ಅಮೆರಿಕದಲ್ಲಿ ಸಂಶೋಧನೆ

ನಮ್ಮ ಸಂಬಂಧಿಗಳ ಪೈಕಿ ಸುಧಾ- ರಂಗನಾಥನ್ ದಂಪತಿ ಬಹು ಬೇಗ ಅಮೆರಿಕದಲ್ಲಿ ನೆಲೆಯೂರಿದರು. ವೀಸಾ, ಉದ್ಯೋಗ, ಗ್ರೀನ್ಕಾರ್ಡ್, ವಿಲ್ಲಾ ಕೊಳ್ಳುವುದು ಎಲ್ಲವೂ ಸುಸೂತ್ರವಾಗಿ ನಡೆದು ಹೋಗಿ ಯಾರೇ ಅಮೆರಿಕಕ್ಕೆ ಹೊರಟರೂ ನೀವು ಈ ದಂಪತಿಗಳಂತೆ ನೆಲೆಯೂರಬೇಕೆಂದು ನಾವು ಇವರನ್ನೇ ರೋಲ್ಮಾಡೆಲ್ ಆಗಿ ಉಲ್ಲೇಖಿಸುತ್ತಿದ್ದೆವು. ಈ ಉಲ್ಲೇಖದಲ್ಲಿದ್ದ ಒಂದೇ ಒಂದು ಊನವೆಂದರೆ ಈ ದಂಪತಿಗೆ ಮಕ್ಕಳಾಗಿರಲಿಲ್ಲ. ಬೆಂಗಳೂರಿಗೇ ಒಂದು ಸಲ ಬಂದು ಹೋಮ ಹವನವನ್ನು ಮಾಡಿಸಿದ್ದರು. ಸುಧಾ ನಾರ್ಟನ್ ಥಾಮಸ್ನಂಥ ದೊಡ್ಡ ಕಂಪನಿಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿದ್ದರೂ ಬಿಂಕ ಬಿಗುಮಾನವಿಲ್ಲದೆ, ಮಲ್ಲಿಕಾರ್ಜುನ ಗುಡಿಯ ಎದುರಿಗಿನ ಅಶ್ವತ್ಥ ವೃಕ್ಷಕ್ಕೆ ಇಪ್ಪತ್ತೊಂದು ದಿನ ಸತತವಾಗಿ ಪ್ರದಕ್ಷಿಣೆ ಹಾಕಿದ್ದಳು. ಯಾರನ್ನೇ ಕೇಳಿದರೂ ದಂಪತಿಗೆ ಸಂತಾನಯೋಗ ಖಂಡಿತವಾಗಿ ಇದ್ದೇ ಇದೆಯೆಂದೇ ಎಲ್ಲರೂ ಹೇಳುತ್ತಿದ್ದರು.
ಎಲ್ಲರ ನಿರೀಕ್ಷೆ ಹಾರೈಕೆಯಂತೆ ಕೊನೆಗೂ ಸುಧಾ ಗರ್ಭಿಣಿಯಾದಾಗ ಇಲ್ಲಿ ನಮ್ಮ ಫಿರ್ಕಾದಲ್ಲೆಲ್ಲ ಸಂತೋಷ ಮತ್ತು ನಿಟ್ಟುಸಿರು. ರಂಗನಾಥ್- ಸುಧಾ ಸಂಸಾರ ಯಥಾಪ್ರಕಾರ ಹಳಿಯ ಮೇಲೆ ನಡೆಯುತ್ತಿದ್ದುದರಿಂದ ಯಾರಿಗೂ ಯಾವ ರೀತಿಯ ಮನಸ್ಸಿನ ಕಿರಿಕಿರಿಯೂ ಇಲ್ಲ. ದಸರಾದ ಸಮಯದಲ್ಲೇ ಹೆರಿಗೆ ದಿನವನ್ನೂ ಸೂಚಿಸಿದ್ದರಿಂದ ಏನಾದರೂ ಮಾಡಿ ಮಗು ವಿಜಯದಶಮಿಯಂದೇ ಹುಟ್ಟುವ ಹಾಗೆ ಪ್ಲ್ಯಾನ್ ಮಾಡಬಹುದೇ ಎಂಬುದೇ ಎಲ್ಲರ ಯೋಚನೆ.
ದಸರಾ ಹಬ್ಬಕ್ಕೆ ಇನ್ನು ಮೂರು ತಿಂಗಳಿರುವಾಗಲೇ ದಂಪತಿ ಕೆಲಸ ಬಿಟ್ಟು, ವಿಲ್ಲಾ ಮಾರಿ ಬೆಂಗಳೂರಲ್ಲೇ ನೆಲೆಯೂರಲು ಬರುತ್ತಾರೆಂಬ ಸುದ್ದಿ ಕೇಳಿ ನಾವು ನಂಬಲೇ ಇಲ್ಲ. ನಂಬಲು ಯಾರಿಗೂ ಇಷ್ಟವಿರಲಿಲ್ಲ. ಆದರೆ ಸುದ್ದಿ ನಿಜವಿತ್ತು. ಬಂದೇಬಿಟ್ಟರು. ಕಾರಣ ತಿಳಿದದ್ದು ಎಷ್ಟೋ ದಿನಗಳ ನಂತರ.ಹುಟ್ಟಲಿರುವ ಮಗು ಗಂಡು ಎಂದು ಸ್ಕ್ಯಾನಿಂಗ್ನಲ್ಲೇ ಗೊತ್ತಾಗಿತ್ತು. ಒಂದು ಸಲ ತಿಂಗಳ ತಪಾಸಣೆಗೆ ಹೋಗಿದ್ದಾಗ ಡಾಕ್ಟರ್ ಹೇಳಿದರಂತೆ.
ಇದೇನಿದು, ನಿಜಕ್ಕೂ ಆಶ್ಚರ್ಯ. ನಿಮ್ಮ ಮಗು ಈ ಸ್ಥಿತಿಯಲ್ಲೇ ಇನ್ನೂ ಮೂಡುತ್ತಿರುವ ಶಿಶ್ನದ ಜೊತೆ ಆಡೋಕೆ ಇಷ್ಟೊಂದು ಇಷ್ಟಪಡುತ್ತೆ. ದಂಪತಿಗೆ ಶಾಕು. ಡಾಕ್ಟರ್ ಇಮೇಜ್ನ ಖುದ್ದಾಗಿ ತೋರಿಸಿದ್ದರಿಂದ ನಂಬಲೇ ಬೇಕಾಯಿತು. ಮುಂದಿನ ಸಲದ ಪಾಕ್ಷಿಕ ತಪಾಸಣೆಗೆ ಹೋದಾಗಲೂ ಹೀಗೇ ಆಯಿತು. ಭಾರತೀಯ ದಂಪತಿಯಲ್ಲವೇ. ಮನಸ್ಸಿಗೆ ಹಿಂಸೆಯೂ ಆಯಿತು.
ಏನೂ ಮಾಡೋಕ್ಕಾಗಲ್ಲವೆ, ಡಾಕ್ಟರನ್ನು ಅಂಗಲಾಚಿದರು. ಇದರಲ್ಲಿ ನಮ್ಮ ಪಾತ್ರವೇನಿದೆ ಎಂದು ಡಾಕ್ಟರ್ ಕೈ ಚೆಲ್ಲಿಬಿಟ್ಟರು. ಹಾಗೆ ಕೈಚೆಲ್ಲಿದ್ದು ದಂಪತಿಯೆದುರಿಗೆ ಮಾತ್ರ.
ವೃತ್ತಿನಿಷ್ಠೆಗನುಗುಣವಾಗಿ ವಿಷಯವನ್ನು ರಾಷ್ಟ್ರೀಯ ಆರೋಗ್ಯ ಸಂಶೋಧನಾ ಮಂಡಳಿಗೆ ತಿಳಿಸಿದರು. ಈ ಕಾಲದಲ್ಲಿ ಮಕ್ಕಳು ಏಕೆ ಭ್ರೂಣಾವಸ್ಥೆಯಲ್ಲೇ ಶಿಶ್ನದ ಜೊತೆ ಆಟವಾಡಲು ಬಯಸುತ್ತವೆ ಎಂಬುದರ ಬಗ್ಗೆ ಅಮೆರಿಕ ಸರ್ಕಾರದ ವತಿಯಿಂದ ರಹಸ್ಯ ಸಂಶೋಧನೆ ನಡೆಯುತ್ತಿತ್ತು. ಇದು ಹೀಗೇ, ಇದು ಇಷ್ಟೇ ಎಂದು ಹೇಳುವಷ್ಟು ಖಚಿತವಾಗಿ ಸಂಶೋಧನೆ ಮುಂದುವರಿಯದಿದ್ದರೂ ಅಮೆರಿಕದಲ್ಲಿ ಇಂಥ ಭ್ರೂಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದ್ದುದು, ಹಾಗೆ ಗುರುತಿಸಲ್ಪಟ್ಟ ಭ್ರೂಣಗಳಲ್ಲಿ ಬಹುಪಾಲು ಭ್ರೂಣಗಳ ಮಾತಾಪಿತರು ಭಾರತ- ಚೀನಾ- ಪಾಕಿಸ್ತಾನಕ್ಕೆ ಸೇರಿದವರಾಗಿರುವುದು ಸಂಶೋಧನೆಗೆ ರಹಸ್ಯ ಮತ್ತು ರಾಜತಾಂತ್ರಿಕ ಸ್ವರೂಪವನ್ನು ಕೊಟ್ಟಿತು.
ಒಂದು ಹಂತದಲ್ಲಿ ವೈದ್ಯರು ಸಂಶೋಧನೆಯ ವಿಷಯವನ್ನು ದಂಪತಿಗೆ ತಿಳಿಸಲೇಬೇಕಾಯಿತು. ಅನುನಯದಿಂದ ವಿವರಿಸಿ ಸಹಕಾರ ಕೋರಿದರು. ಇದು ಕೆಲವು ಭ್ರೂಣಗಳಿಗೆ ಸಂಬಂಧಿಸಿದ್ದೋ, ಇಲ್ಲ ಮುಂದಿನ ತಲೆಮಾರುಗಳ ಲೈಂಗಿಕತೆಯ ಬಗ್ಗೆ ಹೊಸದಾಗಿ ಏನನ್ನಾದರೂ ಸೂಚಿಸುವ ಪ್ರತೀಕವೋ, ರೂಪಕವೋ ಎಂಬುದು ಸಂಶೋಧನೆಯಲ್ಲಿ ತೀರ್ಮಾನವಾಗಬೇಕಾದ ವಿಷಯ. ದಯವಿಟ್ಟು ಈ ಐತಿಹಾಸಿಕ ಮಹತ್ವದ ಪ್ರಾಜೆಕ್ಟ್ನಲ್ಲಿ ಸಹಕರಿಸಿ.
ಸಹಕಾರವೆಂದರೆ ಭ್ರೂಣಕ್ಕೆ ಏಳು ತಿಂಗಳು ತುಂಬಿದ ನಂತರ ದಂಪತಿ ಒಟ್ಟಾಗಿ ಇಲ್ಲ ಕೊನೇಪಕ್ಷ ಸುಧಾ ಆದರೂ ದೇಶದ ರಾಜಧಾನಿ ವಾಷಿಂಗ್ಟನ್ನಲ್ಲಿರಬೇಕು. ಪ್ರತಿದಿನವೂ ಭ್ರೂಣವನ್ನೂ, ಇಲ್ಲ ಸೀಮಂತ ದಾಟಿದ ಶಿಶುವನ್ನೂ ಒಂದು ಸಲ ಸ್ಕ್ಯಾನಿಂಗ್ಗೆ ಒಪ್ಪಿಸಬೇಕು. ಜೊತೆಗೆ ಶಿಶುವು ಶಿಶ್ನದ ಜೊತೆ ವ್ಯವಹರಿಸುತ್ತಿರುವ ವಿದ್ಯಮಾನ ಕುರಿತಂತೆ ತಾಯಿ ಮನಸ್ಸಿನಲ್ಲಾಗುತ್ತಿರುವ ತಳಮಳವನ್ನು ರೆಕಾರ್ಡ್ ಪ್ಲೇಯರ್ಗೆ ಮಾತಾಡಬೇಕು. ಮುಖ್ಯವಾಗಿ ಇದನ್ನೆಲ್ಲ ರಹಸ್ಯವಾಗಿಡಬೇಕು.
ದಂಪತಿ ಹೌಹಾರಿದರು. ವಿಷಯ ಎಷ್ಟು ಸೂಕ್ಷ್ಮವಾಗಿತ್ತೆಂದರೆ, ಎಷ್ಟು ಸಾಂಸ್ಕೃತಿಕವಾಗಿತ್ತೆಂದರೆ- ಯಾರ ಹತ್ತಿರವೂ ಚರ್ಚಿಸುವ ಹಾಗಿಲ್ಲ. ಭಯ, ಆತಂಕ. ಇವರು ಮಲಗುವ ಕೋಣೆಯಲ್ಲಿ ಇದ್ದ ದೊಡ್ಡ ಕನ್ನಡಿಯಲ್ಲಿ ಒಂದು ವರ್ಷದ, ಎರಡು ವರ್ಷದ, ನಾಲ್ಕು ವರ್ಷದ, ಹತ್ತು ವರ್ಷದ ಮಗು ಬಂದು ಇವರೆದುರಿಗೆ ತನ್ಮಯವಾಗಿ ಶಿಶ್ನದೊಡನೆ ಆಡುವುದಕ್ಕೆ ಶುರುಮಾಡುವುದು. ಇಬ್ಬರನ್ನೂ ಬನ್ನಿ ಬನ್ನಿ ಎಂದು ಕೈ ಕೂಗಿ ಕರೆಯುವುದು. ಇವರು ಸ್ಪಂದಿಸದೆ ಹೋದಾಗ ಮುಸಿಮುಸಿ ನಗುತ್ತಿದ್ದವು. ಹಗಲಲ್ಲಿರಲಿ, ರಾತ್ರಿ ಹೊತ್ತು ದೀಪ ಆರಿಸಿದಾಗಲೂ ಕನ್ನಡಿಯಲ್ಲಿ ಇದೇ ದೃಶ್ಯ. ಮನೆಯಲ್ಲಿ ಇರುವುದಕ್ಕೇ ಕಷ್ಟವಾಗಿ ರೇಲ್ವೆ ಸ್ಟೇಶನ್ ಹತ್ತಿರ ವಿಬ್ಗ್ಯಾರ್ ಹೋಟೆಲಿನಲ್ಲಿ ರೂಮು ತಗೊಂಡರೆ, ಮನೆಯ ಕನ್ನಡಿಯ ದೃಶ್ಯಾವಳಿಯೇ ಹೋಟೆಲ್ ಕನ್ನಡಿಯಲ್ಲೂ.
ದಂಪತಿ ತಮ್ಮ ತಮ್ಮಲ್ಲೇ ಚರ್ಚಿಸಿ ಗುಟ್ಟು ಗುಟ್ಟಾಗಿ ಕೆಲಸಕ್ಕೆ ರಾಜೀನಾಮೆ ಕೊಟ್ಟು, ವಿಲ್ಲಾ ಮಾರಿ, ಬ್ಯಾಂಕ್ ಖಾತೆ ಬರಕಾಸ್ತು ಮಾಡಿ, ಮಗುವಿನ ಹೆರಿಗೆ ಇಂಡಿಯಾದಲ್ಲೇ ಆಗಲಿ ಅಂತ ಹೊರಟು ಬಂದೇಬಿಟ್ಟರು.
ಪ್ರಸಾದನೆಂಬ ಗಂಡು ಮಗುವು ಇಲ್ಲೇ ಹುಟ್ಟಿ ಬೆಳೆಯುವುದಕ್ಕೆ ಪ್ರಾರಂಭಿಸಿತು. ಎಷ್ಟೋ ವರ್ಷಗಳ ತನಕ ಅಮೆರಿಕದವರು ಇವರನ್ನು ಬಿಡಲೇ ಇಲ್ಲ. ಬನ್ನಿ ಬನ್ನಿ, ವಾಪಸ್ ಬನ್ನಿ. ನಿಮ್ಮ ಎರಡನೇ ಹೆರಿಗೆ ಪೂರ್ತಿ ವೆಚ್ಚದ ಹೊಣೆ ಅಮೆರಿಕ ಸರ್ಕಾರದ್ದೇ. ಮೊದಲನೆ ಮಗು ವಿದ್ಯಾಭ್ಯಾಸದ ಖರ್ಚು ಕೂಡ.
ಅಮೆರಿಕದವರು ಎಷ್ಟೇ ತಿಪ್ಪರಲಾಗ ಹಾಕಿದರೂ ಇವರು ಅಟ್ಲಾಂಟಿಕ್ ಕಡೆಗೆ ಮುಖ ಮಾಡಲಿಲ್ಲ.
-ಕೆ. ಸತ್ಯನಾರಾಯಣ
kssatya600@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


