

ಅದೆಷ್ಟೇ ಜಗಮಗ ಹೊಳೆಯುವ ಬಟ್ಟೆಗಳಿರಲಿ, ಕಣ್ಣಿಗೆ ಕುಕ್ಕುತ್ತಿರಲಿ, ಖಾದಿ ಬಟ್ಟೆ ಮಾತ್ರ ತನ್ನ ಸ್ಥಾನವನ್ನು ವಿಶೇಷವಾಗಿಯೇ ಕಾಯ್ದುಕೊಂಡಿದ್ದು ಸುಳ್ಳಲ್ಲ. ನೂರು ಬಟ್ಟೆಗಳ ರಾಶಿಯ ನಡುವೆಯೂ ತಾನು ಎಲ್ಲರಿಗಿಂತ ವಿಭಿನ್ನ ಎಂದೇ ಖಾದಿ ಬಟ್ಟೆಯು ಹೇಳುತ್ತದೆ. ರಾಜಕಾರಣಿಗಳು, ಸಮಾಜಸುಧಾರಕರು ಮಾತ್ರ ಈ ಬಟ್ಟೆ ಧರಿಸಬೇಕೆಂಬ ನಿಯಮವಿಲ್ಲ. ಇದು ಹಳೆಯ ಫ್ಯಾಶನ್ ಎಂದು ಮೂಗು ಮುರಿಯಬೇಕಿಲ್ಲ. ಈ ಖಾದಿ ಬಟ್ಟೆಯ ಟೀ-ಶರ್ಟ್, ಹಾಫ್ ಶರ್ಟ್, ಕುರ್ತಾಗಳೆಲ್ಲ 'ಡೀಸೆಂಟ್' ಎಂದು ಕರೆಸಿಕೊಳ್ಳುತ್ತವೆ. ಅಲ್ಲದೇ ಖಾದಿ ಟವೆಲ್, ಬೆಡ್‌ಶೀಟ್ ಮತ್ತು ರಗ್‌ನಂಥವು ಹೆಚ್ಚು ಕಂಫರ್ಟ್.
ಆಯುರ್ವೇದ, ಯೋಗದಂತೆ ಖಾದಿ ಬಟ್ಟೆಯೂ ನಮ್ಮ ದೇಶಕ್ಕೆ ಸಿಕ್ಕ ಉಡುಗೊರೆಯೇ. ಮಹಾತ್ಮಾ ಗಾಂಧೀಜಿಯವರ ಕಾಲದಲ್ಲಿ ಖಾದಿ ಎನ್ನುವುದು ಕೇವಲ ಬಟ್ಟೆಯಾಗಿರಲಿಲ್ಲ. ಅದೊಂದು ಆಂದೋಲನವೇ ಆಗಿತ್ತು. ಸ್ವದೇಶೀ ವಸ್ತುಗಳನ್ನು ಬಳಸಬೇಕೆಂಬ ಕರೆಯನ್ನು ಕೊಟ್ಟಿದ್ದು ಆ ಕಾಲದಲ್ಲಿಯೇ. ಇಂದಿಗೂ ನಮ್ಮ ದೇಶದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಖಾದಿ ಬಟ್ಟೆಯನ್ನು ನೇಯುವವರು 15 ಲಕ್ಷ ಜನರಿದ್ದಾರೆ. ವಾವ್ ಪೆಪೆ, ಲೀ ಎನ್ನುತ್ತಾ ಫಿಕ್ಸಡ್ ರೇಟ್ ಎಂಬ ತಲೆಬರಕ್ಕೆ ಸೈ ಎಂದು ಸಾವಿರಾರು ರುಪಾಯಿಗಳನ್ನು 'ಬ್ರ್ಯಾಂಡೆಡ್' ಹಣೆಪಟ್ಟಿಗೆ ಖಾಲಿ ಮಾಡೋವಾಗ ಅದರಲ್ಲಿ ಕ್ವಾಲಿಟಿ ಇದೆ ಎಂದು ಖುಷಿಯಿಂದಲೇ ಕೊಳ್ಳುವುದೂ ಹೌದು. ಆದರೆ ಯಾಕೋ ಖಾದಿಯಂಥ ಅತ್ಯುತ್ತಮ ಬಟ್ಟೆಗಳನ್ನು ಕೊಳ್ಳೋವಾಗ ಎಷ್ಟು ಸಾರಿ ಮೀನಮೇಷ ಎಣಿಸುತ್ತೇವೆಯೋ ಕಾಣೆ.
ರೇಷ್ಮೆ ಅಥವಾ ಹತ್ತಿಯಿಂದಲೇ ತಯಾರಾಗುವ ಖಾದಿ ಸಂಪೂರ್ಣವಾಗಿ ನೈಸರ್ಗಿಕವಾದದ್ದು. ಬಣ್ಣವೂ ನೈಸರ್ಗಿಕವೇ. ಇದನ್ನು ಎಲ್ಲ ಕಾಲಕ್ಕೂ ಬಳಸಬಹುದು ಹಾಗೂ ಚರ್ಮಕ್ಕೂ ಒಳ್ಳೆಯದು ಎನ್ನುತ್ತಾರೆ ವೈದ್ಯರು. ಟಿಕಲಿಗಳಿಂದಲೋ, ಬಿಂಗಿಗಳಿಂದಲೋ ಫಳಫಳ ಹೊಳೆಯುವ ಬಟ್ಟೆಗಳು ಚುಚ್ಚುತ್ತವೆ ಎಂದಾದರೆ, ಖಾದಿ ಬಟ್ಟೆಯದು ಆ ಭಯವೂ ಇಲ್ಲ.
ದಿನದಿಂದ ದಿನಕ್ಕೆ ಖಾದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚೆಚ್ಚು ಪ್ರಚಾರವೇನೋ ಪಡೆದುಕೊಳ್ಳುತ್ತಿದೆ. ನಮ್ಮ ದೇಶದವರು ಫಾರಿನ್ ಬ್ರ್ಯಾಂಡ್ ಎಂದು ಹೋದರೆ, ನಮ್ಮ ದೇಶದಿಂದ ಪ್ರತಿ ವರ್ಷ ಭಾರಿ ಪ್ರಮಾಣದ ಖಾದಿಯು ಅಮೆರಿಕ ಮತ್ತು ಯುರೋಪ್ ದೇಶಗಳಿಗೆ ರಫ್ತಾಗುತ್ತಿದೆ. ಚೀನಾ ಮತ್ತು ಅಮೆರಿಕದಂಥ ದೇಶದಲ್ಲಿ ಖಾದಿಯನ್ನು ಅಂತಾರಾಷ್ಟ್ರೀಯ ಬ್ರ್ಯಾಂಡಾಗಿ ಮಾಡಲು ಪ್ರಯತ್ನಗಳೂ ನಡೆಯುತ್ತಿವೆ.
ಖಾದಿ ಬಟ್ಟೆಯನ್ನು ಧರಿಸಿದವರಿಗೇ ಗೊತ್ತು ಅದರ ಕರಾಮತ್ತು. ಇರುವ ಪರ್ಸನಾಲಿಟಿಗೆ ಇನ್ನಷ್ಟು ಅಂದ ಕೊಟ್ಟು, ವ್ಯಕ್ತಿತ್ವವನ್ನೂ ಹೆಚ್ಚಿಸುವುದು. ಕಾಟನ್ ಖಾದಿ, ಉಣ್ಣೆ ಖಾದಿ, ರೇಷ್ಮೆ ಖಾದಿ ಮುಂತಾದ ವಿಧಗಳಿದ್ದು ಖಾದಿ ಬಟ್ಟೆ ಹೆಚ್ಚಾಗಿ ಕೊಂಡುಕೊಳ್ಳುವವರು ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿಯೇ. ಆಗ ಗಾಂಧಿ ಜಯಂತಿಯ ಪ್ರಯುಕ್ತ ರಿಯಾಯಿತಿ ಇರುವುದರಿಂದಲೂ ಜನರು ಬರುತ್ತಾರೆ. ಜನರಲ್ಲಿ ಖಾದಿಯ ಬಗ್ಗೆ ಅರಿವು ಕಡಿಮೆ ಇದೆ. ಖಾದಿ ಎಂದು ತಿಳಿದು ಬೇರೆ ಯಾವ್ಯಾವುದೋ ಬಟ್ಟೆಗಳನ್ನು ಕೊಳ್ಳುತ್ತಾರೆ ಎಂದು ಹೇಳುತ್ತಾರೆ ಬೆಂಗಳೂರಿನ ಖಾದಿ ಭಂಡಾರದ ಮ್ಯಾನೇಜರ್ ಎಸ್. ಪುರುಷೋತ್ತಮ್.
ಎಲ್ಲ ಕಾಲದಲ್ಲೂ ಹಾಕಿ ಕೊನೆಗೆ ಹರಿದು ಹೋದರೆ ನೆಲ ಒರೆಸುವ ಬಟ್ಟೆಯಾಗಿಯೂ ಉಪಯೋಗವನ್ನೇ ಕೊಡುವ ಖಾದಿ ನಿಜಕ್ಕೂ ಕಮಾಲ್.