ಟರ್ಮಿನಲ್ಲೊಳಗೆ ಗೂಡು ಕಟ್ಟಿದ ಹಕ್ಕಿ

ಯುದ್ಧ- ಬಂದೂಕಿನಾಚೆಯ ಅನಾಥ ಕೂಗು
ಸದ್ಯಕ್ಕೆ ಇರಾಕ್ನಲ್ಲಿ ನಡೆಯುತ್ತಿರುವ ಕ್ಷಿಪ್ರಕ್ರಾಂತಿ ನಿಲ್ಲದಿದ್ದರೆ ಕ್ರಾಂತಿಯ ನಂತರ, ಆ ದೇಶ ಒಡೆಯುವುದು ಬಹುತೇಕ ಖಚಿತ. ಹಾಗಾದಲ್ಲಿ, ಅಲ್ಲಿನ ಜನರ ನಾಗರಿಕತೆಗೆ ಸಂಚಕಾರ ಬರಲಿದೆ. ಹೀಗೆ ದೇಶವೊಂದು ಅಸ್ತಿತ್ವ ಕಳೆದುಕೊಂಡಲ್ಲಿ, ಆ ದೇಶದ ನಾಗರಿಕರು ತಾವು ಯಾವ ದೇಶಕ್ಕೆ ಸೇರಿದವರು ಎಂಬುದು ಅಧಿಕೃತವಾಗಿ ಘೋಷಣೆಯಾಗುವವರೆಗೂ ಅವರು ನೇಪಥ್ಯದಲ್ಲೇ ಇರಬೇಕಾಗುತ್ತೆ.
ಇಂಥದ್ದೇ ಒಂದು ವಿಭಿನ್ನ ಕಥಾವಸ್ತುವನ್ನಿಟ್ಟುಕೊಂಡು ಹಾಲಿವುಡ್ನಲ್ಲಿ 'ದಿ ಟರ್ಮಿನಲ್' ಎಂಬ ಚಿತ್ರ ತೆರೆಗೆ ಬಂದಿತ್ತು. 'ಜುರಾಸಿಕ್ ಪಾರ್ಕ್' ಖ್ಯಾತಿಯ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ನಿರ್ದೇಶಿಸಿದ್ದರು. ಕ್ಷಿಪ್ರಕ್ರಾಂತಿ ಕುರಿತಂತೆ ಹಲವು ಚಿತ್ರಗಳು ಹಾಲಿವುಡ್ನಲ್ಲಿ ಬಂದಿವೆ. ಆದರೆ, ಈ ಚಿತ್ರ ಮಾತ್ರ ತನ್ನ ವಿಭಿನ್ನ ಚಿತ್ರಕತೆಯಿಂದಾಗಿ ಎಲ್ಲರ ಗಮನ ಸೆಳೆದಿತ್ತು.
ಚಿತ್ರದಲ್ಲಿ ನಾಯಕ ವಿಕ್ಟರ್ ನವೋಸ್ಕಿ ಕಾರ್ಯನಿಮಿತ್ತ ಅಮೆರಿಕಕ್ಕೆ ಬರುತ್ತಾನೆ. ಜಾನ್ ಎಫ್. ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಈತನ ಪಾಸ್ಬುಕ್, ವಿಸಾ ಇತ್ಯಾದಿ ದಾಖಲೆಗಳನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ವಶಪಡಿಸಿಕೊಳ್ಳುತ್ತಾರೆ. ಕಾರಣ, ವಿಕ್ಟರ್ ತನ್ನ ದೇಶವನ್ನು ಬಿಟ್ಟು ಅಮೆರಿಕದೆಡೆಗೆ ಪ್ರಯಾಣ ಬೆಳೆಸಿದ ಸಮಯದಲ್ಲಿ ಆತನ ದೇಶದಲ್ಲಿ ಕ್ಷಿಪ್ರಕ್ರಾಂತಿ ನಡೆದು, ಆ ದೇಶ ಒಡೆದು ಚೂರಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿರುತ್ತದೆ.
ಈ ಹಿನ್ನೆಲೆಯಲ್ಲಿ, ಆತ ಯಾವ ದೇಶಕ್ಕೆ ಸೇರಿದವನು ಎನ್ನುವುದು ಅಧಿಕೃತವಾಗಿ ಗೊತ್ತಾಗುವವರೆಗೂ ಆತನನ್ನು ಅಮೆರಿಕ ಪ್ರವೇಶಿಸಲು ಅನುಮತಿ ನೀಡದಿರಲು ವಿಮಾನ ನಿಲ್ದಾಣದ ಅಧಿಕಾರಿಗಳು ನಿರ್ಧರಿಸಿ ಆತನನ್ನು ನಿಲ್ದಾಣ ಬಿಟ್ಟು ಹೊರಗೆ ಹೋಗದಂತೆ ಸೂಚನೆ ನೀಡುತ್ತಾರೆ. ಇಲ್ಲಿಂದ ಶುರುವಾಗುತ್ತೆ ವಿಕ್ಟರ್ನ ಕಷ್ಟಗಳು. ವಾಪಸ್ ತನ್ನ ದೇಶಕ್ಕೆ (?) ಹೋಗಲಾರದೆ, ಅಮೆರಿಕದೊಳಕ್ಕೂ ಹೋಗಲಾರದೇ ಚಡಪಡಿಸುತ್ತಾನೆ ಆತ. ಇದಿಷ್ಟೂ ಕಥೆ ಚಿತ್ರ ಆರಂಭವಾದ ಮೊದಲ ಅರ್ಧ ಗಂಟೆಯೊಳಗೇ ನಡೆಯುತ್ತದೆ. ಆನಂತರದ ಒಂದು ಗಂಟೆಯ ಸಿನಿಮಾ ಇದೆಯಲ್ಲ... ಅಲ್ಲೇ ಇರೋದು ಅಸಲಿ ಮಜಾ.
ನಿಲ್ದಾಣ ಬಿಟ್ಟು ಹೊರಗೆ ಕಾಲಿಡದ ಅನಿವಾರ್ಯಕ್ಕೆ ಸಿಲುಕುವ ವಿಕ್ಟರ್, ಅಲ್ಲಿ ತಾನಿದ್ದಷ್ಟು ದಿನವೂ ಲವಲವಿಕೆಯಿಂದ ಜೀವನ ಸಾಗಿಸುತ್ತಾನೆ. ನಿಲ್ದಾಣದ ಶೌಚಾಲಯಗಳಲ್ಲಿ ದಿನವೂ ಸ್ನಾನ ಮಾಡುತ್ತಾ, ಅಲ್ಲಿರುವ ಇರುವ ರೆಸ್ಟೋರೆಂಟ್ಗಳಲ್ಲಿ ಊಟ, ತಿಂಡಿ ತಿನ್ನುತ್ತಾನೆ. ರಾತ್ರಿ ವೇಳೆ ಅಲ್ಲೆಲ್ಲೋ ಪ್ರಯಾಣಿಕರು ಕೂರುವ ಬೆಂಚ್ಗಳ ಮೇಲೆ ಮಲಗಿ ನಿದ್ರಿಸುತ್ತಿರುತ್ತಾನೆ. ತಂದಿದ್ದ ಹಣ ಖಾಲಿಯಾದ ಮೇಲೆ, ನಿಲ್ದಾಣದಲ್ಲೇ ಕೆಲಸ ನೋಡಿಕೊಳ್ಳುತ್ತಾನೆ. ಪ್ರಯಾಣಿಕರ ಲಗೇಜು ಟ್ರಾಲಿಗಳನ್ನು ತಳ್ಳುವ ಮೂಲಕ ಹಣ ದುಡಿಯುತ್ತಾನೆ. ಆ ಅತ್ಯಲ್ಪ ಹಣದಲ್ಲಿ ಬ್ರೆಡ್ಡು, ಬರ್ಗರ್ ತಿಂದು ದಿನಗಳನ್ನು ಕಳೆಯುತ್ತಾನೆ.
ಇಷ್ಟರಲ್ಲಿ, ಇಡೀ ವಿಮಾನ ನಿಲ್ದಾಣದಲ್ಲಿನ ಸಿಬ್ಬಂದಿಯ ಆಪ್ತನಾಗುವ ಆತ, ಅವರಿಗೆ ಅನೇಕ ರೀತಿಯಲ್ಲಿ ನೆರವಾಗುತ್ತಾನೆ. ಇಬ್ಬರು ಸಿಬ್ಬಂದಿಯ ನಡುವಿನ ಪ್ರೇಮಕ್ಕೆ ರಾಯಭಾರಿಯಾಗಿ ಕೆಲಸ ಮಾಡಿ ಅವರನ್ನು ಒಂದು ಮಾಡುತ್ತಾನೆ. ಆದರೆ, ಚಿತ್ರಕ್ಕೊಂದು ಕ್ಲೈಮ್ಯಾಕ್ಸ್ ಇರಬೇಕಲ್ಲ. ಹಾಗೆಯೇ, ವಿಕ್ಟರ್ನ ಸಮಸ್ಯೆ ನಿವಾರಣೆಗೊಳ್ಳುತ್ತೆ. ಅವನು ನಿಲ್ದಾಣದಿಂದ ಹೊರಹೋಗುವ ದಿನ ಬಂದೇ ಬರುತ್ತೆ. ತೇವವಾದ ಕಣ್ಣಾಲಿಗಳಿಂದ ವಿಕ್ಟರ್ನನ್ನು ಹೊರಕಳುಹಿಸುತ್ತಾರೆ ಅವರ ಸ್ನೇಹಿತರು. ನಿಲ್ದಾಣದಿಂದ ಹೊರಬರುತ್ತಿದ್ದಂತೆ ತನ್ನೆರಡೂ ಕೈಗಳನ್ನು ಅಕ್ಕಪಕ್ಕಕ್ಕೆ ಚಾಚಿ, ಮುಗಿಲು ನೋಡುತ್ತಾ ದೀರ್ಘ ಉಸಿರು ತೆಗೆದುಕೊಂಡು ಸ್ವಾತಂತ್ರ್ಯವನ್ನು ಅನುಭವಿಸುವ ದೃಶ್ಯವಂತೂ ಮನಮುಟ್ಟುತ್ತದೆ. <
ನೈಜ ಘಟನೆ ಆಧರಿಸಿದ್ದು...
ಈ ಚಿತ್ರದ ಕಥೆಯು ನೈಜ ಘಟನೆಯನ್ನಾಧರಿಸಿದ್ದು. ಇದರ ಮೂಲ ಹುಡುಕುತ್ತಾ ಹೋದರೆ, ಅದು ಇರಾನ್ನ ಕಡೆಗೇ ಬೆಟ್ಟು ಮಾಡಿ ತೋರಿಸುತ್ತದೆ. ಕಾರ್ಯ ನಿಮಿತ್ತ ಫ್ರಾನ್ಸ್ಗೆ ಬಂದ, ಇರಾನ್ನ ಪ್ರಜೆ ಮೆಹ್ರನ್ ಕರಿಮಿ ನೆಸೆರಿ ಅವರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೂಡಲೇ ನಿರಾಶ್ರಿತರೆನಿಸಿಕೊಳ್ಳುತ್ತಾರೆ. ಹಾಗಾಗಿ, ಅವರು ಪ್ಯಾರೀಸ್ನ ಚಾರ್ಲ್ಸ್ ಡಿ ಗಯೆಲ್ಲೆ ವಿಮಾನ ನಿಲ್ದಾಣದಲ್ಲಿ ಬಂಧಿಯಾಗುತ್ತಾರೆ. ಅದೂ ಬರೀ ಕೆಲವು ದಿನಗಳವರೆಗಲ್ಲ. 1988ರಿಂದ 2006ರವರೆಗೆ ಬರೋಬ್ಬರಿ 17 ವರ್ಷ ಅವರು ತಮ್ಮ ಜೀವನವನ್ನು ವಿಮಾನ ನಿಲ್ದಾಣದೊಳಗೇ ಕಳೆಯುತ್ತಾರೆ! ಅಲ್ಲಿನ ತಮ್ಮ ಅನುಭವಗಳನ್ನು ಅವರು ತಮ್ಮ ಪುಸ್ತಕ 'ದಿ ಟರ್ಮಿನಲ್ ಮ್ಯಾನ್'ನಲ್ಲಿ ದಾಖಲಿಸುತ್ತಾರೆ. ಇದೇ ಪುಸ್ತಕ 'ದಿ ಟರ್ಮಿನಲ್' ಪುಸ್ತಕಕ್ಕೆ ಸ್ಫೂರ್ತಿಯಾಗುತ್ತದೆ.
-ಚೇತನ್ ಓ.ಆರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


