ವಾಸ್ತವ ಚೌಕಟ್ಟು, ಅದ್ಭುತ ಕಲ್ಪನೆ

ಅಮೆರಿಕನ್ನರು 1977ರಲ್ಲಿ ವಾಯೇಜರ್ ಎಂಬ ಗಗನನೌಕೆಯನ್ನು ಅಂತರಿಕ್ಷಕ್ಕೆ ತೇಲಿಬಿಟ್ಟರು. ಅದರಲ್ಲಿ ಮಾನವರಿರಲಿಲ್ಲ. ಅದರ ಉದ್ದೇಶ: ನಿರಂತರವಾಗಿ ಬಾಹ್ಯಾಕಾಶದಲ್ಲಿ ಸಂಚರಿಸುತ್ತಾ ಅಲ್ಲಿನ ಚಿತ್ರಗಳನ್ನು ತೆಗೆದು ಭೂಮಿಗೆ ರವಾನಿಸುತ್ತಿರುವುದು. ಬಾಹ್ಯಾಕಾಶದ ನೋಟವನ್ನು ಇಲ್ಲೇ ಕುಳಿತು ನಾವು ಮಾಡಬಹುದು ಎಂಬುದು ಇದರ ಉಪಯೋಗ. ಈ ನೌಕೆಯ ವೇಗ ಸೆಕೆಂಡಿಗೆ 17 ಕಿಲೋಮೀಟರ್. 37 ವರ್ಷಗಳಿಂದ ಚಲಿಸುತ್ತಿರುವ ಈನೌಕೆ 2012ರಲ್ಲಷ್ಟೇ ಸೌರವ್ಯಾಹವನ್ನು ದಾಟಿ ಆಚೆ ಹೋಗಿದೆ. ಅಂದರೆ ಸೌರಮಂಡಲದ ಅಗಾಧ ಗಾತ್ರವನ್ನೂ ಅದರಾಚೆಗಿನ ವಿಶ್ವದ ವ್ಯಾಪ್ತಿ ಇತ್ಯಾದಿಗಳನ್ನೂ ನೀವು ಊಹಿಸಿಕೊಳ್ಳಬಹುದು.
ಎಸ್.ಎಲ್.ಭೈರಪ್ಪನವರು ತಮ್ಮ 'ಯಾನ' ಕಾದಂಬರಿಯಲ್ಲಿ ಇಂಥದೇ ಒಂದು ನೌಕೆಯನ್ನು ಕಲ್ಪಿಸಿಕೊಂಡಿದ್ದಾರೆ. ಅದೂ ಕೂಡ ಸೆಕೆಂಡಿಗೆ 17 ಕಿ.ಮೀ.ವೇಗದಲ್ಲಿ ಚಲಿಸುತ್ತದೆ. ಆದರೆ ಅಲ್ಲಿ ವಾಯೇಜರ್ನ ಹಾಗಲ್ಲದೆ, ಮನುಷ್ಯರಿದ್ದಾರೆ. ಕಾದಂಬರಿಯ ಘಟನೆಗಳು ನಡೆಯುತ್ತಿರುವ ಹೊತ್ತಿಗೆ, ನೌಕೆ ಹೊರಟು 37 ವರ್ಷಗಳಾಗಿವೆ. ಅದು 20 ದಶಲಕ್ಷ ಕಿಲೋಮೀಟರ್ ಚಲಿಸಿದೆ.
ಇಷ್ಟು ದೂರ, ಜತೆವಾಸಿಗಳಾದ ಮನುಷ್ಯರು ಬಂಧುಗಳು ಗೆಳೆಯರಿಲ್ಲದೆ ಚಲಿಸುತ್ತಲೇ ಇರುವ ಆ ಮನುಷ್ಯರ ಬದುಕು, ಪಾಡು, ತಲ್ಲಣ, ಸಂಬಂಧ, ಘರ್ಷಣೆಗಳು ಸಹಜವಾಗಿಯೇ ಕುತೂಹಲದ ವಸ್ತು. ಸೌರಮಂಡಲದ ವ್ಯಾಪ್ತಿಯಲ್ಲಿ ನಾವು ಕಟ್ಟಿಕೊಂಡ ಎಲ್ಲ ನೈತಿಕ ಕಟ್ಟುಪಾಡುಗಳೂ ಅಲ್ಲಿ ಔಚಿತ್ಯ ಕಳೆದುಕೊಂಡು ಬೇರೆಯದೇ ರೂಪ ಪಡೆಯುವುದನ್ನು ಭೈರಪ್ಪನವರ ಶೈಲಿಯಲ್ಲಿ ಓದಿ ಅನುಭವಿಸುವುದೇ ಒಂದು ರೋಚಕ ಅನುಭವ.
ಅವರ ನೌಕೆಯಲ್ಲಿ ಮೂರು ಮಹಡಿಗಳಿವೆ. ಒಂದರಲ್ಲಿ ಆವಾಸ, ಇನ್ನೊಂದರಲ್ಲಿ ಯಂತ್ರಗಳು ಇವೆ. ಆ ಮಹಡಿಗಳಲ್ಲಿ ಗುರುತ್ವಾಕರ್ಷಣೆಯಿಲ್ಲ. ಆದರೆ ಗುರುತ್ವಾಕರ್ಷಣೆಯಿಲ್ಲದ ವಾತಾವರಣದಲ್ಲೇ ಸದಾ ಇದ್ದರೆ ಮನುಷ್ಯನ ಮೂಳೆಗಳು ಬೇಗ ಸವೆದು ಆತ ಶಿಥಿಲವಾಗುತ್ತಾನೆ. ಇದನ್ನು ಮನಸ್ಸಲ್ಲಿಟ್ಟುಕೊಂಡು ಕಾದಂಬರಿಕಾರರು ಇನ್ನೊಂದು ಮಹಡಿಯಲ್ಲಿ ಗುರುತ್ವಾಕರ್ಷಣೆಯಿರುವ ಆವರಣವನ್ನು ಸೃಷ್ಟಿಸಿಕೊಂಡಿದ್ದಾರೆ. ಅಲ್ಲಿ ಭೂಮಿಯಂತೆಯೇ ಕೃಷಿ ಮಾಡುವ ವಿವರಗಳೆಲ್ಲ ಇವೆ.
ಕಾದಂಬರಿಕಾರ ತನ್ನ ಕೃತಿಯಲ್ಲಿ ಎಷ್ಟು ಬೇಕಾದರೂ ಸ್ವಾತಂತ್ರ್ಯ ವಹಿಸಬಹುದು. ಆದರೆ ಭೈರಪ್ಪನವರು ಹಾಗೆ ಮಾಡಲು ಹೋಗಿಲ್ಲ. ಅವರು ಕತೆಯನ್ನು ರೋಮಾಂಚನಕಾರಿಯಾಗಿ ಬೆಳೆಸಿದ್ದಾರೆ, ಆದರೆ ಭೌತಶಾಸ್ತ್ರದ ಯಾವ ನಿಯಮಗಳನ್ನೂ ಉಲ್ಲಂಘಿಸಿಲ್ಲ. ಅನೇಕ ಇಂಗ್ಲಿಷ್ ಕಾದಂಬರಿಕಾರರು ಬರೆದ ಕತೆಗಳು ಭವಿಷ್ಯದಲ್ಲಿ ನಿಜವಾಗಿವೆ. ಭೈರಪ್ಪನವರ ಕತೆಯೂ ಮುಂದಿನ ಐವತ್ತು ವರ್ಷಗಳ ನಂತರ ನಿಜವಾಗಬಹುದೋ ಏನೋ.
ಭೈರಪ್ಪನವರ ಕಾದಂಬರಿಯನ್ನು ಹಸ್ತಪ್ರತಿಯಲ್ಲೇ ಓದಿ ನಾನು ಖುಷಿಪಟ್ಟಿದ್ದೇನೆ, ಮೂಕವಿಸ್ಮಿತನಾಗಿದ್ದೇನೆ. ಕೃತಿಗಾಗಿ ಅವರು ಮಾಡಿಕೊಂಡ ಸಮಗ್ರ ಅಧ್ಯಯನ ಎಲ್ಲ ಲೇಖಕರಿಗೂ ಮಾದರಿ. ಅವರು ನಮ್ಮ ಕಾಲದ ಗ್ರೇಟ್ ರೈಟರ್. ಈ ಕಾದಂಬರಿಯಲ್ಲಿ ನೌಕೆಯಲ್ಲಿರುವ ಮೊದಲ ಪೀಳಿಗೆಯ ಕತೆ ಇದೆ. ಮುಂದಿನ ಪೀಳಿಗೆಯ ಕತೆಯನ್ನೂ ಅವರೇ ಬೆಳೆಸಿ 'ಯಾನ- ಭಾಗ 2'ನ್ನೂ ಬರೆದರೆ ಚೆನ್ನಾಗಿರುತ್ತದೆ.
-ಸತೀಶ್ ಎಸ್ , ಇಸ್ರೋ ನಿವೃತ್ತ ವಿಜ್ಞಾನಿ
1952satish@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


