ಬಹುಮುಖಿ ಜಾನಪದದ ಅನನ್ಯ ದರ್ಶನ

Updated on: 

ದೇಶೀ ಸಂಸ್ಕೃತಿಯ ಮೂಲವನ್ನು ಶೋಧಿಸುವ ಮತ್ತು ಅದರ ಹರವು ವಿಸ್ತಾರಗೊಳ್ಳುವಂತೆ ಮಾಡುವ ಉದ್ದೇಶದೊಂದಿಗೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು 'ಕರ್ನಾಟಕ ಸಂಶೋಧನಾ ಜಾನಪದ' ಎಂಬ ಬೃಹತ್ ಸಂಪುಟವನ್ನು ಪ್ರಕಟಿಸಿದೆ. ಇದರ ಪ್ರಧಾನ ಸಂಪಾದಕರು ಪ್ರೊ. ಅಂಬಳಿಕೆ ಹಿರಿಯಣ್ಣ ಹಾಗೂ ಸಂಪಾದಕರು ಪ್ರೊ.ಎ.ವಿ. ನಾವಡ. ಡೆಮ್ಮಿ 1/4 ಆಕಾರದ 1120 ಪುಟಗಳ ಬೃಹತ್ ಗ್ರಂಥ ಇದು.
ಬಹುಭಾಷಿಕ ಹಾಗೂ ಬಹು ಸಂಸ್ಕೃತಿಯ ನಾಡಿನಲ್ಲಿ ಇನ್ನೂ ಅನಾವರಣಗೊಳ್ಳಬೇಕಾದ ಜ್ಞಾನಸಂಪತ್ತು ಅಗಾಧ ಪ್ರಮಾಣದಲ್ಲಿದೆ. ಆಗಿರುವ ಕಾರ್ಯಗಳ ಬಗ್ಗೆ ಭಾರೀ ಹಮ್ಮೆಪಟ್ಟುಕೊಳ್ಳುವಂಥದ್ದೇನಿಲ್ಲ ಎಂಬ ವಿನಯದೊಂದಿಗೆ ಈ ಸಂಪುಟದ ಯೋಜನೆಯನ್ನು ರೂಪಿಸಲಾಗಿದೆ. ಆಮದು ಜ್ಞಾನಗಳ ಜೊತೆಗೆ ದೇಶೀ ಜ್ಞಾನವನ್ನು ಪರ್ಯಾಯವಾಗಿ ಬೆಳೆಸುವುದು ಹೇಗೆ? ಶಿಷ್ಟ ಭಾಷೆಯ ಜೊತೆಯಲ್ಲಿ ಮೌಖಿಕ ಸಂಕಥನವನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತನೆ ಈ ಸಂಪಾದನೆಯ ಹಿಂದಿದೆ.
ಜಾನಪದವೆಂದರೆ ಹಳ್ಳಿ ಜನರಲ್ಲಿರುವ ಜ್ಞಾನವನ್ನು ಸಂಗ್ರಹಿಸಿಟ್ಟು ಮುಂದಿನವರಿಗೆ ಬಿಟ್ಟುಹೋಗುವುದು ಎಂಬ ಪ್ರಾಥಮಿಕ ತಿಳಿವಳಿಕೆಯ ಆಚೆಗೆ ವಿಶಾಲವಾದ ಅರ್ಥದಲ್ಲಿ ಗ್ರಹಿಸಬೇಕಾಗಿದೆ. ಜಾನಪದವೆಂದರೆ ಎಲ್ಲವನ್ನೂ ಅಖಂಡವಾಗಿ ಅನುಸರಿಸಿದ ಒಂದು ಜೀವನ ವಿಧಾನ; ಜ್ಞಾನವನ್ನು ವಿಶೇಷ ರೀತಿಯಲ್ಲಿ ಹಂಚಿಕೊಂಡಿರುವ ಒಂದು ತವನಿಧಿ ಎಂಬ ಅರಿವಿನೊಂದಿಗೆ ಇಲ್ಲಿಯ ಸಂಪಾದನೆ ಕಾರ್ಯ ನಡೆದಿದೆ ಎಂದು ಪ್ರೊ. ಅಂಬಳಿಕೆ ಹಿರಿಯಣ್ಣ ಹೇಳಿದ್ದಾರೆ.
ಕನ್ನಡ ಜಾನಪದದ ಅಧ್ಯಯನದ ತಾತ್ವಿಕ ನೆಲೆಗಳನ್ನು ಗುರುತಿಸುವ ಪ್ರೊ. ಎ.ವಿ. ನಾವಡ ಅವರು, 'ಜಾನಪದ ಅಧ್ಯಯನವು ಯುರೋಪಿಯನ್ ಮಾದರಿಯ ಜೊತೆಗೆ ದೇಶೀಯ ಪರಿಕರಗಳನ್ನು ಬಳಸಿಕೊಂಡು ಹೊರಮೈಯನ್ನು ಪಡೆದುಕೊಂಡಿತು... ನಮ್ಮ ಜಾನಪದವೆಂಬುದು ಬೇರೆ ಬೇರೆ ಕಾಲಗಳಲ್ಲಿ, ಸ್ಥಳಗಳಲ್ಲಿ ಮತ್ತು ಸ್ಥಿತಿಗಳಲ್ಲಿ ಬದುಕುತ್ತಿರುವ ಜನಪದಗಳ ಜೀವನ ವಿಧಾನ ಎಂದು ಕರೆಯಬಹುದು. ಇದು ಈ ದೇಶದ ದೇಶಿ. ಎಂದರೆ ಬಹುತರದಲ್ಲಿ ಬದುಕುತ್ತಿರುವ ಬಹುಸಂಸ್ಕೃತಿಗಳ ನಿತ್ಯದ ಜೀವನವಿಧಾನ. ಆದ್ದರಿಂದ ಪಾಶ್ಚಾತ್ಯ ಜಾನಪದ ಎಂಬ ಪದ ನಮ್ಮ ದೇಶಿ ಎಂಬ ಪದಕ್ಕೆ ಸಮಾನಾರ್ಥಕ ಅಲ್ಲ. ನಮ್ಮ ದೇಶಿ ಪರಿಕಲ್ಪನೆ ಜಾನಪದ ಪರಿಕಲ್ಪನೆಗಿಂತ ವಿಸ್ತಾರವಾದ ಅರ್ಥವ್ಯಾಪ್ತಿಯನ್ನು ಉಳ್ಳದ್ದು. ಹಾಗೂ ಸಜೀವ ಜೀವನಕ್ರಮವನ್ನು ಕುರಿತದ್ದು. ಈ ಆಲೋಚನೆಯನ್ನು ಅಷ್ಟಾಗಿ ಗ್ರಹಿಸದೆ ಅಮೆರಿಕೆಯ ಮಾನವ ವಿಜ್ಞಾನಿ ಮರಿಯಾಲೀಚ್ ಅವರ ನಿಘಂಟಿನಲ್ಲಿ ನೀಡಿದ ನಿರ್ವಚನವನ್ನೇ ಕನ್ನಡ ಜಾನಪದಕ್ಕೆ ಅನ್ವಯಿಸುವ ಪ್ರಯತ್ನ ನಡೆಯಿತು. ಆದರೆ ಬೇಗನೇ ಕನ್ನಡ ಜಾನಪದವು ಅನ್ಯವನ್ನು ಜೀರ್ಣಿಸಿಕೊಳ್ಳುವ, ಆ ಮೂಲಕ ಅನನ್ಯವಾಗುವ ಪ್ರಕ್ರಿಯೆಗೆ ಒಳಗಾಯಿತು' ಎಂಬ ಮಾತನ್ನು ಹೇಳಿದ್ದಾರೆ.
ಕನ್ನಡ ಜಾನಪದ ಅಧ್ಯಯನ ಕಾಲದಿಂದ ಕಾಲಕ್ಕೆ ಹೇಗೆ ತನ್ನ ಚಹರೆಯನ್ನು ಬದಲಾಯಿಸಿಕೊಳ್ಳುತ್ತ ನಡೆಯಿತು ಎಂಬ ಬಗ್ಗೆ ಅವರು ಹದಿನೈದು ಅಂಶಗಳನ್ನು ಗುರುತಿಸಿದ್ದಾರೆ. ಬ್ರಿಟಿಷರು ಬಂದ ಬಳಿಕ ನಮ್ಮ ಸ್ಥಳೀಯ ಜ್ಞಾನ- ತಂತ್ರಜ್ಞಾನ ಪರಂಪರೆ ನಮ್ಮಿಂದ ದೂರವಾಯಿತು. ಅವರ ಜ್ಞಾನವನ್ನೇ ನಮಗೆ ಅರೆದು ಕುಡಿಸಿ ಅದುವೇ ಶ್ರೇಷ್ಠ ಹಾಗೂ ಅನಿವಾರ್ಯ ಎಂಬ ಭ್ರಮಾತ್ಮೀಕರಣಕ್ಕೆ ನಮ್ಮನ್ನು ಒಳಗು ಮಾಡಿದರು ಎಂಬ ಮಾತನ್ನೂ ನಾವಡ ಅವರು ಬರೆದಿದ್ದಾರೆ.
ಈ ದೇಶದ ಮತ್ತು ಕರ್ನಾಟಕದ ಜಾನಪದ ಸಂಗ್ರಹದಲ್ಲಿ ಪಾಶ್ಚಾತ್ಯ ವಿದ್ವಾಂಸರದೂ ಮಹತ್ವದ ಪಾಲಿದೆ. ಹದಿನೆಂಟನೆ ಶತಮಾನದಲ್ಲೇ ರಾಯಲ್ ಏಶಿಯಾಟಿಕ್ ಸೊಸೈಟಿಯನ್ನು ಸ್ಥಾಪಿಸಿದ ಸರ್ ವಿಲಿಯಂ ಜೋನ್ಸ್ ಎಂಬವರನ್ನು ಸ್ಮರಿಸಲೇಬೇಕು. ಈ ಸೊಸೈಟಿಯ ಮೂಲಕವೇ ಅವರು ಏಶಿಯಾಟಿಕ್ ಮಿಸೆಲನಿ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಏಶಿಯಾದ ಇತಿಹಾಸ, ನಾಗರಿಕ ಮತ್ತು ನಿಸರ್ಗ, ಪ್ರಾಚೀನ ಅವಶೇಷಗಳು, ಕಲೆ ವಿಜ್ಞಾನ ಮತ್ತು ಸಾಹಿತ್ಯವನ್ನು ಸಂಶೋಧನೆ ಮಾಡುವ ಉದ್ದೇಶದಿಂದ ಈ ಸಂಸ್ಥೆಯನ್ನು ಅವರು ಪ್ರಾರಂಭಿಸಿದ್ದರು. ಜ್ಞಾನದ ಕ್ಷಿತಿಜವನ್ನು ವಿಸ್ತರಿಸುವ ಉದ್ದೇಶದ ಈ ಪ್ರಯತ್ನ ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿ ಒಂದು ಮೈಲಿಗಲ್ಲು ಎಂಬ ಹೊಗಳಿಕೆಗೆ ಪಾತ್ರವಾಗಿತ್ತು. ಎಲ್ಲ ದೇಶಿ ಜ್ಞಾನವನ್ನು ಕಲೆಹಾಕಲು ಈ ಸೊಸೈಟಿ ಮತ್ತು ಪತ್ರಿಕೆ ಪ್ರಯತ್ನಿಸಿತು. ಇದರ ಕುಡಿಗಳು ಕನ್ನಡದಲ್ಲೂ ಒಡೆದವು. ಸಂಶೋಧನಾ ಜಾನಪದದ ಬೀಜಗಳು ಈ ಸರ್ ವಿಲಿಯಂ ಜೋನ್ಸ್ ಅವರಲ್ಲಿವೆ.
ಪಾಶ್ಚಾತ್ಯ ವಿದ್ವಾಂಸರ ಸೇವೆಯನ್ನು ನಾವಡರು ಪ್ರಸ್ತಾವನೆಯಲ್ಲಿ ನೆನಪಿಸಿದ್ದಾರೆ. ಇಲ್ಲಿಯ ಏಳು ಹೆಜ್ಜೆಗಳಲ್ಲಿ ಹಬ್ಬಿರುವ 126 ಲೇಖನಗಳಲ್ಲಿ ವೈವಿಧ್ಯವಿದೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್‌ರಿಂದ ಆರಂಭಗೊಂಡು ಹೊಸ ತಲೆಮಾರಿನ ವಿದ್ವಾಂಸರವರೆಗೆ ಲೇಖಕರ ಆಯ್ಕೆ ಇದೆ. ಎಂ.ಎಂ. ಕಲಬುರ್ಗಿ, ಹಿ.ಚಿ. ಬೋರಲಿಂಗಯ್ಯ, ಕೆ.ಎಸ್.ನರಸಿಂಹಸ್ವಾಮಿ, ಹಿ.ಶಿ. ರಾಮಚಂದ್ರೇಗೌಡ, ಬರಗೂರು ರಾಮಚಂದ್ರಪ್ಪ, ಎ.ವಿ. ನಾವಡ, ಗಾಯತ್ರಿ ನಾವಡ, ಅರವಿಂದ ಮಾಲಗತ್ತಿ, ಅಮೃತ ಸೋಮೇಶ್ವರ, ಮೋಹನ ಕುಂಟಾರ್, ವಿಲ್ಯಂ ಮಾಡ್ತಾ, ಜೀ.ಶಂ. ಪರಮಶಿವಯ್ಯ, ಬಿ.ಎಂ. ಶ್ರೀಕಂಠಯ್ಯ, ಬೆಟಗೇರಿ ಕೃಷ್ಣಶರ್ಮ, ತೀ.ನಂ.ಶ್ರೀ, ಹಾಮಾನಾ, ಇಮ್ರಾಪುರ, ದೇಜಗೌ, ಹಕಾರಿ, ಸಿಪಿಕೆ, ಗಿರಡ್ಡಿ, ಕುರ್ತಕೋಟಿ, ರಾಗೌ, ಡಿ.ಕೆ. ರಾಜೇಂದ್ರ, ಹ.ಕ. ರಾಜೇಗೌಡ, ಕಂಬಾರ, ಎನ್.ಆರ್. ನಾಯಕ, ಕಾಳೇಗೌಡ ನಾಗವಾರ, ವಿ.ಗ. ನಾಯಕ ಹೀಗೆ ಘಟಾನುಘಟಿಗಳ ಲೇಖನಗಳನ್ನು ಈ ಸಂಪುಟ ಒಳಗೊಂಡಿದೆ. ಇಲ್ಲಿಯ ಲೇಖನಗಳನ್ನೆಲ್ಲ ಈ ಸಂಪುಟಕ್ಕಾಗಿಯೇ ಬರೆದವುಗಳಲ್ಲ. ಬೇರೆ ಬೇರೆ ಸಂದರ್ಭಗಳಲ್ಲಿ ಬರೆದಿರುವ ಇವುಗಳನ್ನು ಈ ಸಂಪುಟಕ್ಕಾಗಿ ಆಯ್ದು ಕಟ್ಟಿಕೊಡುವ ಕೆಲಸವನ್ನು ಎ.ವಿ. ನಾವಡ ಅತ್ಯಂತ ಸಮರ್ಥವಾಗಿ ಮಾಡಿದ್ದಾರೆ. ಈ ಸಂಪುಟವನ್ನು ಇಟ್ಟುಕೊಂಡು ಜಾನಪದ ಅಧ್ಯಯನದ ಮುಂದಿನ ಕಾರ್ಯಸೂಚಿಯನ್ನು ಸಿದ್ಧಪಡಿಸಬಹುದಾಗಿದೆ.
ಪ್ರ: ವಿಸ್ತರಣೆ ಹಾಗೂ ಸಲಹಾ ಕೇಂದ್ರ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ, ಪುಟಗಳು 1120, ಬೆಲೆ ರು. 950

ಸುಖಿಯಾಗಿರು ಓ ಸಖಿ!
ಸುಮಾರು ವರ್ಷಗಳ ಬಳಿಕ ಯತಿರಾಜ್ ವೀರಾಂಬುಧಿ ಕಾದಂಬರಿ ಬರೆದಿದ್ದಾರೆ. 'ಸುಖಿಯಾಗಿರು ಓ ಸಖಿ!' ಸುಖದ ನೆಲೆಯನ್ನು ಹುಡುಕುತ್ತದೆ. ಕೆಲವು ಜನರನ್ನು ರಕ್ತಸಂಬಂಧದಲ್ಲಿ ಬಂಧಿಸಲು ನಿಯತಿ ಕೆಲವೊಮ್ಮೆ ಮರೆಯುತ್ತದೆ. ಆಗ ಅದು ಅವರನ್ನು ನಿಜವಾದ ಸ್ನೇಹಿತರನ್ನಾಗಿ ಮಾಡಿ ತನ್ನ ತಪ್ಪನ್ನು ತಿದ್ದಿಕೊಳ್ಳುತ್ತದೆ ಎಂಬುದು ಈ ಕಾದಂಬರಿಯ ಥೀಮ್. ಗೆಳತಿಯೊಬ್ಬಳಿಗೆ ಕ್ಯಾನ್ಸರ್ ಬಂದಾಗ ಇನ್ನೊಬ್ಬಳು ಅವಳಿಗೆ ಹೇಗೆ ನೆರವಾಗುತ್ತಾಳೆ, ಅವರಲ್ಲಿ ಏಳುವ ಆತಂಕ, ತಲ್ಲಣ, ಒಬ್ಬರಿಗಾಗಿ ಇನ್ನೊಬ್ಬರು ಪರಿತಪಿಸುವ ರೀತಿ ಎಲ್ಲವನ್ನೂ ಮನಮುಟ್ಟುವಂತೆ ಯತಿರಾಜ್ ಚಿತ್ರಿಸಿದ್ದಾರೆ. ಕ್ಯಾನ್ಸರ್ ರೋಗದ ಬಗ್ಗೆ ಬಹಳಷ್ಟು ಮಾಹಿತಿಯನ್ನು ಓದುಗರಿಗೆ ಹೊರೆಯಾಗದ ರೀತಿಯಲ್ಲಿ ನೀಡಿದ್ದಾರೆ.
ಪ್ರ: ಸುಧರ್ಮ ವೆಂಚರ್ಸ್, ಬೆಂಗಳೂರು, ಪುಟಗಳು 180, ಬೆಲೆ ರು. 100

ಸೈನಿಕನ ಕಥನ
ನಿವೃತ್ತ ಲೆ.ಜ. ಎಸ್.ಸಿ. ಸರದೇಶಪಾಂಡೆಯವರು ಸೇನೆಯಲ್ಲಿಯ ತಮ್ಮ ಅನುಭವಗಳ ಹಿನ್ನೆಲೆಯಲ್ಲಿ 'ಸಮರ ಸೇನೆ ಸೈನಿಕ' ಕೃತಿಯನ್ನು ರಚಿಸಿದ್ದಾರೆ. ಯುದ್ಧಕಲೆಯ ಬಗ್ಗೆ ಕನ್ನಡದಲ್ಲಿ ಕೃತಿಗಳು ಅಪರೂಪ. ಈ ಕೃತಿಯಲ್ಲಿ ಪ್ರಾಚೀನ ಕಾಲದಿಂದ ಇಂದಿನ ವರೆಗೆ ಯುದ್ಧಕಲೆಯು ಹೇಗೆ ಬೆಳೆದು ಬಂತು ಎಂಬ ವಿವರಗಳಿವೆ. ಯುದ್ಧದ ವಿಕಾಸ, ನಮ್ಮ ಸೇನೆ, ಭಾರತೀಯ ಯುದ್ಧೇತಿಹಾಸದಲ್ಲಿ ಅಶ್ವದಳ, ಕನ್ನಡದಲ್ಲಿ ಮಿಲಿಟರಿ ಸಾಹಿತ್ಯ, ಗೆರಿಲ್ಲಾ ಯುದ್ಧ ಮೊದಲಾದ ಅಧ್ಯಾಯಗಳಲ್ಲಿ ಬಹಳಷ್ಟು ಮಾಹಿತಿಗಳಿವೆ. ಕನ್ನಡಕ್ಕೆ ಇದೊಂದು ಅಪರೂಪದ ಕೃತಿ.
ಪ್ರ: ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ, ಪುಟಗಳು 280, ಬೆಲೆ ರು. 250

ಒಲುಮೆಯ ನದಿ
ಹೆಗ್ಗಾಪುರ ರಾಘವೇಂದ್ರ ಕುಲಕರ್ಣಿಯವರ ಮೊದಲ ಕವನ ಸಂಕಲನ 'ನಿನ್ನೊಲುಮೆ ಸ್ಫುರಿಸಲು..!'. ನೋಡಿದ್ದನ್ನೆಲ್ಲ ಕಾವ್ಯವಾಗಿಸುವ ಉತ್ಸಾಹ ಅವರಲ್ಲಿ ಕಂಡುಬರುತ್ತದೆ. ನವೋದಯದ ಭಾವತೀವ್ರತೆಯನ್ನು ಅವರ ಕೆಲವು ಕವನಗಳಲ್ಲಿ ಕಾಣುತ್ತೇವೆ. 'ಮುಂಜಾನೆ ಮಂಜಿನಲಿ/ ರವಿಕಿರಣಗಳ ಸ್ಪರ್ಶಕೆ/ ರೋಮಾಂಚನದಿ/ ಕ್ಷಣ ಕ್ಷಣಕೂ/ ಮೊಗ್ಗು ಬಿರಿದು ಅರಳುವ ತೆರದಿ'/- (ಮೂಕ ವಿಸ್ಮಿತ) ಈ ಮುಗ್ಧತೆ ಅವರ ಕಾವ್ಯದ ಜೀವಂತಿಕೆ ಕೂಡ. ಪ್ರಚಲಿತ ಸಾಮಾಜಿಕ, ರಾಜಕೀಯ ವಿಷಯಗಳಿಗೂ ಅವರು ಪ್ರತಿಕ್ರಿಯಿಸಿದ್ದಾರೆ. ತೊರೆಯಾಗಿರುವ ಅವರ ಕಾವ್ಯ ಸಮುದ್ರವಾಗಲಿ.
ಪ್ರ: ಶ್ರೀನಿಧಿ ಪ್ರಕಾಶನ, ಸಿಂಧನೂರು, ಪುಟಗಳು 56, ಬೆಲೆ ರು. 65

ಡಾ. ವಾಸುದೇವ ಶೆಟ್ಟಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com