ಮೀಸೆಲಾತಿ ಜಾರಿಗೆ ತಂದ ಚಿತ್ರಗಳು!

60- 70ರ ದಶಕದಲ್ಲಿ ಅಣ್ಣಾವ್ರು 'ಕುಲಗೌರವ', 'ರಣಧೀರ ಕಂಠೀರವ', 'ಸಿಪಾಯಿರಾಮು' ಚಿತ್ರಗಳಲ್ಲಿ ಪೂಗದಸ್ತಾದ ಮೀಸೆ ಬಿಟ್ಟು ಪಕ್ವವಾಗಿ ನಟಿಸಿದ್ದೇ 'ಮೀಸೆ ಪರಂಪರೆ' ಚಿತ್ರಗಳಿಗೆ ಬುನಾದಿ. 80ರ ದಶಕದ ನಂತರ 'ಕಾಡುಗಳ್ಳ ವೀರಪ್ಪನ್' ಮತ್ತೆ ಮೀಸೆ ನೆನಪಿಸಿತು. ದೇವರಾಜ್ ಪಕ್ಕಾ ಕಾಡುಗಳ್ಳ ವೀರಪ್ಪನ್ ಆಗಿ ಮೀಸೆ ತಿರುವಿದರು. ಇದಕ್ಕೂ ಮುಂಚೆ ಗೋಲಿಬಾರ್‌ನಲ್ಲಿ 'ಡೈನಾಮಿಕ್ ಸ್ಟಾರ್'ನ ಮೀಸೆಯನ್ನು ಮರೆಯಲಾಗದು.
ಕನ್ನಡ ಚಿತ್ರಗಳಲ್ಲಿ ಪದೇಪದೆ ಇಂಥ ಮೀಸೆ ಮಾವಂದಿರು ಬರುತ್ತಿದ್ದಾರೆ. ಯಜಮಾನ, ಪಾಳೆಗಾರ, ಊರಗೌಡ, ಪಟೇಲ ಎಂದಾಕ್ಷಣ ಆತನ ಗತ್ತನ್ನು ತೋರ್ಪಡಿಸಲು ಮೀಸೆಯನ್ನು ಬಳಕೆಮಾಡುತ್ತಿದ್ದರು. 1996ರಲ್ಲಿ ತೆರೆಕಂಡ 'ಪಾಳೆಗಾರ' ಚಿತ್ರಕ್ಕೆ ಯಶಸ್ಸು ಸಿಗದಿದ್ದರೂ ಮೀಸೆಯಿಂದ ಅಂಬರೀಷ್‌ಗೆ ಹೆಸರು ಬಂದಿತು. ಅದೇ ರೀತಿ ಗಿರಿಜಾಮೀಸೆಯಲ್ಲಿ ಅಂಬರಿ ಮತ್ತು ವಿಷ್ಣು ಜುಗಲ್‌ಬಂದಿಯ 'ದಿಗ್ಗಜರು' ಚಿತ್ರದಲ್ಲಿ ಅಭಿನಯಿಸಿದರು. ಹಾಗೆ ನೋಡಿದರೆ, ಈ ಗಿರಿಜಾಮೀಸೆ ಹೆಚ್ಚು ಖ್ಯಾತಿ ಪಡೆದಿದ್ದು 'ಯಜಮಾನ' ಸೂಪರ್‌ಹಿಟ್ ಆದಾಗ. ಆ ಮೀಸೆ ವಿಷ್ಣು ಅವರ ಮುಖಕ್ಕೆ ಗಂಭೀರ ಕಳೆ ತಂದುಕೊಟ್ಟಿತ್ತು. ಇದೇ ಮೀಸೆ ಇಟ್ಟುಕೊಂಡು ವಿಷ್ಣು 'ಸೂರ್ಯವಂಶ', 'ವೀರಪ್ಪನಾಯ್ಕ', 'ಸಿಂಹಾದ್ರಿಯಸಿಂಹ' ಚಿತ್ರಗಳನ್ನು ಮಾಡಿ, ಯಶಸ್ವಿಯೂ ಆದರು. ಆದರೆ ಅದೇ ಅಂಬರೀಷ್ 'ತಂದೆಗೆ ತಕ್ಕ ಮಗ', 'ವಾಯುಪುತ್ರ', 'ಕಲ್ಲರಳಿ ಹೂವಾಗಿ'ಯಲ್ಲಿ ಎಷ್ಟೇ ಮೀಸೆ ತಿರುವಿ ಗರ್ಜಿಸಿದರೂ ಚಿತ್ರಗಳು ಯಶಸ್ವಿಯಾಗಲಿಲ್ಲ.
ಕಿಚ್ಚ ಸುದೀಪ್ ಗಿರಿಜಾ ಮೀಸೆಯಲ್ಲಿ ಅಭಿನಯಿಸಿದ 'ಕೆಂಪೇಗೌಡ' ಮತ್ತೆ ಉದಯೋನ್ಮುಖ ನಟರನ್ನು ಸೆಳೆಯಿತು. ಅದೇ ಹಳೇ ಹುಲಿ ರವಿಚಂದ್ರನ್‌ರವರು ಮೀಸೆಗೆ ಮನಸೋತು 'ಮಲ್ಲಿಕಾರ್ಜುನ', 'ನರಸಿಂಹ' ಅಂತ ತೆಗೆದರೂ ಅವು ಹೆಚ್ಚು ಗಮನ ಸೆಳೆಯಲಿಲ್ಲ. ಇವರ ಮುಂದಿನ 'ಪರಮಶಿವ' ಚಿತ್ರದಲ್ಲಿ 'ಮೀಸೆ'ಲಾತಿಯಿದೆ ಎಂಬ ಸುದ್ದಿಯಿದೆ. ಅಂದಹಾಗೆ, ಮೀಸೆ ಚಾಲೆಂಜಿಗ್ ಸ್ಟಾರ್ ದರ್ಶನ್‌ಗೂ 'ಸಂಗೊಳ್ಳಿ ರಾಯಣ್ಣ'ದಲ್ಲಿ ಅದೃಷ್ಟ ತಂದುಕೊಟ್ಟಿತು. ಮೀಸೆಗಳು ಕಡಿಮೆಯಾದಂತೆ, ಮೀಸೆ ಆಧಾರಿತ ಚಿತ್ರಗಳೂ ಕಡಿಮೆಯಾಗುತ್ತಿವೆಯೇನೋ ಎಂಬ ಆತಂಕ ಕಾಡಿದೆ.
- ಆರ್. ಚಂದ್ರಶೇಖರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


