ಮೂವತ್ತು ಸೆಕೆಂಡು

ಮ್ಯಾನ್ಹೋಲಿನ ಸಿಮೆಂಟು ಮುಚ್ಚಳದ ಸಣ್ಣ ಸಂದಿಯಿಂದ ಹೆಲಿಕಾಪ್ಟರ್ನಂತೆ ಹಾರಿದ ಜಿರಳೆ, ರಸ್ತೆಯ ಮೇಲೆ ಬಿದ್ದರೂ ಅದರ ಮೀಸೆ ಮಣ್ಣಾಗಲಿಲ್ಲ. ಮೇಲೆಲ್ಲೋ ಹೆಪ್ಪುಗಟ್ಟಿದ ಮೋಡ ಸೃಷ್ಟಿಸಿದ ಅಕಾಲಿಕ ಕತ್ತಲ ಅಲಂಕಾರ ಕಂಡು, ಇವತ್ತಾದರೂ ರಸ್ತೆಯಾಚೆ ಬಿದ್ದ ಹರಕು ಚಪ್ಪಲಿಯನ್ನು ಪೂರ್ತಿ ತರಿದು ತಿನ್ನಲೇಬೇಕೆಂಬ ಯಮಹಸಿವಿನ ಕನಸು ಹುಟ್ಟಿತದಕ್ಕೆ. ವಾಹನಗಳ ಸದ್ದನ್ನು ಗ್ರಹಿಸಲಿಲ್ಲ. ಧಾವಂತದ ಪಾದಯಾತ್ರೆಗೆ ಅಡಿಯಿಟ್ಟಿತು. ತೂರಿಕೊಂಡು ಬರುತ್ತಿದ್ದ ರಾಯಲ್ ಎನ್ಫೀಲ್ಡಿನ ಚಕ್ರ ಇನ್ನೇನು ತನ್ನನ್ನು ತುಳಿದೇಬಿಟ್ಟಿತೆನ್ನುವಷ್ಟರಲ್ಲಿ ಆತ ಗಕ್ಕನೆ ಬ್ರೇಕೊತ್ತಿಬಿಟ್ಟಿದ್ದ. ಚಿಗುರು ಮೀಸೆಯ ಹುಡುಗ ನನ್ನ ಭರ್ಜಿಮೀಸೆ ಕಂಡು ಹೆದರಿದ ಎಂದು ಬೀಗಿದ ಜಿರಳೆಗೆ ಮೇಲಿನ ಮೂವತ್ತು ಸೆಕಂಡಿನ ಸಿಗ್ನಲ್ ಲೈಟು ಕಾಣಿಸದೆ ಹೋಯಿತು.
ಆ ಟ್ರಾಫಿಕ್ಜಾಮಿನ ಏಕಕಾಲದ ಕಿರು ವಿರಾಮದಲ್ಲಿ ಏನೇನೋ ನಡೆದು ಹೋದವು. ಮೈದುನನ ಕಾರಿನ ಗ್ಲಾಸು ಜಾರಿಸಿದ ಅತ್ತಿಗೆ ಟ್ರಾಫಿಕ್ಕಿನ ಕೆಂಪುದೀಪ ಕಂಡೊಡನೆ ಹಣೆ ಮುಟ್ಟಿಕೊಂಡು ತನ್ನೊಳಗೆ ಕನವರಿಸಿದಳು; 'ಅವರು ಸತ್ತಾಗಿನಿಂದ ಅಂಥ ಕೆಂಪು ಹಣೆಬೊಟ್ಟನ್ನು ನಾನಿಡಲೇ ಇಲ್ಲ'. ತೊಡೆ ಮೇಲೆ ಹನಿ ಕಣ್ಣೀರುದುರಿತು. ಡ್ರೈವರ್ ಸೀಟಿನಲ್ಲಿ ಕೂತಿದ್ದ ಮೈದುನ ಕಿವಿ ಅಗಲಿಸಿಬಿಟ್ಟ. ಅವನಿಗೇನೋ ಪಠಕ್ಕಂತ ಸದ್ದು ಕೇಳಿಸಿತು. ಮೂರಿಂಚೆತ್ತರಕ್ಕೆ ಮುಕುಳಿ ಎತ್ತಿ, ಸ್ಟಿಯರಿಂಗಿನ ಮೇಲೆ ಭಾರವೂರಿ ಕಾರಿನ ಬ್ಯಾನೆಟ್ಟನ್ನು ನೋಡಿದ. ಅಲ್ಲಿ ಕಾಗೆಯ ಕಕ್ಕಸು ಪಿಚಕ್ಕನೆ ಬಿದ್ದಿರುವುದನ್ನು ಕಂಡು, 'ಶನಿ ಮುಂಡೇದು' ಅಂದ. ಪ್ರತ್ಯುತ್ತರವಾಗಿ ಮರದ ಮೇಲಿದ್ದ ಕಾಗೆ 'ಕ್ರಾವ್' ಎಂದಿತಾದರೂ ಯಾರೋ ಬಾರಿಸಿದ ಹಾರನ್ನು ಆ ಕರ್ಕಶವನ್ನು ಆಗಸದಲ್ಲೇ ಎನ್ಕೌಂಟರ್ ಮಾಡಿ ಬಿಸಾಕಿತ್ತು.
ಪಕ್ಕದ ಸ್ಕೂಟಿಯ ಹುಡುಗಿ ಕೊಳಲು ಗಾತ್ರಕ್ಕೆ ಬಾಯಗಲಿಸಿ ಆತಂಕಗೊಂಡಳು. ಮಿರರ್ನ ಬಳಿಗೆ ಮುಖ ಕೊಂಡೊಯ್ದಳು. 'ಓ ಗಾಡ್, ಮೊಡವೆ'! ಬೆಳಗ್ಗೆ ಮನೆಯ ಕನ್ನಡಿಯಲ್ಲಿ ಕಾಣಿಸದೇ ಇದ್ದದ್ದು ಈಗ ಉದ್ಭವಿಸಿದ್ದಕ್ಕೆ ಸಂಭವಿಸಿರುವ ಮುಟ್ಟೇ ಕಾರಣವೆಂದು ಬಗೆದಳು. 'ಥತ್... ಹಾಳು ಮುಖ' ಎಂದು ತನಗಿನ್ನು ಮಿರರ್ ಕಾಣಬಾರದೆಂದು ಸ್ವಲ್ಪ ಕ್ರಾಸ್ ಮಾಡಿಟ್ಟಳು. ಅಲ್ಲಿಯ ತನಕ ಕೇವಲ ಜಡೆಯನ್ನಷ್ಟೇ ಕಂಡು, ಮುಖದ ಆಕಾರವನ್ನು ಕಲ್ಪಿಸಿಕೊಳ್ಳುತ್ತ ಮೈ ಬಿಗಿಮಾಡಿಕೊಂಡಿದ್ದ ಹಿಂದಿನ ಬೈಕಿನ ಹುಡುಗ ಕನ್ನಡಿಯಲ್ಲಿ ಅವಳ ಮೋರೆ ಕಂಡ ಕೂಡಲೇ ರೆಪ್ಪೆಗಳನ್ನು ಹಿಗ್ಗಿಸಿ ಸಮಾನಾಂತರದಲ್ಲಿ ನಿಲ್ಲಿಸಿಬಿಟ್ಟ. 'ಸಖತ್ತಾಗವ್ಳೆ'- ಮನಸ್ಸು ಅವಳ ಸೌಂದರ್ಯದ ಪಾದ ಮುಟ್ಟಿ ನಮಸ್ಕರಿಸಿತು. ಅವಳ ಮೊಡವೆ ಅವನಿಗೆ ದೊಡ್ಡ ಸಂಗತಿ ಅಂತನ್ನಿಸಲೇ ಇಲ್ಲ.
ಗುದ್ದಿಕೊಂಡು ಹೋದವ ಸಿಗ್ನಲ್ಲು ದಾಟಿ ಸೆಕೆಂಡುಗಳೇ ಆಗಿವೆ. ಆ ರಾಯರು ಗೊಣಗುವುದನ್ನು ಬಿಟ್ಟಿರಲಿಲ್ಲ; 'ಢಿಕ್ಕಿ ಹೊಡ್ದು ಹೋಗ್ತೀಯೇನೋ... ಎಲ್ಲಿಗ್ ಹೋಗ್ತಿಯ ಮುಂಡೇಮಗ್ನೆ. ಮುಂದಿನ ಸಿಗ್ನಲ್ಲಲ್ಲಾದ್ರೂ ನಿನ್ನ ಹಿಡಿದೇ ಹಿಡೀತೀನಿ' ಎನ್ನುತ್ತಾ ತಮ್ಮ ಹಳೇ ಬಜಾಜ್ ಸ್ಕೂಟರಿನ ಅಂಡು ನೋಡಿಕೊಂಡರು. 'ಛೇ ಎಲ್ಲ ಹಾಳ್ ಮಾಡ್ಬಿಟ್ಟ'- ಈ ಮಾತು ಹೇಳುವಾಗ ರಾಯರ ಮುಖ ಭಯಂಕರ ಬೇಸರದಲ್ಲಿತ್ತು. ಇದನ್ನೆಲ್ಲ ನೋಡುತ್ತಿದ್ದ ಹಿಂಬದಿಯ ಆಟೋ ಡ್ರೈವರಿಗೆ ಕ್ಷಣ ಗೊಂದಲವಾಯಿತು; 'ಬಜಾಜ್ ಸ್ಕೂಟರಿನ ಹಿಂಬದಿಯ ಅಷ್ಟೊಂದು ನಜ್ಜುಗುಜ್ಜುಗಳಲ್ಲಿ, ಈಗ ಸೇರ್ಪಡೆಗೊಂಡಿದ್ದು ಯಾವುದು?'. ಶೋಧನೆ ತುಸು ಏನು, ಬಹಳನೇ ಕಷ್ಟವಾಯಿತು.
'ಸುಮ್ನೆ ಕೂರ್ಬೇಕು, ತರ್ಲೆ ಮಾಡ್ಬಾರ್ದು' ಅಪ್ಪ ಎರಡನೇ ಬಾರಿಗೆ ಹಾಗಂದಿದ್ದ. ಒಂದನೇ ಕ್ಲಾಸಿನ ಮಗಳು ತಲೆಹರಟೆ ನಿಲ್ಲಿಸಲಿಲ್ಲ. ಮತ್ತೆ ಮತ್ತೆ ಹಾರನ್ನು ಒತ್ತಿದಳು. 'ಕತ್ತೆ, ಹೇಳಿದ್ ಅರ್ಥ ಆಗಲ್ವಾ? ಸುಮ್ಸುಮ್ನೆ ಹಾರನ್ ಒತ್ಬಾರ್ದು' ಅಪ್ಪ ಗದರಿದ್ದನ್ನು ನೋಡಿ ಮಗಳು ಕಂಪಿಸುತ್ತಾ ಕೂತಳು. ರೆಡ್ ಸಿಗ್ನಲ್ ಬಿದ್ದಿದೆ ಅಂತ ಗೊತ್ತಿದ್ದರೂ ಅಷ್ಟರಲ್ಲಾಗಲೇ ಹಿಂದಿನ ಕಾರಿನವ ಮೂರು ಬಾರಿ ಹಾರನ್ ಬಾರಿಸಿ ಆಗಿತ್ತು. ಮಗಳು ಗ್ರಹಿಸಲಿಲ್ಲ. ಅಪ್ಪ ಕೇಳಿಸಿಕೊಂಡೂ ಸುಮ್ಮನಿದ್ದ.
ಕಮಾನು ಕೈಗಳಿಂದ ಅವಳು ಅವನನ್ನು ಬಿಗಿದಿದ್ದಳು. ಮೆಲ್ಲನೆ ಹೊಟ್ಟೆಗೆ ಚೂಟಿ, 'ನಿಮ್ಗೆ ಹೊಟ್ಟೆ ಬರ್ತಿದೆ. ನಾಳೆಯಿಂದ್ಲೆ ಜಿಮ್ಮಿಗೆ ಹೋಗಿ' ಅನುರಾಗದ ನೋಟದಲ್ಲಿ ಆತನಿಗೆ ಮಾತನ್ನು ದಾಟಿಸಿದ್ದಳು. ಬೈಕಿನ ಕನ್ನಡಿಯಲ್ಲಿ ಅವನಿಗೆ ಅವಳ ದೃಷ್ಟಿಯ ವಯ್ಯಾರ ಕಾಣಿಸಿತ್ತು. ಅದರಾಚೆಯ ಬಸ್ಸಿನಲ್ಲೂ ಅದೇ ವಯಸ್ಸಿನ ದಂಪತಿ ಕೂತಿದ್ದರು. ಹೆಂಡತಿ ಸೀಟಿನಲ್ಲಿ ಕೂತಿದ್ದಳು. ಗಂಡ ಅವಳ ಪಕ್ಕದಲ್ಲೇ ನಿಂತಿದ್ದ. ಅವನಿಗೂ ಹೊಟ್ಟೆ ಬಂದಿತ್ತು. ಹೆಂಡತಿ ಅವನಿಗೆ ಚೂಟಲು ಹೋಗಲಿಲ್ಲ. ಅವನ ಹೊಟ್ಟೆ ಮೇಲೆ ನಿಧಾನ ಸವರಿದಳು. 'ಮದುವೆಯಾಗಿ ಎರಡು ವರ್ಷವಾಯಿತಲ್ಲ, ನನಗೆ ಯಾವಾಗ ಇಂಥ ಹೊಟ್ಟೆ ಬರುತ್ತೆ' ಅವಳ ಕಣ್ಣಂಚು ರವಾನಿಸಿದ ಪ್ರಶ್ನೆಗೆ ಅವನಲ್ಲಿ ಉತ್ತರವಿರಲಿಲ್ಲ. ಕಂಡಕ್ಟರ್ ಅಲ್ಲೇ ಕೂಗಿದ್ದ, 'ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ರಿ'. ಗಂಡ ತುಸು ಸರಿದು ನಿಂತ.
ಆ ಕಾರೊಳಗಿದ್ದವ ಪ್ರಸಿದ್ಧ ಶಾಂಪೂ ಕಂಪನಿಯ ಸೇಲ್ಸ್ ಮ್ಯಾನೇಜರು. ಕಂಡ ಕಂಡವರ ಕೂದಲು ನೋಡಿ 'ನೀವು ನಮ್ಮ ಕಂಪನಿಯ ಶಾಂಪೂ ಯೂಸ್ ಮಾಡಿ. ಕೂದಲು ಸಿಕ್ಕಾಗೋದೆಲ್ಲ ನಿಲ್ಲುತ್ತೆ' ಅಂತ ಸ್ಯಾಂಪಲ್ ಬಾಟಲ್ಲನ್ನ ಒಪ್ಪಿಗೆಯಿಲ್ಲದೆಯೇ ಅವರುಗಳ ಕೈಗಿಡುತ್ತಿದ್ದ. ಅವನ ಕಾರಿನ ಕಿಟಕಿಯನ್ನು ಆ ಭಿಕ್ಷುಕಿ ಮೂರು ಬಾರಿ ಟಕ್ ಟಕ್ ಅಂತ ತಟ್ಟಿದಳು. ಅವನು ಗ್ಲಾಸನ್ನು ಕೆಳಗಿಳಿಸಲಿಲ್ಲ. ಅವಳ ಕೂದಲೂ ಎಲ್ಲರಿಗಿಂತ ಹೆಚ್ಚು ಸಿಕ್ಕು ಸಿಕ್ಕಾಗಿತ್ತು. ಇವನ ಬ್ಯಾಗೊಳಗೆ ಸ್ಯಾಂಪಲ್ ಬಾಟಲ್ಲೂ ಇತ್ತು.
ಅಲ್ಲೂ ಒಂದು ಸೈಕಲ್ಲು. ಅಂವ ಪೆಡಲ್ ತುಳಿದೂ ತುಳಿದೂ ಮುಂದೆ ಬರುತ್ತಲೇ ಇದ್ದ. ಇಕ್ಕಟ್ಟಿನಲ್ಲಿ ಪೆಡಲ್ ತುಳಿಯುವುದರಲ್ಲೂ ಅಗಾಧ ಸುಖ, ಅನುಭವ. ಅಷ್ಟು ಸಾಕು ಆತನ ಯಾನದ ಉಲ್ಲಾಸಕ್ಕೆ. ಕೊನೆಗೂ ದಾರಿ ಆಯಿತು. ಸೈಕಲ್ಲಿಗೇನು ಟ್ರಾಫಿಕ್ಕು ರೂಲ್ಸಿಲ್ಲ ಅಂತ ತೀರಾ ಮುಂದೆ ಬಂದು ದಾಟಲೆತ್ನಿಸಿದ. ಅವನ ಆ ಮಹತ್ವಾಕಾಂಕ್ಷೆಗೆ ಅಡ್ಡಿಯಾಗಿದ್ದು ಒಂದು ಇನ್ನೋವಾ. ಅದರ ಬದಿಯಲ್ಲೇನಾದರೂ ಹೋಗಿ ಸ್ಕ್ರ್ಯಾಚ್ ಆದರೆ, ಸಾವಿರಗಟ್ಟಲೆ ದುಡ್ಡನ್ನು ಎಲ್ಲಿ ಹೊಂದಿಸಲಿ ಎಂಬ ದಿಗಿಲು ಅವನೊಳಗೆ ಅಡ್ಡಾದಿಡ್ಡಿ ಮಲಗಿತು. ಪೆಡಲ್ ತುಳಿಯುವ ಕಾಲುಗಳು ಸುಮ್ಮನಾದವು. ಜೀವನದಲ್ಲಿ ಎಲ್ಲರನ್ನೂ ತುಳಿದು ಆರಾಮ ಸ್ಥಿತಿಯಲ್ಲಿದ್ದ ಇನ್ನೋವಾ ಮಾಲೀಕನ ಕಾಲುಗಳ ಮುಂದೆ ಅವು ಸುಸ್ತಾದಂತೆ ಕಂಡವು.
ಇಷ್ಟೆಲ್ಲ ನಡೆಯುವುದರೊಳಗೆ ಆ ಜಿರಳೆ ಹರಕು ಚಪ್ಪಲಿ ಪಳೆಯುಳಿಕೆಯ ಬಳಿ ಬಂತು. ಅದರ ಎದೆಯಲ್ಲಿ ಖುಷಿಯ ತೇರು. ಸಾಕೆನ್ನುವ ತನಕ ಹರಿದುಮುಕ್ಕಿ, ಮರಳಿ ಮ್ಯಾನ್ಹೋಲಿಗೆ ಸೇರಬೇಕೆಂಬ ಉದ್ದೇಶವೂ ಅದರ ತಲೆಯೊಳಗೆ ಠೇವಣಿಯಾಯಿತು. ರೆಕ್ಕೆ ಅರಳಿಸಿ ಹಾರಿಬಿಟ್ಟರೆ ಒಂದೇ ನೆಗೆತಕ್ಕೆ ಅಲ್ಲಿ. ಅದೇ ಹೊತ್ತಲ್ಲಿ ಟ್ರಾಫಿಕ್ಕಿನ ಮೂವತ್ತು ಸೆಕೆಂಡುಗಳು ಮುಗಿದಿದ್ದರಿಂದ ಆ ಇನ್ನೋವಾ ಜಿರಳೆಯನ್ನೂ ಅಡಿಮಾಡಿತು. ಅಷ್ಟಕ್ಕೂ ಅದರ ಮಾಲೀಕ ಮೀಸೆ ಬೋಳಿಸಿಕೊಂಡಿದ್ದ. ಜಿರಳೆಯ ಮೀಸೆ ಮಣ್ಣಾಗಿದ್ದು ಮಾತ್ರ ಅದೇ ಮೊದಲು ಮತ್ತು ಅದೇ ಕೊನೆ.
ಅಲ್ಲೇ ಫುಟ್ಪಾತ್ ಮೇಲೆ ಬಿದ್ದುಕೊಂಡಿದ್ದ ಹುಚ್ಚನಿಗೆ ಏನನ್ನಿಸಿತೋ ಏನೋ, ಆ ಹರಕು ಚಪ್ಪಲಿಯನ್ನು ಎತ್ತಿ ಎಸೆದ. ಅದು ರಸ್ತೆಯೀಚೆಯ ಮ್ಯಾನ್ಹೋಲ್ ಬಳಿ ಬಿತ್ತು!
- ಕೀರ್ತಿ ಕೋಲ್ಗಾರ್
kolgarkeerthi@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


