

ಅದ್ಭುತ- ಅಚ್ಚರಿಗಳು 'ಸಿಯಾಮ್ ರೀಪ್'ನಲ್ಲಿ ಕೈಕಾಲು ಮುರಿದುಕೊಂಡು ಬಿದ್ದಿವೆ. ಸಿಯಾಮ್ ರೀಪ್, ಕಾಂಬೋಡಿಯಾ ದೇಶದ ದೊಡ್ಡ ನಗರಗಳಲ್ಲೊಂದು. ಅಲ್ಲಿಂದ ಸುಮಾರು ಆರೇಳು ಕಿ.ಮೀ. ಅಂತರದಲ್ಲಿ ಬೃಹತ್ ಕಾಡಿನ ದೇಗುಲವನ್ನು ಕಾಣಬಹುದು. ಲೋಕಕ್ಕೆ 'ಜಂಗಲ್ ಟೆಂಪಲ್' ಎಂಬ ಖ್ಯಾತಿ ಇವಕ್ಕೆ. 12-13ನೇ ಶತಮಾನದ ಈ ದೇಗುಲಗಳು 17ನೇ ಶತಮಾನದ ನಂತರ ಜನರ ಸಾಮೀಪ್ಯ ಕಡಿಮೆಯಾಗಿ ಅನಾದರಕ್ಕೆ ಗುರಿಯಾದವು. ಈ ಅವಧಿಯಲ್ಲಿ ಕಾಡಿನ ಮರಗಳು ದೇಗುಲವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಅಪ್ಪಿಕೊಂಡೇಬಿಟ್ಟವು. ಮರಗಳ ಬಾಹುಬಂಧನದ ಕಾರಣಕ್ಕಾಗಿ ದೇಗುಲಗಳು ಚಿತ್ರ- ವಿಚಿತ್ರ ಅದ್ಭುತ ರೂಪ ಪಡೆದಿವೆ.
12ನೇ ಶತಮಾನದ ಅಂತ್ಯ ಹಾಗೂ 13ನೇ ಶತಮಾನದ ಆದಿಯಲ್ಲಿ ಕ್ಮೇರ್ ವಂಶದ 7ನೇ ಜಯವರ್ಮನು ಬುದ್ಧನ ದೇಗುಲವನ್ನು ಕಟ್ಟಿಸಿ, ತನ್ನ ತಾಯಿಗೆ ಅರ್ಪಿಸಿದ ದೇಗುಲಗಳು ಇವಂತೆ. ಇದನ್ನು ಮೊದಲು 'ರಾಜವಿಹಾರ' ಅಂತ ಕರೆಯಲಾಗುತ್ತಿತ್ತು. ಈಗಿವಕ್ಕೆ 'ಪ್ರೊಹಮ್' ಎನ್ನುತ್ತಾರೆ. 17ನೇ ಶತಮಾನದಲ್ಲಿ ಕ್ಮೇರ್ ರಾಜರ ಪತನದ ನಂತರ ತೀರಾ ಇತ್ತೀಚಿನವರೆಗೂ ಪ್ರಕೃತಿಯ ಮಡಿಲಲ್ಲಿ ತಾನೋ ಅಥವಾ ತನ್ನ ಮಡಿಲಲ್ಲಿ ಪ್ರಕೃತಿಯೋ ಎನ್ನುವಂತೆ ಉಳಿದುಕೊಂಡಿದೆ. ಪ್ರಕೃತಿಯ ಬಾಹುಗಳಲ್ಲಿ ಮಾನವ ನಿರ್ಮಿತ ದೇಗುಲಗಳು ನೆಮ್ಮದಿಯಿಂದ ಬೆಚ್ಚಗೆ ಅಮ್ಮನ ಮಡಿಲಲ್ಲಿ ಕುಳಿತ ಮಗುವಿನಂತಿವೆ. ಈ ಅದ್ಭುತವನ್ನು ಗಂಟೆಗಟ್ಟಲೆ ನೋಡಿದರೂ ಮುಗಿಯದು. ಭಾರಿ ಗಾತ್ರದ ಬೇರು ಬಿಳಲುಗಳಿಂದ ಸಿಂಗಾರಗೊಂಡಿರುವ ಈ ದೇಗುಲಗಳು ಜನಾಕರ್ಷಣೆಯ ಕೇಂದ್ರಬಿಂದುವಾಗಿದ್ದರಿಂದ ಇವನ್ನು ಹಾಗೆಯೇ ಉಳಿಸಿಕೊಳ್ಳುವ ನಿರ್ಧಾರಕ್ಕೆ ಸರ್ಕಾರ ಬಂದಿದೆ.ಇವುಗಳ ಬೆರಗು, ಮೈಮಾಟವನ್ನು ಕಂಡ 'ಯುನೆಸ್ಕೋ' 1992ರಲ್ಲಿ ಇದನ್ನು ವಿಶ್ವ ಪಾರಂಪರಿಕ ತಾಣದ ಪಟ್ಟಿಗೆ ಸೇರಿಸಿದೆ. ಭಾರತದ ಪುರಾತತ್ವ ಇಲಾಖೆಗೆ ಹಾಳುಬಿದ್ದ ದೇಗುಲಗಳನ್ನು ಪುನರ್ ನಿರ್ಮಾಣ ಮಾಡುವ ಜವಾಬ್ದಾರಿಯ ಭಾರವಿದೆ. ಏಂಜಲೀನಾ ಜೂಲಿ ನಟಿಸಿದ 'ಟೊಂಬ್ ರೈಡರ್' ಚಿತ್ರೀಕರಣಗೊಂಡಿದ್ದೂ ಇಲ್ಲಿಯೇ.
ಇಲ್ಲಿನ ಬ್ರಹ್ಮ- ವಿಷ್ಣುವಿನ ದೇಗುಲಗಳು, ಕೇಬಾನ್ ಸ್ಪೀಯನ್ನಲ್ಲಿರುವ 1000 ಲಿಂಗಗಳು ಎಲ್ಲವೂ ಹಿಂದೂ ಸಂಸ್ಕೃತಿಯಿಂದ ಬೆಳೆದುನಿಂತ ದೇಗುಲಗಳು. ಕ್ರಮೇಣ ಬೌದ್ಧ ಮತಕ್ಕೆ ಅರ್ಪಿಸಿಕೊಂಡ ನಂತರ ಆ್ಯಂಕೂರ್ ಥಾಮ್, ಪ್ರೋಹಮ್- ಹೀಗೆ ಹಲವು ದೇಗುಲಗಳನ್ನು ಕಾಣಬಹುದು. ಈಗಲೂ ಕಾಂಬೋಡಿಯಾದ ಶೇ. 96 ಜನರು ಬೌದ್ಧ ಮತವನ್ನು ಅನುಸರಿಸುತ್ತಾರೆ. ಅವರ ಭಾಷೆಯನ್ನು 'ಕ್ಮೇರ್' ಅಂತಲೂ, ಹಣವನ್ನು 'ಕ್ಮೇರ್ ರಿಯಲ್' ಅಂತಲೂ ಕರೆಯುತ್ತಾರೆ.
ಒಬ್ಬೊಬ್ಬರೇ ಇಲ್ಲಿಗೆ ಭೇಟಿ ನೀಡಿದರೆ ಏನೇನೂ ಮಜಾ ಸಿಗುವುದಿಲ್ಲ. ಗುಂಪಿನಲ್ಲಿ ಹೋದರೇನೇ ಇಲ್ಲಿನ ತಂಪನ್ನೂ, ಧಾರ್ಮಿಕ ರುಚಿಯನ್ನೂ ಸವಿಯಬಹುದು. ಕಾಂಬೋಡಿಯಾಕ್ಕೆ ಹೋದರೆ ಮರೆಯದೇ ಇಲ್ಲಿಗೆ ಭೇಟಿ ನೀಡಿ.
ಕಾಂಬೋಡಿಯಾದಲ್ಲಿರುವ ಸಿಯಾಮ್ ರೀಪ್ನಲ್ಲಿ ಮರಗಳು ದೇವರನ್ನು ಕಟ್ಟಿಹಾಕಿವೆ. ಕ್ಮೇರ್ ವಂಶದ 7ನೇ ಜಯವರ್ಮನು ಬುದ್ಧನ ದೇಗುಲವನ್ನು ಕಟ್ಟಿಸಿ, ತನ್ನ ತಾಯಿಗೆ ಅರ್ಪಿಸಿದ ದೇಗುಲಗಳು ಇವಂತೆ....
= ಶೈಲಜಾ ಜೆ.ಆರ್.
shailaja.jr@gmail.com