ಉರಿದುರಿದು ಬೂದಿಯಾಗಿದೆ ವೈಶಾಖ
ಸೊಕ್ಕಿದ ಬಿಸಿಲು ಸುಂದರಿ ಉಕ್ಕಿ ಇಳಿದಿದ್ದಾಳೆ
ಬಾಡಿದ ಬಾನು ಮೊಗದಿ ಆಗಾಗ ಕಪ್ಪಡರುವ ಮೋಡ
ಎಲ್ಲಿಂದಲೋ ಹಾರಿ ಬರುವ ಹಳೆ ನೆನಪಂತ ಜುಮುರು ಮಳೆ
ಯಜಮಾನ ಎದ್ದು ಹೋದ ಮನೆಯ ಗುರ್ರೆಂಬ
ಆಳುಗಳಂತೆ ಎಲ್ಲ ದಿಕ್ಕಿಗೂ ತಲೆಯಾಡಿಸುವ ಮರ
ಆಟದ ಮರು ಬೆಳಗು ಒಂದೊಂದೇ ಗಳ ಕಳಚುವಂತೆ
ಹೂ- ಹೀಚೂ ಇಲ್ಲದೆ ಭರ್ರನೆ ಗಾಳಿಗೆ ಸುಮ್ಮನೆ ಮೈ ಚಾಚಿದೆ
ಹಳೆ ಕೋಪದ ಶಾಖ ಕಾದಲ್ಲೇ ಹೆಪ್ಪಾಗಿ ಧುಮುಧುಮು
ಗುಡುಗಿ ಫಳ್ಳನೆ ಮಿಂಚು ದಾರಿ ಹೊಳೆದ ಬೆಳಕು
ಕಸಿವಿಸಿ ಕೊಚ್ಚಿ ಹರಿವ ಮಳೆಗೆ ಪ್ರತಿ ಕಾಲುವೆಯೂ
ಕಡಲಾಗುವ ಅಬ್ಬರ ಕೊಳೆ ಕಳೆದ ಗಿಡದ ಪ್ರತಿ ಎಲೆಯೂ
ಫಳಫಳ ಹೊಳೆದು ನೀರುರಾಗ ಹಾಡುತ್ತದೆ
ಅಲ್ಲೆಲ್ಲೋ ಕಿನಾರೆಯಲ್ಲಿ ಕಡಲಿಗೆ ಮುಂಗಾರು ಇಳಿದರೆ
ಇಲ್ಲಿ ಅಂಗಡಿ ಮುಚ್ಚಿ ಹೊದ್ದು ಮಲಗುವ ಸೂರ್ಯ
ಕಪಾಟಿನಿಂದ ತೆಗೆದ ಕೊಡೆಯ ಕುದುರೆ ಸರಿಯಿದೆಯೇ
ನೋಡುವ ಅಜ್ಜನ ಸ್ವೆಟರಿನ ಗುಂಡಿ ದಾರ ಹರಿದು ನಡುಗುತ್ತಿದೆ
ಗಾಳಿ ಹೊಡೆತಕ್ಕೆ ಬಾಗಿಲು ಮುಚ್ಚಿದ ಬಾಲ್ಕನಿಯ ಹಗ್ಗದ
ಮೇಲೆ ಒಂಟಿ ನೇತಾಡುವ ಹಳೆ ಶರ್ಟು
ರಿಟೈರ್ಡ ಅಕ್ಕೋರು ಕಲಿಸದೇ ಬಿಟ್ಟ ಡ್ಯಾನ್ಸು ನೆನಪಾಗಿ
ಒಂದು ಕ್ಷಣ ಉಣ್ಣುವುದ ನಿಲ್ಲಿಸಿ ಲೊಚಗುಡುತ್ತಾರೆ
ಹೆಪ್ಪುಗಟ್ಟಿದ ಕಪ್ಪು ರಾತ್ರಿಗಳಲ್ಲಿ ನೆನಪಾದ ಹಳೇ
ಸೇಡಿನಂತೆ ಎಡವಿದ ಬೆರಳಿನ ಗಾಯದಂತೆ
ಜೊರ್ರನೆ ಸುರಿಯುತ್ತದೆ ಅಬ್ಬರದ ಮಳೆ
ಶ್ರಾವಣದ ನಿರೀಕ್ಷೆಯನ್ನೇ ತಬ್ಬಿ ಮಲಗುತ್ತಾರೆ
ಅಗಲಿದ ಗಂಡ- ಹೆಂಡಿರು ಮತ್ತು ದೇವರು.
= ಪ್ರಜ್ಞಾ ಮತ್ತೀಹಳ್ಳಿ
prajna.mattihalli@rediffmail.com