

ಇಟಲಿಯ ಸಾಹಿತಿ ಇಟಾಲೋ ಕೆಲ್ವಿನೋ ಬರೆದ 'ಇನ್‌ವಿಸಿಬಲ್ ಸಿಟೀಸ್' ಕಾದಂಬರಿಯ ಆಯ್ದ ಭಾಗವಿದು. ತಾನು ನೋಡಿದ ವಿಚಿತ್ರ ನಗರಗಳ ಬಗ್ಗೆ ಮಾರ್ಕೋ ಪೋಲೋ ಎಂಬ ಸಂಚಾರಿಯು ಕುಬ್ಲಾ ಖಾನ್ ಎಂಬ ಚೀನೀ ಸಾಮ್ರಾಟನಿಗೆ ಹೇಳುತ್ತಾನೆ. ಇದನ್ನು ಬಿಡಿ ಬಿಡಿ ಸಣ್ಣ ಕತೆಗಳಂತೆಯೂ ಓದಿಕೊಳ್ಳಬಹುದು...
ತನ್ನ ಸುತ್ತಾಟದ ವೇಳೆ ಕಂಡ ವಿಚಿತ್ರ ನಗರಗಳನ್ನು ಮಾರ್ಕೋ ಪೋಲೋ, ಕುಬ್ಲಾ ಖಾನನಿಗೆ ವರ್ಣಿಸುತ್ತಿದ್ದ. ಅದನ್ನೆಲ್ಲವನ್ನೂ ಕುಬ್ಲಾ ಖಾನ್ ನಂಬಿದನೆಂದಲ್ಲ. ಆದರೆ ತನ್ನ ಯಾವುದೇ ದೂತನ ಮಾತು ಕೇಳಿಸಿಕೊಳ್ಳುವುದಕ್ಕಿಂತಲೂ ಹೆಚ್ಚು ಗಮನ ಕೊಟ್ಟು, ಕುತೂಹಲದಿಂದ ವೆನಿಸ್ ನಗರದ ಆ ತರುಣನ ಮಾತುಗಳನ್ನು ಕೇಳಿಸಿಕೊಂಡ.
ತಾವು ಸಾಧಿಸಿದ ಎಲ್ಲೆಯಿಲ್ಲದ ಸಾಮ್ರಾಜ್ಯ ವಿಸ್ತರಣೆಯ ಹೆಮ್ಮೆಯ ಕ್ಷಣಗಳ ನಂತರ, ನಾವು ಸಾಮ್ರಾಟರ ಜೀವನದಲ್ಲಿ ಅಂಥದೊಂದು ಗಳಿಗೆ ಬರುತ್ತದೆ; ತಿಳಿಯುವಿಕೆ ಮತ್ತು ಅರ್ಥೈಸಿಕೊಳ್ಳುವಿಕೆಗಳ ಹಂಬಲವನ್ನೇ ಕೈಬಿಡಬೇಕಾದ ಕಾಲ ಬರುತ್ತದೆ ಎಂಬುದು ತಿಳಿಯುವಾಗ ಉಂಟಾಗುವ ವಿಷಣ್ಣತೆ ಮತ್ತು ಸಮಾಧಾನದ ಕ್ಷಣ. ಸಂಜೆಗಳಲ್ಲಿ ಮಳೆ ಸುರಿದ ನಂತರದ ಆನೆಗಳ ಮೈಯ ಪರಿಮಳ, ಕಂಚುಕದಲ್ಲೇ ತಣ್ಣಗಾಗುವ ಚಂದನದ ಲೇಪನದ ಜತೆ ನಮ್ಮನ್ನು ಖಾಲಿತನದ ಅನುಭವವೊಂದು ಆವರಿಸುತ್ತದೆ. ಆಗ ಮಂಪರು ಕವಿದು ಗೋಡೆಗಳ ಉಬ್ಬುತಗ್ಗು ಮೈಯ ಮೇಲೆ ಚಿತ್ರಿಸಲಾದ ನದಿಗಳು ಮತ್ತು ಪರ್ವತಗಳು ಕಂಪಿಸುತ್ತವೆ, ಒಂದರ ಮೇಲೊಂದು ಉರುಳಾಡುತ್ತವೆ. ನಮ್ಮ ಎದುರು ಬರುತ್ತಿರುವ ಮೂಟೆಗಳು ಕೊಟ್ಟ ಕೊನೆಯ ವೈರಿ ದಳದ ಅವಸಾನವನ್ನು ಘೋಷಿಸುತ್ತವೆ. ಸೋಲಿನಿಂದ ಸೋಲಿನತ್ತ ನಡೆಯುತ್ತಿರುವ ದುರ್ಬಲ ರಾಜರು ತಮ್ಮ ಪಡೆಗಳ ರಕ್ಷಣೆಗಾಗಿ ಪ್ರತಿವರ್ಷ ತಾವು ಚಿನ್ನಬೆಳ್ಳಿ, ಒಣಚರ್ಮ, ಆಮೆಚಿಪ್ಪು ಮುಂತಾದ ಅಮೂಲ್ಯ ಕಪ್ಪ ಕಾಣಿಕೆಗಳನ್ನು ಸಲ್ಲಿಸುತ್ತೇವೆಂದು ಮಾಡುವ ಯಾಚನೆಯನ್ನು ಘೋಷಿಸುತ್ತವೆ. ಅದು ಹತಾಶೆಯ ಕ್ಷಣ. ಅದ್ಭುತಗಳ ಮೊತ್ತವೆಂಬಂತೆ ಕಾಣಿಸಿದ್ದ ಈ ಸಾಮ್ರಾಜ್ಯವೆಲ್ಲ ಅನಂತ ನಿರಾಕಾರ ಅವಶೇಷದಂತೆ, ನಮ್ಮ ರಾಜದಂಡಗಳಿಂದ ಗುಣಪಡಿಸಲಾಗದಷ್ಟು ಹರಡಿದ ಭ್ರಷ್ಟತೆಯ ಕೊಳೆತ ವ್ರಣದಂತೆ, ವೈರಿರಾಜರ ನಿಷ್ಕ್ರಿಯತೆಯ ಫಲಿತಕ್ಕೆಲ್ಲ ನಾವು ಉತ್ತರಾಧಿಕಾರಿಗಳಂತೆ ಕಾಣಿಸುವ ಕ್ಷಣ.
ಕುಸಿಯಲನುವಾದ ಗೋಡೆಗಳು ಮತ್ತು ಗೋಪುರಗಳಿಗೂ, ಗೆದ್ದಲು ತಿನ್ನಲಾಗದ ಸೂಕ್ಷ್ಮ ಕಲಾಕೃತಿಗಳಿಗೂ ನಡುವಿನ ವ್ಯತ್ಯಾಸ ಕುಬ್ಲಾ ಖಾನ್‌ಗೆ ಗೊತ್ತಾಗುವುದು, ಮಾರ್ಕೋ ಪೋಲೋನ ಮಾತುಗಳನ್ನು ಕೇಳಿಸಿಕೊಳ್ಳುವುದರಿಂದ ಮಾತ್ರವೇ.
ನಗರಗಳು ಮತ್ತು ನೆನಪು- 1
ಇಲ್ಲಿಂದ ಹೊರಟು ಪೂರ್ವಕ್ಕೆ ಮೂರು ದಿನ ಪ್ರಯಾಣಿಸಿದರೆ, ಡಿಯೋವುರಾ ನಗರಕ್ಕೆ ಬರುತ್ತೀರಿ. ಅಲ್ಲಿ ಅರುವತ್ತು ಬೆಳ್ಳಿಯ ಮಹಲುಗಳು, ಎಲ್ಲ ದೇವತೆಗಳ ಕಂಚಿನ ಮೂರ್ತಿಗಳು, ಸೀಸದ ಲೇಪನ ಮಾಡಿದ ಬೀದಿಗಳು, ಸ್ಫಟಿಕದ ರಂಗಸೌಧ, ಪ್ರತಿ ಮುಂಜಾನೆ ಗೋಪುರವೊಂದರ ಮೇಲೆ ಕುಳಿತು ಕೂಗುವ ಚಿನ್ನದ ಹುಂಜ ಇತ್ಯಾದಿಗಳಿವೆ. ಇವೆಲ್ಲ ಪ್ರವಾಸಿಗರಿಗೂ ಪರಿಚಿತವಾದದ್ದೇ. ಯಾಕೆಂದರೆ ಅವುಗಳನ್ನು ಅವರು ಇತರ ಪಟ್ಟಣಗಳಲ್ಲೂ ನೋಡಿರುವರು. ಅದರೆ ಇಲ್ಲಿನ ವಿಶೇಷತೆಯನ್ನು ಹೇಳುತ್ತೇನೆ ಕೇಳಿ: ಹಗಲುಗಳು ಚಿಕ್ಕದಾಗುತ್ತಿರುವ ಸೆಪ್ಟೆಂಬರ್‌ನ ಸಂಜೆಯಲ್ಲಿ ಇಲ್ಲಿಗೆ ಬರುವ ಯಾತ್ರಿಕನಿಗೆ ಎಲ್ಲ ಆಹಾರ ಮಳಿಗೆಗಳ ಬಣ್ಣ ಬಣ್ಣದ ದೀಪಗಳು ಒಮ್ಮೆಲೇ ಹೊತ್ತಿಕೊಳ್ಳುವುದು ಕಾಣುವುದು ಹಾಗೂ ಮನೆಯೊಂದರ ಮಾಳಿಗೆಯಿಂದ ಒಬ್ಬ ಸ್ತ್ರೀಯ 'ಓಹ್' ಎಂಬ ಮಧುರ ಸ್ವರ ಕೇಳಿಸುವುದು. ಇಂಥದೇ ಸಂಜೆಯನ್ನು ತಾನು ಕಳೆದಿದ್ದೆ, ಆ ದಿನಗಳಲ್ಲಿ ನಾನು ಸುಖವಾಗಿದ್ದೆ ಎಂಬ ಭಾವವನ್ನು ಅವನಲ್ಲಿ ಉದ್ದೀಪಿಸಿ, ಈ ಸ್ತ್ರೀಯ ಮೇಲೆ ಅಸೂಯೆ ಮೂಡುವುದು.
ನಗರಗಳು ಮತ್ತು ನೆನಪು- 2
ಯಾತ್ರಿಕ ತುಂಬಾ ದಿನಗಳ ಕಾಲ ಕಾಡುಮೇಡುಗಳಲ್ಲಿ ಸುತ್ತಾಡಿದರೆ ಸಹಜವಾಗಿಯೇ ಆತನಿಗೆ ಪಟ್ಟಣವೊಂದನ್ನು ಸೇರುವ ಆಸೆ ಮೊಳೆಯುತ್ತದೆ. ಕೊನೆಗೆ ಆತ ಬಂದು ಸೇರುವುದು ಇಸಿಡೋರಾ ನಗರವನ್ನು. ಅಲ್ಲಿನ ಕಟ್ಟಡಗಳಿಗೆ ಉರುಟಾದ ಕಪ್ಪೆಚಿಪ್ಪುಗಳನ್ನು ಹುಗಿದ ವೃತ್ತಾಕಾರದ ಮೆಟ್ಟಿಲುಗಳಿವೆ. ಇಲ್ಲಿ ನಿಖರವಾದ ದೂರದರ್ಶಕ ಹಾಗೂ ವಯೊಲಿನ್‌ಗಳನ್ನು ಮಾಡಲಾಗುತ್ತದೆ. ಎರಡು ಸ್ತ್ರೀಯರ ಮಧ್ಯೆ ಪೇಚಾಡುವ ವಿದೇಶಿಗನಿಗೆ ಇಲ್ಲಿ ಮೂರನೇ ಸ್ತ್ರೀ ಸಿಗುತ್ತಾಳೆ, ಕೋಳಿ ಕಾಳಗಗಳು ಜೂಜುಗಾರರ ನಡುವೆ ರಕ್ತಪಾತಕ್ಕೆ ಕಾರಣವಾಗುತ್ತವೆ. ಒಂದು ನಗರ ಬೇಕು ಎಂದಾಗ ಯಾತ್ರಿಕ ಕನಸುವುದು ಇಂಥದನ್ನೇ. ಹೀಗೆ ಇಸಿಡೋರಾ ಆತನ ಕನಸಿನ ನಗರ. ಒಂದೇ ವ್ಯತ್ಯಾಸ ಎಂದರೆ, ಈ ಕನಸಿನ ನಗರದಲ್ಲಿ ಈ ಯಾತ್ರಿಕನೂ ಯುವಕನ ರೂಪದಲ್ಲಿ ಇದ್ದಾನೆ. ಅಂದರೆ ಆತ ಇಲ್ಲಿಗೆ ಬರುವುದು ತನ್ನ ವೃದ್ಧಾಪ್ಯದಲ್ಲಿ. ನಗರದ ಚೌಕದಲ್ಲಿರುವ ಕುಂಟುಗೋಡೆಯ ಮೇಲೆ ವೃದ್ಧರೆಲ್ಲ ಕುಳಿತಿರುತ್ತಾರೆ, ಅವರ ಮುಂದೆ ಯುವಕರಾಗಿರುವ ಅವರೇ ಹಾದುಹೋಗುತ್ತಿರುತ್ತಾರೆ. ಅವರ ನಡುವೆ ಈ ಯಾತ್ರಿಕನಿರುತ್ತಾನೆ. ಬಯಕೆಗಳು ಆಗಲೇ ನೆನಪುಗಳಾಗಿಬಿಟ್ಟಿವೆ.
ನಗರಗಳು ಮತ್ತು ಬಯಕೆ- 1
ಡೊರೋಥಿಯಾ ನಗರವನ್ನು ವರ್ಣಿಸಲು ಎರಡು ರೀತಿಗಳಿವೆ. ಒಂದು ಹೀಗೆ: ಇಲ್ಲಿರುವ ನಾಲ್ಕು ಅಲ್ಯುಮಿನಿಯಂ ಮಹಲುಗಳ ಗೋಡೆಗೆ ಏಳು ಗೇಟುಗಳಿವೆ. ಅವುಗಳಿಂದ ಸ್ಪ್ರಿಂಗ್ ಮೂಲಕ ಚಾಲಿತವಾಗುವ ಸೇತುವೆಗಳು ಹೊರಡುತ್ತವೆ. ನಗರವನ್ನು ಹಾಯುವ ನಾಲ್ಕು ಹಸಿರು ಕಾಲುವೆಗಳನ್ನು ಇವು ಜೋಡಿಸುತ್ತವೆ. ಹೀಗೆ ನಗರ ಒಟ್ಟು ಒಂಬತ್ತು ವಿಭಾಗವಾಗಿದ್ದು, ಪ್ರತಿಯೊಂದರಲ್ಲೂ ಮುನ್ನೂರು ಮನೆಗಳೂ ಏಳುನೂರು ಹೊಗೆಕೊಳವೆಗಳೂ ಇವೆ. ಇಲ್ಲಿ ಒಂದು ವಿಭಾಗದ ಕನ್ಯೆ ಇನ್ನೊಂದು ವಿಭಾಗದ ತರುಣನನ್ನೇ ಮದುವೆಯಾಗಬೇಕು. ಮತ್ತು ಅವರ ಹೆತ್ತವರು ತಮ್ಮ ಸ್ವಾಮ್ಯದಲ್ಲಿರುವ ಸೊತ್ತುಗಳನ್ನೆಲ್ಲ ಪರಸ್ಪರ ವಿನಿಮಯ ಮಾಡಿಕೊಳ್ಳಬೇಕು. ಈ ಮಾಹಿತಿಯಿಂದ, ನಿಮಗೆ ಈ ನಗರದ ಭೂತ ವರ್ತಮಾನ ಭವಿಷ್ಯಗಳ ಬಗ್ಗೆ ಏನು ವಿವರ ಬೇಕೋ ಅದನ್ನೆಲ್ಲ ಇಷ್ಟು ಮಾಹಿತಿಯಿಂದ ನೀವೇ ಲೆಕ್ಕ ಹಾಕಿಕೊಳ್ಳಬಹುದು.
ಅಥವಾ ನನ್ನನ್ನು ಅಲ್ಲಿಗೆ ಕರೆದೊಯ್ದ ಒಂಟೆಮಾಲಿಕ ಹೇಳಿದಂತೆ: ನನ್ನ ಯವ್ವನದ ದಿನಗಳಲ್ಲಿ ಒಂದು ಬೆಳಗ್ಗೆ ಇಲ್ಲಿಗೆ ಬಂದೆ. ಜನ ಬೀದಿಗಳಲ್ಲಿ ಸಂತೆಯ ಕಡೆಗೆ ಓಡಾಡುತ್ತಿದ್ದರು. ಸುಂದರ ದಂತಪಂಕ್ತಿಗಳ ಸ್ತ್ರೀಯರು ನನ್ನ ಕಣ್ಣುಗಳಲ್ಲಿ ದಿಟ್ಟಿಸಿ ನೋಡಿದರು. ಮೂವರು ಯೋಧರು ವೇದಿಕೆಯೊಂದರ ಮೇಲೆ ಕಹಳೆ ಊದುತ್ತಿದ್ದರು. ಚಕ್ರಗಳು ತಿರುಗುತ್ತಿದ್ದವು ಮತ್ತು ಬಣ್ಣದ ಬಾವುಟಗಳು ಪಟಪಟಿಸುತ್ತಿದ್ದವು. ಅಲ್ಲಿಯವರೆಗೆ ನನಗೆ ಸುತ್ತಾಟದ ದಾರಿಗಳು ಮಾತ್ರ ತಿಳಿದಿದ್ದವು. ನಂತರ, ಆ ಮುಂಜಾನೆ ನನ್ನೆದುರು ತೆರೆದ ದಾರಿ ಅನೇಕ ಅಂಥ ದಾರಿಗಳಲ್ಲೊಂದು ಮಾತ್ರ ಎಂಬುದು ಗೊತ್ತಾಯಿತು.
ನಗರಗಳು ಮತ್ತು ನೆನಪು- 3
ಈಗ ನಾನು ಭದ್ರಕೋಟೆಗಳ ನಗರವಾದ ಝೈರಾವನ್ನು ವರ್ಣಿಸುವ ವ್ಯರ್ಥ ಪ್ರಯತ್ನ ಮಾಡಲೆ, ಕುಬ್ಲಾ? ಮೆಟ್ಟಿಲುಗಳಂತೆ ಏರುವ ಬೀದಿಗಳು, ಮೇಲ್ಚಾವಣಿ ಕಮಾನುಗಳ ಬಾಗುವಿಕೆಯ ಕೋನ, ಮಾಡುಗಳಿಗೆ ಹೊದಿಸಿದ ಸತುವಿನ ತಗಡು ಬಗ್ಗೆಯೆಲ್ಲ ಹೇಳಬಹುದು. ಆದರೆ ಇದು ಏನೂ ಹೇಳಿದಂತಲ್ಲ. ಈ ಪಟ್ಟಣದಲ್ಲಿ ಇದಷ್ಟೇ ಇಲ್ಲ; ಇವುಗಳ ಅಳತೆಗೂ ಇವುಗಳ ಭೂತಕಾಲಕ್ಕೂ ಸಂಬಂಧವಿದೆ. ದೀಪದ ಕಂಬದ ಎತ್ತರಕ್ಕೂ ಅದಕ್ಕೆ ನೇಣುಹಾಕಿದ ದಾಳಿಕೋರನ ಕಾಲುಗಳ ನೆಲದ ನಡುವಿನ ಅಂತರಕ್ಕೂ; ದೀಪಸ್ತಂಭದ ಎದುರಿನ ಕಂಬಿಗೆ ಕಟ್ಟಿದ ತಂತಿಗೂ ರಾಣಿಯ ವಿವಾಹದ ಮೆರವಣಿಗೆಯ ತೋರಣಕ್ಕೂ; ಕಂಬಿಯ ಎತ್ತರಕ್ಕೂ ಮುಂಜಾನೆ ಅದನ್ನು ಹತ್ತಿ ಹಾರಿ ಪಾರಾಗುವ ವಿಟನ ಜಿಗಿತಕ್ಕೂ; ನೀರುಗಾಲುವೆಯ ತಿರುವಿಗೂ ಅದರ ಪಕ್ಕದಲ್ಲೇ ಮುಂಬರಿದು ಕಿಡಕಿ ಮೂಲಕ ತೂರುವ ಬೆಕ್ಕಿನ ಹೆಜ್ಜೆಗೂ; ಭೂಶಿರದ ಬಳಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗುವ ಫಿರಂಗಿ ನೌಕೆಯ ಗುಂಡೆಸೆತದ ವ್ಯಾಪ್ತಿಗೂ ನೀರುಗಾಲುವೆಯನ್ನು ಧ್ವಂಸ ಮಾಡುವ ಬಾಂಬ್‌ಗೂ; ಮೀನುಬಲೆಯ ತೂತುಗಳಿಗೂ ಧಕ್ಕೆಯ ಮೇಲೆ ಅವುಗಳನ್ನು ಹೊಲಿಯುತ್ತ ಕುಳಿತು ನೂರ ಒಂದನೇ ಬಾರಿಗೆ ದಾಳಿಕೋರ ಮತ್ತವನ ಫಿರಂಗಿ ನೌಕೆಯ ಕತೆ ಹೇಳುವ ಮೂವರು ವೃದ್ಧ ಮೀನುಗಾರರಿಗೂ; ಕೆಲವರು ಹೇಳುವಂತೆ ಆ ದಾಳಿಕೋರ, ಧಕ್ಕೆಯ ಮೇಲೆ ಬಿಸುಡಲಾದ ರಾಣಿಯ ಪರಿತ್ಯಕ್ತ ಪುತ್ರ.
ಈ ನೆನಪಿನ ಅಲೆಗಳು ಮೇಲೆ ಉಕ್ಕುತ್ತಿರುವಂತೆ, ನಗರವೂ ಸ್ಪಂಜಿನಂತೆ ಉಬ್ಬುತ್ತ ವಿಸ್ತರಿಸುತ್ತಿದೆ. ಝೈರಾದ ಇಂದಿನ ವಿವರಣೆ ಈ ಹಿಂದಿನ ಕಾಲವನ್ನು ಒಳಗೊಂಡಿರಬೇಕು. ಈ ನಗರ ತನ್ನ ಕತೆಯನ್ನೇನೂ ಹೇಳುವುದಿಲ್ಲ ನಿಜ. ಆದರೆ ಅಂಗೈ ಮೇಲಿನ ಗೆರೆಗಳಂತೆ ಅದರ ಭೂತಕಾಲ ಎಲ್ಲೆಡೆ ಅಚ್ಚೊತ್ತಿದೆ. ಬೀದಿಗಳ ಮೂಲೆಯಲ್ಲಿ, ಕಿಡಕಿಗಳ ಜಾಲರಿಯಲ್ಲಿ, ಮೆಟ್ಟಿಲುಗಳ ಕಟಾಂಜನದಲ್ಲಿ, ಮಿಂಚುಬಂಧಕಗಳ ಆಂಟೆನಾಗಳಲ್ಲಿ, ಧ್ವಜಗಳ ಸ್ತಂಭಗಳಲ್ಲಿ; ಪ್ರತಿ ಭಾಗವೂ ಪರಚಿದ, ನೆಗ್ಗಿದ, ಸುಲಿದ ಗುರುತುಗಳನ್ನು ಹೊಂದಿದೆ.
ನಗರಗಳು ಮತ್ತು ಬಯಕೆ- 2
ದಕ್ಷಿಣಕ್ಕೆ ಪ್ರಯಾಣಿಸುತ್ತಾ ಮೂರನೇ ದಿನದ ಕೊನೆಗೆ ನೀವು ಅನಾಸ್ತೇಸಿಯಾ ತಲುಪುತ್ತೀರಿ. ಏಕಕೇಂದ್ರಿತ ಕಾಲುವೆಗಳು ನೀರುಣಿಸುತ್ತಿರುವ ಮತ್ತವುಗಳ ಮೇಲೆ ಗಾಳಿಪಟಗಳು ಹಾರಾಡುತ್ತಿರುವ ಪಟ್ಟಣ ಅದು. ಇಲ್ಲಿಗೆ ನೀವು ಮರಕತ, ಮಾಣಿಕ್ಯ, ಗೋಮೇಧಿಕ, ಹರಳುಗಳನ್ನು ತಂದರೆ ಲಾಭ ಗಳಿಸಬಹುದು. ಇಲ್ಲಿ ಸಿಗುವ ಚೆರ್ರಿ ಕಟ್ಟಿಗೆಯ ಬೆಂಕಿಯಲ್ಲಿ ಹುರಿದ ಸುವರ್ಣಪಕ್ಷಿಯ ಮಾಂಸ ಹಾಗೂ ಅದರ ಮೇಲೆ ಚಿಮುಕಿಸುವ ಮರುಗದ ಮಸಾಲೆಯ ರುಚಿಯನ್ನು ನಾನು ಶ್ಲಾಘಿಸಲೇ ಬೇಕು. ಮತ್ತು ಇಲ್ಲಿನ ಉದ್ಯಾನದಲ್ಲಿರುವ ಕೊಳದಲ್ಲಿ ಮೀಯುತ್ತಿರುವ ಸ್ತ್ರೀಯರ ಬಗ್ಗೆ ಹೇಳಬೇಕು. ಇವರು ಕೆಲವೊಮ್ಮೆ ನಮ್ಮಂಥ ಅಪರಿಚಿತರನ್ನು ತಮ್ಮ ಜೊತೆ ನಗ್ನರಾಗುವಂತೆ, ನೀರಿನಲ್ಲಿ ಆಟವಾಡುವಂತೆ ಆಹ್ವಾನಿಸುತ್ತಾರಂತೆ.
ಇಲ್ಲಿಗೆ ಪಟ್ಟಣದ ನೈಜ ಸಾರ ಹೇಳಿದಂತಾಗಲಿಲ್ಲ. ಅನಾಸ್ತೇಸಿಯಾ ನಿಮ್ಮಲ್ಲಿ ಬಯಕೆಗಳನ್ನು ಕೆರಳಿಸುತ್ತದೆ ನಿಜ, ಆದರೆ ಅವುಗಳನ್ನು ನಿಗ್ರಹಿಸಿಕೊಳ್ಳುವುದಕ್ಕಾಗಿಯೇ ಕೆರಳಿಸುತ್ತದೆ. ಅನಾಸ್ತೇಸಿಯಾದ ಹೃದಯಭಾಗದಲ್ಲಿ ನೀವಿದ್ದರೆ ಒಮ್ಮೆಲೆ ನಿಮ್ಮನ್ನು ಬಯಕೆಗಳು ಮುತ್ತಿಕೊಳ್ಳುತ್ತವೆ. ಎಲ್ಲ ಬಯಕೆಗಳೂ ಇಲ್ಲಿರುವಂತೆ, ನೀವೂ ಅದರ ಭಾಗವಾಗಿರುವಂತೆ, ನೀವು ಖುಷಿಪಡಲಾಗದ ಎಲ್ಲದರಿಂದ ಅದು ಖುಷಿಯಾಗಿರುವಂತೆ ಕಾಣುತ್ತದೆ. ಈ ಬಯಕೆಗಳನ್ನು ಹೊಂದಿ ವಿಷಯಗಳಿಂದ ತುಂಬಿ ತುಳುಕಾಡುತ್ತಿರುವುದರ ಹೊರತು ನೀವು ಬೇರಿನ್ನೇನೂ ಮಾಡಲಾರಿರಿ. ಇದು ಅನಾಸ್ತೇಸಿಯಾ ಎಂಬ ವಿಶ್ವಾಸಘಾತಕ ನಗರ ಕೆಲವೊಮ್ಮೆ ತೀವ್ರವಾಗಿಯೂ ಕೆಲವೊಮ್ಮೆ ನಗಣ್ಯವಾಗಿಯೂ ಕಾಡುವ ಪರಿ. ಇಲ್ಲಿ ದಿನಕ್ಕೆ ಎಂಟು ಗಂಟೆಗಳ ವಜ್ರ ಕತ್ತರಿಸುವ ನಿಮ್ಮ ದುಡಿಮೆ, ಬಯಕೆಗಳ ರೂಪ ಪಡೆಯುತ್ತದೆ. ಬಯಕೆಗಳಿಂದ ಮತ್ತೆ ದುಡಿಮೆಯ ರೂಪ. ನೀವು ಅನಾಸ್ತೇಸಿಯಾವನ್ನು ಆನಂದಿಸುತ್ತಿದ್ದೀರಿ ಅಂದುಕೊಳ್ಳುತ್ತೀರಿ; ಆದರೆ ಅದರ ಜೀತದಾಳಾಗಿರುತ್ತೀರಿ.
= ಇಟಾಲೋ ಕೆಲ್ವಿನೋ
= ಅನು: ಹರೀಶ್ ಕೇರ