

ಈಗ ಮೊನ್ನೆಯಿಂದ ದೇಶದಲ್ಲಿ ಗಂಟೆಯ ತಂಟೆ ಶುರುವಾಗಿದೆ. ನಮಗೆ ಪ್ರತ್ಯೇಕ ಟೈಮ್ ಝೋನ್ ಬೇಕೆನ್ನುವುದು ಅಸ್ಸಾಮಿನ ಮುಖ್ಯಮಂತ್ರಿ ತರುಣ್ ಗೋಗಾಯ್ ಹಾಕಿದ 'ಟೈಮ್'ಬಾಂಬ್! ಭಾರತದ ಉಳಿದ ಭಾಗಕ್ಕೂ, ಈಶಾನ್ಯ ಭಾರತಕ್ಕೂ ಟೈಂನಲ್ಲಿ ಅಜಗಜಾಂತರ. ಕಾರಣ ಅಲ್ಲಿನ ಭೂ ಪ್ರದೇಶ. ಸೂರ್ಯ ಆ ಭಾಗದಲ್ಲಿ ಬೇಗನೆ ಎದ್ದೇಳುತ್ತಾನೆ. ನಂತರ ಅಲ್ಲಿನ ವಾತಾವರಣ ಹೇಗಿರುತ್ತೆ? ಅದನ್ನು ಕಾಣಲು ಅಸ್ಸಾಂ ಟೂರ್ ಹೊಡೆಯೋಣ...
ಭಾರತವೆಲ್ಲ ಮಲಗಿರಲು, ಅಸ್ಸಾಮಿಗರೆದ್ದು ಹಲ್ಲುಜ್ಜುತ್ತಿರುತ್ತಾರೆ! ಈಗ ಮೊನ್ನೆಯಿಂದ ದೇಶದಲ್ಲಿ ಗಂಟೆಯ ತಂಟೆ ಶುರುವಾಗಿದೆ. ನಮಗೆ ಪ್ರತ್ಯೇಕ ಟೈಮ್ ಝೋನ್ ಬೇಕೆನ್ನುವುದು ಅಸ್ಸಾಮಿನ ಮುಖ್ಯಮಂತ್ರಿ ತರುಣ್ ಗೋಗಾಯ್ ಹಾಕಿದ 'ಟೈಮ್'ಬಾಂಬ್!
ಇಡೀ ದೇಶ ಇನ್ನೂ ಎದ್ದಿರುವುದಿಲ್ಲ. ಆಗಲೇ ಅಸ್ಸಾಮಿನಲ್ಲಿ ಹೊತ್ತು ಮೂಡಿ ಎರಡು ತಾಸಾಗಿರುತ್ತದೆ. ಅದಕ್ಕಾಗಿಯೇ ತರುಣ್ ಹೀಗೊಂದು ಡಿಮ್ಯಾಂಡ್ ಮುಂದಿಟ್ಟಿದ್ದಾರೆ; 'ಅಸ್ಸಾಂನಲ್ಲಿ ಇಂಡಿಯನ್ ಸ್ಟ್ಯಾಂಡರ್ಡ್ಗೆ (ಐಎಸ್ಟಿ) ಬದಲಾಗಿ 'ಟೀ ಗಾರ್ಡನ್ ಟೈಂ' (ಟಿಜಿಟಿ) ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ಇದು ಭಾರತದ ಇತರೆ ಭಾಗಗಳಿಗಿಂತ ಒಂದು ಗಂಟೆ ಮುಂಚಿತವಾಗಿರುತ್ತದೆ'.
ಇದೇ ಹೊತ್ತಲ್ಲಿ ಇನ್ನೆಲ್ಲೋ ಎದ್ದಿದೆ ಒಂದು ವಾದ. ಎರಡೆರಡು ಟೈಮ್ಝೋನ್ ಬೇಡ. ಐಎಸ್ಟಿಯನ್ನೇ ಅರ್ಧಗಂಟೆ ಅಡ್ವಾನ್ಸ್ ಮಾಡಿಬಿಟ್ಟರೆ ಹೇಗೆ? ಎಂಬುದು ಅವರ ತರ್ಕಬದ್ಧ ಪ್ರಶ್ನೆ. ಸಮಯದಲ್ಲೂ ಏಕತೆ ಕಾಪಾಡಿಕೊಳ್ಳಬೇಕೆಂಬ ಅವರ ಕಾಳಜಿಗೆ ಸಾವಿರ ಸಲಾಂ.
ಅಲ್ಲಿ 4.30ಕ್ಕೆ ಎದ್ದ ಸೂರ್ಯ
ಇದೂ ಒಂದು ಸಮಯಸಾಧಕತನದ ಕಥೆ. ಭಾರತದ ಉಳಿದ ಭಾಗಕ್ಕೂ, ಈಶಾನ್ಯ ಭಾರತಕ್ಕೂ ಟೈಂನಲ್ಲಿ ಅಜಗಜಾಂತರ. ಕಾರಣ ಅಲ್ಲಿನ ಭೂ ಪ್ರದೇಶ. ಸೂರ್ಯ ಆ ಭಾಗದಲ್ಲಿ ಬೇಗನೆ ಎದ್ದೇಳುತ್ತಾನೆ. ಪಾಪ, ಸೂರ್ಯ ಕಾಣಿಸಿದ ಅಂತ ಅಲ್ಲಿನ ಕೋಳಿ ಕೂಗುವ ಹಾಗಿಲ್ಲ! ಜನ ಎದ್ದೇಳುವ ಹಾಗಿಲ್ಲ! ಏಕೆಂದರೆ, ಏಳಲು ಅವರಿಗಿನ್ನೂ ಆರೂ ಮೂವತ್ತೇ ಆಗಿರುವುದಿಲ್ಲ. ಸೂರ್ಯ ಕಾಲು ಆಗಸವನ್ನು ಆಳಿದ ಮೇಲೂ ಅವರೆಲ್ಲ ಮಲಗಿಯೇ ಇರಬೇಕು. ಅದು ಅವರ ಅದೃಷ್ಟವೋ, ದುರಾದೃಷ್ಟವೋ ಗೊತ್ತಿಲ್ಲ. ಹಾಗಂತ ಇಲ್ಲಿನ ಸೋಮಾರಿಗಳು ಅಸ್ಸಾಂನಲ್ಲಿ ನೆಲೆಸಲು ಮನಸ್ಸು ಮಾಡುವುದು ಬೇಡ!
ಬಿಡಿ, ಇದು ಎದ್ದೇಳುವ ವಿಚಾರವಾಯಿತು. ಇನ್ನು ಡ್ಯೂಟಿ ಶುರುಮಾಡಿದ ಸೂರ್ಯ ಸಂಜೆ 6 ಗಂಟೆಯವರೆಗೆ ಕಾಯುತ್ತಾನೆಯೇ? ಕಾರ್ಪೋರೇಟ್ ಲೆಕ್ಕದಲ್ಲಾದರೂ ಬೇಗ ಬಂದವ ಬೇಗ ಹೋಗಲೇಬೇಕಲ್ಲ! ಹೀಗಾಗಿಯೇ ಆತ, ಸಂಜೆ 4 ಗಂಟೆಗೆ ಮುಳುಗಲು ಆರಂಭಿಸುತ್ತಾನೆ. ಭಾರತದ ಇತರೆ ಭಾಗದಲ್ಲಿ ಸಂಜೆ ಆರಂಭವಾಗುತ್ತಿದ್ದರೆ, ಅಸ್ಸಾಂ, ಅರುಣಾಚಲ ಪ್ರದೇಶದ ಜನರು ಆಗ ಕತ್ತಲೆ ಕರಗಿಸಲು ದೀಪ ಹಚ್ಚಿರುತ್ತಾರೆ. ಹ್ಞಾಂ, ಕತ್ತಲೆ ಆಯಿತೆಂದು ಆಫೀಸ್ ಬಿಟ್ಟು ಎದ್ದುಹೋಗುವಂತಿಲ್ಲ. ಕಾರಣ, 5 ಗಂಟೆವರೆಗೂ ಕೆಲಸ ಮಾಡಬೇಕಲ್ಲ!
ಸಮಯ ಬದಲು ಮಾಡಿಕೊಳ್ಳುತ್ತೇವೆ ಎನ್ನುತ್ತಿರುವ ಈಶಾನ್ಯ ರಾಜ್ಯಗಳು ಮೊದಲು ಹೇಳುವ ಕಾರಣ ಇದೇ. 'ಇಲ್ಲಿ ಎಷ್ಟೊಂದು ಮಾನವ ಶ್ರಮ ವ್ಯರ್ಥವಾಗುತ್ತಿದೆ ಅನ್ನೋದು ಗೊತ್ತಾ?' ಎಂದು ಅಸ್ಸಾಂ ಮುಖ್ಯಮಂತ್ರಿ ತರುಣ್ ಗೋಗಾಯ್ ದೇಶಕ್ಕೆ ಪ್ರಶ್ನೆ ಎಸೆಯುತ್ತಾರೆ. ಟೀ ತೋಟಗಳಲ್ಲಿ ಬೆಳಗ್ಗೆ ಬೇಗನೆ ಎದ್ದು ಹೋಗಿ ಟೀ ಸೋಪ್ಪು ಕೊಯ್ದರೆ ಅದಕ್ಕೊಂದು ಪರಿಮಳ ಇರುತ್ತೆ. ಬೇಗನೆ ಹೋಗಿ ಕೊಯ್ಯಬೇಕೆಂಬುದು ಅಲ್ಲಿನವರ ಕೃಷಿ ಕಾಳಜಿ. ಅಲ್ಲಿ ಮಾನವ ದುಡಿಮೆ ಅನಿವಾರ್ಯವಾಗಿ ಆರಂಭವಾಗುವುದು ಬೆಳಗ್ಗೆ 8-9 ಗಂಟೆಯ ನಂತರವೇ. ಅಷ್ಟರ ಹೊತ್ತಿಗೆ ಅಸ್ಸಾಮಿಗಳ ತಲೆ ನಿಗಿನಿಗಿ ಕಾದಿರುತ್ತದೆ. ಅಲ್ಲಿನವರ ನೆತ್ತಿ ಸೂರ್ಯನನ್ನು ನೋಡುತ್ತಿರುತ್ತದೆ. ಹೋಗಲಿ, ಬೆಳಗ್ಗೆ ನಾಲ್ಕೂವರೆಗೆ ಸೂರ್ಯ ಮೂಡಿರುತ್ತಾನೆ, ಎದ್ದು ಕೆಲಸ ಶುರುಮಾಡೋಣ ಎಂಬಂತೆಯೂ ಅವರ ಸ್ಥಿತಿಯಿಲ್ಲ. ಏಕೆಂದರೆ, ಆ ರಾಜ್ಯದಲ್ಲಿ ಕಚೇರಿ ಆರಂಭವಾಗುವುದು ಬೆಳಗ್ಗೆ 9ಕ್ಕೆ. ಮುಂಜಾನೆಯೇ 4.30ಕ್ಕೆ ಎದ್ದು 9 ಗಂಟೆ ತನಕ ಅವರೇನು ಮಾಡುತ್ತಾರೆ?
ಸಿಕ್ಕಾಪಟ್ಟೆ ಕರೆಂಟು ಬಿಲ್ಲು!
ಸೂರ್ಯ- ಕಚೇರಿ ಸಮಯ ಇವೆರಡರ ನಡುವೆಯಷ್ಟೇ ಅವರ ಗುದ್ದಾಟವಲ್ಲ. ಬೆಳಕಿನದ್ದೂ ಅವರಿಗೆ ಸಮಸ್ಯೆಯೇ. ಬೆಳಗ್ಗೆ ಬೇಗನೆದ್ದ ಸೂರ್ಯ, ಬೇಗನೆ ಮರೆಯಾಗುವುದರಿಂದ ಅಲ್ಲಿನವರಿಗೆ ಕೃತಕ ಬೆಳಕೇ ಆಧಾರ. ಕರೆಂಟಿಲ್ಲದೆ ಜೀವಿಸುವ ಹಾಗಿಲ್ಲ. ದೇಶದ ಜನ 'ಐಎಸ್ಟಿ' ಆಧಾರದಲ್ಲಿ ಕಚೇರಿ ಮುಗಿಸಿ ಮನೆಗೆ ಬರೋದು ಸಂಜೆ 5ಕ್ಕೆ. ಈಶಾನ್ಯ ರಾಜ್ಯಗಳಲ್ಲಿ ಅಷ್ಟೊತ್ತಿಗೆ ಕತ್ತಲು. 'ಝೀ' ಚಾನೆಲ್ಲಲ್ಲಿ, ಸ್ಟಾರ್ಪ್ಲಸ್ನಲ್ಲಿ ಬರುವ ಆ ಸೀರಿಯಲ್ಗಳನ್ನು ನೋಡಿ, ಊಟಮಾಡಿ ಮಲಗುವವರೆಗೂ ಮನೆಯ ಲೈಟು ಉರಿಯುತ್ತಲೇ ಇರುತ್ತದೆ. ಇದರಿಂದ ವಿದ್ಯುತ್ ಇಲಾಖೆಗೆ ಭಾರೀ ನಷ್ಟವಾಗುತ್ತಿದೆ.
ಭದ್ರತೆ ಯಾರು ಕೊಡ್ತಾರೆ?
ಭದ್ರತೆ ದೃಷ್ಟಿಯಿಂದಲೂ ಟೈಂ ಝೋನ್ ಬದಲಾಗಬೇಕು ಎನ್ನುವುದು ಅಸ್ಸಾಂನ ಸಿನಿಮಾ ತಯಾರಕ ಮತ್ತು ಸಮಯ ಬದಲಾವಣೆಗಾಗಿ ಹೋರಾಡುತ್ತಿರುವ ಜಹ್ನು ಬರುವಾ ಅವರ ವಾದ. ಬೆಳಗ್ಗೆಯೆನೋ ಕಚೇರಿ, ಬ್ಯಾಂಕು, ಶಾಲೆಗಳಿಗೆ ಆರಾಮಾಗಿ ಹೋಗಬಹುದು. ಆದರೆ, ಸಂಜೆ ಬರುವಾಗ ಕತ್ತಲಾಗಿರುತ್ತದಲ್ಲ, ಆಗ ಭದ್ರತೆ ಯಾರು ಕೊಡೋದು ಎಂಬ ಪ್ರಶ್ನೆಯನ್ನು ಬರುವಾ ಎತ್ತಿದ್ದಾರೆ. ಮೊದಲೇ ಅಸ್ಸಾಂ ಬೆಟ್ಟಗುಡ್ಡಗಳ ನಾಡು. ರಾತ್ರಿ ಸಂಚಾರ ಇಲ್ಲಿ ಭಯ ಹುಟ್ಟಿಸುತ್ತದೆ.
ಬೇರೆ ಟೈಂ ಝೋನ್ ಸಾಧ್ಯವಾ?
ಹಾಗೆ ನೋಡಿದರೆ, ಅಮೆರಿಕದಲ್ಲಿ 9 ಟೈಂ ಝೋನ್ಗಳಿವೆ. ರಷ್ಯಾದಲ್ಲಿ 11, ಕೆನಡಾದಲ್ಲಿ 7, ಆಸ್ಟ್ರೇಲಿಯಾದಲ್ಲಿ 3 ಟೈಂ ಝೋನ್ಗಳಿವೆ. ಇಲ್ಲಿ ಕೆಲವೊಮ್ಮೆ ಘಟಿಸುವ ರೈಲು, ವಿಮಾನ ಅಪಘಾತಗಳಿಗೆ ಈ ಟೈಂ ಝೋನ್ ಕಾರಣ ಎಂಬ ದೂರೂ ಇದೆ. ಆದರೂ ಈ ದೇಶಗಳು ತಂತ್ರಜ್ಞಾನದಲ್ಲಿ ತೀರಾ ಮುಂದುವರಿದಿರುವುದರಿಂದ ಅಪಘಾತಗಳ ನಿಗ್ರಹಕ್ಕೆ ಮಾರ್ಗ ಕಂಡುಕೊಂಡಿವೆ. ಆದರೆ, ಭಾರತದಂಥ ದೇಶದಲ್ಲಿ ಬೇರೆ ಬೇರೆ ಟೈಂ ಝೋನ್ಗಳು ಸಾಧಕವಲ್ಲ ಎಂಬ ವಾದ ಕೆಲವರದು.
ಏಕೆಂದರೆ, ರೈಲು- ವಿಮಾನ ಪ್ರಯಾಣ ಈ ರಾಜ್ಯಗಳ ಜನರಿಗೆ ಕಷ್ಟವಾಗಬಹುದು. ಗುವಾಹಟಿ ಅಥವಾ ಇಂಪಾಲ್ನಿಂದ ಹೊರಡುವ ವಿಮಾನ ದಿಲ್ಲಿ ತಲುಪುವ ಸಮಯದಲ್ಲಿ ಗೊಂದಲವಾಗಿ ಏರ್ಪೋರ್ಟ್ನಲ್ಲೇ ಅಪಘಾತ ಸಂಭವಿಸಬಹುದು ಅಥವಾ ರೈಲು ಪ್ರಯಾಣದಲ್ಲೇ ಇಂಥ ಅವಘಡವಾಗಬಹುದು. ರೈಲು ಪ್ರಯಾಣದಲ್ಲಿ ನಾವಿನ್ನೂ ಹಿಂದಿನ ಸ್ಟೇಷನ್ ಮತ್ತು ಮುಂದಿನ ಸ್ಟೇಷನ್ನಿನ ಸಮಯದ ತಂತ್ರಜ್ಞಾನ ಆಧರಿಸಿಯೇ ಓಡಿಸುತ್ತಿರುವುದು. ರೈಲು ಹೊರಟಿದ್ದು ಎಷ್ಟೊತ್ತಿಗೆ? ತಲುಪುವುದು ಎಷ್ಟೊತ್ತಿಗೆ? ಎಂಬ ಬಗ್ಗೆ ಹಿಂದಿನ ಸ್ಟೇಷನ್ ಸಿಬ್ಬಂದಿ ಮತ್ತು ಮುಂದಿನ ಸ್ಟೇಷನ್ ಸಿಬ್ಬಂದಿಗೆ ತಿಳಿಸುತ್ತಾರೆ. ಒಂದು ವೇಳೆ ಗುವಾಹಟಿಯಿಂದ ಹೊರಡುವ ರೈಲು, ಇನ್ನೊಂದು ರಾಜ್ಯದ ಸ್ಟೇಷನ್ ಮುಟ್ಟುವ ಸಮಯದ ಕುರಿತಂತೆ ಆಗುವ ಮಾನವ ನಿರ್ಮಿತ ಗೊಂದಲ ದೊಡ್ಡ ಅಪಘಾತಕ್ಕೆ ಕಾರಣವಾಗಬಹುದು.
ಮತ್ತೊಂದಿಷ್ಟು ಅಡಚಣೆ
ಸೂರ್ಯ ಮೂಡಿದ ಮೇಲೂ ಮಲಗೋದು ಒಳ್ಳೆಯ ಅಭ್ಯಾಸವಲ್ಲ. ಅದು ಸೋಮಾರಿತನದ ಲಕ್ಷಣ- ಹೀಗಂತ ಹಿರಿಯರ ಬಯ್ಗುಳ ಇದ್ದಿದ್ದೇ. ಹೀಗಾಗಿ ಇದೇ ಮಾತನ್ನು ದೃಷ್ಟಿಯಲ್ಲಿಟ್ಟುಕೊಂಡು ಈಶಾನ್ಯ ರಾಜ್ಯಗಳಲ್ಲಿ ಸಮಯ ಬದಲಾಯಿಸುವುದಕ್ಕಿಂತ, ಕಚೇರಿ, ಶಾಲಾ - ಕಾಲೇಜುಗಳ ಸಮಯವನ್ನೇ ಬದಲಿಸಿದರೆ ಒಳಿತಲ್ಲವೇ?
ಇದು ಕಷ್ಟ ಸಾಧ್ಯ ಎಂಬುದು ತಜ್ಞರ ವಾದ. ಉದಾಹರಣೆಗೆ ಬ್ಯಾಂಕಿಂಗ್ ವಲಯ ಈಗಾಗಲೇ ಕಂಪ್ಯೂಟರೀಕರಣಗೊಂಡಿದೆ. ಅಲ್ಲಿಯವರೂ ಇತರೆ ಭಾಗದಂತೆ ಬೆಳಗ್ಗೆ 9ಕ್ಕೇ ಬ್ಯಾಂಕ್ ಆರಂಭಿಸಬೇಕು. ಜೊತೆಗೆ ಸಂಜೆ 5ಕ್ಕೆ ಬ್ಯಾಂಕು ಮುಚ್ಚಬೇಕು. ಇಲ್ಲದಿದ್ದರೆ ದೇಶದ ಇತರೆ ಭಾಗದ ಜೊತೆ ವ್ಯವಹರಿಸುವುದು ಕಷ್ಟಕಷ್ಟ.
ಗಡಿಯಾರ ಅರ್ಧ ತಾಸು ಹಿಂದಿಡಿ!
ಹಾಗಂತ ಬೆಂಗಳೂರಿನ ರಾಷ್ಟ್ರೀಯ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ಇಬ್ಬರು ಸಂಶೋಧಕರು ವಾದಿಸುತ್ತಾರೆ. ದಿಲೀಪ್ ಆರ್. ಅಹುಜಾ ಮತ್ತು ಡಿ.ಪಿ. ಸೇನ್ಗುಪ್ತಾ, 'ಒಂದೇ ದೇಶಕ್ಕೆ ಬೇರೆ ಬೇರೆ ಟೈಂ ಝೋನ್ಗಳು ಒಳ್ಳೆಯದಲ್ಲ' ಎನ್ನುತ್ತಾರೆ. ಆದರೆ, ಇವರು ಹೇಳುವುದು ಇಡೀ ದೇಶಕ್ಕೆ ಅನ್ವಯವಾಗುವಂತೆ ಜಿಎಸ್ಟಿಯಿಂದ ಐಎಸ್ಟಿಯನ್ನು ಅರ್ಧಗಂಟೆ ಹಿಂದಕ್ಕೆ ತರುವುದು. ಇದರಿಂದ ಮುಖ್ಯವಾಗಿ ವಿದ್ಯುತ್ ಉಳಿಸಬಹುದಂತೆ.
ಇವರ ಪ್ರಕಾರ, ಹಾಗೆ ಅರ್ಧ ಗಂಟೆ ಹಿಂದಕ್ಕೆ ತಂದರೆ 2.7 ಶತಕೋಟಿ ಯುನಿಟ್ ವಿದ್ಯುತ್ ಉಳಿಸಬಹುದಂತೆ. ಇದು 1.35 ದಶಲಕ್ಷ ಮನೆಗಳಿಗೆ ಪ್ರತಿ ವರ್ಷ 2000 ಯುನಿಟ್ ವಿದ್ಯುತ್ ನೀಡಲು ಸಾಕಾಗುತ್ತದಂತೆ. ಅರ್ಧ ಗಂಟೆ ಹಿಂದಕ್ಕೆ ತರುವುದರಿಂದ ನಾವು ಬೆಳಗ್ಗೆ ಬೇಗನೆ ಏಳುತ್ತೇವೆ. ಕಚೇರಿಗೂ ಬೇಗ ಹೋಗಿ, ಮನೆಗೆ ಬೇಗ ಬರುತ್ತೇವೆ. ಸಂಜೆ ಮನೆಯಲ್ಲಿ ಕಳೆಯುವ ಸಮಯ ಹೆಚ್ಚಾಗುತ್ತದೆ. ಜೊತೆಗೆ ಬೇಗನೇ ಬರುವುದರಿಂದ ಮಲಗುವ ಸಮಯವೂ ಬದಲಾಗುತ್ತದೆ. ರಾತ್ರಿ 10 ಗಂಟೆಗೆ ಮಲಗುತ್ತಿದ್ದವರು, ಬದಲಾದ ಸಮಯಕ್ಕೆ ತಕ್ಕಂತೆ 9.30ಕ್ಕೇ (ಅರ್ಧ ಗಂಟೆ ಹಿಂದಕ್ಕೆ) ಮಲಗುತ್ತೇವೆ. ಇದರಿಂದ ದಿನವೂ ಅರ್ಧ ತಾಸು ಕರೆಂಟ್ ಉಳಿಸಿದಂತಾಗುತ್ತದೆ.
ಚೀನಾವೂ ಜಿಎಸ್ಟಿಯಿಂದ 1 ಗಂಟೆ ಹಿಂದಕ್ಕೆ ಸಮಯವನ್ನು ಅಡ್ಜೆಸ್ಟ್ ಮಾಡಿಕೊಂಡಿದೆ. ಇದರಿಂದ ಈ ದೇಶ ಕೂಡ ಭಾರಿ ಪ್ರಮಾಣದ ವಿದ್ಯುತ್ ಉಳಿಸುತ್ತಿದೆ ಎಂದು ತಜ್ಞರು ಹೇಳುತ್ತಾರೆ. ವಿಶೇಷವೆಂದರೆ, ಚೀನಾವೂ ಭಾರಿ ಪ್ರಮಾಣದ ಭೂಭಾಗ ಹೊಂದಿದ್ದರೂ ಒಂದೇ ಟೈಂ ಝೋನ್ ಹೊಂದಿದೆ.
ಹಾಗೆ ನಾವೂ ಮಾಡಬಹುದಲ್ವಾ?
ಸೂರ್ಯ ಮೂಡುವ ಮತ್ತು ಮುಳುಗುವ ಹೊತ್ತು
(ಬರುವ ಅವರ ಅಧ್ಯಯನದಂತೆ)
ಇಂಫಾಲ್ ಬೆಂಗಳೂರು ದೆಹಲಿ ಅಹ್ಮದಾಬಾದ್
ಸೂರ್ಯ ಮೂಡುವ (ಬೇಗನೆ) 4.24 5.52 5.22 5.53 ಎಎಂ
ಸೂರ್ಯ ಮುಳುಗುವ (ಬೇಗನೆ) 4.25 5.50 5.24 5.53 ಪಿಎಂ
ಸೂರ್ಯ ಮೂಡುವ (ವಿಳಂಬ) 6.01 6.46 7.15 7.22 ಎಎಂ
ಸೂರ್ಯ ಮುಳುಗುವ (ವಿಳಂಬ) 6.08 6.50 7.23 7.29 ಪಿಎಂ
ಬಯೋಲಾಜಿಕಲ್ ಕ್ಲಾಕ್
ಬೆಳಗಿನ ಉಪಹಾರ
ದೇಶ - 8 - 9 ಗಂಟೆ
ಅರುಣಾಚಲ ಪ್ರದೇಶ - 10-11 ಗಂಟೆ
ಮಧ್ಯಾಹ್ನ ಊಟ
ದೇಶ - 1-2 ಗಂಟೆ
ಅರುಣಾಚಲ ಪ್ರದೇಶ - 3-4 ಗಂಟೆ
ರಾತ್ರಿ ಭೋಜನ
ದೇಶ - 10-11 ಗಂಟೆ
ಅರುಣಾಚಲ ಪ್ರದೇಶ - 12 - 1 ಗಂಟೆ(ಮಧ್ಯರಾತ್ರಿ)
ನಿದ್ರೆ
ದೇಶ - 11-7 ಪಿಎಂ
ಅರುಣಾಚಲ ಪ್ರದೇಶ - 1 ರಿಂದ 9 ಎಎಂ
ಕಚೇರಿ
ದೇಶ - 10 ರಿಂದ 5 ಪಿಎಂ
ಅರುಣಾಚಲ ಪ್ರದೇಶ - 12 ಪಿಎಂನಿಂದ 7 ಎಎಂ
ಗ್ರೀನ್ವಿಚ್ ಮೀನ್ ಟೈಂ
1884ರಿಂದ ಈ ಸಮಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಇಂಗ್ಲೆಂಡಿನ ಗ್ರೀನ್ವಿಚ್ ಅನ್ನು ಕೇಂದ್ರವಾಗಿಸಿಕೊಂಡು ಸಮಯ ನಿರ್ಧರಿಸಲಾಗುತ್ತದೆ. ಹೀಗಾಗಿ, ಇದಕ್ಕೆ ಗ್ರೀನ್ವಿಚ್ ಮೀನ್ ಟೈಂ ಎನ್ನುತ್ತಾರೆ. ಇದನ್ನೇ ಪ್ರಮುಖವಾಗಿಟ್ಟುಕೊಂಡು ಜಗತ್ತಿನ ಬೇರೆ ಬೇರೆ ದೇಶಗಳು ತಮ್ಮದೇ ಟೈಂ ಝೋನ್ ಅನ್ನು ಮಾಡಿಕೊಂಡಿವೆ. ಪುರಾತನ ಕಾಲದಲ್ಲಿ ಸೂರ್ಯನನ್ನು ನೋಡಿಕೊಂಡು ಸಮಯ ನಿರ್ಧರಿಸಲಾಗುತ್ತಿತ್ತು. ಸೂರ್ಯ ಮೂಡುವ ಮತ್ತು ಮುಳುಗುವ ಸಮಯವನ್ನು ಆಧಾರದಲ್ಲಿಟ್ಟುಕೊಳ್ಳಲಾಗುತ್ತಿತ್ತು. ನಂತರದ ಕಾಲದಲ್ಲಿ 24 ಗಂಟೆಯ ಗಣನೆಯನ್ನು ಆರಂಭಿಸಲಾಯಿತು.
-ಸಿ.ಜೆ. ಸೋಮಶೇಖರ್
sompreethi@gmail.com