ಡಾ. ಬಸವರಾಜ ಸಬರದ ಅವರು, ಹೊಸಗನ್ನಡ ಕಾವ್ಯ ಹಾಗೂ ಕಥನ ಪರಂಪರೆಯ ಕೆಲವು ಮಹತ್ವದ ಲೇಖಕರ ಪ್ರಮುಖ ಕೃತಿಗಳನ್ನು ಸಮಕಾಲೀನ ಸಂದರ್ಭದಲ್ಲಿ ಅರ್ಥೈಸಿರುವ ಲೇಖನಗಳು 'ಸಾಹಿತ್ಯ ಸಿಂಚನ'ದಲ್ಲಿವೆ. ಹೊಸಗನ್ನಡ ಕಾವ್ಯ ಪರಂಪರೆಯನ್ನು ಪರಿಚಯಿಸುವ ಅವರು ಸಣ್ಣಕಥೆ ಪರಂಪರೆ ಮತ್ತು ಪ್ರಯೋಗಗಳ ಕುರಿತು ಕೆಲವು ಮಹತ್ವದ ಮಾತು ಹೇಳಿದ್ದಾರೆ. ಬಂಡಾಯ ಸಾಹಿತ್ಯವನ್ನು ಪರಿಚಯಿಸಿದ್ದಾರೆ. ಸಾಹಿತ್ಯದ ವಿದ್ಯಾರ್ಥಿಗಳಿಗೆ ಉಪಯುಕ್ತ ಕೃತಿ ಇದು.
ಪ್ರ: ಪಲ್ಲವಿ ಪ್ರಕಾಶನ, ಗುಲಬರ್ಗಾ, ಪುಟಗಳು 300, ಬೆಲೆ ರು. 280
ಮೂಡುಬೆಳ್ಳೆ ಕತೆಗಳು
ದಕ್ಷಿಣ ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರಾಗಿರುವ ಮುದ್ದು ಮೂಡುಬೆಳ್ಳೆಯವರು ಆ ಜಿಲ್ಲೆಯ ರೈತಾಪಿ ವರ್ಗದ ಬದುಕಿನ ಬಹುವಿಧ ಸಂಘರ್ಷಗಳಿಗೆ ಅಕ್ಷರರೂಪ ಕೊಟ್ಟಿದ್ದಾರೆ. ಕಳೆದ ಶತಮಾನದ ಉತ್ತರಾರ್ಧದಲ್ಲಿ ಭೂಸುಧಾರಣೆಯಿಂದ ರೈತರ ಬದುಕಿನಲ್ಲಾದ ಬದಲಾವಣೆಗಳನ್ನು ಬಹು ಸೂಕ್ಷ್ಮವಾಗಿ ಅವರು ಗಮನಿಸಿದ್ದಾರೆ. ಹಳ್ಳಿಯಿಂದ ಪಟ್ಟಣಕ್ಕೆ ವಲಸೆ ಹೋದ ಯುವ ತಲೆಗಳ ಬದುಕಿನ ಬವಣೆಯನ್ನು ಹಿಡಿದಿಟ್ಟಿದ್ದಾರೆ. ಅವರ ಐದು ಸಂಕಲನಗಳ 45 ಕತೆಗಳು ಇಲ್ಲಿವೆ.
ಪ್ರ: ಶ್ರೀನಿವಾಸ ಪುಸ್ತಕ ಪ್ರಕಾಶನ, ಬೆಂಬಲೂರು, ಪುಟಗಳು 404, ಬೆಲೆ ರು. 220
ಕನ್ನಡದಲ್ಲಿ ನಾಯರ್
ಮಲೆಯಾಳ ಸಾಹಿತ್ಯದ ದೊಡ್ಡ ಹೆಸರು ಎಂ.ಟಿ. ವಾಸುದೇವನ್ ನಾಯರ್. ಅವರ ಎಂಟು ಕತೆಗಳನ್ನು 'ಮಲಯಾಳಂ ಕಥೆಗಳು' ಹೆಸರಿನಲ್ಲಿ ಕೆ.ಕೆ. ಗಂಗಾಧರ ಅವರು ಕನ್ನಡಕ್ಕೆ ತಂದಿದ್ದಾರೆ. ಸಮಕಾಲೀನ ಕೇರಳದ ಜನರ ಬದುಕಿನ ಚಿತ್ರಣದ ಜತೆಯಲ್ಲಿಯೇ ಭಾರತೀಯ ಮನಸ್ಸುಗಳ ಹಂಬಲಗಳನ್ನು, ಹತಾಶೆಗಳನ್ನು, ಜೀವನ ಪ್ರೀತಿಯನ್ನು ಈ ಕತೆಗಳು ಕಟ್ಟಿಕೊಡುತ್ತವೆ. ದಟ್ಟವಾದ ಬಾಹ್ಯ ವಿವರಗಳನ್ನು ಮನುಷ್ಯವ್ಯಾಪಾರಗಳ ತಳಮಟ್ಟದ ಅಭಿವ್ಯಕ್ತಿಗಾಗಿ ಕತೆಗಾರರು ಇಲ್ಲಿ ನೀಡುತ್ತಾರೆ. ಉತ್ತಮ ಅನುವಾದ.
ಪ್ರ: ಅಂಕಿತ ಪುಸ್ತಕ, ಬೆಂಗಳೂರು, ಪುಟಗಳು 200, ಬೆಲೆ ರು. 150