ ಆಗೋ ಕಲ್ಪನೆ ಇತ್ತಾ?
ಖಂಡಿತ ಇರ್ಲಿಲ್ಲ. ಮೊದಲ ಚಿತ್ರ, ಒಳ್ಳೇ ಎಂಟ್ರಿ ಕೊಡಬೇಕು, ಡ್ಯಾಶಿಂಗ್ ಎಂಟ್ರಿ ಕೊಡಬೇಕು ಅಂತ ಯಾರಿಗೆ ಆಸೆ ಇರಲ್ಲ ಹೇಳಿ? ನಂಗೂ ಇತ್ತು. ಜನ ನನ್ನ ಇಷ್ಟಪಟ್ಟಿದ್ದಾರೆ. ಮೊದಲನೇ ಸಿನಿಮಾದಲ್ಲಿ ರೆಕಗ್ನಿಷನ್ ಸಿಕ್ಕಿದೆ ಅಂದ್ರೆ ಅದಕ್ಕೆ ಕಾರಣ ಡೈರೆಕ್ಟರ್ನಿಂದ ಹಿಡಿದು ಪ್ರತಿಯೊಬ್ರೂ ಹಾಕಿರೋ ಪ್ರಯತ್ನ.
ಆ ಸಕ್ಸಸ್, ಮುಂದಿನ ಚಿತ್ರಗಳಿಗೆ ಪ್ರೇರಣೆಯಾಯ್ತಾ?
ಖಂಡಿತವಾಗ್ಲೂ. ಪ್ರೇರಣೆಗಿಂತ್ಲೂ, ಮೊದಲ ಚಿತ್ರದ ಯಶಸ್ಸಿನ ಆನಂದವನ್ನು ಎಂಜಾಯ್ಮೆಂಟ್ ನನ್ನದಾಗಿಸಿತು. ಜೊತೆ ಜೊತೆಗೆ ಭಯಾನೂ ಉಂಟಾಯ್ತು. ಜನ ಒಪ್ತಾರಾ, ಇದೆಲ್ಲ ಆತಂಕ. ಹಾಗಾಗಿ ಜಾಸ್ತಿ ಸಿನಿಮಾ ಮಾಡಿಲ್ಲ.
ಅಮ್ಮ ನಿಮ್ಮ ಮೇಲೆ ಬೀರಿದ ಪರಿಣಾಮ?
ಎಲ್ಲ ರೀತಿಯಲ್ಲೂ. ಫಸ್ಟ್ ಆಫ್ ಆಲ್, ನನಗೆಲ್ಲವೂ ಅವರೇ. ನನಗೆ ಜನ್ಮ ಕೊಟ್ಟ ತಾಯಿ. ಯಾವಾಗ್ಲೂ ಬ್ಯುಸಿಯಾಗಿರ್ತಾರೆ. ನಮ್ಮ ಇಡೀ ವಜ್ರೇಶ್ವರಿ ಕಂಬೈನ್ಸ್ ತಂಡಾನ ಕಟ್ಟಿದವರು ಅವರು. ನಮ್ಮೆಲ್ಲ ಸಿನಿಮಾಗಳನ್ನು ನಿರ್ಮಾಣ ಮಾಡಿದವರು. ನಾನು ಬ್ಯುಸಿನೆಸ್ ಮಾಡ್ತಿದ್ದಾಗ ಪಿಲ್ಲರ್ ಆಗಿ ಬೆಂಬಲಕ್ಕೆ ನಿಂತವರು. ಎಲ್ಲರ ತಾಯಿಯರೂ ಅಷ್ಟೇ. ಒಂಥರ ಪಾಸಿಟಿವ್ ಎನರ್ಜಿ ಕೊಡ್ತಾರೆ ಮಕ್ಕಳಿಗೆ. ಶೀ ಈಸ್ ದಿ ಬಿಗ್ಗೆಸ್ಟ್ ಸಪೋರ್ಟ್.
ನಿಮ್ಮ ಅಪ್ಪಾಜಿ ಹಾಗೂ ಅಣ್ಣಂದಿರು ಸಿನಿಮಾ ನಟರಾಗಿ, ವ್ಯಕ್ತಿಗಳಾಗಿ, ನಿಮ್ಮ ಮೇಲೆ ಬೀರಿರುವ ಪರಿಣಾಮ?
ನಮ್ಮ ಅಪ್ಪಾಜಿ ಸಂಪೂರ್ಣ ಫ್ಯಾಮಿಲಿ ಮ್ಯಾನ್. ಎಂದೂ ಒಳಗೊಂದು ಹೊರಗೊಂದು ಇಲ್ಲ. ಒಳಗಿನ ಬಿಹೇವಿಯರ್, ಹೊರಗಿನ ಬಿಹೇವಿಯರ್ ಒಂದೇ- ಸಿಂಪ್ಲಿಸಿಟಿ. ನಮ್ಮ ಜೀವನ ಚೆನ್ನಾಗಿ ನಡೀತಿದೆ ಅಂದ್ರೆ ಅದಕ್ಕೆ ಅವರೇ ಕಾರಣ. ಕೆರಿಯರ್ ಬಗ್ಗೆ ಹೇಳುವಾಗ ನನ್ನ ಅಣ್ಣಂದಿರಾದ ಶಿವಣ್ಣ, ರಾಗಣ್ಣ ತುಂಬಾ ಸಪೋರ್ಟ್ ಮಾಡಿದ್ದಾರೆ. ಅವರ ಫಿಲ್ಮ್ಗಳನ್ನು ನೋಡಿ ಬೆಳೆದಿರೋನು ನಾನು. ಶಿವಣ್ಣನ ಫಿಲ್ಮ್ ಸಕ್ಸಸ್ ತೊಗೊಂಡ್ರೆ- ಹೈಯೆಸ್ಟ್ ಕಲೆಕ್ಷನ್, ಹೈಯೆಸ್ಟ್ ರನ್, ಇಡೀ ಕರ್ನಾಟಕದಲ್ಲಿ 100 ಡೇಸ್ ಕ್ರಾಸ್ ಮಾಡೋ ಸಿನಿಮಾ ಅಂದ್ರೆ ಶಿವಣ್ಣನವರದ್ದು. ಇಷ್ಟಿದ್ರೂ, ಮುಂದಿನ ಫಿಲ್ಮ್ ಮಾಡುವಾಗ, ಅದು ಅವರ ಫಸ್ಟ್ ಫಿಲ್ಮ್ ಅಂತ ಹೋಗ್ತಾರೆ. ಕೆಲಸದ ಮೇಲೆ ಅಷ್ಟು ಶ್ರದ್ಧೆ. ನನಗೆ ರೋಲ್ ಮಾಡೆಲ್. ಇನ್ನು ರಾಗಣ್ಣನವರೂ ಅಷ್ಟೆ. ಶಿವಣ್ಣ ಆ್ಯಕ್ಟಿಂಗ್ ಶುರು ಮಾಡಿದ 2ನೇ ವರ್ಷ ಶುರು ಮಾಡಿದ್ರು. ಕರ್ನಾಟಕದಲ್ಲಿ ಅವರ ಸಿನಿಮಾಗಳು ರೆಕಾರ್ಡ್ ಕ್ರಿಯೇಟ್ ಮಾಡಿವೆ. ಪ್ರೊಡಕ್ಷನ್ ಕಡೆ ಗಮನ ಹರಿಸಿದ್ದಾರೆ. ಇವತ್ತು ನನ್ನ ತಂದೆ ಸ್ಥಾನದಲ್ಲಿ ನಿಂತು, ಇಡೀ ಕುಟುಂಬ ಒಂದಾಗಿಟ್ಟು ನೋಡ್ಕೊಂಡಿದ್ದಾರೆ.
ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ, ಒಬ್ಬ ಯಶಸ್ವಿ ನಟರಾದ ನಿಮ್ಮ ಮೇಲೆ ಯಾವ ರೀತಿ ಪರಿಣಾಮ ಬೀರಿದೆ?
2012ರಲ್ಲಿ ಮೊದಲನೇ ಸೀಸನ್ ನಡೀತು. ನನಗೆ ಆಫರ್ ಬಂದಾಗ ನಂಗೇ ಪ್ರಶ್ನೆ ಬಂತು, ನನ್ನ ಯಾಕೆ ಕೇಳ್ತಿದ್ದಾರೆ ಅಂತ. ನಂಗೆ ಕಾರ್ಯಕ್ರಮಗಳಲ್ಲಿ ಅಷ್ಟಾಗಿ ಮಾತಾಡಿ ಅಭ್ಯಾಸ ಇಲ್ಲ. ನನ್ನ ಶಿಕ್ಷಣ ತುಂಬಾ ಕಮ್ಮಿ. 10ನೇ ಕ್ಲಾಸ್ ವರೆಗೆ ಮಾತ್ರ ಓದಿರೋದು. ಚಿಕ್ಕಂದಿನಿಂದ, ಸಿದ್ಧಾರ್ಥ್ ಬಸುರವರ ಫ್ಯಾನ್ ನಾನು. ಅವರ ಬೋರ್ನ್ವಿಟಾ ಕ್ವಿಜ್, ಬಿಬಿಸಿ ಕ್ವಿಜ್ಗಳನ್ನ ತುಂಬಾ ನೋಡ್ತಿದ್ದೆ. ಈ ಆಫರ್ ಬಂದಾಗ ಅವರನ್ನ ಮೀಟ್ ಮಾಡೋ ಅವಕಾಶ ಸಿಕ್ತು. ಇಷ್ಟವಾಗಿ ಒಪ್ಕೊಂಡೆ, ನನಗೆ ಪಟ್ಪಟ್ ಅಂತ ಮಾತಾಡಕ್ಕೆ ಬರಲ್ಲ. ಯಾವುದಾದರೂ ವಿಷಯದ ಬಗ್ಗೆ ಚರ್ಚೆ ಬಂದ್ರೆ ನಂಗೆ ಅದರ ಬಗ್ಗೆ ಜ್ಞಾನ ಇಲ್ಲ. ಐ ಕಾಂಟ್ ಹ್ಯಾಂಡಲ್ ಇಟ್, ಅದಕ್ಕೆ, ನಿಮ್ಮ ಮಾನಿಟರ್ ಮೇಲೆ ಎಲ್ಲಾ ಇರುತ್ತೆ. ಏನೂ ಕಷ್ಟ ಆಗಲ್ಲ ಅಂದ್ರು. ಒಪ್ಕೊಂಡೆ, ಟ್ರೈನಿಂಗ್ ತಗೊಂಡೆ. ಹೇಗೆ ಬರ್ತಿತ್ತೋ ಗೊತ್ತಿಲ್ಲ. ಜನ ಮೆಚ್ಚಿಕೊಂಡಿದ್ದಾರೆ. ಕರ್ನಾಟಕದ ಎಲ್ಲಾ ಮೂಲೆಯಿಂದ ಜನ ಬರ್ತಿದ್ದರು. ಅವರೊಂದಿಗೆ ಮಾತಾಡೋ ಸುಯೋಗ ಸಿಕ್ಕಿತ್ತು.
ನಿಮ್ಮ ಅಭಿಮಾನಿಗಳಿಗೆ, ಅಪ್ಪಾಜಿಯವರ ಸಿನಿಮಾನ ನೀವು ರಿಮೇಕ್ ಮಾಡಬೇಕು ಅಂತ ಆಸೆ. ಅದು ಯಾವಾಗ ಈಡೇರುತ್ತೆ?
ತುಂಬಾ ಭಯ, ಅಪ್ಪಾಜಿಯವರ ಸಿನಿಮಾ ರಿಮೇಕ್ ಮಾಡೋದರ ಕಲ್ಪನೆ ಮಾಡ್ಕೊಳ್ಳೋದಕ್ಕೂ ಭಯ. ಆದ್ರೆ, ಆಸೆ ನಂಗೂ ಇದೆ. ಯಾರಾದರೂ ಒಳ್ಳೇ ನಿರ್ದೇಶಕ ಸಿಕ್ಕಿದರೆ ಖಂಡಿತ ಟ್ರೈ ಮಾಡ್ತೀನಿ. ಆಸೆಗಿಂತ ಹೆಚ್ಚು ಭಯ ಇದೆ. ಅಪ್ಪಾಜಿಯವರ ಸಿನಿಮಾಗಳು ಇಡೀ ಫ್ಯಾಮಿಲಿ ಒಟ್ಟಾಗಿ ಕೂತ್ಕೊಂಡು ನೋಡೋ ಥರ ಇತ್ತು. ನೀತಿ ಇತ್ತು, ಕತೆ ಇತ್ತು, ಕಾಮಿಡಿ ಇರ್ತಿತ್ತು. ಡೀಸೆಂಟ್ ಆಗಿರ್ತಿತ್ತು. ಸಿಂಪ್ಲಿಸಿಟಿ ಇತ್ತು. ಅದ್ನ ಮತ್ತೆ ತರೋದು ಕಷ್ಟ. ಪ್ರಯತ್ನಿಸಲಿಕ್ಕಂತೂ ಆಸೆಯಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


