ಸಲಿಂಗ ಪರಿವಾರ

ಸಲಿಂಗ ಪರಿವಾರ
Updated on: 

ಸಂವಿಧಾನದ ವಿಧಿ 370ರ ಮೇಲೆ ಚರ್ಚೆಯಾಗಬೇಕೆಂದು ಬಿಜೆಪಿಯ ಘೋಷಿತ ಪ್ರಧಾನಿ ಅಭ್ಯರ್ಥಿ ಹೇಳಿದಾಗ, ಅವರು ಹಾಗೆ ಹೇಳಬಾರದಿತ್ತು ಎಂದೇ ಎಲ್ಲೆಡೆ ಚರ್ಚೆ ನಡೆಯಿತೇ ಹೊರತೂ ಅದರ ಸಾಧಕ ಬಾಧಕಗಳ ಬಗ್ಗೆ ಆರೋಗ್ಯಯುತ ಚರ್ಚೆಯಾಗಲೇ ಇಲ್ಲ. ಅಷ್ಟಾಗಿ ಕೆಲವೇ ದಿನಗಳ ನಂತರ ಸುಪ್ರೀಂ ಕೋರ್ಟ್ ಒಂದು ತೀರ್ಪನ್ನು ಪ್ರಕಟಿಸಿ, ಇಂಡಿಯನ್ ಪೀನಲ್ ಕೋಡ್ ಸೆಕ್ಷನ್ 377ರ ಪ್ರಕಾರ ಸಲಿಂಗ ರತಿ ಕಾನೂನು ಬಾಹಿರವೆಂದು ಘೋಷಿಸಿತು. ಆಮೇಲೆ ಶುರುವಾಯಿತು ನೋಡಿ ಚರ್ಚೆ... 24್ಢ7 ರಾಷ್ಟ್ರೀಯ ಚಾನೆಲ್‌ಗಳಂತೂ ಕಾದ ಕಾವಲಿಯ ಮೇಲೆ ದೋಸೆಯನ್ನು ತಿರುವಿ ಹಾಕಿದಂತೆ ಅದೇ ವಿಷಯವನ್ನೇ ಇಡೀ ದಿನ ಚರ್ಚಿಸಿ ತಮ್ಮ ಘನತೆಯನ್ನು ಮೆರೆದವು. ಹೋಗಲಿ ಬಿಡಿ, ವಿಧಿ 370ರ ಮೇಲೆ ಆಗಬೇಕಿದ್ದ ಚರ್ಚೆ ಕೊನೇ ಪಕ್ಷ ಸೆಕ್ಷನ್ 377ರ ಮೇಲಾದರೂ ಆಗುತ್ತಿದೆಯಲ್ಲಾ, ಸಂಖ್ಯಾ ಸಂಬಂಧವಾದರೂ ಇದೆಯಲ್ಲಾ ಅಂತ ಅರ್ಧ ಸಮಾಧಾನಪಟ್ಟುಕೊಳ್ಳೋಣ.
ಸೆಕ್ಸ್ ಎಂಬುದು ಅತ್ಯಂತ ಖಾಸಗಿ ವಿಷಯ ಎಂಬುದನ್ನು ನಂಬಿದ ದೇಶ ಇದು. ಖಾಸಗೀಕರಣದ ವಿರೋಧಿಗಳೂ ಕೂಡ ಈ ವಿಷಯದಲ್ಲಿ ಮಾತ್ರ ಖಾಸಗೀತನವನ್ನೇ ಅಪ್ಪಿಕೊಳ್ಳುತ್ತಾರೆ. ಆದರೆ ಇತ್ತೀಚೆಗೆ ಇಂಥ ಬೆಡ್‌ರೂಮ್ ವಿಚಾರಗಳೂ ಕೋರ್ಟ್ ಕಟಕಟೆ ಹತ್ತಿ ಇಳಿಯುತ್ತಾ ಸಾರ್ವಜನಿಕರ ಬಾಯಿಗೆ ಬ್ರೆಡ್‌ಜಾಮ್‌ನಂತೆ ಆಹಾರವಾಗಿವೆ. ಸರ್ಕಾರವೂ ಇಂಥ ವಿಷಯದಲ್ಲಿ ಮಧ್ಯ ಬಾಯಿ ಹಾಕುವಂತಾಗಿದೆ. ಧೂಮಪಾನ, ಮದ್ಯಪಾನಗಳಂತೆ ಅಧರಪಾನವೂ ಸಾರ್ವಜನಿಕ ಕ್ಷೇತ್ರಗಳಲ್ಲಿ ನಿಷಿದ್ಧವೆಂಬುದು ಈ ಹಿಂದೆಯೇ ಅನೇಕ ವಿವಾದಗಳಿಂದ ಜನ ತಿಳಿದುಕೊಂಡಿದ್ದಾರಾದರೂ ಸೆಕ್ಸ್ ಕೂಡ ಕಾನೂನಿನ ಸೆಕ್ಷನ್‌ಗೆ ಒಳಪಡುತ್ತದೆಂದು ಎಲ್ಲರಿಗೂ ಅರಿವಾಗಿದ್ದೇ ಇತ್ತೀಚೆಗೆ. ಇಂಥ ಅರಿವನ್ನು ಮೂಡಿಸುವಲ್ಲಿ ನಮ್ಮ ನ್ಯೂಸ್ ಚಾನೆಲ್‌ಗಳ ಕೊಡುಗೆ ಪ್ರಾತಃಸ್ಮರಣೀಯ. ಯಾರು ಯಾರೊಂದಿಗೆ ಸಂಬಂಧವಿರಿಸಿಕೊಂಡಿದ್ದಾರೆ? ಯಾರಿಗೆಷ್ಟು ಹೆಂಡತಿಯರು? ಇತ್ಯಾದಿ ವಿಷಯಗಳನ್ನೇ ಹುಡುಕುತ್ತಾ ಪ್ರಾತಃಕಾಲದಿಂದ ಮಧ್ಯರಾತ್ರಿಯವರೆಗೂ ಬೆತ್ತಲೆ ಸುದ್ದಿಯನ್ನೇ ಬಿತ್ತರಿಸುವ ಅವುಗಳು, ನ್ಯಾಯಾಲಯವೇ ಸೆಕ್ಸ್ ಬಗ್ಗೆ ತೀರ್ಪು ಕೊಟ್ಟಿದೆ ಎಂದ ಮೇಲೆ ಅವರಿಗೆ ತಡೆದುಕೊಳ್ಳಲಾದರೂ ಹೇಗೆ ಸಾಧ್ಯ?
ಅಷ್ಟಕ್ಕೂ ಆಗಿದ್ದೇನಪ್ಪ ಎಂದರೆ, ಈ ಹಿಂದೆ ದೆಹಲಿ ಹೈಕೋರ್ಟ್ 'ಯಾರು ಬೇಕಾದರೂ ತಮಗಿಷ್ಟ ಬಂದವರ ಜೊತೆ ಇಷ್ಟ ಬಂದದ್ದನ್ನು ಮಾಡಬಹುದು' ಎಂದು ಮಾನ್ಯ ಮಾಡಿದ್ದ ಸಲಿಂಗ ಕಾಮವನ್ನು ಸುಪ್ರೀಂ ಕೋರ್ಟ್ ಇದೊಂದು ಮಾನರಹಿತ ಕಾರ್ಯವೆಂದು ಅಭಿಪ್ರಾಯಪಟ್ಟು ಅಮಾನ್ಯ ಮಾಡಿದೆ. ಈ ವಿಷಯವೇ ಇಂದು ಇಡೀ ದೇಶವನ್ನು ಉದ್ರೇಕಗೊಳಿಸಿದೆ. ಸಲಿಂಗ ಕಾಮವೆಂಬುದು ಕಾನೂನು ರೀತ್ಯಾ ಸರಿಯಲ್ಲ. ಹಾಗಾಗಿ ಯಾವ ಸಲಿಂಗಿ ಕೂಡ ತನ್ನ ಬಯಕೆಯನ್ನು ಕಾನೂನು ಬದ್ಧವಾಗಿಸಿಕೊಳ್ಳುವುದು ಸಾಧ್ಯವಿಲ್ಲ. ಹೋಮೋ ಸೆಕ್ಷುಯಾಲಿಟಿಯನ್ನು ಅವರವರ ಹೋಮ್‌ನಲ್ಲೂ ಇಟ್ಟುಕೊಳ್ಳುವಂತಿಲ್ಲ ಎಂಬಂಥ ತೀರ್ಪನ್ನು ಕೇಳಿ ಹಲವರ ಪ್ರಸಾದ ಒಣಗಿಹೋಗಿದೆ. ಇನ್ನು ಮುಂದೇನು ಮಾಡುವುದು ಮತ್ತು ಹೇಗೆ ಮಾಡುವುದು ಎಂಬ ಎರಡು ಪ್ರಶ್ನೆ ಅವರನ್ನು ಕಾಡುತ್ತಿದೆ. ಈ ನಡುವೆ ಆಶಾದಾಯಕ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರ ತನ್ನ ಮೂಗನ್ನು ತೂರಿಸಿ, ಲೈಂಗಿಕ ಅಲ್ಪಸಂಖ್ಯಾತರ ಜೊತೆಗಿದ್ದೇವೆ ಎಂಬ ಭರವಸೆ ನೀಡಿದೆ. 'ಸುಪ್ರೀಂ ತೀರ್ಪಿನಿಂದ ಸರ್ಕಾರಕ್ಕೆ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಜನ ನೀಡಿದ ತೀರ್ಪಿಗಿಂತ ಹೆಚ್ಚು ಆಘಾತವಾಗಿದ್ದು, ಲೈಂಗಿಕ ಅಲ್ಪಸಂಖ್ಯಾತರಾದ ನಿಮ್ಮ ಹಿತವನ್ನು ಕಾಯುವುದಕ್ಕೆ ನಾವು 'ಕಟಿ'ಬದ್ಧರಾಗಿದ್ದೇವೆ. ಅಲ್ಪಸಂಖ್ಯಾತರ ಹಿತ ಕಾಯುವುದನ್ನೇ ಕಳೆದ ಅರವತ್ತು ವರ್ಷಗಳಿಂದ ಗುತ್ತಿಗೆ ಪಡೆದಿರುವ ನಾವು ನಿಮ್ಮ ಹೆಸರಿನಲ್ಲೂ 'ಅಲ್ಪಸಂಖ್ಯಾತರು' ಎಂಬ ಶಬ್ದವಿರುವುದರಿಂದ ಯಾವುದೇ ತಾರತಮ್ಯ ಮಾಡದೇ ನಿಮ್ಮ ಆಸೆ ಆಕಾಂಕ್ಷೆಗಳನ್ನು ರಕ್ಷಿಸುವುದು ಮತ್ತು ಪೋಷಿಸುವುದು ನಮ್ಮ ಆದ್ಯ ಕರ್ತವ್ಯ' ಎಂದು ಘೋಷಿಸಿದೆ.
ಈ ನಡುವೆ ಈ ವಿಷಯ ಎಲ್ಲ ಮಡಿ ಮೈಲಿಗೆ ಬಿಟ್ಟು ಸರ್ವತ್ರ ಕಾಳ್ಗಿಚ್ಚಿನಂತೆ ಧಗಧಗಿಸುತ್ತಿದೆ. ಹಲವರಲ್ಲಿ 'ಹಾಗೆಂದರೇನು?' ಎಂಬ ಕುತೂಹಲ ಮೊಳೆತಿದ್ದು ಅದನ್ನು ತಣಿಸಿಕೊಳ್ಳುವ ಪ್ರಯತ್ನ ಶುರುಮಾಡಿದ್ದಾರೆ ಎನ್ನಲಾಗಿದೆ. ಅದರ ನೇರ ಪರಿಣಾಮವಾಗಿ 'ಅಂಥ' ಅಂತರ್ಜಾಲ ಪುಟಗಳಿಗೆ ಭೇಟಿ ಕೊಡುವವರು ಹೆಚ್ಚುತ್ತಿದ್ದಾರಂತೆ. ಇನ್ನು ಸಾಮಾಜಿಕ ತಾಣಗಳಲ್ಲಂತೂ ಇದರದ್ದೇ ಚರ್ಚೆ. 'ಅದು' ತಪ್ಪಲ್ಲ ಎಂದು ಕೆಲವರು ವಾದಿಸಿದರೆ 'ಅದು' ಸರಿಯೇ ಹೌದು ಎಂದು ಕೆಲವರು ವಕಾಲತ್ತು ವಹಿಸಿದ್ದಾರೆ. ಅವರ ವಾದದ ಸ್ಯಾಂಪಲ್ ಹೀಗಿದೆ...
'ಕಾಮವೆಂದರೆ ಮನೋ ಸಹಜವಾದ ಬಯಕೆ. ಆದರೆ ಇದು ಪರಸ್ಪರ ವಿರುದ್ಧ ಲಿಂಗಿಗಳ ನಡುವೆಯೇ ಇರಬೇಕು ಎಂಬುದು ನಿಸರ್ಗ ಸಹಜ ಧರ್ಮ. ಹಾಗಾಗಿಯೇ ಧರ್ಮಗ್ರಂಥಗಳಲ್ಲೂ ಇದು ಅಪರಾಧವೆಂಬಂತೆ ಉಲ್ಲೇಖಗೊಂಡಿದೆ. ಸಮಾನ ಲಿಂಗಿಗಳ ನಡುವಿನ ಆಕರ್ಷಣೆ ಪ್ರಕೃತಿಯಲ್ಲ ಬದಲಿಗೆ ವಿಕೃತಿ' ಎಂಬುದು ಸಲಿಂಗಕಾಮವನ್ನು ಸರಿಯಲ್ಲವೆಂದು ವಾದಿಸುವ ತಪ್ಪು ಟೀಮ್‌ನ ವಾದ.
ವಿಲಿಂಗ ಕಾಮದಂತೆಯೇ ಸಲಿಂಗ ಕಾಮವೂ ಸಹಜವಾದದ್ದೇ. ನಮ್ಮ ಮನಸಿನೊಳಗೆ ಎದ್ದ ಬಯಕೆಯನ್ನು ಬೇರೆಯವರು ಹೇಗೆ ತಪ್ಪು ಎನ್ನಲು ಸಾಧ್ಯ? ಅಷ್ಟಕ್ಕೂ ನಾವೇನೂ ಬೇರೆಯವರನ್ನು 'ಸರಸಕೆ ಬಾರೋ..' ಎಂದು ಒತ್ತಾಯಿಸುವುದಿಲ್ಲವಲ್ಲಾ. ನಮ್ಮನ್ನು ಒಪ್ಪಿ ಬರುವವರನ್ನು ನಾವು ಅಪ್ಪಿಕೊಳ್ಳುತ್ತೇವೆ... ಅಂಥ ಸಜ್ಜನರೊಂದಿಗೆ ಸಂಗ ಬೆಳೆಸುತ್ತೇವೆ. ನಿಮ್ಮ ಧರ್ಮಗಳೇ 'ಸಜ್ಜನರ ಸಂಗ ಹೆಜ್ಜೇನು ಸವಿದಂತೆ' ಎಂದೂ ಹಾಡಿ ಹೊಗಳಿದೆಯಲ್ಲಾ. ಸಜ್ಜನ ಎಂದರೆ ಸಮಾನ ಜನ ಎಂದರ್ಥ. ಸಮಾನ ಜನರೆಂದರೆ ಸಮಾನ ಲಿಂಗಿಗಳು. ಅವರನ್ನೇ ಸಲಿಂಗಿ ಎನ್ನುತ್ತಾರೆ. ಹಾಗಿದ್ದಾಗ ಯಾಕೆ ನೀವು ನಮ್ಮಗಳ ನಡುವೆ ಕಾನೂನಿನ ಲಾಟಿ ತೂರಿಸುತ್ತೀರಿ?' ಎಂಬುದು ಸಲಿಂಗ ಪರ 'ಒಪ್ಪು' ಟೀಮ್‌ನ ಪ್ರತಿವಾದ.
ಈ ನಡುವೆ ವಾದವಿವಾದಗಳು ತಾರಕಕ್ಕೇರಿದ್ದು ಪ್ರತಿಭಟನೆಗಳು ಪ್ರಾರಂಭವಾಗಿ ರಾಜಕೀಯ ಬಣ್ಣಕ್ಕೆ ತಿರುಗಿದೆ. ರಾಷ್ಟ್ರೀಯ ಪಕ್ಷದ ಅಧ್ಯಕ್ಷೆಯೊಬ್ಬರು ಸುಪ್ರೀಂ ತೀರ್ಪನ್ನೇ ಸರಿಯಿಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ. ನಮಗೆ ನಿಮ್ಮ ನೋವು ಏನೆಂಬುದು ಗೊತ್ತು. ಆ ನೋವಿಗೆ ಮುಲಾಮಿನ ರೂಪದಲ್ಲಿ ಬೇಕಿದ್ದರೆ ಸೆಕ್ಷನ್ 377 ಅನ್ನೇ ಬದಲಿಸಲು ಸಿದ್ಧರಿದ್ದೇವೆಂದು ಹೇಳಿದ್ದಾರೆ. ಹೀಗೆ ಹೇಳಿದ ಮರುಕ್ಷಣದಲ್ಲೇ ಈ ಕುರಿತು ಸಾಮಾಜಿಕ ತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ. ಸೈನಿಕರ ತಲೆ ಕಡಿದಾಗಲೂ ಗಂಡಸುತನ ತೋರದೆ 'ಬೃಹನ್ನಳೆ'ಯಂತೆ ವರ್ತಿಸಿದ ಸರ್ಕಾರ ಈಗ ಬೆರಳೆಣಿಕೆಯಷ್ಟು ಜನರ ತೆವಲಿಗಾಗಿ ತನ್ನ 'ಬೆರಳನ್ನೇ' ಕಡಿದುಕೊಡಲು ಸಿದ್ಧವಿರುವುದು ನಾಚಿಕೆಗೇಡಿನ ಸಂಗತಿ. ಇಂಥ ಅಸಂಬದ್ಧ ವಿಚಾರಗಳಲ್ಲಿ ಬೆರಳಾಡಿಸುವ ಮೂರ್ಖತನವನ್ನು ಕೈ ಬಿಡಬೇಕೆಂದು ಹಲವರು ಆಗ್ರಹಿಸಿದ್ದಾರೆ.
ಏತನ್ಮಧ್ಯೆ ಸಲಿಂಗ ಕಾಮವನ್ನು ಒಪ್ಪಲು ಯಾವ ಕಾರಣಕ್ಕೂ ಸಾಧ್ಯವಿಲ್ಲವೆಂದು ಅನೇಕ ಧಾರ್ಮಿಕ ಮುಖಂಡರು ನಿರಾಕರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ 'ನೀವು ಒಪ್ಪದಿದ್ದರೆ ನಾವು ನಿಮ್ಮನ್ನು ಸತಾಯಿಸುವುದಿಲ್ಲ. ಒಪ್ಪಿ ಬರುವವರನ್ನಾದರೂ ಬರಲು ಬಿಟ್ಟುಬಿಡಿ' ಎಂದು ಸ.ಕಾ. ಸಂಘ ಅಲವತ್ತುಕೊಂಡಿದೆ. ಹೀಗೆ ಇಡೀ ದೇಶಕ್ಕೆ ದೇಶವೇ ಚರ್ಚೆಯಲ್ಲಿ ನಿರತರಾಗಿರುವಾಗ ತಾವು ಸುಮ್ಮನಿದ್ದರೆ ಜನ ತಪ್ಪು ತಿಳಿದುಕೊಳ್ಳುತ್ತಾರೆಂದು ಬುದ್ಧಿಜೀವಿಗಳು ಮತ್ತು ಮಾನವಹಕ್ಕು ಪ್ರತಿಪಾದಕರ ಒಕ್ಕೂಟ, ವಿ(ಪ್ರ)ಚಾರ ಪರ ವೇದಿಕೆಗಳು ಜಂಟಿಯಾಗಿ ಧುತ್ತೆಂದು ಪತ್ರಿಕಾಗೋಷ್ಠಿ ಕರೆದು ತಮ್ಮ ಅಭಿಪ್ರಾಯವನ್ನು ಹೀಗೆ ಪ್ರಕಟಪಡಿಸಿದ್ದಾರೆ. 'ಸಲಿಂಗ ಕಾಮವೆಂಬುದು ಮಾನವ ಸಹಜ ಸೂಕ್ಷ್ಮ ಸಂವೇದನೆಯಾಗಿದೆ ಎಂಬುದು ನಮಗೆಲ್ಲ ತಿಳಿದ ವಿಷಯವಾಗಿದ್ದು ವಿರೋಧಿಸುವವರು ಇದರ ಅನುಭವವಿಲ್ಲದೇ ಮಾತನಾಡುತ್ತಿದ್ದಾರೆ. ಯಾವುದೇ ನೋವು ಅನುಭವಿಸಿದವರಿಗೆ ಮಾತ್ರ ತಿಳಿಯುತ್ತದೆ. ಸಾವಿರಾರು ವರ್ಷಗಳಿಂದಲೂ ತುಳಿಯುವುದನ್ನೇ ರೂಢಿಸಿಕೊಂಡು ಬಂದಿರುವ ಮೇಲ್ವರ್ಗದವರು ಇದನ್ನು ವಿರೋಧಿಸುತ್ತಿರುವುದರಲ್ಲಿ ಬಂಡವಾಳಶಾಹಿಗಳ ಷಡ್ಯಂತ್ರವಿದೆ. ಈ ವಿರುದ್ಧ ನಾವು ಬಂಡಾಯವೆದ್ದು ಜನಜಾಗೃತಿಯುಂಟು ಮಾಡಲು ಸದ್ಯದಲ್ಲೇ 'ಕಾಮ ಸೌಹಾರ್ದ ವೇದಿಕೆ'ಯನ್ನು ಸ್ಥಾಪಿಸಿ ಹತ್ತಿಕ್ಕಲ್ಪಟ್ಟವರ ಪರವಾಗಿ ಧ್ವನಿ ಎತ್ತಲಾಗುವುದು' ಎಂದು ತಿಳಿಸಿದ್ದಾರೆ.
ಈ ಎಲ್ಲದರ ನಡುವೆ 'ಸಕಾಮ' (ಸಲಿಂಗ ಕಾಮಿಗಳ ಮಂಡಳಿ) ಸದಸ್ಯರು ಇಂಡಿಯಾ ಗೇ-ಟ್‌ಬಳಿ ಧರಣಿ ನಡೆಸಲು ನಿಶ್ಚಯಿಸಿದ್ದು 'ಹೋಮೋ ರೂಲ್‌' ಚಳುವಳಿಯೆಂದು ಹೆಸರಿಡಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೆಸರು ಹೇಳಲಿಚ್ಛಿಸದ 'ಸಕಾಮ'ದ ಕ್ರಿಯಾಶೀಲ ಕಾರ್ಯಕರ್ತರೊಬ್ಬರು, 'ಸಲಿಂಗಕಾಮಿಗಳನ್ನು ಹೀನಾಯವಾಗಿ ನೋಡಲಾಗುತ್ತಿದೆ. ನಾವೂ ಎಲ್ಲರಂತೇ ಮನುಷ್ಯರು ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ನಾವೇನೂ ದಂಧೆ ನಡೆಸುತ್ತಿಲ್ಲ. ನಮ್ಮ ಸಂತೋಷವನ್ನು ಸಮಾನ ಆಸಕ್ತರೊಂದಿಗೆ 'ವಿನಿಮಯ' ಮಾಡಿಕೊಳ್ಳುತ್ತಿದ್ದೇವೆ. ಇದು ನಮ್ಮ ಜನ್ಮ ಸಿದ್ಧ ಹಕ್ಕು' ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, 'ಸಲಿಂಗ ಕಾಮದಿಂದ ಸಂತಾನವಾಗುವುದಿಲ್ಲ ಎಂಬ ಟೀಕೆ ಅಲ್ಲಲ್ಲಿ ಕೇಳಿ ಬರುತ್ತಿದೆ. ಇದು ನಿಜವಿರಬಹುದು, ಆದರೆ ಇದರಿಂದ ಜನಸಂಖ್ಯಾಸ್ಫೋಟ ನಿಯಂತ್ರಣಕ್ಕೆ ಬರುತ್ತದೆ. ಅದರಿಂದ ನಿರುದ್ಯೋಗಗಳಂಥ ಸಮಸ್ಯೆಗಳು ದೂರವಾಗುತ್ತವೆ. ಅಲ್ಲದೆ, ನಾವು ಯಾವತ್ತೂ ಶೀಲವನ್ನು ಕಳೆದುಕೊಳ್ಳುವುದೇ ಇಲ್ಲ. ಬದುಕಿಡೀ ಕ್ರಿಯಾಶೀಲರಾಗಿದ್ದರೂ ಬ್ರಹ್ಮಚಾರಿಗಳಾಗಿಯೇ ಇರುತ್ತೇವೆ. ನಮ್ಮಿಂದ ಯಾವತ್ತೂ ಅತ್ಯಾಚಾರಗಳು ನಡೆಯುವುದೇ ಇಲ್ಲ ಹಾಗೂ ನಾವು ಮದುವೆಯಂಥ ಆಡಂಬರವೇ ಇಲ್ಲದೇ 'ಸಂಸಾರ' ನಡೆಸುತ್ತೇವೆ. ಇಂಥ ಹಲವಾರು ಪ್ರಯೋಜನಗಳಿರುವಾಗ ನಮ್ಮನ್ನು ಟೀಕಿಸುವುದು ಮಾನವೀಯತೆಯಲ್ಲ. ಅಷ್ಟಕ್ಕೂ ವಿಲಿಂಗ ಕಾಮಿಗಳಿಂದಲೇ ಅಲ್ಲವೇ ಈ ಎಲ್ಲ ಸಮಸ್ಯೆಗಳು ಹೆಚ್ಚುತ್ತಿರುವುದು? ಹಾಗಾಗಿ ಅದನ್ನೇ ನಿಷೇಧಿಸಬೇಕೆಂದು ಅವರು ವಾದಿಸುತ್ತಾರೆ. ವಿಲಿಂಗ ಕಾಮಿಗಳಿಲ್ಲದಿದ್ದರೆ ನೀವೇ ಇರುತ್ತಿರಲಿಲ್ಲ, ಹಾಗೆಲ್ಲ ಹೇಳಿಕೆ ಕೊಡಬೇಡಿ ಎಂದು ಪಕ್ಕದಲ್ಲಿರುವವರ ಸಲಹೆ ಮೇರೆಗೆ ಆ ಹೇಳಿಕೆಯನ್ನು ವಾಪಸ್ ತಗೆದುಕೊಂಡಿದ್ದಾರೆ.
ಈ ನಡುವೆ ಸಂದರ್ಭದ ಉಪಯೋಗವನ್ನು ತೆಗೆದುಕೊಳ್ಳಲು ಹವಣಿಸುತ್ತಿರುವ ದ್ವಿಲಿಂಗಿಗಳು, ನಾವು ಈ ಕಾನೂನಿನ ವ್ಯಾಪ್ತಿಗೆ ಬರುವುದಿಲ್ಲ. ಏಕೆಂದರೆ ನಾವು ಅವರ ಜೊತೆ ಅವರಂತೆ ಮತ್ತು ಇವರ ಜೊತೆ ಇವರಂತೆ ಇರುವುದರಿಂದ ನಮ್ಮದು ಭೇದರಹಿತ ಸಮಾನತೆಗಾಗಿನ ಹೋರಾಟ. ಹಾಗಾಗಿಯೇ ಕೋರ್ಟ್ ಕೂಡ ಎಲ್ಲೂ ದ್ವಿಲಿಂಗಿಗಳೆಂದು ಉಲ್ಲೇಖಿಸಿಯೇ ಇಲ್ಲವೆಂದು ಹರ್ಷ ವ್ಯಕ್ತಪಡಿಸಿದ್ದಾರೆ. ಈ ನಡುವೆ ಇಷ್ಟು ದಿನ 'ಒಳಗೊಳಗೇ' ಕೊಳೆಯುತ್ತಿದ್ದ ಅಂತರಂಗ ವಿಚಾರ ಹೀಗೆ ಬಹಿರಂಗಕ್ಕೆ ಬಂದಿದ್ದಕ್ಕೆ ಹಲವರು ಹೇಸಿಗೆ ಅನುಭವಿಸುತ್ತಿದ್ದಾರಂತೆ. ಲಿಂಗಾಷ್ಟಕವನ್ನು ಹೇಳಿಕೊಂಡು ಶಿವಾ... ರಾಮಾ... ಎಂದು ಇರಬೇಕಾಗಿದ್ದ ವಯಸ್ಸಿನವರೂ ಸಲಿಂಗಾಷ್ಟಕವನ್ನು ಜಪಿಸುವಂತಾಗಿದ್ದಕ್ಕೆ ಅವರು ಖೇದ ವ್ಯಕ್ತಪಡಿಸುತ್ತಾರೆ. ಇದು ಹೀಗೆಲ್ಲಾ ಚರ್ಚೆ ಮಾಡುವ ವಿಚಾರವೇ ಅಲ್ಲ. ಇದು 'ಅಂದರ್ ಕೀ ಬಾತ್ ಹೈ' ಎಂಬುದು ಅವರ ವಾದ.
ಅದೇನೇ ಇದ್ದರೂ ಈ ವಿಷಯವನ್ನು ಹಲವರು ಸುಖಾಸುಮ್ಮನೇ ಜಗ್ಗಿ ಜಗ್ಗಿ ಉದ್ದ ಮಾಡುತ್ತಿರುವುದಂತೂ ನಿಜ. ಸಲಿಂಗಕಾಮದಲ್ಲೇನೂ ತಪ್ಪಿಲ್ಲ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ (ಅವರವರಿಗೆ ಬೇಕಾದ ರೀತಿಯಲ್ಲಿ) ಮಜಾ ಮಾಡಲೂ ಸ್ವಾತಂತ್ರ್ಯವಿದ್ದೇ ಇದೆ. ಕಾಮಕ್ಕೆ ಕಣ್ಣಿಲ್ಲ. ಅಷ್ಟೇ ಅಲ್ಲ. ಮೂಗೂ ಇಲ್ಲ. ಅದಕ್ಕಿರುವುದು 'ಅದೊಂದೇ'. ಅದಕ್ಕೆ ತಡೆಯೊಡ್ಡುವುದು ಕಾನೂನಿನಿಂದ ಸಾಧ್ಯವಿಲ್ಲ. ಅದಕ್ಕೆ ಸ್ವನಿಯಂತ್ರಣ ಅವಶ್ಯ. 'ಆತ ಬಡವ, ಈತ ಬಡವ, ಒಲವೇ ಅವರ ಬದುಕು...' ಎಂಬಂತೆ ಜೀವನ ನಡೆಸುತ್ತಿರುವವರನ್ನು ಕಂಡಕಂಡಲ್ಲಿ ತದುಕು ಎಂದರೆ ಅದು ಅಸಹನೆಯ ಪರಮಾವಧಿಯೆನಿಸಿಕೊಳ್ಳುತ್ತದೆ. ಹಾಗೆ ನೋಡಿದರೆ ಕಾಮವೇ ಒಂದು ಗುಣಪಡಿಸಲಾಗದ ವ್ಯಾಧಿ. ಅದನ್ನು ಹೆಚ್ಚುಗೊಳಿಸಲು ವಿಧವಿಧದ ಮದ್ದಿದೆಯೇ ಹೊರತೂ ಕಡಿಮೆಗೊಳಿಸಲು ಮದ್ದಿಲ್ಲ. ಇದರಲ್ಲಿ ಸಲಿಂಗಿಗಳ ತಪ್ಪೇನಿದೆ. ಅವರವರಿಗೆ ಬೇಕಾದದ್ದನ್ನು ಮತ್ತು ಬೇಕಾದವರನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಅವರವರಿಗೇ ಬಿಟ್ಟುಬಿಡುವುದು ವಾಸಿ. ಅಷ್ಟಕ್ಕೂ 'ಸಮಾನ ಲಿಂಗ ವ್ಯಸನೇಷು ಸಖ್ಯಂ' ಎಂದು ಹಿರಿಯರೇ ಉಪದೇಶಿಸಿದ್ದಾರೆ.
ಇನ್ನು, ಒಂದು ವೇಳೆ ಕಾನೂನಿನ ಪ್ರಕಾರ ಇದನ್ನು ಮಾನ್ಯ ಮಾಡಿದರೆ ಅಸಹ್ಯವನ್ನು ತಂದು ಮೈ ಮೇಲೆ ಸುರಿದುಕೊಂಡಂತಲ್ಲವೇ ಎಂದು ಕೆಲವು ಮಡಿವಂತರ ಆತಂಕ. ಆದರೆ ಕಾಮಕ್ಕೆ ಅವರು ಇವರೆಂಬ ಭೇದವಿಲ್ಲ. ಮಡಿವಂತರೂ ತಮ್ಮ ಮಡಿಯನ್ನು ಬದಿಗೆ ಸರಿಸಿ ಒಂದಾಗುತ್ತಾರೆ. ಇಂಥದ್ದರಲ್ಲಿ ಅವರು ಅವರಷ್ಟಕ್ಕೆ 'ಕೂಡಿ' ಬಾಳುವುದರಲ್ಲಿ ತಪ್ಪೇನಿದೆ? ಒಂಟಿಯಾಗಿರುವುದಕ್ಕಿಂತ ಜಂಟಿಯಾಗಿರುವುದೇ ಮೇಲು. ಸಮರಸವೇ ಜೀವನ ಎಂಬ ಕವಿವಾಣಿಯಂತೆ ಸಾಮರಸ್ಯಕ್ಕೆ ನಾವು ದನಿಗೂಡಿಸಬೇಕು. ನಮ್ಮದು ಮಾತ್ರ ಸರಸ, ಅವರದ್ದೆಲ್ಲ ನೀರಸ ಎಂದು ತಿರಸ್ಕರಿಸುವುದು ಸಮಾಜದಲ್ಲಿ ವಿರಸಕ್ಕೆ ಕಾರಣವಾಗಬಹುದು. ಈ ನಿಟ್ಟಿನಲ್ಲಿ 'ಗೇ' ಎಂಬ ಕಾರಣಕ್ಕೆ ಗೇ-ಲಿ ಮಾಡುವುದನ್ನು ನಿಲ್ಲಿಸಿ ಅವರನ್ನು ಹಾ-ಗೇ ಬಿಟ್ಟುಬಿಡುವುದು ನಮ-ಗೇ ಒಳ್ಳೆಯದು.



- ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com