

ಲಿಗೂ ರೀಲಿಗೂ ಅಂಥಾ ವ್ಯತ್ಯಾಸವೇನಿಲ್ಲ. ರೈಲಿನ ಥರಾನೇ ರೀಲು ಕೂಡ ಉದ್ದಾನುದ್ದ. ರೈಲಿನಂತೆಯೇ ರೀಲು ಕೂಡಾ ತನ್ನ ಹಳಿಗಳ ನಡುವೆಯೇ ಚಲಿಸುತ್ತದೆ. ರೈಲಿನಂತೆಯೇ ರೀಲು ಕೂಡ ನಿಗದಿತ ಸಮಯಕ್ಕೆ ಶುರುವಾಗಿ ನಿಗದಿತ ಸಮಯಕ್ಕೆ ಮುಗಿಯುತ್ತದೆ. ರೈಲು ಪ್ರಯಾಣ ನಿಮಗೆ ಪ್ರತಿನಿತ್ಯವೂ ಹೊಸದೊಂದು ಸಿನಿಮಾ ಅನುಭವದಂತೆ ಭಾಸವಾಗುತ್ತದೆ. ಸಿನಿಮಾ ನಿಮಗೊಂದು ಹಳಿಯಿಲ್ಲದ ರೈಲಿನ ಪ್ರಯಾಣದ ಅನುಭವ ನೀಡುತ್ತದೆ. ರೈಲು ಹೊಗೆ ಉಗುಳುತ್ತದೆ. ಸಿನಿಮಾದಲ್ಲಿ ಪಾತ್ರಗಳು ಪ್ರೇಕ್ಷಕರು ಹೊಗೆ ಉಗುಳುತ್ತಾರೆ. ಇವೆಲ್ಲ ಸುಖಾಸುಮ್ಮನೆ ಕಟ್ಟಿದ ಕೊಂಡಿಗಳು ಅಂದ್ಕೊಳ್ಳಿ. ಆದ್ರೆ ಸಿನಿಮಾಗಳಲ್ಲಿ ರೈಲು ಅತಿಮುಖ್ಯ ಪಾತ್ರ ವಹಿಸಿರುವುದು ಸುಳ್ಳಲ್ಲ.
ಇದುವರೆಗೆ ವಿದೇಶಿ ಸಿನಿಮಾಗಳನ್ನೂ ಸೇರಿಸಿ ಲೆಕ್ಕ ಹಾಕಿದರೆ ಸುಮಾರು ಹನ್ನೆರಡು ಸಾವಿರ ಸಿನಿಮಾಗಳಲ್ಲಿ ರೈಲು ಕಾಣಿಸಿಕೊಂಡಿದೆ ಎಂಬ ಮಹತ್ವದ ಮಾಹಿತಿ ಲಭಿಸುತ್ತದೆ. ಕೆಲವು ಚಿತ್ರಗಳಲ್ಲಿ ರೈಲುಗಳು ಕೇವಲ ಜೂನಿಯರ್ ಆರ್ಟಿಸ್ಟ್ನಂತೆ ಬಂದು ಹೋದರೆ, ಇನ್ನು ಕೆಲವು ಚಿತ್ರಗಳಲ್ಲಿ ರೈಲೇ ನಾಯಕ, ನಾಯಕಿ, ಖಳನಾಯಕ ಜಗತ್ತಿನ ಅತ್ಯುತ್ತಮ ಚಿತ್ರಗಳು ರೈಲನ್ನು ಪಾತ್ರವಾಗಿಸಿಕೊಂಡು ಬಂದಿವೆ. ಭಾರತೀಯ ಚಿತ್ರಗಳಲ್ಲೂ ರೈಲುಗಳ ಪಾತ್ರ ಹಿರಿದು. ಹಾಡುಗಳಿಗೆ, ಆಕ್ಷನ್ ಸನ್ನಿವೇಶಗಳಿಗೆ ಪ್ರೀತಿಪ್ರೇಮಗಳಿಗೆ ರೈಲುಗಳು ಮಾಧ್ಯಮವಾಗಿವೆ. ಒಮ್ಮೆ ವರ್ಲ್ಡ್ ಮೂವೀಸ್ಗಳಿಂದ ಇಂಡಿಯನ್ ಸಿನಿಮಾಗಳ ತನಕ ದೃಷ್ಟಿ ಹಾಯಿಸುತ್ತಾ ಹೋದರೆ ಕನಿಷ್ಠ ಇಪ್ಪತ್ತು ಚಿತ್ರಗಳಾದರೂ ಕಣ್ಮುಂದೆ ಬರುತ್ತವೆ.
ಬರ್ಲಿನ್ ಎಕ್ಸ್ಪ್ರೆಸ್ (1948)
ದ್ವಿತೀಯ ಮಹಾಯುದ್ಧದ ನಂತರದ ನಾಜಿಗಳ ಹತ್ಯೆಗೆ ಸಂಬಂಧಿಸಿದ ಈ ಚಿತ್ರದಲ್ಲಿ ಬೇರೆ ಬೇರೆ ದೇಶಗಳ ಪ್ರಯಾಣಿಕರು ಒಂದೇ ರೈಲಿನಲ್ಲಿ ಸಹಪ್ರಯಾಣಿಕರಾಗಿ ತಮಗೇ ಗೊತ್ತಿಲ್ಲದಂತೆ ಈ ಘಟನೆಯಲ್ಲಿ ಭಾಗಿಯಾಗುವ ಅಪರೂಪದ ಕಥಾವಸ್ತುವಿದೆ. ಮೆರ್ಲೆ ಒಬೆರೋನ್ ಮುಖ್ಯ ಪಾತ್ರದ ಈ ಚಿತ್ರ ತನ್ನ ಕಥಾವಸ್ತುವಿಂದ ಕ್ಲಾಸಿಕ್ ಅನಿಸಿದೆ.
ಟ್ರಾನ್ಸ್ ಸೈಬೀರಿಯನ್ (2008)
ಚೀನಾದಿಂದ ಮಾಸ್ಕೋ ತನಕದ ಟ್ರೈನ್ ಜರ್ನಿಯಲ್ಲಿ ನಡೆಯುವ ಮರ್ಡರ್ ಮಿಸ್ಟರಿ ಮತ್ತು ಚೇಸ್ ಸನ್ನಿವೇಶಗಳ ರೋಮಾಂಚಕಾರಿ ಚಿತ್ರ. ನೂರಾ ಹನ್ನೊಂದು ನಿಮಿಷಗಳ ಚಿತ್ರದಲ್ಲಿ ಎಂಬತ್ತು ನಿಮಿಷಗಳ ಕಥೆ ಟ್ರೈನಿನಲ್ಲೇ ಸಾಗುತ್ತದೆ.
ರನ್ ಅವೇ ಟ್ರೈನ್ (1985)
ಜೈಲಿನಿಂದ ತಪ್ಪಿಸಿಕೊಂಡ ಇಬ್ಬರು ಅಪರಾಧಿಗಳು ಹಾಗೂ ಒಬ್ಬ ಮಹಿಳಾ ರೈಲ್ವೆ ಅಧಿಕಾರಿ, ಬ್ರೇಕ್ಫೇಲ್ ಆಗಿ ಹತೋಟಿ ಕಳೆದುಕೊಂಡ, ಚಾಲಕನೇ ಇಲ್ಲದ ರೈಲಿನಲ್ಲಿ ಸಿಕ್ಕಿ ಪರಿಪಾಟಲು ಪಡುವ ಥ್ರಿಲ್ಲರ್ ಚಿತ್ರ ಎಂಬತ್ತರ ದಶಕದಲ್ಲಿ ಸುದ್ದಿ ಮಾಡಿತ್ತು. ಎರಿಕ್ ರಾಬರ್ಟ್ ಮತ್ತು ಜೋನ್ ವಾಯ್ಟ್ ಪ್ರಧಾನ ಭೂಮಿಕೆಯಲ್ಲಿದ್ದರು.
ದ ಲೇಡಿ ವ್ಯಾನಿಷಸ್ (1938)
ಯೂರೋಪಿಗೆ ಟ್ರೈನಿನಲ್ಲಿ ಪಯಣಿಸುತ್ತಿರೋ ಸುಂದರ ಸಿರಿವಂತ ಕಾಲ್ಗರ್ಲ್ ಒಬ್ಬಳಿಗೆ ತನ್ನ ಜೊತೆಯಲ್ಲಿ ಕೂತಿದ್ದ ಹಿರಿಯ ಮಹಿಳೆಯೊಬ್ಬಳು ದಿಢೀರ್ ನಾಪತ್ತೆಯಾಗಿದ್ದು ಕಂಡು ಅವಳನ್ನು ಹುಡುಕುವ ಸಾಹಸ ಮಾಡುವ ಥ್ರಿಲ್ಲರ್ ಕಥೆಯಲ್ಲಿ ಮಾರ್ಗರೆಟ್ ಬ್ಲಾಕ್ವುಡ್ ಮತ್ತು ಪಾಲ್ ಲ್ಯೂಕಾಸ್ ಪೈಪೋಟಿಯ ಅಭಿನಯವಿದೆ. ಹಿಚ್ಕಾಕ್ ನಿರ್ದೇಶನದ ಚಿತ್ರವಿದು.
ಮರ್ಡರ್ ಆನ್ ದ ಓರಿಯೆಂಟಲ್ ಎಕ್ಸ್ಪ್ರೆಸ್ (1974)
ಭಾರಿ ಹಿಮಪಾತದಿಂದ ನಾಯಕನಿರುವ ರೈಲು ಮುಂದೆ ಹೋಗದ ಸ್ಥಿತಿಯಲ್ಲಿ ನಿಲ್ಲುತ್ತದೆ. ಹಿಂದಿನ ರಾತ್ರಿ ಆತನ ಕಾರಿನಲ್ಲಿ ನಡೆದ ಕೊಲೆಯೊಂದರ ಪತ್ತೆಗೆ ಅದೇ ಟ್ರೈನಿಗೆ ಪತ್ತೇದಾರ ಪ್ರವೇಶಿಸುತ್ತಾನೆ. ಅಲ್ಲಿಂದ ಮುಂದೆ ಕೊಲೆಯ ರಹಸ್ಯ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.
ಸ್ಟ್ರೇಂಜರ್ಸ್ ಆನ್ ಎ ಟ್ರೈನ್ (1951)
ಹಿಚ್ಕಾಕ್ ನಿರ್ದೇಶನದ ಮತ್ತೊಂದು ಥ್ರಿಲ್ಲರ್. ಇಬ್ಬರು ಅಪರಿಚಿತರು ಒಂದು ಮರ್ಡರ್ ಮಾಡಿ ತಪ್ಪಿಸಿಕೊಳ್ಳುವುದಕ್ಕೆ ಪ್ರೊಫೆಷನಲ್ ಟೆನಿಸ್ ತಾರೆಯೊಬ್ಬನನ್ನು ಸಂಪರ್ಕಿಸಿ ಆತನಿಂದ ಪಡೆದ ಕೆಲವು ಆಟದ ಬಗೆಗಿನ ಟಿಪ್ಸ್ಬಳಸುತ್ತಾರೆ. ಅದನ್ನು ಮರ್ಡರಿನಲ್ಲಿ ಬಳಸಿಕೊಳ್ಳುತ್ತಾರೆ. ಇದಿಷ್ಟೂ ಘಟನೆಗಳು ನಡೆಯುವುದು ಟ್ರೈನಿನಲ್ಲಿ.
ದ ಗ್ರೇಟ್ ಟ್ರೈನ್ ರಾಬರಿ (1903)
ಶತಮಾನದ ಹಿಂದೆ ಚಿತ್ರಿಸಿದ್ದ ಕಿರುಚಿತ್ರ ಮುಂದೆ 1979ರಲ್ಲಿ ಫೀಚರ್ ಫಿಲ್ಮ್ ಆಗಿ ತೆರೆಕಂಡಿತು. ಗುಂಪೊಂದು ರೈಲನ್ನು ಆಕ್ರಮಿಸಿಕೊಂಡು ದರೋಡೆಗೈಯ್ಯುವ ಚಿತ್ರ ಭಾರೀ ಪ್ರಶಂಸೆಗೊಳಗಾಗಿತ್ತು.
ಇವೆಲ್ಲ ವಿದೇಶಿ ಚಿತ್ರಗಳಾದರೆ, ಭಾರತೀಯ ಚಿತ್ರರಂಗದಲ್ಲಿ ಇಮ್ರಾನ್ ಹಶ್ಮಿ ನಟನೆಯಲ್ಲಿ 'ಟ್ರೈನ್' ಎಂಬ ಚಿತ್ರ ತೆರೆಕಂಡು ಸೋಲನುಭವಿಸಿತ್ತು.ಜಗತ್ತಿನ ಚಿತ್ರರಂಗದ ಇತಿಹಾಸದಲ್ಲೇ ಇನ್ನಾದರೂ ದಾಖಲೆ ಬರೆದು ಮುಗಿದಮೇಲೂ ಓಡುತ್ತಲೇ ಇರುವ ಚಿತ್ರ 'ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ' (ಡಿಡಿಎಲ್ಜೆ). ಈ ಚಿತ್ರದ ಪ್ರಥಮಾರ್ಧದ ಕಥೆ ರೈಲು ಮತ್ತು ರೈಲು ನಿಲ್ದಾಣಗಳಲ್ಲೇ ಸಾಗುತ್ತದೆ. ಶಾರೂಖ್ ಕಾಜೋಲ್ ಪ್ರೀತಿಯ ಬೆಳವಣಿಗೆಗಳು ವಿದೇಶಿ ರೈಲುಗಳಲ್ಲಿ ನಡೆಯುತ್ತದೆ.
ಶಾರೂಖ್ ಖಾನ್ನಿಗೂ ರೈಲಿಗೂ ಅವಿನಾಭಾವ ಸಂಬಂಧವೋ ಎಂಬಂತೆ ಮಣಿರತ್ನಂನ 'ದಿಲ್ಸೇ' ಚಿತ್ರ ಶುರುವಾಗುವುದೂ ರೈಲ್ವೇ ಸ್ಟೇಷನ್ನಲ್ಲೆ. ಅದೇ ಚಿತ್ರದ 'ಚೈಯ್ಯ ಚೈಯ್ಯ' ಗೀತೆ ಮತ್ತು ನೃತ್ಯ ದೇಶಾದ್ಯಂತ ಕ್ರೇಜ್ ಹುಟ್ಟುಹಾಕಿತ್ತು. ಚಲಿಸುವ ರೈಲಿನ ಮೇಲೆ ಮಲೈಕಾ ಅರೋರಾ ಜೊತೆ ಕುಣಿದು ಕುಪ್ಪಳಿಸಿದ ಕಿಂಗ್ ಖಾನ್ನನ್ನು ಕಂಡು ಪ್ರೇಕ್ಷಕರು ಥೇಟರ್ಗಳ ಸೀಟ್ ಹತ್ತಿ ಕುಣಿದಿದ್ದರು. ರೆಹಮಾನ್ ಸಂಗೀತದ ಈ ಗೀತೆ 2002ರಲ್ಲಿ ಬಿಬಿಸಿ ವರ್ಲ್ಡ್ ಸರ್ವಿಸ್ ನಡೆಸಿದ್ದ ಸರ್ವೇಯೊಂದರಲ್ಲಿ ವಿಶ್ವದ 7000 ಸಾವಿರ ಸಾರ್ವಕಾಲಿಕ ಅತ್ಯುತ್ತಮ ಹಾಡುಗಳ ಪೈಕಿ ಟಾಪ್ 9ನೇ ಸ್ಥಾನ ಪಡೆದು ಮೆರೆದಿತ್ತು
ಈ ಹಾಡು ದೇಶದ ಇತರೆ ಭಾಷೆಗಳ ಚಿತ್ರಗಳ ಮೇಲೂ ಪ್ರಭಾವ ಬೀರಿತ್ತು. 'ಆರ್ಯ' ಚಿತ್ರದ 'ಆ ಅಂಟೆ ಅಮಲಾಪುರಂ' ಹಾಡು, ಕನ್ನಡದ ಕೆಲವು ಚಿತ್ರಗಳ ಹಾಡುಗಳಲ್ಲೂ ಇದೇ ಥರದ ರೈಲು ಮೇಲಿನ ನೃತ್ಯಗಳನ್ನು ನಿರ್ದೇಶಿಸಲಾಯ್ತು.
'ಶೋಲೆ' ಚಿತ್ರದಲ್ಲಿ ರೈಲಿನಲ್ಲಿ ನಡೆಯುವ ಆ್ಯಕ್ಷನ್ ಸನ್ನಿವೇಶಗಳನ್ನು ಮೈನವಿರೇಳಿಸುವಂತೆ ಚಿತ್ರಿಸಲಾಗಿತ್ತು .
ಕನ್ನಡದ ಮುರಳಿ ವಿಜಯ್ ರಾಘವೇಂದ್ರ ಅಭಿನಯದ 'ಮಿಂಚಿನ ಓಟ' ಚಿತ್ರದಲ್ಲೂ ರೈಲಿನ ಮೇಲೆ ಜೀಪ್ ಜಂಪ್ ಮಾಡುವ ಭರ್ಜರಿ ಸನ್ನಿವೇಶವಿತ್ತು
ಬಾಲಿವುಡ್ನ ಮತ್ತೊಂದು ಹಿಟ್ ಚಿತ್ರ 'ಜಬ್ ವಿ ಮೆಟ್' ಕೂಡ ರೈಲು ನಿಲ್ದಾಣದಲ್ಲಿ ಓಪನ್ ಆಗುವ ಕಥೆ. ರೈಲು ತಪ್ಪಿಸಿಕೊಂಡ ಹೀರೋಯಿನ್, ಬದುಕಿನ ಹಳಿ ತಪ್ಪಿಸಿಕೊಂಡ ಹೀರೋವಿನ ಜೊತೆ ಸೇರಿ ಇಬ್ಬರೂ ಬದುಕಲ್ಲಿ ಗೆದ್ದು ಪ್ರೀತಿಸಿ ಒಂದಾಗುವ ರೊಮ್ಯಾಂಟಿಕ್ ಲವ್ ಸ್ಟೋರಿಗೆ ರೈಲಿನ ಸಾರಥ್ಯವಿತ್ತು.
ಇದರದೇ ಸ್ಪೂರ್ತಿ ಎಂಬಂತೆ ಕಾಣುತ್ತಿದ್ದ ದೃಶ್ಯಗಳನ್ನು ಹೊಂದಿದ್ದ ಕನ್ನಡದ 'ಜಸ್ಟ್ ಮಾತ್ಮಾತಲ್ಲಿ' ಚಿತ್ರದಲ್ಲಿ ಕೂಡ ಮೊದಲಾರ್ಧದ ಹಲವು ದೃಶ್ಯಗಳಲ್ಲಿ ರೈಲಿನದ್ದೇ ಪಾರುಪತ್ಯ. ರವಿಚಂದ್ರನ್ ಅಭಿನಯದ 'ಯಾರೇ ನೀನು ಚೆಲುವೆ' ಚಿತ್ರ ಶುರುವಾಗುವುದು ರೈಲು ನಿಲ್ದಾಣದಲ್ಲಿ. ಮುಗಿಯುವುದು ಕೂಡ ರೈಲಿನ ಎದುರಲ್ಲೇ. 'ಚಕ್ಕೋತಾ ಚಕ್ಕೋತಾ' ಹಾಡು ರೈಲ್ವೆ ಸ್ಟೇಷನ್ನಿನಲ್ಲಿ ಚಿತ್ರಿತವಾಗಿದ್ದು ನೆನಪಿಸಿಕೊಳ್ಳಬಹುದು. ರವಿಚಂದ್ರನ್ದೇ ಅಭಿನಯದ 'ಓ ನನ್ನ ನಲ್ಲೆ', 'ಓ ಪ್ರೇಮವೇ' ಚಿತ್ರಗಳಲ್ಲೂ ರೈಲಿನೊಂದಿಗೆ ಚಿತ್ರ ಆರಂಭವಾಗುತ್ತದೆ. ಮನೆದೇವ್ರು ಚಿತ್ರದ ಕ್ಲೈಮ್ಯಾಕ್ಸ್ ಕೂಡ ರೈಲುನಿಲ್ದಾಣದಲ್ಲಿ ಜರುಗುತ್ತದೆ. ಇತ್ತೀಚಿನ ನಾನು ನನ್ನ ಕನಸು ಚಿತ್ರದ ಕ್ಲೈಮ್ಯಾಕ್ಸ್ ಸಹ ರೈಲು ನಿಲ್ದಾಣದಲ್ಲಿ ಪ್ರಕಾಶ್ ರೈ ಮಗಳನ್ನು ಬೀಳ್ಕೊಡುವ ಭಾವನಾತ್ಮಕ ಸನ್ನಿವೇಶದೊಂದಿಗೆ ನೆನಪಲ್ಲಿ ಉಳಿಯುವಂಥದ್ದು. ತೆಲುಗಿನಲ್ಲಿ ಬಾಲಕೃಷ್ಣ ನಟಿಸಿದ ಚಿತ್ರವೊಂದರಲ್ಲಿ ತೊಡೆ ತಟ್ಟಿ ರೈಲನ್ನೇ ವಾಪಸ್ ಕಳಿಸುವ ಉತ್ಪ್ರೇಕ್ಷಾ ದೃಶ್ಯಗಳೂ ಇವೆ.
ಇದು ಟ್ರೈನ್ ಚಿತ್ರಗಳ ಬಗ್ಗೆ ಒಂದು ಟ್ರೈಲರ್ ಅಷ್ಟೇ. ನೀವೇ ಪಟ್ಟಿ ಮಾಡುತ್ತಾ ಹೋದರೆ ಅಥವಾ ಒಮ್ಮೆ ಗೂಗಲ್ ಹೊಕ್ಕರೆ ಕಮ್ಮಿ ಅಂದರೂ ನೂರು ಸೂಪರ್ ಅನಿಸುವ ಸಿನಿಮಾಗಳು ರೈಲು ಪಾತ್ರಧಾರಿ ಆಗಿರುವ ಚಿತ್ರಗಳೇ ಸಿಗುತ್ತವೆ. ಒಮ್ಮೆ ಹುಡುಕಿ ನೋಡಿ. ರೈಲ್ವೇ ಬಜೆಟ್ ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ರೈಲು ಸಿನಿಮಾಗಳ ಬಗ್ಗೆ ಒಂದು ಹಿನ್ನೋಟವಿದು ಅಷ್ಟೇ.
= ನವೀನ್