ಒಡನೊಬ್ಬನಿದ್ದಾನೆ

ನಿಮಗೆ ಗೊತ್ತಿಲ್ಲವೇನೋಒಡನೊಬ್ಬನಿದ್ದಾನೆಎಚ್ಚರವಿರಲಿ ನಿದ್ರೆಯಲ್ಲೂ ..
ಒಡನೊಬ್ಬನಿದ್ದಾನೆ
Updated on: 

ನಿಮಗೆ ಗೊತ್ತಿಲ್ಲವೇನೋ
ಒಡನೊಬ್ಬನಿದ್ದಾನೆ
ಎಚ್ಚರವಿರಲಿ ನಿದ್ರೆಯಲ್ಲೂ
ಉಸುರಂತಿದ್ದು ಸಾಥೀಯುತ್ತಾನೆ
ಮನಸಿನೊಟ್ಟಿಗೆ ಮಾತಿಗಿಳಿಯುತ್ತಾನೆ
ನನ್ನ ಕನಸುಗಳನ್ನು ತಾನೂ
ಕಾಣುತ್ತಾನೆ

ಇದ್ದಾನೆಂದು ಗೊತ್ತು
ಕಾಣಿಸುವುದಿಲ್ಲ
ಕನ್ನಡಿಯಲ್ಲೊಮ್ಮೊಮ್ಮೆ ಝಲಕು
ಬೀರುತ್ತಾನೆ

ಕೈಯಿಕ್ಕಿದರೆ
ಏನು ಮಾಯವೋ ಏನೋ
ದೇವತೆಗಳ ಹಾಗೆ ಫಕ್ಕನೆ ಫಳಿಸಿ
ಮಾಯುತ್ತಾನೆ

ನನ್ನ ಫೋಟೋಗಳಲ್ಲಿ
ಇಕೋ ಫೋಕಸಿನಾಚೆ ಬೆಳಕಂತೆ
ಉಳಿದಿದ್ದಾನೆ
ಕೇಳಿದರೆ ನಿನ್ನ ಮೋರೆಯ ಕಾಂತಿಯೇ
ಅಲ್ಲವೆ ನಾ ಅನ್ನುತ್ತಾನೆ

ಲಜ್ಜೆಗೇಡಿ
ಬಚ್ಚಲಿಗು ಶೌಚಕ್ಕು ಬಿಡದೆ
ಹಿಂಬಾಲಿಸುತ್ತಾನೆ
ಮುಚ್ಚೇನು ಬಿಚ್ಚೇನು
ಮಾನಾಭಿಮಾನಗಳ ಪ್ರಜ್ಞೆಯೇ
ತಾನೆಂದು ಪರಿ ಪರಿ
ಪಾಲಿಸುತ್ತಾನೆ

ಮೈದೋರದ ತಲೆದೋರದ
ಹಾಗಂತ ನೆರಳೂ ಚೆಲ್ಲದ ಆಕಾಶದವನೆ
ಕಾಣಿಸಿಕೋ ಮಾರಾಯ
ಅಪ್ಪಟ ಮರ್ತ್ಯದ ಪಾರ್ಥಿವನು ನಾನು
ರೂಪಿಲ್ಲದ ನಿನ್ನ ಏನಂತ ಕಂಡೇನು
ಅಂತೆಲ್ಲ ಇಂತೆಲ್ಲ ಕೋರಿದ್ದೇ ಕೋರಿದ್ದಾಗಿ
ಮನಹಾಳ ಈವರೆಗೆ ತೋರಿಲ್ಲ

ಎಲ್ಲಿ ಅವಿಯುತ್ತಾನೋ ಇದ್ದೂ ಇರದೆ
ಎಲ್ಲ ಕವಿಯುತ್ತಾನೆ ಇರದೆಯೂ ಇದ್ದು

ಅಂತಿಂತಲ್ಲದ ಅವನು ಒಡನಿದ್ದೇ ಇರಲಿ
ಸದಾ ಇದ್ದು ಪದ್ಯ ಬರೆಸುತ್ತಿರಲಿ.


- ನಾಗರಾಜ ವಸ್ತಾರೆ
vastarey@vastareysmdc.co.in


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com