

ನನಗೆ ಸಾಹಿತ್ಯದ ಅಭಿರುಚಿ ಮೊದಲಿಂದ್ಲೂ ಇತ್ತು. ಶಾಲಾ ದಿನಗಳಲ್ಲಿ ಜಯದೇವಿ ಅಂತ ಒಬ್ಬಳು ಫ್ರೆಂಡ್ ಇದ್ದಳು. ಅವಳು ಕತೆ, ಕವನ ಬರೆಯುತ್ತಿದ್ದಳು. ಅವಳಿಂದಲೇ ನನಗೆ ಸಾಹಿತ್ಯದ ಮೇಲೆ ಆಸಕ್ತಿ ಹುಟ್ಟಿದ್ದು. ತ್ರಿವೇಣಿ ಮತ್ತಿರರ ಹಲವಾರು ಕಾದಂಬರಿಗಳನ್ನು ಓದಿದ್ದೇನೆ. ಡಿ'ಸೋಜರ ಬರವಣಿಗೆಗಳನ್ನೂ ಓದಿದ್ದೇನೆ. ನನ್ನ ಮನೆಯಲ್ಲಿ ಸಾಹಿತ್ಯದ ಹಲವಾರು ಪುಸ್ತಕಗಳು ಇರುವುದನ್ನು ನೋಡಿಯೇ ನಾ. ಡಿ'ಸೋಜ ನನ್ನನ್ನು ಮೆಚ್ಚಿಕೊಂಡರಂತೆ. ಕೊನೆಗೆ ಅವರೇ ಇದನ್ನು ಹೇಳಿದರು.
ಅವರ ಮೃದು ಸ್ವಭಾವ ನನಗೆ ಬಹಳ ಇಷ್ಟ. ಯಾರಿಗೂ ಏನೂ ಹೇಳುವುದಿಲ್ಲ ಅವರು. ಊಟದ ವಿಷಯ ದಲ್ಲಿಯೂ ಅದೇ ಬೇಕು, ಇದೇ ಬೇಕು ಎನ್ನುವುದಿಲ್ಲ. ಚೆನ್ನಾಗಿ ಊಟ ಮಾಡಿದ್ರು ಅಂದ್ರೆ ಅವತ್ತು ಅಡುಗೆ ಇಷ್ಟ ಆಯ್ತು ಅಂತ ಲೆಕ್ಕ. ನಾನ್ವೆಜ್ಗಿಂತ ವೆಜ್ಜೇ ಅವರಿಗೆ ಇಷ್ಟ. ಮನೆಯಲ್ಲಿ ಹೇಗಿರುತ್ತಾರೋ, ಹೊರಗೂ ಹಾಗೆಯೇ ಇರುತ್ತಾರವರು.
ಕೊರತೆ ಏನಿಲ್ಲ...
ಅವರೊಂದಿಗೆ ಬದುಕುವುದೇ ನನಗೆ ಖುಷಿ. ಸಾಹಿತಿಯಾದರೂ ಸಂಸಾರಕ್ಕೇನೂ ಕೊರತೆ ಮಾಡಿಲ್ಲ. ತುಂಬಾ ಪ್ರವಾಸಿ ಸ್ಥಳಗಳಿಗೆ ನನ್ನ ಕರೆದುಕೊಂಡು ಹೋಗಿದ್ದಾರೆ. ಅವರು ಸಮಯಕ್ಕೆ ಬಹಳ ಪ್ರಾಶಸ್ತ್ಯ ಕೊಡುತ್ತಾರೆ. ನೌಕರಿಯಲ್ಲಿದ್ದಾಗಲೂ ಅಷ್ಟೇ. ಈಗಲೂ ಅಷ್ಟೇ. ಆಗ ಕಚೇರಿಯಿಂದ ಬಂದ ನಂತರವೇ ಬರವಣಿಗೆಯಲ್ಲಿ ಬ್ಯುಸಿಯಾಗಿರ್ತಿದ್ರು. ನಿವೃತ್ತಿಯಾದ ನಂತರ ಪೂರ್ತಿಯಾಗಿ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಯಾವುದೇ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗುವುದಿದ್ದರೂ ಅದಕ್ಕೆ ತಯಾರಿ ಮಾಡಿಕೊಳ್ಳುತ್ತಾರೆ. ಅವರ ಭಾಷಣ ಕೇಳಿದರೆ ಮತ್ತೂ ಕೇಳೋಣ ಅನಿಸುವಷ್ಟು ಹಿತ.
ಅಕ್ಕಪಕ್ಕದವರಿಗೆ ಗೌರವ
ನಮ್ಮ ಕುಟುಂಬ ಅಕ್ಕಪಕ್ಕದವರು, ಕೇರಿಯವರೊಂದಿಗೆ ಒಳ್ಳೆಯ ಸಂಬಂಧವನ್ನೇ ಇಟ್ಟುಕೊಂಡಿದೆ. ನಾ. ಡಿ'ಸೋಜ ಹೆಚ್ಚು ಮಾತಾಡುವವರಲ್ಲ. ಆದರೆ, ಯಾರಾದರೂ ಮನೆಗೆ ಬಂದ್ರೆ ಚೆನ್ನಾಗಿಯೇ ಮಾತಾಡ್ತಾರೆ. ಪೇಪರ್ನಲ್ಲಿ ಇವರ ಕತೆ, ಬರವಣಿಗೆ ಬಂದ್ರೆ ಕೇರಿಯ ಎಲ್ಲರ ಬಾಯಲ್ಲೂ ಇವರ ಬರವಣಿಗೆಯ ಬಗ್ಗೆಯೇ ಚರ್ಚೆ ನಡೆಯುತ್ತೆ. ಕೆಲವೊಮ್ಮೆ ನಮ್ಮ ಮನೆಗೆ ಸಾಹಿತಿ ದಂಪತಿಗಳು ಬರ್ತಾರೆ. ಆಗ ನನಗೆ ಆಗೋ ಖುಷಿ ಅಷ್ಟಿಷ್ಟಲ್ಲ. ಗುಲ್ವಾಡಿ, ಕಣವಿ ಮುಂತಾದವರ ಹೆಂಡತಿಯರೊಂದಿಗೆ ನಿಕಟ ಸಂಬಂಧ ಇಟ್ಟುಕೊಂಡಿದ್ದೀನಿ. ಹೆಚ್ಚಿನ ಸಲ ಅನೇಕ ಸಾಹಿತಿಗಳು ತಮ್ಮ ಪತ್ನಿಯರನ್ನು ಕರ್ಕೊಂಡು ಬರೋದಿಲ್ಲ. ಆಗ ಸ್ವಲ್ಪ ಬೇಸರವೂ ಆಗುತ್ತದೆ.
ಮೊನ್ನೆ ಇವರಿಗೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಸಿಕ್ಕಾಗ ನಂಗೆ ಬಹಳ ಖುಷಿ ಆಯ್ತು. ಬೇರೆ ಊರಲ್ಲಿರುವ ಮಕ್ಕಳಿಗೆ ಫೋನ್ ಮಾಡಿ ಖುಷಿ ಹಂಚಿಕೊಂಡೆ. ಮನೆಗೆ ಬಂದವರಿಗೆ ಸಿಹಿ ಹಂಚಿ ಖುಷಿಪಟ್ಟೆ. ಡಿ'ಸೋಜ ತುಂಬಾ ಸಾಹಿತ್ಯ ಸೇವೆ ಮಾಡಿದ್ದಾರೆ. ಈ ಗೌರವ ಯಾವತ್ತೋ ಬರಬೇಕಾಗಿತ್ತು.
- ನಿರೂಪಣೆ: ರಾಜೇಶ್ ಭಡ್ತಿ
rajeshbhadti@gmail.com