

ಡಿಸೆಂಬರ್ ಮುಗಿಯುತ್ತಿದೆ. ಒಂದು ವರ್ಷದ ಮಟ್ಟಿಗೆ ಪೋಸ್ಟ್‌ಪೋನಾಗಿದ್ದ ಪ್ರಳಯದ ಅವಧಿಯೂ ಡಿಸೆಂಬರ್ ಇಪ್ಪತ್ತೊಂದಕ್ಕೆ ಕೂನೆಗೊಳ್ಳುತ್ತಿದೆ. ಪ್ರಳಯದ ಬಗ್ಗೆ ಸಿನಿಮಾಗಳು ಬಂದದ್ದು ಬಿಟ್ಟರೆ ಪ್ರಳಯಗಳಾಗಿಲ್ಲ. ಪ್ರಣಯದ ಸಿನಿಮಾಗಳು, ಪ್ರಳಯಾಂತಕ ಸಿನಿಮಾಗಳು, ಪ್ರೊಡ್ಯೂಸರನ್ನು ಪ್ರಳಯಕ್ಕೀಡುಮಾಡಿದ ಸಿನಿಮಾಗಳು, ತೆರೆಮುಂದೆ ಮಾತ್ರವಲ್ಲದೆ, ಹೀರೋ- ಹೀರೋಯಿನ್ ಮಧ್ಯ ತೆರೆಹಿಂದೆಯೂ ಪ್ರಣಯಕ್ಕೆ ಕಾರಣವಾದ ಸಿನಿಮಾಗಳು ಎಂದಿನಂತೆ ಬರುತ್ತಲೇ ಇವೆ. ಸುದ್ದಿ ಮಾಡುತ್ತಲೇ ಇವೆ.
ವರ್ಷದ ಕೊನೆಯಲ್ಲಿ ಈ ವರ್ಷದ ಸಿನಿಮಾಗಳ ಬಗ್ಗೆ ಒಂದು ಪಕ್ಷಿನೋಟ ಬೀರುವುದು ವಾಡಿಕೆ. ಇದರಲ್ಲಿ ಹಿಟ್ ಚಿತ್ರಗಳು, ಫ್ಲಾಪ್ ಚಿತ್ರಗಳು, ವಿಮರ್ಶಕರ ಮೆಚ್ಚುಗೆ ಪಡೆದ ಚಿತ್ರಗಳು, ಅವಾರ್ಡ್ ಗಳಿಸಿದ ಚಿತ್ರಗಳು, ಚಿತ್ರೋತ್ಸವಕ್ಕೆ ಹೋದ ಚಿತ್ರಗಳು, ವಿವಾದ ಮಾಡಿದ ಚಿತ್ರಗಳು, ಹೀಗೆ ಹಲವು ಚಿತ್ರಗಳ ಬಗ್ಗೆ ವಿವರಗಳನ್ನು ನೀಡಲಾಗುತ್ತದೆ.
ಕೆಲವು ಚಿತ್ರಗಳಿರುತ್ತವೆ. ಅವು ಬಾಕ್ಸಾಫೀಸಿನಲ್ಲಿ ಭರ್ಜರಿ ಗಳಿಕೆ ಮಾಡಿರುವುದಿಲ್ಲ. ಹಾಗಂತ ದೊಡ್ಡ ಸೋಲೂ ಕಂಡಿರುವುದಿಲ್ಲ. ಅಸಲಿಗೆ ಅವುಗಳು ಬಂದಿದ್ದು ಹೋಗಿದ್ದು ಒಂದೂ ಗೊತ್ತಾಗಿರೊಲ್ಲ. ಅವುಗಳು ಚಿತ್ರೋತ್ಸವಕ್ಕೆ ಹೋಗಿರುವುದಿಲ್ಲ. ಅವಾರ್ಡುಗಳಿಗೆ ಪರಿಗಣಿತವಾಗಿರುವುದಿಲ್ಲ. ವಿಮರ್ಶಕರ ದೃಷ್ಟಿಯಲ್ಲಿ ಮಾಸ್ ಬಾಕ್ಸಾಫೀಸ್ ದೃಷ್ಟಿಯಲ್ಲಿ ಕ್ಲಾಸ್ ಎಂಬ ಹಣೆಪಟ್ಟಿ ಗಳಿಸಿ ಕಡೆಗೆ ಯಾರೂ ನೋಡದೆಯೇ ಮೂಲೆ ಸೇರಿಬಿಟ್ಟಿರ್ತವೆ. ಎಂದೋ ಒಂದಿನ ಟೀವಿಯಲ್ಲಿ ವರ್ಲ್ಡ್ ಮೂವೀಸಲ್ಲೋ ಇನ್ಯಾವುದೋ ಮೂವಿ ಚಾನೆಲ್ಲಲ್ಲೋ ಅರ್ಧದಿಂದ ನೋಡಿ 'ಛೇ ಯಾವ್ ಫಿಲ್ಮಿದು.. ಎಷ್ಟ್‌ಚೆನ್ನಾಗಿದ್ಯಲ್ಲ.. ಹೆಸರೇ ಗೊತ್ತಿಲ್ವಲ್ಲ..' ಅಂತ ಅವರಿವರನ್ನ ಕೇಳಿ ಉತ್ತರ ಸಿಗದೆಯೇ ಮತ್ತೊಮ್ಮೆ ಟೀವಿಲಿ ಬರೋ ತನಕ ಕಾಯೋ ಹಾಗೆ ಆಗಿರುತ್ತೆ.
ಅಂಥ ಸಿನಿಮಾಗಳು ಪ್ರತಿವರ್ಷವೂ ಕನಿಷ್ಠ ಹತ್ತಾದರೂ ಇರ್ತವೆ. ಈ ವರ್ಷದ ಆ ಥರದ ಒಂದಷ್ಟು ಹಿಂದಿ ಮತ್ತು ಕನ್ನಡ ಚಿತ್ರಗಳನ್ನು ಪರಿಚಯಿಸೋ ಉದ್ದೇಶ ಇಲ್ಲಿ. ಈ ಸಿನಿಮಾಗಳನ್ನು ನೀವು ಮಿಸ್ ಮಾಡಿಕೊಂಡದ್ದು ಹೌದಾದಲ್ಲಿ, ಹತ್ತಿರದ ಥಿಯೇಟರಲ್ಲಿ ಮತ್ತೊಮ್ಮೆ ಕಂಡಲ್ಲಿ ನೋಡಬಹುದು ಅಥವಾ ಡಿವಿಡಿಯಲ್ಲಿ ನೋಡಿ ಖುಷಿ ಪಡಬಹುದು. ನೆಟ್ ಸೌಲಭ್ಯ ಇದ್ದವರು ಟೊರೆಂಟ್‌ಗಳಿಂದ ಡೌನ್‌ಲೋಡ್ ಸಹ ಮಾಡಿ ನೋಡಬಹುದು. ಅಥವಾ ಮುಂದೊಮ್ಮೆ ಟೀವಿಯಲ್ಲಿ ಈ ಚಿತ್ರ ಬರಲಿರೋ ಸುದ್ದಿ ಗೊತ್ತಾದಾಗ ಕಾದುನೋಡಬಹುದು. ಆಯ್ಕೆ ನಿಮ್ಮದು.
ಗೋ.. ಗೋವಾ.. ಗಾನ್
ಮೂವರು ಡ್ರಗ್ ಅಡಿಕ್ಟ್ ಗೆಳೆಯರು ತಂತಮ್ಮ ಪ್ರೀತಿಯಲ್ಲಿ, ವೃತ್ತಿಯಲ್ಲಿ ಸೋಲು ಕಂಡು, ಜೀವನದಲ್ಲಿ ಬದಲಾವಣೆ ಬಯಸಿ ಹಾಯಾಗಿದ್ದು ಬರಲು ಗೋವಾಗೆ ಹೋಗಿ ಅಲ್ಲಿ ಮತ್ತೆ ಪ್ರೀತಿ, ಡ್ರಗ್ ಜಾಲದ ವಿಚಿತ್ರ ಸುಳಿಗಳಲ್ಲಿ ಸಿಲುಕುವ, ರೋಮಾಂಚನಕಾರಿ ಕತೆಯ ಈ ಚಿತ್ರದಲ್ಲಿ ಸೈಫ್ ಖಾನ್ ಮತ್ತು ಕುನಾಲ್ ಖೇಮು ಮುಖ್ಯಪಾತ್ರದಲ್ಲಿದ್ದಾರೆ. ದ್ವಿತೀಯಾರ್ಧದಲ್ಲಿ ನೀವು ಊಹಿಸಲಾಗದ ತಿರುವುಗಳನ್ನು ಹಾಗೂ ಫ್ಯಾಂಟಸಿ ಪ್ರಪಂಚವನ್ನು ತೆರೆದಿಡುವ ಚಿತ್ರ ನಿಮ್ಮ ಕುತೂಹಲ ಕಾದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ.
ಮೇರೇ ಡ್ಯಾಡ್ ಕೀ ಮಾರುತಿ
ಸೋದರಿಯ ಮದುವೆಗೆ ಉಡುಗೊರೆ ಕೊಡಲು ಅಪ್ಪ ತಂದಿಟ್ಟಿದ್ದ ಕಾರನ್ನು ತನ್ನ ಹುಡುಗೀನ ಇಂಪ್ರೆಸ್ ಮಾಡಲೆಂದು ಹೇಳ್ದೆಕೇಳ್ದೆ ತಗೊಂಡು ಹೋಗುವ ಚಿತ್ರದ ನಾಯಕ ಕಾರು ಕಳೆದು ಹಾಕಿ ಆನಂತರ ಅದನ್ನು ಗೊತ್ತಾಗದ ರೀತಿ ಸಂಭಾಳಿಸಲು ಮಾಡುವ ಸರ್ಕಸ್‌ಗಳ ದೃಶ್ಯಮಾಲೆ ನಿಮ್ಮನ್ನು ನಗೆಗಡಲಲ್ಲಿ ತೇಲಿಸುತ್ತದೆ. ಹೊಸ ಕಲಾವಿದರ ತಾಜಾ ಅಭಿನಯ ನಿಮಗೆ ಒಳ್ಳೆ ಕಾಮಿಕ್ ರಿಲೀಫ್ ಕೊಡೋದು ಖಂಡಿತ. ದಶಕದ ಹಿಂದೆ ಬಂದಿದ್ದ ಇಂಗ್ಲಿಷಿನ 'ಡ್ಯೂಡ್ ವೇರ್ ಈಸ್ ಮೈ ಕಾರ್' ಚಿತ್ರದ ಸ್ಫೂರ್ತಿ ಇದಕ್ಕಿದೆ.
ಜಾಲಿ ಎಲ್‌ಎಲ್‌ಬಿ
1999ರಲ್ಲಿ ಮುಂಬೈಯಲ್ಲಿ ಸಂಭವಿಸಿದ ಹಿಟ್ ಆ್ಯಂಡ್ ರನ್ ಕೇಸೊಂದನ್ನ ಆಧಾರವಾಗಿ ಇಟ್ಕೊಂಡು ಹೆಣೆದ ಈ ಕಥೆ, ಹೆಸರೇ ಹೇಳುವಂತೆ ಕೋರ್ಟಿನಲ್ಲಿ ನಡೆಯುವ ಕಾಮಿಡಿ ಡ್ರಾಮಾ. ಅರ್ಷದ್ ವಾರ್ಸಿ ಹಾಗೂ ಬೊಮನ್ ಇರಾನಿ ಅವರ ಅದ್ಭುತ ಅಭಿನಯದ ಚಿತ್ರ, ಸಮಾಜದ ಹಲವು ಓರೆಕೋರೆಗಳನ್ನು ಎತ್ತಿತೋರಿಸುವ ವಿಡಂಬನಾ ಶೈಲಿ ನಿರೂಪಣೆ ಹೊಂದಿದೆ. ಕೋರ್ಟಿನ ವಾದವಿವಾದಗಳ ಸಂಭಾಷಣೆಗಳು ನಿಮ್ಮನ್ನು ರಂಜಿಸುವುದು ಖಚಿತ.
ಡಿ-ಡೇ
ಸೆಂಟಿಮೆಂಟು, ಎಮೋಶನ್‌ಗೆ ಜಾಗ ಇಲ್ಲದ ಥ್ರಿಲ್ಲರ್ ಚಿತ್ರ ಇದು. ಅರ್ಜುನ್‌ರಾಂಪಾಲ್, ಇರ್ಫಾನ್‌ಖಾನ್‌ರಂಥ ಸಹಜ ನಟರಿರುವ ಈ ಚಿತ್ರಕ್ಕೆ ಕ್ಷಣಕ್ಷಣಕ್ಕೂ ಕುತೂಹಲ ಹೆಚ್ಚಿಸುವ ಚಿತ್ರಕತೆ ಇದೆ. ಪಾಕಿಸ್ತಾನೀ ಶತ್ರುಗಳನ್ನು ಭಾರತೀಯ ಏಜೆಂಟ್‌ಗಳು ಎದುರಿಸಿ ಗೆಲ್ಲುವ ಕಥೆಯಾದ್ದರಿಂದ ತಂತಾನೇ ನಿಮಗೆ ಇಂಡೋ ಪಾಕ್ ಕ್ರಿಕೆಟ್ ಮ್ಯಾಚ್ ನೋಡುವಾಗ ಹುಟ್ಟುವ ದೇಶಭಕ್ತಿ ಚಿತ್ರ ನೋಡುವಾಗಲೂ ಹುಟ್ಟುತ್ತದೆ. ಮಿಕ್ಕಂತೆ, ಪ್ರೇಯಸಿಯೊಂದಿಗೆ ನೋಡೋಕೆ 'ಆಶಿಕಿ-2', ಮೆದುಳಿನ-ಮನಸಿನ ತೂಕ ಹೆಚ್ಚಿಸೋಕೆ 'ದ ಲಂಚ್ ಬಾಕ್ಸ್', ತುಸು ಪೋಲಿ ಅನಿಸಿದರೂ ಖಾಸಗಿ ಗೆಳೆಯರ ಗುಂಪಲ್ಲಿ ಕೂತು ನಕ್ಕು ಹಗುರಾಗೋಕೆ 'ಗ್ರಾಂಡ್ ಮಸ್ತಿ' ಚಿತ್ರಗಳನ್ನು ನಿಮ್ಮ ಈ ವರ್ಷದ 'ನೋಡಬಲ್' ಚಿತ್ರಗಳ ಲಿಸ್ಟಿಗೆ ಸೇರಿಸಿಕೊಳ್ಳಬಹುದು.
ಗೊಂಬೆಗಳ ಲವ್
ಕನ್ನಡದಲ್ಲಿ ಕತೆಯಿಲ್ಲ ಅನ್ನೋರಿಗೆ ಮುಟ್ಟಿನೋಡಿಕೊಳ್ಳುವಂತೆ ಮಾಡಿದ ಚಿತ್ರ ಸಂತೋಷ್ ಎಂಬ ಯುವನಿರ್ದೇಶಕನ 'ಗೊಂಬೆಗಳ ಲವ್'. ಹೊಸಮುಖಗಳಾದ ಅರುಣ್- ಪಾವನಿ ಜೊತೆಗೆ ಅನುಭವಿ ಶ್ರುತಿ ಅದ್ಭುತವಾದ ಅಭಿನಯ ನೀಡಿರುವ ಈ ಚಿತ್ರವನ್ನು ನೀವು ಮಿಸ್ ಮಾಡುವಂತೆಯೇ ಇಲ್ಲ. ಚಿತ್ರದ ಫಸ್ಟ್ ಹಾಫಿನ ಪ್ರತಿ ಶಾಟ್‌ಗಳೂ ಸೆಕೆಂಡ್ ಹಾಫಿನ ಊಹಾತೀತ ಕಥೆಗೆ ಲಿಂಕ್ ಆಗುವುದರಿಂದ ನೀವು ಚಿತ್ರವನ್ನು ಸೂಕ್ಷ್ಮವಾಗಿ ನೋಡಿದಷ್ಟೂ ಹೊಸದಾಗಿ ಕಾಣುತ್ತಾ ಹೋಗುತ್ತದೆ.
ಜಟ್ಟ
ನವಿಲಾದವರು ಗಿರಿರಾಜ್ ನಿರ್ದೇಶನದ ಈ ಚಿತ್ರ ನಿಮ್ಮ ಆತ್ಮಸಾಕ್ಷಿಗೆ ಕಸರತ್ತು ಕೊಡುವಂಥ ಚಿತ್ರ. ಮುಗ್ಧ ಫಾರೆಸ್ಟ್ ಗಾರ್ಡ್ ಆಗಿ ಕಿಶೋರ್, ಈ ಕಾಲದ ಸ್ತ್ರೀವಾದಿಯಾಗಿ ಸುಕೃತಾ ಪೈಪೋಟಿಗೆ ಬಿದ್ದಂತೆ ನಟಿಸಿರುವ ಈ ಚಿತ್ರ, ನೋಡಿದ ಒಂದು ವಾರದ ನಂತರವೂ ನಿಮ್ಮನ್ನು ಕಾಡದಿರದು.
ಕೇಸ್ ನಂ. 18/9
ತಮಿಳಿನ ರಿಮೇಕ್ ಹೌದಾದರೂ ಈ ಕತೆಯ ಮೂಲ ಇರೋದು ಬೆಂಗಳೂರಿನಲ್ಲಿ. ಬೆಂಗಳೂರಿನಲ್ಲಿ ನಡೆದ ಆಸಿಡ್ ದಾಳಿಯೊಂದನ್ನು ಮೂಲವಾಗಿಟ್ಟುಕೊಂಡು ಹೆಣೆದ ಈ ಪ್ರೇಮಕಥೆ ನಗರ ಬದುಕಿನ ಕ್ರೌರ್ಯದ ಜೊತೆಗೆ ಕಾನೂನು ಅವ್ಯವಸ್ಥೆಯ ಮೇಲೂ ಬೆಳಕು ಚೆಲ್ಲುತ್ತದೆ.
ಪರಾರಿ
ಹಿಂದಿಯಲ್ಲಿ ಡೆಲ್ಲಿ ಬೆಲ್ಲಿ, ಗ್ರಾಂಡ್ ಮಸ್ತಿ ಹೀಗೆ ಹಲವು ಅಡಲ್ಟ್ ಹಾಸ್ಯ ಚಿತ್ರಗಳು ಹಿಟ್ ಆಗುತ್ತಿರುವಾಗ ನಾವು ಸಭ್ಯತೆಯ ಗಡಿಯೊಳಗೆ ಕೊಂಚ ಜಾಲಿ ಪೋಲಿ ಚಿತ್ರ ಯಾಕೆ ಮಾಡಬಾರದು ಎಂದು 'ಆ ದಿನಗಳು' ಖ್ಯಾತಿಯ ಚೈತನ್ಯ ತೆರೆಗೆ ತಂದ ಚಿತ್ರ ಇದು. ಹದಿಹರೆಯದವರ ಲವ್ ಸ್ಟೋರಿಗೆ ಒಂದಷ್ಟು ಥ್ರಿಲ್ ಕೊಡುವ ಅಂಶಗಳನ್ನೂ ಸೇರಿಸಿ ಒಳ್ಳೊಳ್ಳೆ ಹಾಡುಗಳನ್ನೂ ಬೆರೆಸಿ ಕೊಟ್ಟಿರುವ ಈ ಚಿತ್ರದ ದೊಡ್ಡ ಶಕ್ತಿ ಮೋಹನ್ ಸಂಭಾಷಣೆ. ಎರಡು ಗಂಟೆ ಕಳೆದದ್ದು ತಿಳಿಯದಂತೆ ಮಾಡೋದಂತೂ ಪಕ್ಕಾ.
ಇವುಗಳ ಜೊತೆಗೆ 'ಚಿತ್ರಮಂದಿರದಲ್ಲಿ', 'ವಿಜಲ್', 'ಎಲೆಕ್ಷನ್' ಮುಂತಾದ ಚಿತ್ರಗಳನ್ನು ಟೀವಿಯಲ್ಲಿ ನೋಡಿ ಖುಷಿಪಡಲು ಲಿಸ್ಟ್ ಮಾಡಿಟ್ಟುಕೊಳ್ಳಬಹುದು.
- ನವೀನ್ ಸಾಗರ್
naveen2709@gmail.com