

ಸುಡುಬಿಸಿಲು ಜಡಿಮಳೆಗೆ
ಕೊರೆವ ಚಳಿಗೂ
ಹೂ ಹೊತ್ತು ನಿಂತು ನಗುವ
ಪಾಪಸ್ ಜಾತಿಯ ಗಿಡದ
ಹೆಸರು ತಿಳಿದಿಲ್ಲ
ನೀರು ಹಾಕದ ಮನೆಯೊಡತಿಯನ್ನೂ
ಹೂ ಬೇಕೇ ಕೇಳುತ್ತದೆ
ಬಾಬ್ಕಟ್ ತಲೆಯ ಆಕೆ
ಗಲಿಬಿಲಿಗೊಳ್ಳುತ್ತಾಳೆ
ಯೋಚಿಸುತ್ತಾಳೆ ಹೂ ಯಾರಿಗೆ?
ತಡವರಿಸುತ್ತಾಳೆ,
ನಮ್ಮ ಮನೆಯ ಆಧುನಿಕ ದೇವರು
ಹೂ ಮುಡಿಯುವುದಿಲ್ಲ!
ಸಂಜೆ ನೋಡುತ್ತಾಳೆ
ಬರಗಾಲದಲ್ಲೂ ನಿತ್ಯ ಕೊಡಪಾನ
ಕಾವೇರಿ ಕುಡಿವ ತುಳಸಿಗೆ
ಚಿಗುರುವ ಮನಸ್ಸೇ ಇಲ್ಲ
ಎಂದೋ ತಂದಿಟ್ಟ ದಿನದಿಂದಲೂ
ನೀರು ಕೇಳದ 'ಪಾಪ'ಸ್
ಹೂ ಹಿಡಿದು ಕುಳಿತಿದ್ದಾಳೆ
ಮರಳುಗಾಡಿನ ಗಿಡಕೆ
ಕೊನೆಗೂ ಮಲೆನಾಡಿನ ಕಾವೇರಿ ಸ್ಪರ್ಶ
ಪುಳಕಗೊಂಡಿದ್ದು ಜೀವಜಲವೇ
ಪಾಪಸ್ ನಿರ್ಲಿಪ್ತ, ಸಂತೃಪ್ತ.
-ರೇಶ್ಮಾ ರಾವ್ ಸೋನ್ಲೆ