ಬೀನ್ ಭಿನ್ನರುಚಿ

ಬೀನ್ ಭಿನ್ನರುಚಿ
Updated on: 

ಉದ್ದ ಮೂಗು, ದೊಡ್ಡ ಕಣ್ಣು, ಕಪ್ಪು ಕೂದಲು, ಕೃಶ ಕೆನ್ನೆ, ಸಾಧಾರಣ ದೇಹದ ಈ ಮನುಷ್ಯನನ್ನು ನೋಡಿದ ಕೂಡಲೇ ನಗು ಉಕ್ಕುತ್ತೆ. ಆತನ ಚೇಷ್ಟೆಗಳೂ ಹಾಗೆಯೇ. ಏನಾದರೊಂದು ಕಿತಾಪತಿ ಮಾಡಿಕೊಂಡು ನಗಿಸುವುದೇ ಅವನ ಕಾಯಕ. ಅದೇನು ಮಕ್ಕಳ ಕಾರ್ಯಕ್ರಮ ಅಂತ ದೊಡ್ಡವರಿಗೂ ಅನ್ನಿಸುವುದಿಲ್ಲ. 'ಪೋಗೋ' ಚಾನೆಲ್‌ನಲ್ಲಿ ಬರುವ ಆತ ಜಗತ್ತನ್ನು ಅಷ್ಟರಮಟ್ಟಿಗೆ ಪಾಗಲ್ ಮಾಡಿದ್ದಾನೆ.
ಚಾಪ್ಲಿನ್ ಮುಗಿದು ಹೋದ. ನಂತರವೂ ಚಾಪ್ಲಿನ್ ಬಂದ. ಅವನ ಗೆಟಪ್ಪೇ ಬೇರೆ. ಆತನಿಗೊಂದು ಹೆಸರು- ಮಿ. ಬೀನ್! ಈ ಲೋಕ ನಗಲು ಅವನೂ ಒಬ್ಬ ಕಾರಣ. ಮುಖ್ಯ ಕಾರಣ. ಹಾಸ್ಯ ಕಲಾವಿದನೊಬ್ಬ ಕೇವಲ ಕಾಮಿಡಿ ಡೈಲಾಗ್‌ಗಳಿಂದ ಇಷ್ಟವಾಗುವುದಿಲ್ಲ. ಆತನ ಭಾವ, ಕಾಯದಾಕೃತಿಗಳು ಬಿಟ್ಟೂಬಿಡದಂತೆ ನಮಗೆ ಹಾಸ್ಯದ ಸರಕಾಗುತ್ತವೆ. ಅಂಥ ಅಪರೂಪದ ವಿಲಕ್ಷಣಗಳನ್ನೆಲ್ಲ ಈ ಬೀನ್ ಹೊಂದಿದ್ದಾನೆ.
ಮಿ. ಬೀನ್‌ಗೆ ಅವನದ್ದೇ ಆದ ಒರಿಜಿನಲ್ಲು ಹೆಸರಿದೆ. ರೋವನ್ ಆಟ್‌ಕಿನ್‌ಸನ್. ಈ ಮಾಸ್ಟರ್‌ಪೀಸು ಇಂಗ್ಲೆಂಡಿನ ಉತ್ಪನ್ನ. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಮುಗಿಸಿದ್ದಾನೆ ಅಂತ ಯಾರೂ ಈತನನ್ನು ಕಂಡು ಸೀರಿಯಸ್ಸಾಗಿ ಹೇಳೋದಿಲ್ವೇನೋ! ಟ್ಯೂಬ್‌ಲೈಟ್ ಹೊಳಪೇರುತ್ತಾನಲ್ಲ! ರೋವನ್ ಶಾಲಾ ಕಾಲೇಜು ದಿನಗಳಲ್ಲೇ ರಂಗಭೂಮಿಯಲ್ಲಿ ಸಕ್ರಿಯ. ಆಕ್ಸ್‌ಫರ್ಡ್‌ನಲ್ಲಿ ಕಲಿಯುತ್ತಿರುವಾಗಲೇ ಟಿವಿ ಮಾಧ್ಯಮಕ್ಕೆ ಕಾಲಿಟ್ಟ. ತಾನು ಅಭಿನಯ ಚತುರ ಎಂದು ತೋರಿಸಿ ಕೊಡೋದಿಕ್ಕೆ ಹೆಚ್ಚೇನೂ ಸಮಯ ಬೇಕಾಗಿರಲಿಲ್ಲ. 1978ರಲ್ಲಿ ಮೊದಲ ಬಾರಿಗೆ  ಬ್ರಿಟಿಷ್ ಟೆಲಿವಿಷನ್‌ನ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ. ಆಗಲೇ ಜನ ಹಲ್ಲು ಕಿರಿದು ನಕ್ಕರು. Not the Nine O'clock News ಕಾರ್ಯಕ್ರಮದ ಮಾಸ್ಟರ್‌ಮೈಂಡ್ ಹಾಗೂ ನಿರೂಪಕರಾಗಿ ಕೆಲಸ ಮಾಡಿದ ರೋವನ್‌ಗೆ 1980ರಲ್ಲಿ ಬ್ರಿಟಿಷ್ ಅಕಾಡೆಮಿ ಪ್ರಶಸ್ತಿ ಸಿಕ್ಕಿದ್ದು ಇನ್ನೊಂದು ಖುಷಿಯ ವಿಚಾರ.
ಸ್ಟಾಂಡ್‌ಅಪ್ ಕಾಮಿಡಿಯನ್ ಆಗಿರುವ ಈತ ಸ್ಟೇಜ್ ಪರ್ಫಾಮೆನ್ಸ್‌ನ ಮೂಲಕವೇ ಹೆಚ್ಚು ಖ್ಯಾತಿ ಗಳಿಸಿದ್ದು. 1983ರಲ್ಲಿ ಗೆಳೆಯ ಕರ್ಟಿಸ್ ಜತೆ ಸೇರಿ ನಿರ್ಮಿಸಿದ 'ಬ್ಲ್ಯಾಕ್ ಆ್ಯಡ್ಡರ್‌' ಕಾರ್ಯಕ್ರಮ ಇನ್ನಷ್ಟು ಜನಪ್ರಿಯತೆ ತಂದುಕೊಟ್ಟಿತು.
ಈ ನಡುವೆಯೇ 'ಮಿ. ಬೀನ್ ಸೀರೀಸ್‌' ಶುರುಮಾಡಿಯೂಬಿಟ್ಟ. 'ಮಿ. ಬೀನ್‌' ಪ್ರಸಾರವಾಗುತ್ತಿದ್ದಂತೆ ರೋವನ್‌ನ ಐಡೆಂಟಿಟಿಯೇ ಬದಲಾಯಿತು. 6 ವರ್ಷಗಳಲ್ಲಿ ಈ ಶೋ ಬ್ರಿಟನ್‌ನ 'ಅತಿಪ್ರಸಿದ್ಧ ಕಾರ್ಯಕ್ರಮ' ಎಂಬ ಪಟ್ಟಿ ಸೇರಿತು. 89 ದೇಶಗಳಲ್ಲಿ ಇದು ಪ್ರಸಾರ ಕಂಡುಕೊಳ್ಳುವ ಮೂಲಕ ಜಾಗತಿಕ ಮಟ್ಟದಲ್ಲಿ ರೋವನ್ ಮಿ.ಬೀನ್ ಖ್ಯಾತಿ ಎಲ್ಲಡೆ ಪಸರಿಸತೊಡಗಿತು. ಈ ಕಾರ್ಯಕ್ರಮದ ಜನಪ್ರಿಯತೆಯನ್ನು ಕಂಡು ಅದರ ಎನಿಮೇಟೆಡ್ ಆವೃತ್ತಿಯೂ ಬಿಡುಗಡೆಯಾಯಿತು. ಅದೂ ಹಿಟ್ ಆಗಿ, ದಾಖಲೆ ಸೃಷ್ಟಿಸಿತು.

ಮಿ.ಬೀನ್‌ನ ಫ್ಲಾಷ್‌ಬ್ಯಾಕ್
ರೋವನ್ ತನ್ನ ಮುಖದ ಬಗ್ಗೆ ಗಮನಿಸಿದ್ದು 20ನೇ ವಯಸ್ಸಿನಲ್ಲಿ. ಆಕ್ಸ್‌ಫರ್ಡ್‌ಗೆ ಬಂದಾಗ ಒಂದು ದಿನ ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಂಡನಂತೆ. ಅಲ್ಲೇ ಆತನಿಗೆ ತನ್ನ ಮುಖಚರ್ಯೆ ಎಷ್ಟೊಂದು ವಿಲಕ್ಷಣವಾಗಿದೆ ಎಂದು ಜ್ಞಾನೋದಯವಾಗಿದ್ದು! ಅಂದಹಾಗೆ, ರೋವನ್ ರಿಯಲ್ ಲೈಫ್‌ನಲ್ಲಿ ತುಂಬಾ ಸೀರಿಯಸ್ಸಾಗಿರೋ ವ್ಯಕ್ತಿ. ತೆರೆಯ ಮೇಲೆ ಬಂದರೆ ಮಾತ್ರ ಕಾಮಿಡಿ ವಸ್ತು. ಚಿಕ್ಕವರಿರುವಾಗ ಅಂದರೆ 12ನೇ ವರ್ಷದವರೆಗೆ ತನ್ನ ಸಹಪಾಠಿಗಳೊಂದಿಗೆ ಶಾಲೆಯಲ್ಲಿ ಕಿತಾಪತಿ ಮಾಡಿ ನಗಿಸಿದ್ದು ಬಿಟ್ಟರೆ, ಬಾಕಿ ಎಲ್ಲ ವಿಷಯದಲ್ಲೂ ಗಂಭೀರ ವದನರಾಗಿಯೇ ಇರುತ್ತಿದ್ದನಂತೆ.
ಜೀವನದಲ್ಲಿ ಏನಾದರೊಂದು ವಿಶಿಷ್ಟ ಕೆಲಸ ಮಾಡಬೇಕೆಂಬ ಹಂಬಲ ಇತ್ತು. ಹೇಳೋಕೆ ಕೈಯಲ್ಲೊಂದು ಡಿಗ್ರಿ. ಆಕ್ಸ್‌ಫರ್ಡ್‌ಗೆ ಬಂದ ನಂತರವೇ ಕಾಮಿಡಿ ಮಾಡೋಕೆ ಶುರುಮಾಡಿದ್ದು. ಮಿ. ಬೀನ್‌ನಲ್ಲಿ ತಮಾಷೆ ಜತೆಗೆ ತುಂಬಾನೇ ಮಕ್ಕಳಾಟ ಇದೆ. ಶೋನಲ್ಲಿ ಈತನ ಮುಖಭಾವಗಳೇ ಹೈಲೈಟ್. ಮಾತಿಲ್ಲದೆ ಜಗತ್ತಿನಲ್ಲಿ ಮನೆಮಾತಾದ ಹೆಗ್ಗಳಿಕೆ ಈತನದು. ಆತನ ಮುಖಕ್ಕೊಂದು ಧನ್ಯವಾದ ಹೇಳದಿದ್ದರೆ ನಾವು ಅಪರಾಧಿಗಳು.
ಏನೋ ಕೆಲಸ ಮಾಡಲು ಹೋಗಿ ಅಲ್ಲಿ ಫಜೀತಿಗೆ ಸಿಲುಕುವ ಬೀನ್ ರಿಯಲ್ ಲೈಫಿನಲ್ಲಿ ಇಂಥ ಸಂಕಷ್ಟಕ್ಕೆ ಸಿಲುಕದಂತೆ ಎಚ್ಚರವಹಿಸುತ್ತಾನೆ. 'ಜನಪ್ರಿಯತೆ ಗಳಿಸುತ್ತಿದ್ದಂತೆ ಎಲ್ಲರೂ ನಮ್ಮ ಲೈಫ್ ಅನ್ನು ಇಣುಕಿ ನೋಡ್ತಾರೆ. ನನ್ನ ಲೈಫ್ ಅನ್ನು ಸಾದಾ ವ್ಯಕ್ತಿಗಳಂತೆ, ಆಡಂಬರ ರಹಿತವಾಗಿ ನಡೆಸಲು ನನಗಿಷ್ಟ' ಇದು ಬೀನ್ ವಾಕ್ಯ.
ಅವನಂಥ ನಗು ನಮ್ಮೊಳಗೂ ಗೂಡು ಕಟ್ಟಲಿ. ಮರಿಯಾಗಲಿ. ಹೊಸ ವರುಷಕ್ಕೆ ಹೊಸ ಹಾರಾಟ ಶುರುಮಾಡಲಿ...

- ರಶ್ಮಿ ಕಾಸರಗೋಡು  
 rashmitendulkar@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com