ಖುಷಿ

ಹಾಸ್ಯಸಿನಿವೇಶ

ಹಾಸ್ಯಸಿನಿವೇಶ
Published On :

ಕಲಾವಿದನಿಗೆ ಪೊರಕೆ ಪೂಜೆ!
ಈಗ ಸಿನಿಮಾಗಳನ್ನು ನೋಡುವುದು ಎಂದರೆ ಟೈಂ ಪಾಸ್. ಆದರೆ, ಒಂದು ಕಾಲದಲ್ಲಿ ಸಿನಿಮಾ ವೀಕ್ಷಣೆ ಈಗಿನಂತೆ ಇರಲಿಲ್ಲ ಬಿಡಿ. ಸಿನಿಮಾಗಳಲ್ಲಿ ಬರುವ ಉತ್ತಮ ಪಾತ್ರಧಾರಿಗಳನ್ನು ತಮ್ಮವರು ಎಂದುಕೊಂಡರೆ, ಕೆಟ್ಟ ಪಾತ್ರಗಳನ್ನು ದುರುಗುಟ್ಟಿ ನೋಡುತ್ತಿದ್ದರು. ಅದರಲ್ಲೂ ರೇಪಿಸ್ಟ್‌ಗಳನ್ನಂತೂ ಜನ ಯಾವ ಪರಿ ಶಪಿಸುತ್ತಿದ್ದರು ಎನ್ನುವುದಕ್ಕೆ ಕಲಾವಿದ 'ರಥಸಪ್ತಮಿ' ಅರವಿಂದ್ ಅವರೇ ಸಾಕ್ಷಿ. ಅದು ಮಂಡ್ಯ ಬಳಿಯ ಪುಟ್ಟ ಹಳ್ಳಿ. ಚಿತ್ರೀಕರಣ ನಡೆಯತ್ತಿತ್ತು. ಅದೇ ದಿನ ಬೆಳಗ್ಗೆ ಟಿವಿಯಲ್ಲಿ 'ಕಿಲಾಡಿ ಗಂಡು' ಚಿತ್ರ ಪ್ರಸಾರವಾಗಿತ್ತು. ಚಿತ್ರದಲ್ಲಿ ನಟಿ ತಾರಾ ಅವರನ್ನು ರೇಪ್ ಮಾಡುವ ದೃಶ್ಯ ಇದೆ. ರೇಪ್ ಮಾಡುವ ಪಾತ್ರಧಾರಿ ಅರವಿಂದ್.  ಈ ದೃಶ್ಯ ಆ ಹಳ್ಳಿಯಲ್ಲಿ ಅಜ್ಜಿಯೊಬ್ಬಳಿಗೆ ತೀರಾ ಸಿಟ್ಟು ತರಿಸಿತೇನೋ ಗೊತ್ತಿಲ್ಲ. ಚಿತ್ರ ನೋಡಿಕೊಂಡು ಹೊರಗೆ ಕೂತಿದ್ದ ಅಜ್ಜಿಯ ಮೊಮ್ಮಗ 'ಅವ್ವ ನೀನು ಟಿವಿಯಲ್ಲಿ ಒಬ್ಬರನ್ನು ನೋಡಿ ಬಯ್ಯುತ್ತಿದ್ದೆಯಲ್ಲ, ಅವರು ನಮ್ಮೂರಿನ ಆಚೆ ನಡೆಯುತ್ತಿರುವ ಶೂಟಿಂಗ್‌ನಲ್ಲಿದ್ದಾರೆ ಬಾ' ಎಂದು ಹೇಳಿದ್ದೇ ತಡ... ಆ ಅಜ್ಜಿ ಕೈಯಲ್ಲೊಂದು ಪೊರಕೆ ಹಿಡಿದು ಸೀದ ಶೂಟಿಂಗ್ ಸೆಟ್‌ಗೆ ಬಂದಳು. ಆಗ ಊಟದ ಸಮಯ. ನಟ ಅಂಬರೀಷ್, ಖಳ ನಟ ವಜ್ರಮುನಿ, ರಥಸಪ್ತಮಿ ಅರವಿಂದ್ ಒಟ್ಟಿಗೆ ಕೂತು ಊಟ ಮಾಡುತ್ತಿರಬೇಕಾದರೆ ಅಜ್ಜಿ ರಭಸವಾಗಿ ಬಂದು ಇದ್ದಕ್ಕಿದ್ದ ಹಾಗೆ ಅರವಿಂದ್‌ರನ್ನು ಹಿಂದೆ ಮುಂದೆ ನೋಡದೆ ಪೊರಕೆಯಲ್ಲಿ ಬಡಿಯತೊಡಗಿದಳು. ಎಲ್ಲರಿಗೂ ಶಾಕ್! 'ಬಡ್ಡೀಮಗ ಹಳ್ಳಿಯಲ್ಲಿ ಹೆಣ್ಣು ಮಕ್ಕಳನ್ನು ಕೆಣಕಿರಬೇಕು, ಅದಕ್ಕೆ ಈಯಮ್ಮ ಹೀಗೆ ಬಾರಿಸುತ್ತಿದೆ' ಎಂದುಕೊಂಡ ಅಂಬರೀಷ್, 'ಇನ್ನೂ ನಾಲ್ಕು ಏಟು ಹಾಕು' ಎಂದು ತಮಾಷೆ ಮಾಡಿದರಂತೆ. 'ಅಯ್ಯೋ ಸುಮ್ಮನಿರಮ್ಮೋ ಯಾಕೆ ಹಿಂಗೆ ಹೊಡೆಯುತ್ತಿದ್ದೀಯಾ?' ಅಂತ ಅರವಿಂದ್ ಕೇಳಿದಾಗ, 'ಏನೋ ಆ ಹೆಣ್ಣು ಮಗುವಿಗ್ಯಾಕೋ ಟಿವಿಯಲ್ಲಿ ಕಾಟ ಕೊಟ್ಟೆ?' ಅಂತ ಕೇಳಬೇಕೇ!? ಆಗ ನಿರ್ದೇಶಕ ಕೆ.ವಿ. ರಾಜು ಬಂದು ಜಗಳ ಬಿಡಿಸಿದ ಮೇಲೆ ಅಲ್ಲಿದ್ದವರಿಗೆ ನಿಜ ಸಂಗತಿ ಅರ್ಥವಾಯಿತು. 'ಅದು ಸಿನಿಮಾದಲ್ಲಿ ಮಾತ್ರ. ನಿಜವಾಗಲೂ ರೇಪ್ ಮಾಡಿರಲ್ಲ' ಅಂತ ಕೆ.ವಿ. ರಾಜು ಹೇಳಿದ ಮೇಲೆ ಅಜ್ಜಿ ಪೊರಕೆ ಬಿಸಾಕಿ, 'ಹೌದೇ! ಯಾಕಪ್ಪ ಅಂತ ಪಾತ್ರ ಮಾಡ್ತಿಯಾ? ಒಳ್ಳೆಯ ಪಾತ್ರನೂ ಮಾಡು' ಅಂತ ತನ್ನ ಮನೆಗೆ ಆ ಅಜ್ಜಿ ಊಟಕ್ಕೆ ಕರೆದಿದ್ದನ್ನು ಅರವಿಂದ್ ಈಗಲೂ ನೆನಪಿಸಿಕೊಳ್ಳುತ್ತಾರೆ.
ಹಾವು ಸತ್ತ ಪ್ರಸಂಗ
ನಿಮಗೆ ನಟ ಸರಿಗಮ ವಿಜಿ ಗೊತ್ತೇ ಇದೆ. ಈಗ ಸರಿಗಮ ಹವಾ ಕಡಿಮೆ ಇರಬಹುದು. ಆಗೊಮ್ಮೆ ಇವರೂ ವಿಜಯ ಪತಾಕೆ ಹಾರಿಸಿದವರೇ. ಕೇವಲ ನಟನೆ ಮಾತ್ರವಲ್ಲದೆ, ಟೈಗರ್ ಪ್ರಭಾಕರ್ ಅಭಿನಯಿಸಿ, ನಿರ್ದೇಶಿಸಿದ 7 ಚಿತ್ರಗಳಿಗೆ ಚಿತ್ರಕಥೆ, ಸಂಭಾಷಣೆಯನ್ನೂ ಬರೆದಿದ್ದಾರೆ. ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗಲೂ ಕಿರುತೆರೆ, ಹಿರಿತೆರೆ ಎರಡರಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಂಥ ಸರಿಗಮ ವಿಜಿ ಅವರನ್ನು ಕಚ್ಚಿದ ಹಾವು ಇದ್ದಕ್ಕಿದ್ದಂತೆ ಸಾಯಬೇಕೇ! ಹಾವು ಮಾತ್ರವಲ್ಲ, ಅದರಿಂದ ಕಚ್ಚಿಸಿಕೊಂಡ ವಿಜಿಯನ್ನೂ ಆಗಲೇ ಸಾಯಿಸಲಾಗಿತ್ತು! ಅಚ್ಚರಿಯಾದರೂ ಇದು ನಿಜ.
'ಗೊರವನಹಳ್ಳಿ ಲಕ್ಷ್ಮೀದೇವಿ ಶ್ರೀಕ್ಷೇತ್ರ' ಎನ್ನುವ ಸರಣಿ ಧಾರಾವಾಹಿ ಚಿತ್ರೀಕರಣ ನಡೆಯುತ್ತಿತ್ತು. ಲಕ್ಷ್ಮೀ ದೇವಿ ವಿಗ್ರಹದ ಮುಂದೆ ಬಟ್ಟಲು ತುಂಬಾ ಹಾಲಿಡಬೇಕು. ಅದನ್ನು ಹಾವು ಬಂದು ಅರ್ಧ ಕುಡಿದ ಮೇಲೆ, ಇಳಿದ ಹಾಲನ್ನು ಲಕ್ಷ್ಮೀದೇವಿ ಪ್ರತ್ಯಕ್ಷಳಾಗಿ ಕುಡಿಯುವ ದೃಶ್ಯ ಅದು. ಎಫೆಕ್ಟ್‌ಗೆ ಅಂತ ಪೆಟ್ರೋಮ್ಯಾಕ್ಸ್ ಹಾಕಲಾಗಿತ್ತು. ಇನ್ನೇನು ಹಾವು ಬಂದು ಹಾಲು ಕುಡಿಯಬೇಕು ಎನ್ನುವಾಗ ಸರಿಗಮ ವಿಜಿ ತಮ್ಮ ಛಾಯಾಗ್ರಾಹಕನೊಂದಿಗೆ ಕ್ಲೋಸ್‌ಅಪ್ ಶಾಟ್‌ಗೆ ಮುಂದಾದರು. ಆಗಲೇ ಪೆಟ್ರೋಮ್ಯಾಕ್ಸ್ ಶಾಕ್‌ಗೆ ಬೆದರಿದ್ದ ಹಾವು ವಿಜಿ ಅವರ ಕೈ ಕಚ್ಚಿತು. ಆದರೆ ಅದರ ನಂಜು ಏರದಂತೆ ಹಾವಾಡಿಗ ಔಷಧಿ ಕೊಟ್ಟ. ಮಾರನೇ ದಿನ ಪತ್ರಿಕೆಯೊಂದರಲ್ಲಿ 'ಹಾವು ಕಚ್ಚಿಸಿಕೊಂಡ ಕಲಾವಿದ ಸರಿಗಮ ವಿಜಿ ಸಾವು' ಎನ್ನುವ ಸುದ್ದಿ ಪ್ರಕಟವಾಗಿತ್ತು. ತಲೆ ಕೆಡಿಸಿಕೊಂಡ ವಿಜಿ 'ನಾನು ಬದುಕಿದ್ದೇನೆ' ಎಂದು ಹೇಳುತ್ತಿದ್ದರೆ ಅತ್ತ ವಿಜಿಯನ್ನು ಕಚ್ಚಿದ ಹಾವು ಸತ್ತಿತ್ತು! ಹಾವು ಸತ್ತ ಘಟನೆ ಮತ್ತಷ್ಟು ರೆಕ್ಕೆಪುಕ್ಕ ಕಟ್ಟಿಕೊಂಡು ಗಾಂಧಿನಗರದಲ್ಲಿ ಓಡಾಡಿತು. 'ತನ್ನ ಗಂಡನನ್ನು ಕಚ್ಚಿದ ಹಾವು ಸತ್ತು ಹೋಯಿತೇ!?' ಎಂದುಕೊಂಡು ಗಂಡನ ಬಳಿ ಹೋಗಲು ವಿಜಿ ಪತ್ನಿ ಭಯ ಬಿದ್ದಳು. ಇದರಿಂದ ಹೊರಬರಲು ವಿಜಿ ಅವರಿಗೆ ಸಾಕಷ್ಟು ತಿಂಗಳುಗಳೇ ಬೇಕಾದವು.
ಯಾಮಾರಿದ್ರೆ ಎಲ್ರೂ ಗೋವಿಂದಾ!
ಪವನ್ ಒಡೆಯರ್ ನಿರ್ದೇಶನದ 'ಗೋವಿಂದಾಯ ನಮಃ' ಚಿತ್ರ ನೋಡಿ ನಗದವರು ಕಡಿಮೆ. ಈ ಚಿತ್ರದ ಚಿತ್ರೀಕರಣದಲ್ಲಿ ನಡೆದ ಒಂದು ಹಾಸ್ಯ ಪ್ರಸಂಗವನ್ನು ಪವನ್ ನೆನಪಿಸಿಕೊಳ್ಳುತ್ತಾರೆ. ಅವರ ಪ್ರಕಾರ ಅಂದು ಯಾಮಾರಿದ್ರೆ ಎಲ್ರೂ 'ಗೋವಿಂದಾ' ಅಂತ ಶಿವನ ಪಾದ ಸೇರುತ್ತಿದ್ದರೇನೋ? ಚಿತ್ರದ ನಾಯಕ ಕೋಮಲ್ ಮತ್ತು ತಬಲ ನಾಣಿ ಟಿವಿಯಲ್ಲಿ ನೀಲಿಚಿತ್ರ ನೋಡುತ್ತಿರಬೇಕಾದರೆ ಶಾಖ ಹೆಚ್ಚಾಗಿ ಟಿವಿಯಲ್ಲಿ ಹೊಗೆ ಬರಬೇಕು. ಅಂಥ ದೃಶ್ಯ ಅದು. ಹೊಗೆ ಬರಲು ಮೊದಲೇ ಟಿವಿಯಲ್ಲಿ ಹೊಗೆಬಾಂಬ್ ಹಿಡಲಾಗಿತ್ತು. ಇಬ್ಬರ ನೋಟ ಟಿವಿ ಕಡೆ. ಪವನ್ ಆ್ಯಕ್ಷನ್ ಹೇಳಿ ಕಟ್ ಹೇಳುವ ತಯಾರಿಯಲ್ಲಿದ್ದರೆ ಟಿವಿ ನಿಜವಾಗಲೂ ಬ್ಲಾಸ್ಟ್ ಆಗಬೇಕೆ! ಟಿವಿ ಬಾಕ್ಸ್ ಚೂರುಗಳು ಎಲ್ಲರ ಮುಖಕ್ಕೂ ಹೊಡೆದವು. ಟಿವಿಗೆ ಹತ್ತಿರ ಕೂತಿದ್ದರೆ ತಬಲನಾಣಿ, ಕೋಮಲ್ ಗೋವಿಂದಾ! ಅಂತೂ ಅಪಾಯ ತಪ್ಪಿತ್ತು.
ಗರಡಿ ಮನೆ ನಟಿಯರು
ಈಗಿನ ಹಿರಿಯ ನಟಿ ಲೀಲಾವತಿ ಹಾಗೂ ಬಿ. ಜಯಾ ಮದ್ರಾಸಿನಲ್ಲಿ ಇದ್ದಾಗ ತುಂಬಾ ಆತ್ಮೀಯ ಸ್ನೇಹಿತರು. ಒಂದೇ ಮನೆಯಲ್ಲಿ ವಾಸವಿದ್ದವರು. ಒಮ್ಮೆ ಚಿತ್ರವೊಂದಕ್ಕೆ ಗರಡಿ ಮನೆಯಲ್ಲಿ ಶೂಟಿಂಗ್ ನಡೆಯುತ್ತಿತ್ತು. ಆ ದೃಶ್ಯದಲ್ಲಿ ಲೀಲಾವತಿ ಹಾಗೂ ಬಿ. ಜಯ ಇಬ್ಬರೂ ಇದ್ದರು. ಅಲ್ಲಿ ಕಲ್ಲುಗುಂಡು ಎತ್ತುವವರನ್ನು ನೋಡಿದ ಇಬ್ಬರು, 'ಹೋ... ಹೀಗೆ ಗುಂಡು ಎತ್ತಿದ್ರೆ ನಾವೂ ಸುಂದರವಾಗಿ ದೇಹ ಬೆಳೆಸಿಕೊಳ್ಳಬಹುದು' ಎಂದುಕೊಂಡು ಅಲ್ಲಿ ಇಲ್ಲಿ ಹುಡುಕಿ ಕಲ್ಲುಗಳನ್ನು ತಂದು ದಿನಾ ಅವುಗಳನ್ನು ಮೇಲೆ, ಕೆಳಗೆ ಎತ್ತುವ ಕೆಲಸ ಶುರುಮಾಡಿದರು. ಕೆಲವೇ ದಿನಗಳಲ್ಲಿ ರಕ್ತ ಹೆಪ್ಪುಗಟ್ಟಿ ಕೈ ಕಾಲು ಆಡಿಸಲು ಆಗದೆ ತಪ್ಪಗೆ ಬಿದ್ದುಕೊಂಡರು. 'ನೀವು ಗೆಜ್ಜೆ ಪೂಜೆ ಚಿತ್ರವನ್ನು ಗಮನಿಸಿ. ಆ ಚಿತ್ರದಲ್ಲಿ ನನ್ನ ಕೈ ತೋಳು ಪೈಲ್ವಾನ್ ಥರ ಇದೆ' ಎಂದು ಗರಡಿ ಮನೆಯ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ ನಟಿ ಲೀಲಾವತಿ.
ಬೀಟ್‌ರೂಟ್ ಚಿಕನ್ ಆಗಿದ್ದು...
ಮೊದಲ ಬಾರಿಗೆ 'ಶಂಖನಾದ' ಚಿತ್ರದಲ್ಲಿ ದಲಿತ ಹೋರಾಟಗಾರನ ಪಾತ್ರ ಮಾಡಿದ ನಟ ಅರವಿಂದ್ ಮುಂದೆ ತಮ್ಮ ಹೆಸರಿಗೆ 'ಶಂಖನಾದ'ವನ್ನು ಸೇರಿಸಿಕೊಂಡು ಕಾಯಂ ಆಗಿ 'ಶಂಖನಾದ' ಅರವಿಂದ್ ಆದರು. ಪಾಪ ಶುದ್ಧ ಸಸ್ಯಾಹಾರಿಯಾಗಿರುವ ಇವರಿಗೆ ಚಿತ್ರವೊಂದರಲ್ಲಿ ಚಿಕನ್ ತಿನ್ನುವ ದೃಶ್ಯ ಕೊಡಬೇಕೆ! ಹಲವು ಚಿತ್ರಗಳಲ್ಲಿ ಅಭಿನಯಿಸಿ ಮಿಂಚಿದ್ದ ಅರವಿಂದ್, ಈ ಚಿಕನ್ ತಿನ್ನುವ ದೃಶ್ಯದಿಂದ ಪಾರಾಗುವುದು ಸಾಧ್ಯವಿರಲಿಲ್ಲ. ಯಾಕೆಂದರೆ ಆ ಚಿತ್ರದ ನಿರ್ದೇಶಕ ಎ.ಟಿ. ರಘು. ನಟ ಅಂಬರೀಷ್ ಅಭಿನಯದ 'ಗುರು ಜಗದ್ಗುರು' ಚಿತ್ರ. ಮೊದಲೇ ಎ.ಟಿ. ರಘು ಖಡಕ್ ಮನುಷ್ಯ. ತನಗೆ ಇಂಥ ದೃಶ್ಯ ಬೇಕು ಅಂದರೆ ಬೇಕು ಎನ್ನುವ ವ್ಯಕ್ತಿ. 'ಗುರು ಜಗದ್ಗುರು' ಚಿತ್ರದ ಒಂದು ದೃಶ್ಯದಲ್ಲಿ ಚಿಕನ್ ತಿನ್ನುವ ದೃಶ್ಯ. ಸಸ್ಯಹಾರಿಯಾಗಿದ್ದ ಶಂಖನಾದ ಅರವಿಂದ್ ಎಷ್ಟೇ ಬೇಡಿಕೊಂಡರೂ ರಘು ಕೇಳದೆ, ಅರವಿಂದ್‌ರನ್ನು ಚಿಕನ್ ಮುಂದೆ ಕೂರಿಸಿಬಿಟ್ಟರು. ರಘು ಕ್ಯಾಮೆರಾ ಆ್ಯಂಗಲ್ ರೆಡಿ ಮಾಡಿಕೊಳ್ಳುತ್ತಿರಬೇಕಾದರೆ ಪಕ್ಕದಲ್ಲೇ ಇದ್ದ ಯೂನಿಟ್ ಹುಡುಗರು, 'ಸಾರ್ ತಗೊಳ್ಳಿ. ಇದು ಬೀಟ್‌ರೂಟ್. ಇದಕ್ಕೆ ಖಾರ, ಬಣ್ಣ ಹಚ್ಚಿದ್ದೇವೆ. ಚಿಕನ್ ಥರನೆ ಕಾಣುತ್ತೆ. ಆ್ಯಕ್ಷನ್ ಎಂದಾಕ್ಷಣ ಬೀಟ್‌ರೂಟ್ ಪೀಸನ್ನು ಮಾತ್ರ ತಿನ್ನಿ' ಅಂತ ಐಡಿಯಾ ಕೊಟ್ಟರು. ರಘು ರೆಡಿ ಅಂದರು. ಕ್ಯಾಮೆರಾ ಹತ್ತಿರ ಹೋಯಿತು. ಅರವಿಂದ್ ಬೀಟ್‌ರೂಟ್ ಅನ್ನೇ ಚಿಕನ್ ಎಂದುಕೊಂಡು ಕಚಕ್ ಅಂತ ಕಡಿದರು. ರಘು 'ಸೂಪರ್‌' ಅಂದರು. ತುಂಬಾ ದಿನಗಳವರೆಗೂ ನಿರ್ದೇಶಕ ಎ.ಟಿ. ರಘು ಅವರಿಗೆ ಬೀಟ್‌ರೂಟ್ ಕಥೆ ಗೊತ್ತೇ ಆಗಲಿಲ್ಲವಂತೆ.
ಹೂವಿಗೆ ಜೇನುಗಳ ಕಾಟ
ಅದು ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ 'ನಮ್ಮೂರ ಮಂದಾರ ಹೂವೇ' ಚಿತ್ರದ ಶೂಟಿಂಗ್. ಶಿರಸಿ ಸಮೀಪದ ಫಾಲ್ಸ್‌ವೊಂದರ ಬಳಿ ಚಿತ್ರೀಕರಣ. 'ಹೇಳೇ ಕೋಗಿಲೆ' ಹಾಡಿನ ಚಿತ್ರೀಕರಣಕ್ಕೆ ನಟಿ ಪ್ರೇಮಾ ಹಾಗೂ ನಟ ಶಿವರಾಜ್‌ಕುಮಾರ್ ನೀರಿಗೆ ಇಳಿದಿದ್ದರು. ಮೊದಲೇ ಉರಿ ಬಿಸಿಲು. ಲೈಟಿಂಗ್ ಸರಿ ಹೊಂದುತ್ತಿರಲಿಲ್ಲ. ಹೀಗಾಗಿ ರಿಫ್ಲೆಕ್ಟ್‌ಗಳನ್ನು ಪದೇ ಪದೇ ತಿರುಗಿಸುತ್ತಿದ್ದರು. ಆದರೆ ಪಕ್ಕದಲ್ಲೇ ಜೇನುಗೂಡು ಇದ್ದಿದ್ದು ಯಾರೂ ನೋಡಿರಲಿಲ್ಲ. ರಿಫ್ಲೆಕ್ಟ್‌ಗಳ ಬೆಳಕು ಯಾವಾಗ ಜೇನುಗೂಡಿನ ಮೇಲೆ ಬಿತ್ತೋ ಗೊತ್ತಿಲ್ಲ. ಜೇನು ಹುಳಗಳು ಸೈನ್ಯದಂತೆ ದಂಗೆ ಎದ್ದವು. ದೇಸಾಯಿ ಅವರು 'ಅಯ್ಯೋ ಜೇನು ಹುಳಗಳು ಬರುತ್ತಿವೆ' ಎಂದು ಓಡತೊಡಗಿದರು. ಪಕ್ಕದಲ್ಲೇ ಇದ್ದ ಮೇಕಪ್ ಹುಡುಗಿ ಪ್ರೇಮಾ ಮುಖಕ್ಕೆ ಬಟ್ಟೆ ಸುತ್ತಿದಳು. ಆದರೂ ಬಿಡಲಿಲ್ಲ. ಮೇಕಪ್ ಹುಡುಗಿ ಎಸ್ಕೇಪ್ ಆದಳು. ಶಿವರಾಜ್‌ಕುಮಾರ್‌ಗೆ ಏನು ಮಾಡಬೇಕು ತೋಚದೆ ಪ್ರೇಮಾರನ್ನು ನೀರಿನಲ್ಲಿ ಮುಳಗಿಸಿಬಿಟ್ಟರು! ಈಜು ಬಾರದ ಪ್ರೇಮ ನೀರಿನಲ್ಲಿ ಇನ್ನೂ ಸ್ವಲ್ಪ ಹೊತ್ತು ಹಾಗೆ ಇದ್ದಿದ್ದರೆ ಉಸಿರುಗಟ್ಟಿ ಸ್ವರ್ಗ ವಾಸಿಯಾಗುತ್ತಿದ್ದಳು. ಅಷ್ಟರೊಳಗೆ ಜೇನು ಹುಳುಗಳು ಕರುಣೆ ತೋರಿಸಿ ವಾಪಸು ತಮ್ಮ ಗೂಡು ಸೇರಿಕೊಂಡಿದ್ದವು. ಆದರೆ, ಶಿವರಾಜ್‌ಕುಮಾರ್‌ಗೆ ಸಿಕ್ಕ ಸಿಕ್ಕ ಜಾಗದಲ್ಲಿ ಜೇನು ಹುಳಗಳು 'ಕಿಸ್‌' ಕೊಟ್ಟಿದ್ದವು. ಪರಿಣಾಮ ಮೂರು ದಿನ ಶೂಟಿಂಗ್ ಬಂದ್!


-  ಆರ್. ಕೇಶವಮೂರ್ತಿ
keshavarkm1@gmail.com



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.