ಆ ಕಾಡಿನಲ್ಲಿ ಪಾರಿವಾಳಗಳು ಒಗ್ಗಟ್ಟಾಗಿದ್ದವು. ಬುದ್ಧಿವಂತ ಪಾರಿವಾಳ ಅವಕ್ಕೆಲ್ಲ ನಾಯಕ. ಪ್ರತಿ ಬಾರಿ ನಾಯಕ ಕರೆದರೆ ಎಲ್ಲವೂ ಒಟ್ಟಾಗುತ್ತಿದ್ದವು. ಬೇಟೆಗಾರನೊಬ್ಬ ನಿತ್ಯ ಇವುಗಳ ಚಲನೆ ಗಮನಿಸಿ ನಾಯಕ ಪಾರಿವಾಳ ಹೇಗೆ ಉಳಿದವನ್ನು ಕರೆಯುತ್ತದೆ ಎಂಬುದನ್ನು ಕಲಿತು ಅನುಕರಿಸಿದ. ಕೂಡಲೇ ಹಲವು ಪಾರಿವಾಳಗಳು ಹಾರಿಬಂದವು. ಅವೆಲ್ಲ ಒಂದೆಡೆ ಕುಳಿತಿದ್ದೇ ತಡ, ಬೇಟೆಗಾರ ಬಲೆ ಬೀಸಿದ. ಅವೆಲ್ಲವನ್ನೂ ಮಾರಿ ಒಳ್ಳೆ ಹಣ ಪಡೆದ. ಇದು ಮತ್ತೊಂದೆರಡು ಬಾರಿ ಪುನಾರಾವರ್ತನೆಯಾದುದನ್ನು ಕಂಡ ನಾಯಕ ಪಾರಿವಾಳ ಉಪಾಯ ಮಾಡಿ ತನ್ನ ಬಳಗವನ್ನೆಲ್ಲ ಕರೆದು ಹೇಳಿತು; 'ಮುಂದಿನ ಬಾರಿ ಅವನು ಬಲೆ ಬೀಸಿದರೆ ಎಲ್ಲರೂ ಒಟ್ಟಾಗಿ ಬಲೆಯೊಂದಿಗೆ ಹಾರಿಬಿಡಿ. ನಂತರ ಮುಳ್ಳುಪೊದೆಗಳ ಮೇಲೆ ಬಲೆಯಿಟ್ಟು ಕೆಳಗಿನಿಂದ ತಪ್ಪಿಸಿಕೊಳ್ಳಿ'. ಮತ್ತೆ ಬೇಟೆಗಾರ ಬಲೆ ಬೀಸಿದಾಗ ಎಲ್ಲ ಪಾರಿವಾಳಗಳೂ ನಾಯಕ ಹೇಳಿದಂತೆಯೇ ನಡೆದುಕೊಂಡು ಬಚಾವಾದವು. ಒಂದು ದಿನ ಪಾರಿವಾಳಗಳ ನಡುವೆ ಜಗಳವಾಗಿ, ಒಂದನ್ನು ಕಂಡರೆ ಮತ್ತೊಂದಕ್ಕೆ ಆಗದಂಥ ಸ್ಥಿತಿ ನಿರ್ಮಾಣವಾಯಿತು. ಅದೇ ಬೇಟೆಗಾರ ಬಂದು ಪುನಃ ಬಲೆ ಹಾಕಿದ. ಆಗ ಅಲ್ಲಿದ್ದ ಪಾರಿವಾಳಗಳು ಪರಸ್ಪರ 'ನೀನೇ ದೊಡ್ಡವನೆಂದೆಯಲ್ಲ, ಈಗ ನೀನೇ ಬಲೆ ಎತ್ತಿ ಹಾರು ನೋಡೋಣ' ಎಂದು ಹೇಳಿಕೊಂಡು, ಅಲ್ಲೇ ಕುಳಿತವು. ಬೇಟೆಗಾರ ಬಂದವನೇ ಎಲ್ಲವನ್ನೂ ಹಿಡಿದು, ಪೇಟೆಗೊಯ್ದ.