-ದಯಾನಂದ, ಚಿತ್ರದುರ್ಗ
ಕಟ್ಟಡವೊಂದನ್ನು ಬಾರ್ ಅಂಡ್ ರೆಸ್ಟೋರೆಂಟ್ಗೆ ಬಾಡಿಗೆ ಕೊಟ್ಟಿದ್ದು ಅದನ್ನು ವೈದ್ಯರೊಬ್ಬರು ನಡೆಸುತ್ತಿದ್ದಾರೆ. ವೈದ್ಯರು ವ್ಯವಹಾರವನ್ನು ನಡೆಸಬಹುದೇ? ಅವರು ಬಾಡಿಗೆಯನ್ನು ಜಾಸ್ತಿ ಮಾಡಲಾಗಲೀ ಅಥವಾ ಖಾಲಿ ಮಾಡಲಾಗಲಿ ಒಪ್ಪುತ್ತಿಲ್ಲ. ಇದಕ್ಕೆ ಪರಿಹಾರವೇನು?
- ವೈದ್ಯರು ಸ್ವತಃ ಈ ಉದ್ಯೋಗ ಮಾಡಬಾರದು. ಆದರೆ ಬೇರೊಬ್ಬರ ಮೂಲಕ ಈ ವ್ಯವಹಾರ ಮಾಡಿದರೆ ತಪ್ಪೇನೂ ಇಲ್ಲ. ಆದ್ದರಿಂದ ಮೆಡಿಕಲ್ ಅಸೋಸಿಯೇಷನ್ನವರು ನಿಮ್ಮ ಸಹಾಯಕ್ಕೆ ಬರಲಾರರು. ಬಾಡಿಗೆ ಜಾಸ್ತಿಗೆ ಬೇಕಾದರೆ ರೆಂಟ್ ಕಂಟ್ರೋಲ್ ಕೋರ್ಟಿಗೆ ಅರ್ಜಿ ಹಾಕಿ, ಸಹಾಯವಾಗಬಹುದು. ನಿಮಗೆ ಸ್ವಂತಕ್ಕೆ ಬೇಕಾದರೆ ಆ ಜಾಗವನ್ನು ಕೋರ್ಟ್ ಮೂಲಕ ವಾಪಸ್ ಪಡೆಯಬಹುದು.
ಕೋರ್ಟಿಗೆ ಹೋಗಬಹುದು
-ವಿಜಯಲಕ್ಷ್ಮಿ, ಬೆಂಗಳೂರು
ತಂದೆ ನಿಧನರಾಗಿದ್ದು, ಸಹೋದರ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೊಡಲು ಒಪ್ಪುತ್ತಿಲ್ಲ. ನಾನು ನನ್ನ ಪಾಡಿಗೆ ನ್ಯಾಯಾಲಯಕ್ಕೆ ಹೋಗಬಹುದೇ?
- ಪಿತ್ರಾರ್ಜಿತ ಆಸ್ತಿಯಲ್ಲಿ ನಿಮಗೆ ನಿಮ್ಮ ಸಹೋದರನಷ್ಟೇ ಸಮಪಾಲಿದೆ. ಆದ್ದರಿಂದ ದಾವಾ ಹಾಕಿದರೆ ನಿಮಗೆ ಪರಿಹಾರ ಸಿಗುತ್ತದೆ. ಜತೆಗೆ ಈವರೆಗೆ ನಿಮ್ಮ ಸಹೋದರ ಪಡೆದ ಆದಾಯದಲ್ಲೂ ಪಾಲು ಕೇಳಬಹುದು.
ನಿಮ್ಮ ಹೊರತು ಬೇರೆ ಯಾರಿಗೂ ಹಕ್ಕಿಲ್ಲ
-ವತ್ಸಲಾ, ಊರುಬೇಡ
ನಾವು ತಂದೆಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಗಂಡುಮಗ. ತಂದೆ ತಾಯಿ ತೀರಿಕೊಂಡ ನಂತರ ತಂದೆಯ ಆಸ್ತಿಯಲ್ಲಿ ನಮ್ಮ ನಮ್ಮ ಪಾಲನ್ನು ನಾವಿಬ್ಬರೂ ಹೆಣ್ಣುಮಕ್ಕಳು ರಿಲೀಸ್ಡೀಡ್ ಮೂಲಕ ಬರೆದುಕೊಟ್ಟಿದ್ದು ಅದು ನೋಂದಣಿ ಆಗಿದೆ. ಈಗ ಪ್ರಶ್ನೆ ಏನೆಂದರೆ, ನಮ್ಮ ಮಕ್ಕಳು ಈ ಆಸ್ತಿಯಲ್ಲಿ ಪಾಲು ಕೇಳಬಹುದೇ?
- ಹಿಂದೂ ಉತ್ತರಾಧಿಕಾರ ಕಾಯ್ದೆ 1950 ಇದರ ಕಲಂ 14ರಂತೆ ಹೆಣ್ಣುಮಕ್ಕಳಿಗೆ ಅವರ ಆಸ್ತಿಯ ಮೇಲೆ ಸಂಪೂರ್ಣ ಅಧಿಕಾರವಿದ್ದು, ಅದರಲ್ಲಿ ಯಾರಿಗೂ ಪಾಲು ಕೇಳುವ ಹಕ್ಕಿಲ್ಲ. ಆದ್ದರಿಂದ ನಿಮ್ಮ ಮಕ್ಕಳು ಈ ಆಸ್ತಿಯಲ್ಲಿ ಪಾಲು ಕೇಳುವಹಾಗಿಲ್ಲ.
ವಿಲ್ನಂತೆ ನಡೆದುಕೊಳ್ಳಬೇಕು
-ಎಂ. ನಸೀರ್ ಅಹಮದ್, ದಾವಣಗೆರೆ
ತಂದೆ, ತಾಯಿ ಇಬ್ಬರೂ ಮರಣಹೊಂದಿದ್ದು, ತಂದೆ ವಿಲ್ ಬರೆದು ನಮ್ಮ ತಾಯಿಗೆ 1 ಲಕ್ಷ ರು. ಹಾಗೂ ಇಬ್ಬರು ಸಹೋದರಿಯರಿಗೆ ತಲಾ 50 ಸಾವಿರ ರು. ಕೊಡಬೇಕೆಂದು ವಿಲ್ ಮಾಡಿದ್ದಾರೆ. ಈಗ ಆಸ್ತಿ ಹಂಚಿಕೆ ಹೇಗೆ ಮಾಡಿಕೊಳ್ಳಬೇಕು?
- ಮುಸಲ್ಮಾನರ ಕಾನೂನಿನಂತೆ ನಿಮ್ಮ ತಂದೆಯವರು ತಮ್ಮ ಒಟ್ಟು ಆಸ್ತಿಯ 1/3 ಭಾಗಕ್ಕಿಂತ ಹೆಚ್ಚಾಗಿ ವಿಲ್ ಮಾಡುವಂತಿಲ್ಲ. ಹಾಗೆ ಮಾಡಿದರೂ ಅದನ್ನು ಖುರಾನಿಕ್ ಉತ್ತರಾಧಿಕಾರಿ ಅಂದರೆ ನಿಮ್ಮ ಪ್ರಕರಣದಲ್ಲಿ ತಾಯಿಗೆ ಬರೆಯುವಂತಿಲ್ಲ. ಗಂಡುಮಕ್ಕಳಿರುವುದರಿಂದ ಹೆಣ್ಣುಮಕ್ಕಳು ರೆಸಿಡೆನ್ಸಿಯರಿ (ಉಳಿಕೆ ಆಸ್ತಿಯ ವಾರಸುದಾರರು ಆಗುತ್ತಾರೆ. ಆದ್ದರಿಂದ ಅವರಿಗೆ ವಿಲ್ನಂತೆ ಹಣ ಕೊಡಬೇಕು. ಅದನ್ನು ಆಸ್ತಿ ವಿಭಾಗಕ್ಕೆ ಮೊದಲೇ ಕೊಡಬೇಕು. ಉಳಿದ ಆಸ್ತಿಯಲ್ಲಿ 2/3 ಭಾಗ ಗಂಡುಮಕ್ಕಳಿಗೂ (ಎಲ್ಲರೂ ಸೇರಿ) ಉಳಿದ 1/3 ಭಾಗ ಹೆಣ್ಣುಮಕ್ಕಳಿಗೂ ವಿಭಾಗವಾಗಬೇಕಾಗುತ್ತದೆ.
-ಎಚ್.ಆರ್. ಕಸ್ತೂರಿರಂಗನ್