

ಕಣಗಾಲ್ ಪುಟ್ಟಣ್ಣನವರ ಬಾಲ್ಯ ಕಾಲವದು. ಆಗ ಅವರು ನಟಭಯಂಕರ ಗಂಗಾಧರ ರಾಯರ ಕಂಪನಿಯಲ್ಲಿ ಕೆಲಸಕ್ಕಿದ್ದರು. ಆ ಕೆಲಸಕ್ಕೆ ಸಂಬಳವಿರಲಿಲ್ಲ, ಊಟವೇ ಕೂಲಿಯಾಗಿತ್ತು. ಅದೂ ನಾಟಕವಿದ್ದ ದಿನ ಮಾತ್ರ. ಹರಕು ಚಿಂದಿ ಬಟ್ಟೆಯಲ್ಲಿ ಮೈ ಮುಚ್ಚಬೇಕಾಗಿತ್ತು. ಕಂಪನಿಯ ಮನೆಯ ಜಗುಲಿ ಮೇಲೆ ಅವರ ವಾಸ. ಇದೆಲ್ಲದರ ನಡುವೆ ಪಾತ್ರ ಮಾಡಬೇಕೆಂಬ ಮಹದಾಸೆ. ಅದರಲ್ಲೂ ರಾಜನ ಪಾತ್ರದ ಮೇಲೆ ಕಣ್ಣು. ರಾಜನ ಪಾತ್ರದ ಬಟ್ಟೆಗಳನ್ನು ತೊಟ್ಟುಕೊಂಡು ಮೆರೆಯಬೇಕೆಂಬ ಆಸೆ. ಯಾರೂ ಇಲ್ಲದ ವೇಳೆ ಕಂಪನಿ ಮನೆಯಲ್ಲೇ ವೇಷ ಧರಿಸಿ ತಮ್ಮ ಆಸೆ ಪೂರೈಸಿಕೊಳ್ಳುತ್ತಿದ್ದರು.
1976ರಲ್ಲಿ ತಮ್ಮ ಪ್ರಥಮ ಚಿತ್ರ 'ಬೆಳ್ಳಿ ಮೋಡ'ವನ್ನು ನಿರ್ದೇಶಿಸಿದ್ದರು. ಚಿತ್ರದ ವಿಶೇಷ ಪ್ರದರ್ಶನ ಬೆಂಗಳೂರಿನ ಅಲಂಕಾರ ಚಿತ್ರಮಂದಿರದಲ್ಲಿತ್ತು. ಸಹಜವಾಗಿ ಪುಟ್ಟಣ್ಣ ಉಪಸ್ಥಿತರಿರಬೇಕಾಗಿತ್ತು. ನಿರ್ಮಾಪಕರು ಪುಟ್ಟಣ್ಣನವರಿಗೆ ಇದಕ್ಕಾಗಿ ಹಣ ಕೊಟ್ಟಿರಲಿಲ್ಲ. ಮದರಾಸಿನಿಂದ ಬೆಂಗಳೂರಿಗೆ ಬರಲೂ ಅವರ ಬಳಿ ಹಣವಿರಲಿಲ್ಲ. ಪ್ರದರ್ಶನದಲ್ಲಿ ಭಾಗವಹಿಸಬೇಕೆಂಬ ಆಸೆ, ಬರಿಗೈಯಲ್ಲಿ ರೈಲು ಹತ್ತಿದರು. ಟಿಕೆಟ್ ತನಿಖಾಧಿಕಾರಿಗಳ ಕಣ್ಣು ತಪ್ಪಿಸಿ ಬೆಂಗಳೂರಿಗೆ ಬಂದು ಅಲಂಕಾರ್ ಚಿತ್ರಮಂದಿರ ಬಳಿ ಬಂದರು. ಬಾಗಿಲು ಕಾಯುವವನಿಗೆ ತಾನೇ ಚಿತ್ರ ನಿರ್ದೇಶಕ ಎಂದು ಹೇಳಿದರೂ ಆತ ನಂಬಲಿಲ್ಲ. ಇನ್ನೊಂದು ಬಾಗಿಲ ಬಳಿ ಹೋಗಿ ತನ್ನನ್ನು ಜೆಮಿನಿ ಲ್ಯಾಬ್‌ನವರು ಪ್ರೊಜೆಕ್ಷನ್ ನೋಡಿಕೊಂಡು ಬರಲು ಕಳುಹಿಸಿದ್ದಾರೆಂದು ಸುಳ್ಳು ಹೇಳಿದ ಮೇಲೆ ಪ್ರೊಜೆಕ್ಷನ್ ಕೊಠಡಿಗೆ ಪ್ರವೇಶ ಸಿಕ್ಕಿತು. ಅಲ್ಲಿಂದಲೇ ಪ್ರೇಕ್ಷಕರ ಪ್ರತಿಕ್ರಿಯೆ ವೀಕ್ಷಿಸಿ ಪುಳಕಿತರಾದರು.
ಚಿತ್ರೀಕರಣಕ್ಕೆ ಸೂಕ್ತ ಸ್ಥಳ ಆಯ್ಕೆ ಮಾಡುವಲ್ಲಿ ಪುಟ್ಟಣ್ಣ ನಿಸ್ಸೀಮರು. ಬೆಳ್ಳಿಮೋಡ ಚಿತ್ರವನ್ನು ಚಿಕ್ಕಮಗಳೂರಿನ ಪ್ರಕೃತಿ ಸೌಂದರ್ಯದಲ್ಲಿ ಚಿತ್ರೀಕರಿಸಲು ತೀರ್ಮಾನಿಸಿದರು. ಆದರೆ ನಿರ್ಮಾಪಕರು ಇವರಿಗೆ ಸ್ಥಳ ನೋಡಿಬರಲು ಕಾರು ನೀಡಲಿಲ್ಲ. ಪುಟ್ಟಣ್ಣ ಹಠ ಬಿಡಲಿಲ್ಲ. ಬಾಡಿಗೆ ಸೈಕಲ್ ಪಡೆದು ಕಾಡುಮೇಡು ಸುತ್ತಿದರು. ಸ್ಥಳ ನಿಗದಿ ಮಾಡಿದರು. ಒಂದು ದೃಶ್ಯಕ್ಕೆ ತಾವು ಆಯ್ದ ಜಾಗದಲ್ಲಿ ಒಂದು ಮರವಿದ್ದರೆ ಚೆನ್ನ ಎಂದು ತೀರ್ಮಾನಿಸಿದರು. ರಾತ್ರಿ ತಮ್ಮ ಚಿತ್ರತಂಡವನ್ನು ಹುರಿದುಂಬಿಸಿ ಬೇರೆ ಕಡೆಯಿಂದ ಮರವೊಂದನ್ನು ತಂದು ತಮಗೆ ಬೇಕಾದ ಜಾಗದಲ್ಲಿ ನೆಡಿಸಿ ಚಿತ್ರೀಕರಣ ನಡೆಸಿದರು.
ಬೆಂಗಳೂರಿನ ಜಯನಗರ ಬಡಾವಣೆಯಲ್ಲಿ ಪುಟ್ಟಣ್ಣ ಮನೆ ಮಾಡಿಕೊಂಡಿದ್ದರು. ಆ ಮನೆಗೆ ಪುಟ್ಟಣ್ಣ ಇಟ್ಟಿದ್ದ ಹೆಸರು ಹೆಡ್ಡನಹಟ್ಟಿ. 'ಗುರುಗಳೇ ಮನೆಗೆ ಹೀಗ್ಯಾಕೆ ಹೆಸರು ಇಟ್ಟಿದ್ದೀರಿ?' ಎಂದು ಪ್ರಶ್ನೆ ಮಾಡಿದ್ದೆ. ಆಗ ಅವರು ಹೇಳಿದರು 'ಬೇಕಾದಷ್ಟು ಜನರಿಗೆ (ಆರತಿಯಿಂದ ಆಗ ತಾನೇ ಹೊರಬಂದಿದ್ದರು) ಏನೇನೋ ಸಹಾಯ ಮಾಡಲು ಹೋಗಿ ಪೆಟ್ಟು ತಿಂದಿದ್ದೇನೆ, ಅಂದ ಮೇಲೆ ಈ ಮನೆಗೆ ಈ ಹೆಸರು ಸಾರ್ಥಕವಲ್ಲವೇ?' ಎಂದು ಉತ್ತರಿಸಿದ್ದರು. ಮುಂಬೈಯಿಂದ ಬೆಂಗಳೂರಿಗೆ ಬಂದಿದ್ದ ಬರಹಗಾರ್ತಿ ಗಿರಿಜಾ ರಾಜೇಂದ್ರನ್ ಪುಟ್ಟಣ್ಣನವರನ್ನು ಭೇಟಿಯಾದರು. ಆ ಸಂದರ್ಭ ಗಿರಿಜಾ ಕೇಳಿದರು 'ನೀವು ಇತ್ತೀಚೆಗೆ ಹೆಚ್ಚು ಕುಡಿಯುವುದರಿಂದ ನಿಮ್ಮ ಚಿತ್ರಗಳ ಗುಣಮಟ್ಟ ಕಡಿಮೆಯಾಗುತ್ತಿದೆ ಎಂದು ಹೇಳುವವರಿದ್ದಾರೆ. ಇದು ನಿಜವೇ?'. ಪುಟ್ಟಣ್ಣನವರ ಉತ್ತರ ಬಾಂಬಿನಷ್ಟೇ ಸ್ಪಷ್ಟವಾಗಿತ್ತು: 'ನಾನು ಕುಡಿಯುವುದು ನಿಜ, ಆದರೆ ಕುಡುಕನಲ್ಲ.' ಪಿರಿಯಾಪಟ್ಟಣ ತಾಲ್ಲೂಕಿನ ಕಣಗಾಲ್‌ನಲ್ಲಿ 1933ರ ಡಿಸೆಂಬರ್ 1ರಂದು ಜನಿಸಿದ ಪುಟ್ಟಣ್ಣ, ಕನ್ನಡದ ಮೇರು ನಿರ್ದೇಶಕರೆಂದು ಈಗ ಕರೆಸಿಕೊಂಡಿರುವುದು ನಿಜ. ಆದರೆ ಅವರ ಜೀವಿತ ಕಾಲದಲ್ಲಿ ಅವರು ಅತ್ಯಂತ ದಾರುಣ ಕ್ಷಣಗಳನ್ನು ಕಂಡಿರುವುದೂ ನಿಜ. ಅದನ್ನೆಲ್ಲವನ್ನೂ ಮೇಲಿನ ಘಟನೆಗಳು ಸಂಕೇತಿಸುತ್ತವೆ.
ಚಿಕ್ಕಂದಿನಿಂದಲೂ ಸಿನಿಮಾ ಬಗ್ಗೆ ಒಲವು. ಅಣ್ಣ ಪ್ರಭಾಕರ ಶಾಸ್ತ್ರಿ ಕನ್ನಡ ಸಿನಿಮಾದಲ್ಲಿ ಹೆಸರು ಮಾಡಿದ್ದರು. ಬಸ್ ಗ್ಯಾರೇಜಿನಲ್ಲಿ, ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡಿ, ಛಾಯಾಗ್ರಹಣದ ಬಗ್ಗೆ ತಿಳಿದುಕೊಂಡು, ನಾಟಕ ಕಂಪನಿ ಸೇರಿ, ಬೆನ್ನ ಹಿಂದೆ ನಾಟಕದ ಪ್ರಚಾರದ ತಡಿಕೆ ಬೋರ್ಡ್ ಕಟ್ಟಿಕೊಂಡು ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ಮಾಡಿ ಮೇಲೇರಿದವರು ಪುಟ್ಟಣ್ಣ. ಹಾಗೆ ಪ್ರಚಾರಕ್ಕಾಗಿ ಕಂಪಲಾಪುರಕ್ಕೆ ಬಂದಾಗ ಅಲ್ಲಿ ಅಂಗಡಿ ರಂಗಸ್ವಾಮಿ ಎಂಬವರು ಬಾಂಡ್ಲಿಯಲ್ಲಿ ಕಡ್ಲೆಪುರಿ ನೀಡುತ್ತಿದ್ದರಂತೆ. ಇದು ನಿತ್ಯದ ಪರಿಪಾಠವಾಗಿ, ದೊಡ್ಡ ನಿರ್ದೇಶಕರಾದ ಬಳಿಕವೂ ತಮ್ಮ ಊರಿಗೆ ಹೋಗುವಾಗ ಅಂಗಡಿ ರಂಗಸ್ವಾಮಿಯವರನ್ನು ಭೇಟಿ ಮಾಡಿ ಮಾತನಾಡಿಸಿ, ಬಾಲ್ಯದ ದಿನಗಳಂತೆ ಕಡ್ಲೆಪುರಿ ತಿಂದು ನೀರು ಕುಡಿದು ಹೋಗುತ್ತಿದ್ದರು. ಪುಟ್ಟಣ್ಣನವರ ಸರಳತೆಗೆ ಇದು ಸಾಕ್ಷಿಯಾಗಿತ್ತು.
= ಕಂಪ್ಲಾಪುರ ಮೋಹನ್
(9880900893)