ನಿಮ್ಮ ಖುಷಿಯೇ ನಮ್ಮ ಖುಷಿ

ನಿಜಕ್ಕೂ ಮನಸ್ಸು ತುಂಬಿ ಬಂದಿದೆ. ರಾಜ್ಯದ ಎಲ್ಲೆಡೆಯಿಂದ 'ಖುಷಿ' ಬಗ್ಗೆ ಉತ್ತಮ ಪ್ರತಿಕ್ರಿಯೆ, ಒಳ್ಳೆಯ ಮಾತುಗಳು ಕೇಳಿಬರುತ್ತಿವೆ. ನಾವು ನಿರೀಕ್ಷಿಸಿದ್ದಕ್ಕಿಂತ...
Updated on: 

ನಿಜಕ್ಕೂ ಮನಸ್ಸು ತುಂಬಿ ಬಂದಿದೆ.
ರಾಜ್ಯದ ಎಲ್ಲೆಡೆಯಿಂದ 'ಖುಷಿ' ಬಗ್ಗೆ ಉತ್ತಮ ಪ್ರತಿಕ್ರಿಯೆ, ಒಳ್ಳೆಯ ಮಾತುಗಳು ಕೇಳಿಬರುತ್ತಿವೆ. ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಾಗಿಯೇ ಓದುಗರು 'ಖುಷಿ'ಯನ್ನು ಇಷ್ಟಪಟ್ಟಿದ್ದಾರೆ. ನಮ್ಮ ಹೊಸ ಪ್ರಯೋಗ ಓದುಗರಿಗೆ ಮೆಚ್ಚುಗೆಯಾಗಿದೆಯೆಂಬ ಸಮಾಧಾನ ನಮ್ಮದು. ಈ ನಾಲ್ಕೈದು ದಿನಗಳಲ್ಲಿ ಅಸಂಖ್ಯ ಓದುಗರು ತಮ್ಮ ಪ್ರಶಂಸೆಯನ್ನಷ್ಟೇ ಅಲ್ಲ, ಸಲಹೆ- ಸೂಚನೆಗಳನ್ನೂ ನೀಡಿದ್ದಾರೆ. ಈ ಪತ್ರಿಕೆ, ಪ್ರಯೋಗವನ್ನು ಅವರು ಗಂಭೀರವಾಗಿ ಪರಿಗಣಿಸಿರುವುದಕ್ಕೆ ಅದೇ ಸಾಕ್ಷಿ. ಅಷ್ಟೇ ಅಲ್ಲ, ಪತ್ರಿಕೆಯಲ್ಲಿ ತಾವೂ ಪಾಲ್ಗೊಳ್ಳುವ ಅವರ ತುಡಿತ ನಮ್ಮಲ್ಲಿ ಅಚ್ಚರಿಯನ್ನುಂಟುಮಾಡಿದೆ. ಇದರಿಂದ 'ಖುಷಿ'ಯನ್ನು ಮುಂಬರುವ ದಿನಗಳಲ್ಲಿ ಇನ್ನಷ್ಟು ಸೊಗಸಾಗಿ ರೂಪಿಸಬೇಕಾದ ನಮ್ಮ ಜವಾಬ್ದಾರಿ ಹೆಚ್ಚಾಗಿದೆ.
ಕನ್ನಡದ ಓದುಗರು ಉತ್ತಮವಾದುದನ್ನು ಪಡೆಯಲು ಅರ್ಹರು. ಹೀಗಾಗಿ, ಅವರಿಗೆ ಉತ್ತಮವಾದುದನ್ನು ಕೊಡುವುದರ ಜತೆಗೆ ಉಪಯುಕ್ತವಾದ, ನವನವೀನವಾದ ಹಾಗೂ ಪ್ರಸ್ತುತವಾದುದನ್ನು ಕೊಡಬೇಕೆಂಬುದು ನಮ್ಮ ಹಂಬಲ. ಮಾಹಿತಿಯನ್ನು ಕೊಡುವಷ್ಟೇ ಮುಖ್ಯವಾಗಿ ಅದನ್ನು ಹೇಗೆ ಕೊಡುತ್ತೇವೆ, ಯಾವ ಸ್ಟೈಲ್‌ನಲ್ಲಿ ಕೊಡುತ್ತೇವೆಂಬುದು ಸಹ ಅಷ್ಟೇ ಮುಖ್ಯ. ಅಲ್ಲದೆ, ಕೊಟ್ಟ ಮಾಹಿತಿ ಸದಾ ಮಾಹಿತಿದಾರನ ಸ್ವತ್ತು. ಅದು ಅವರಿಗೆ ಸುಲಭವಾಗಿ ಕಾಪಾಡಿಕೊಳ್ಳಲು, ಬೇಕೆಂದಾಗ ತಕ್ಷಣ ಕೈಗೆತ್ತಿಕೊಳ್ಳಲು ಸಹಾಯಕವಾಗಬೇಕು. ಓದುವ ವಿಧಾನವನ್ನು ಸರಳಗೊಳಿಸಬೇಕು. ಈ ಎಲ್ಲ ಕ್ರಿಯೆ ಒಂದು ಆಹ್ಲಾದಕರ 'ಖುಷಿ' ಅನುಭವವಾಗಬೇಕು.
'ಖುಷಿ' ಹಿಂದಿನ ಫಿಲಾಸಫಿ ಇದು. ದಿನಪತ್ರಿಕೆಯೊಂದು ನಿಮ್ಮ ಮ್ಯಾಗಜೀನ್ ಬೇಡಿಕೆ, ಅಗತ್ಯವನ್ನೂ ಪೂರೈಸುವ ಡಬಲ್ ಆ್ಯಕ್ಟಿಂಗ್ ಇದು.
ಪ್ರತಿ ಸಂಚಿಕೆಯನ್ನು ವಿನೂತನವಾಗಿ ರೂಪಿಸಬೇಕೆಂಬುದು ನಮ್ಮ ಆಶಯ. ಯಾವತ್ತೂ ಎತ್ತಿಟ್ಟುಕೊಳ್ಳುವ ಮೌಲ್ಯವನ್ನು ತುಂಬಬೇಕೆಂಬುದು ಹಂಬಲ. ವಾರವಾರವೂ ನಿಮಗೆ ಅಚ್ಚರಿಯನ್ನು ಹಾಸಬೇಕೆಂಬುದು ನಮಗೆ ನಾವು ವಿಧಿಸಿಕೊಂಡ ಕಟ್ಟಳೆ. ಇದರಲ್ಲಿ ಚೌಕಾಶಿ ಇಲ್ಲ. ಇಷ್ಟೆಲ್ಲ ಕೊಟ್ಟ ನಂತರವೂ ನಿಮ್ಮಿಂದ ಒಂದು ಬಿಡಿಗಾಸನ್ನೂ ಹೆಚ್ಚಿಗೆ ಕೇಳುತ್ತಿಲ್ಲ ಎಂಬುದನ್ನು ಓದುಗ ಪ್ರಭುಗಳು ಗಮನಿಸಬೇಕು. ತಾಂತ್ರಿಕ ಕಟ್ಟುಪಾಡುಗಳ ನಡುವೆ ವ್ಯಾವಹಾರಿಕವಾಗಿ ಈ ಪ್ರಯೋಗ ಗೀಟುವಂಥದ್ದಲ್ಲ. ಆದರೆ, ಹೊಸವರ್ಷಕ್ಕೆ ಅಡಿಯಿಡುತ್ತಿರುವ ಹೊತ್ತಿನಲ್ಲಿ ನಮ್ಮ ಓದುಗರಿಗೆ ಹೊಸತನವನ್ನು ನೀಡಬೇಕೆಂದು ಈ ಪುಟ್ಟ 'ಸಾಹಸ'ಕ್ಕೆ ಅಡಿಯಿಟ್ಟಿದ್ದೇವೆ. ನಿಮ್ಮ ಸಂಪೂರ್ಣ ಸಹಕಾರ, ಬೆಂಬಲ ಬೇಕೇ ಬೇಕು.
ಅಷ್ಟಕ್ಕೂ ನಿಮಗೆ ಖುಷಿಯಾದರೆ ಸಾಕು. ನಿಮ್ಮ 'ಖುಷಿ'ಯೇ ನಮ್ಮ 'ಖುಷಿ'.



- ವಿಶ್ವೇಶ್ವರ ಭಟ್
ಪ್ರಧಾನ ಸಂಪಾದಕ  


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com