ನಿಮಗೆ ಅರ್ಹತೆಯಿಲ್ಲ
ಭಾಗ್ಯ ಎಸ್., ನಂಜನಗೂಡು
ಸರ್ಕಾರಿ ನೌಕರನಾಗಿದ್ದ ಗಂಡ ನಿವೃತ್ತಿಯ ನಂತರ ನಿಧನರಾದರು. ನನ್ನ ಮಗನೂ ಸರ್ಕಾರಿನೌಕರಿಯಲ್ಲಿದ್ದು, ಸೇವೆಯಲ್ಲಿರುವಾಗಲೇ ನಿಧನನಾದ. ಆತ ಅವಿವಾಹಿತನಾಗಿದ್ದರಿಂದ ಅವನ ನಿವೃತ್ತಿಯ ಸವಲತ್ತುಗಳನ್ನೂ ನಾನೇ ಪಡೆದಿದ್ದೇನೆ. ನಾನು ಮಗನ ಕುಟುಂಬವೇತನ ಪಡೆಯಬಹುದೇ?
- ಕರ್ನಾಟಕ ಸರ್ಕಾರಿ ನೌಕರರ 2002ರ ನಿಯಮ 8ರಂತೆ ಕುಟುಂಬವೆಂದರೆ ಗಂಡ ಹೆಂಡತಿ ಮಕ್ಕಳು ಮಾತ್ರ. ಆದ್ದರಿಂದ ನಿಮಗೆ ಮಗನ ಪೆನ್ಷನ್ ಪಡೆಯಲು ಅರ್ಹತೆ ಇಲ್ಲ.
ಯಾರಿಗೆ ಬೇಕಾದರೂ ಬರೆಯಬಹುದು
ಹೆಸರು, ಊರಿಲ್ಲ
ನನ್ನ ತಾಯಿಯ ತಾಯಿ, ಅಂದರೆ ನನ್ನ ಅಜ್ಜಿ ತನ್ನ ಆಸ್ತಿಯೆಲ್ಲವೂ ತನ್ನ ಕಾಲಾನಂತರ ತನ್ನ ಪುತ್ರ, ಪೌತ್ರರಿಗೆ(ಮೊಮ್ಮಕ್ಕಳು) ಸೇರಬೇಕೆಂದು ವ್ಯವಸ್ಥಾ ಪತ್ರ ಮಾಡಿ, ಆ ಪತ್ರವನ್ನು ರಿಜಿಸ್ಟರ್ ಮಾಡಿಸಿದ್ದಾರೆ. ಅದಕ್ಕೆ ಅವರ ಮಕ್ಕಳಾದ ನನ್ನ ತಾಯಿ ಮತ್ತು ಅವರ ಇಬ್ಬರು ಸಹೋದರಿಯರು ಸಹಿ ಹಾಕಿರುತ್ತಾರೆ. ಅಜ್ಜಿ 1991ರಲ್ಲಿ ಹಾಗೂ ತಾಯಿ 1982ರಲ್ಲಿ ತೀರಿಕೊಂಡಿರುತ್ತಾರೆ. 1993ರಲ್ಲಿ ನಾವಿಬ್ಬರು ಸಹೋದರರು ಅಜ್ಜಿಯ ಆಸ್ತಿಯನ್ನು ಹಂಚಿಕೊಂಡಿದ್ದೇವೆ. ಆದರೆ ಈ ಆಸ್ತಿಯಲ್ಲಿ ಸಹೋದರಿಯರಿಗೆ ಯಾವುದೇ ಪಾಲು ಕೊಟ್ಟಿಲ್ಲ. ಈಗ ನಮ್ಮ ಸಹೋದರಿಯರು ತಮಗೂ ಅಜ್ಜಿಯ ಆಸ್ತಿಯಲ್ಲಿ ಪಾಲು ಕೊಡಬೇಕೆಂದು ದಾವಾ ಹಾಕಿದ್ದಾರೆ. ಏನು ಮಾಡಬೇಕು?
- ಹಿಂದೂ ಉತ್ತರಾಧಿಕಾರ ಕಾಯ್ದೆ 1956, ಕಲಂ 14ರ ಪ್ರಕಾರ ಒಬ್ಬ ಮಹಿಳೆಯ ಆಸ್ತಿಯು ಆಕೆಯ ಸ್ವಂತದ್ದಾಗಿದ್ದು ಅದನ್ನು ಅವರು ಯಾರಿಗೆ ಬೇಕಾದರೂ ಬರೆಯುವ ಪರಮಾಧಿಕಾರವಿದೆ. ಆದ್ದರಿಂದ ಅವರು ತಮ್ಮ ವ್ಯವಸ್ಥಾ ಪತ್ರದಲ್ಲಿ ಯಾರ್ಯಾರಿಗೆ ಬರೆದಿದ್ದಾರೋ ಅವರಿಗೆ ಮಾತ್ರ ಹಕ್ಕು ಬರುತ್ತದೆ.
ತೊಂದರೆ ಆಗದು...
ಮಲ್ಲೇಶಪ್ಪ ಗಂಗಾವತಿ
ನಾನು ಸರ್ಕಾರದ ಅನೇಕ ಇಲಾಖೆಗಳಿಂದ ಮಾಹಿತಿಹಕ್ಕು ಕಾಯ್ದೆಯಂತೆ ಮಾಹಿತಿ ಪಡೆದುಕೊಂಡಿರುತ್ತೇನೆ. ನಾನು ಮುಂದೆ ಸರ್ಕಾರಿ ಉದ್ಯೋಗಕ್ಕೆ ಸೇರಲು ಇದರಿಂದ ತೊಂದರೆಯಾಗುತ್ತದೆಯೇ?
- ನೌಕರಿಗೂ, ಈ ಹಕ್ಕಿನಡಿಯ ಪ್ರಶ್ನೆಗಳಿಗೂ ಏನೇನೂ ಸಂಬಂಧವಿಲ್ಲ. ನೀವು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆದುಕೊಂಡಿದ್ದೀರಿ. ಇದರಿಂದ ಮುಂದಿನ ಯಾವುದೇ ಸರ್ಕಾರಿ ನೌಕರಿಗೆ ಅಥವಾ ಖಾಸಗಿ ನೌಕರಿಗೆ ಯಾವ ಸಂಬಂಧವೂ ಇಲ್ಲ, ತೊಂದರೆಯೂ ಆಗುವುದಿಲ್ಲ.
- ಎಚ್.ಆರ್. ಕಸ್ತೂರಿರಂಗನ್