ಸ್ಮಾರ್ಟಿಗೂ ಲೆನ್ಸ್ ಹಾಕಿ

ಕ್ಯಾಮರಾ ಬಗ್ಗೆ ಹುಚ್ಚಾಪಟ್ಟೆ ಪ್ರೀತಿಸುವ ಗೆಳೆಯನೊಬ್ಬ ಕಳೆದ ವಾರ ಸಿಕ್ಕಿದ್ದ. ಒಂದು ಕೈನಲ್ಲಿ ಪ್ರೇಯಸಿಯ ಹಸ್ತ, ಮತ್ತೊಂದು ಕೈನಲ್ಲಿ ಕ್ಯಾಮರಾ ಇದ್ದಾಗ ಆಕೆಯ ಕೈ ಮರೆತರೂ ಕ್ಯಾಮರಾವನ್ನು ಬಿಡದಷ್ಟು ಹುಚ್ಚು ಹಿಡಿಸಿಕೊಂಡಿದ್ದ ವ್ಯಕ್ತಿಯಾತ. ಆದರೆ ಕಳೆದ 3 ತಿಂಗಳಿಂದ ಆತನ ಮೊದಲನೇ ಗೆಳತಿ ಕೈನಿಂದ ದೂರವಾಗಿದ್ದಳು, ಬದಲಾಗಿ ಆತನ ಸ್ಮಾರ್ಟಿಯೇ ಗೆಳತಿಯಾಗಿದ್ದಳು. ಕ್ಯಾಮರಾ ಬದಲಿಗೆ ಆತ ಸ್ಮಾರ್ಟ್ಫೋನನ್ನೇ ಬಳಸಲು ಆರಂಭಿಸಿದ್ದ. ಸ್ಮಾರ್ಟಿಯ ಅರ್ಧ ಗಾತ್ರದ ಒಂದು ಪುಟ್ಟ ಲೆನ್ಸ್ ಆತನ ಕ್ಯಾಮರಾ ನೋಟವನ್ನೇ ಬದಲಿಸಿತ್ತು.
ಸಾರ್ಟ್ಫೋನ್ ಮಾರುಕಟ್ಟೆ ವಿಸ್ತಾರವಾಗುತ್ತಿದ್ದಂತೆ ಅದಕ್ಕೆ ಸಂಬಂಧಿಸಿದ ಚಿತ್ರ ವಿಚಿತ್ರ ಗ್ಯಾಜೆಟ್ಗಳು ಆವಿಷ್ಕಾರವಾಗುತ್ತಾ ಹೋಯಿತು. ಇದರಲ್ಲಿ ಸ್ವಲ್ಪ ಕುತೂಹಲ ಹಾಗೂ ಇಷ್ಟವಾಗುವಂತೆ ಮಾಡಿದ್ದು ಸ್ಮಾರ್ಟ್ಫೋನ್ ಕ್ಯಾಮರಾ ಲೆನ್ಸ್. ನಿಮ್ಮ ಸ್ಮಾರ್ಟಿಯ ಕ್ಯಾಮರಾದ ತುದಿಗೆ ಲೆನ್ಸ್ ಕೂಡಿಸಬಹುದು. ಅಕ್ಷರಶಃ ಒಂದು ಎಸ್ಎಲ್ಆರ್ ಕ್ಯಾಮರಾ ಹೇಗೆ ಕೆಲಸ ಮಾಡುತ್ತದೆಯೋ ಹಾಗೆಯೇ ಈ ಲೆನ್ಸ್ ಸಹಿತ ಕ್ಯಾಮರಾ ಕಾರ್ಯನಿರ್ವಹಿಸುತ್ತದೆ. ಈ ಲೆನ್ಸ್ಗಳನ್ನು ದಿನದ 24 ಗಂಟೆಯೂ ಉಪಯೋಗಿಸಲೇಬೇಕು ಅಥವಾ ಸ್ಮಾರ್ಟಿಗೆ ಅಂಟಿಸಿಕೊಂಡೇ ಇರಬೇಕೆಂದಿಲ್ಲ. ಎಲ್ಲೋ ಕಾಡಿಗೆ ಹೋದಾಗ ಅಥವಾ ಫೋಟೋ ಸೆಷನ್ ನಡೆಸಬೇಕೆಂದುಕೊಂಡಾಗ ಲೆನ್ಸ್ ಸೇರಿಸಿಕೊಂಡರಾಯಿತು. ಇದರಿಂದ ನಮ್ಮ ಸ್ಮಾರ್ಟಿಯನ್ನು ಇನ್ನಷ್ಟು ಮಲ್ಟಿ ಟಾಸ್ಕಿಂಗ್ ಮಾಡಬಹುದು.
ಇಂದಿನ ಸ್ಮಾರ್ಟ್ಫೋನ್ ಕೇವಲ ಫೋನಾಗಿ ಉಳಿದಿಲ್ಲ. ಬದಲಾಗಿ ಏಕಾಂತದಲ್ಲಿ ನಿಮ್ಮ ಸಂಗಾತಿ, ಕಾಲ ಕಳೆಯಲು ಗೆಳೆಯ, ಮಾಹಿತಿ ಪ್ರಪಂಚವನ್ನು ತೆರೆದಿಡುವ ಮಾಯಾಲೋಕವಾಗಿದೆ. ನಿಮಗೆ ಬೇಕಾದ ಹಾಗೆ ಮೊಬೈಲ್ನ್ನು ಬಳಸಿಕೊಳ್ಳಬಹುದು. ಇದರ ಜತೆಗೆ ಇಂತಹ ಲೆನ್ಸ್ಗಳು ಸೇರಿಕೊಂಡರೆ ಭವಿಷ್ಯದಲ್ಲಿ ಎಲೆಕ್ಟ್ರಾನಿಕ್ ಗ್ಯಾಜೆಟ್ನ ಎಲ್ಲ ಸ್ವರೂಪವನ್ನು ಸ್ಮಾರ್ಟಿಯೇ ಆವರಿಸುವುದರಲ್ಲಿ ಸಂದೇಹವಿಲ್ಲ. ಯಾವುದೇ ತಂತ್ರಜ್ಞಾನವನ್ನು ಸ್ಮಾರ್ಟ್ಗೊಳಿಸಿ ಮೊಬೈಲ್ನಲ್ಲಿ ಸೇರಿಸಬಹುದೆಂದು ಇಂದಿನ ತಂತ್ರಜ್ಞಾನವೇ ಸಾಕಾರಗೊಳಿಸಿದೆ. ಯಾವುದೆಲ್ಲ ಅಸಾಧ್ಯವೆನ್ನುತ್ತಿದ್ದೆವೋ ಅವೆಲ್ಲ ತಂತ್ರಜ್ಞಾನಗಳು 100 ಮೀ ರೇಸಿಗೆ ಬಿದ್ದಂತೆ ಸ್ಮಾರ್ಟ್ ಜಗತ್ತಿನೊಳಗೆ ಕಾಲಿಡುತ್ತಿದೆ.
ಆನ್ಲೈನ್ ಮಾರುಕಟ್ಟೆಯಲ್ಲಿ ಇಂತಹ ಲೆನ್ಸ್ಗಳು ಸಿಗುತ್ತಿರುವುದು ಕಡಿಮೆ. ಬಹುತೇಕ ಆನ್ಲೈನ್ ಮಾರುಕಟ್ಟೆಗಳಲ್ಲಿ ರೂ.450ರಿಂದ ರೂ.5 ಸಾವಿರದವರೆಗೂ ಸ್ಮಾರ್ಟ್ ಲೆನ್ಸ್ ಲಭ್ಯವಿದೆ. ಸಾಮಾನ್ಯವಾಗಿ 8 ಎಕ್ಸ್ ಆಪ್ಟಿಕಲ್ ಝೂಮ್ನಿಂದ 12 ಎಕ್ಸ್ ಆಪ್ಟಿಕಲ್ ಝೂಮ್ವರೆಗಿನ ಲೆನ್ಸ್ ಲಭ್ಯವಿವೆ. ಇಂದಿನ ದುಬಾರಿ ಮೊಬೈಲ್ಗಳ ಕ್ಯಾಮರಾಗಳು 12ರಿಂದ 15 ಮೆಗಾ ಪಿಕ್ಸಲ್ ಹೊಂದಿರುತ್ತವೆ. ಆದರೆ ಆಪ್ಟಿಕಲ್ ಝೂಮ್ ಕೇವಲ ಒಂದು ಅಥವಾ ಎರಡು ಎಕ್ಸ್ಗೆ ಸೀಮಿತವಾಗಿರುತ್ತದೆ. ಆದರೆ ಈ ಹೆಚ್ಚುವರಿ ಲೆನ್ಸ್ನ 12 ಎಕ್ಸ್ ಆಪ್ಟಿಕಲ್ ಝೂಮ್ ನಿಮ್ಮ ಮೊಬೈಲ್ನ ಕ್ಯಾಮರಾ ಕಣ್ಣನ್ನೇ ಬದಲಿಸುತ್ತದೆ. ಇದರಿಂದ ಫೋಟೋದ ಗುಣಮಟ್ಟದಲ್ಲಿ ಎಸ್ಎಲ್ಆರ್ಗೆ ಅಲ್ಪ ಮಟ್ಟಿಗೆ ಸ್ಪರ್ಧೆ ನೀಡುವಂತೆಯೇ ಇದೆ.
ಯಾವುದೇ ಕಾಂಜಿಪಿಂಜಿ ಕ್ಯಾಮರಾ ಕೊಂಡುಕೊಳ್ಳುವ ಬದಲು ನಿಮ್ಮ ಮೊಬೈಲ್ಗೆ ಲೆನ್ಸ್ ಜೋಡಿಸುವುದು ಉತ್ತಮ. ಆದರೆ ಒಂದಂತು ನಿಜ, ಅತ್ಯುತ್ತಮ ಎಸ್ಎಲ್ಆರ್ ಲೆನ್ಸ್ಗಳಿಗೆ ಇದು ಸರಿಸಾಟಿಯಾಗಲು ಸಾಧ್ಯವಿಲ್ಲ. ಅಂದಹಾಗೆ ಈ ಸ್ಮಾರ್ಟಿ ಲೆನ್ಸ್ಗೆ ಟ್ರೈಪಾಡ್ ಕೂಡ ದೊರೆಯುತ್ತದೆ. ಆರಂಭಿಕ ದರದ ಲೆನ್ಸ್ಗಳಿಗೆ ಟ್ರೈಪಾಡ್ ಸಿಗುವುದಿಲ್ಲ. ಆದರೆ ಅಲ್ಪ ದುಬಾರಿಯ ಲೆನ್ಸ್ ಜತೆಗೆ ನಿಮ್ಮ ಸ್ಮಾರ್ಟಿಯನ್ನೇ ಎತ್ತಿ ಹಿಡಿಯುವಂತಹ ಟ್ರೈಪಾಡ್ಗಳು ದೊರೆಯುತ್ತವೆ.
ಪ್ರಸ್ತುತ ಆ್ಯಪಲ್, ಎಲ್ಜಿ, ಸ್ಯಾಮ್ಸಂಗ್, ಎಚ್ಟಿಸಿ ಸೇರಿದಂತೆ ಬಹುತೇಕ ಲೇಟೆಸ್ಟ್ ಸಾರ್ಟಿಗಳಿಗೆ ಲೆನ್ಸ್ ಲಭ್ಯವಿದೆ. ಗ್ಯಾಲಕ್ಸಿಯ ಕೆಲ ಮಿಡ್ಲ್ ವರ್ಷನ್ಗಳಿಗೂ ಅಮೆಝಾನ್, ಈ-ಬೇಯಂತಹ ಆನ್ಲೈನ್ ಅಂಗಡಿಗಳಲ್ಲಿ ಸಿಗುತ್ತಿದೆ. ಸ್ಯಾಮ್ಸಂಗ್ ಸೇರಿದಂತೆ ಕೆಲ ಕಂಪನಿಗಳು ಕ್ಯಾಮರಾಗಳಿಗೆ ಬಳಸುವಂತಹ ಲೆನ್ಸ್ಗಳನ್ನೇ ಸ್ಮಾರ್ಟಿಗೂ ಬಳಸಲು ಸಂಶೋ'ನೆ ನಡೆಸುತ್ತಿವೆ. ವರ್ಷಾಂತ್ಯಕ್ಕೆ ಇದು ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ.
- ರಾಜೀವ ಹೆಗಡೆ
meet.hegde@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


