ಯಾವುದಕ್ಕೂ 'ಕಡಮೆ' ಇಲ್ಲದ ಕತೆಗಳು
ಈಗಾಗಲೆ ತಮ್ಮ ಬರೆಹಗಳಿಂದ ಗುರುತಿಸಿಕೊಂಡಿರುವ ಸುನಂದಾ ಪ್ರಕಾಶ ಕಡಮೆ ಅವರ ಹೊಸ ಕತೆಗಳ ಸಂಕಲನ 'ಕಂಬಗಳ ಮರೆಯಲ್ಲಿ' ಬಂದಿದೆ. ಇದರಲ್ಲಿ ಹದಿನೈದು ಕತೆಗಳಿವೆ. ಮನುಷ್ಯ ಸಂಬಂಧಗಳನ್ನು ಒರೆಗೆ ಹಚ್ಚಿ ಶ್ರೇಷ್ಠ ಕನಿಷ್ಠಗಳನ್ನು ಮನಗಾಣಿಸುವ ಪ್ರಯತ್ನ ಅವರಲ್ಲಿ ಕಾಣುತ್ತದೆ. ಇತರರಿಗೆ ತೀರಾ ಕ್ಷುಲ್ಲಕವೆನಿಸುವ ವಿಷಯಗಳೂ ಆಯಾ ವ್ಯಕ್ತಿಯ ನೆಲೆಯಲ್ಲಿ ಪರಿಭಾವಿಸಿದಾಗ ಅದರ ಅಗಾಧತೆ ಮನವರಿಕೆಯಾಗುತ್ತದೆ. ಸಾಹಿತಿಯೊಬ್ಬನಿಗೆ ಅಗತ್ಯವಾದ ಪರಕಾಯ ಪ್ರವೇಶದ ಶಕ್ತಿ ಸುನಂದಾ ಅವರಲ್ಲಿ ಇರುವುದರಿಂದ ಪಾತ್ರಗಳ ಅನುಭವ ಅವರ ಅನುಭವವಾಗಿ ತೀರಾ ಸಹಜವೆನ್ನಿಸುವ ನಿರೂಪಣೆಯೊಂದಿಗೆ ಇಲ್ಲಿ ದಾಖಲಾಗಿವೆ.
ಈ ಸಂಕಲನದಲ್ಲಿನ ಮೊದಲ ಕತೆ 'ಸುಭದ್ರಕ್ಕ'. ಹಳ್ಳಿಯಲ್ಲೇ ಹುಟ್ಟಿ ಬೆಳೆದ ಆಕೆ ಪಟ್ಟಣದಲ್ಲಿಯ ತನ್ನ ಮಗನ ಮನೆಗೆ ಬಂದಿದ್ದಾಳೆ. ವಯಸ್ಸಾಗಿದೆ. ವೃದ್ಧಾಪ್ಯಕ್ಕೆ ಸಹಜವಾದ ಅನಾರೋಗ್ಯವಿದೆ. ಮಗ ಸೊಸೆ ಇಬ್ಬರೂ ಕೆಲಸಕ್ಕೆ ಹೋಗುವವರು. ಮೊಮ್ಮಗಳು ಶಾಲೆಗೆ ಹೋಗುವವಳು. ಅವರು ಹೋದ ಮೇಲೆ ಮನಯಲ್ಲಿ ಇವಳೊಬ್ಬಳೇ. ನಗರ ಬದುಕಿನಲ್ಲಿ ಹಳ್ಳಿಯವರು ಅನುಭವಿಸುವ ಸಾಮಾನ್ಯ ಕಿರಿಕಿರಿಯೆಂದರೆ ಪಾಯಖಾನೆಯದು. ಮೂರು ಬೈ ಮೂರರ ಇಕ್ಕಟ್ಟಿನ ಜಾಗದಲ್ಲಿ ಕೆಲವೇ ನಿಮಿಷ ಕೂಡುವುದೂ ಅವರಿಗೆ ಆಗದ ಮಾತು. ಸುಭದ್ರಕ್ಕ ಹಳ್ಳಿಯಲ್ಲಿ ದೊಡ್ಡ ಬಯಲಿನಲ್ಲಿ ಅದನ್ನೆಲ್ಲ ಮುಗಿಸಿಕೊಳ್ಳುವವಳು. ಮಗನ ಸಂಸಾರದೊಂದಿಗೆ ತಾದಾತ್ಮ್ಯ ಬೆಳೆಯದೇ ಇರುವುದಕ್ಕೆ ಮತ್ತು ಹಳ್ಳಿಗೆ ವಾಪಸಾಗಬೇಕು ಎಂದು ಅವಳ ಮನಸ್ಸು ಹಂಬಲಿಸುವುದಕ್ಕೆ ಈ ಪಾಯಖಾನೆಯೇ ಕಾರಣವಾಗಿತ್ತು.
ಅಂಥದ್ದರಲ್ಲಿ ಒಂದು ದಿನ ಅವಳಿಗೆ ಪಾಯಖಾನೆಗೆ ಹೋಗುವಷ್ಟರಲ್ಲೇ ಲಂಗದಲ್ಲೇ ಮಲವಿಸರ್ಜನೆಯಾಗಿಬಿಡುತ್ತದೆ. ಮನೆಯೆಲ್ಲ ವಾಸನೆಯಾಗುತ್ತದೆ. ಮಗ, ಸೊಸೆ, ಮೊಮ್ಮಗಳು ಮನೆಗೆ ಮರಳುವುದರೊಳಗೆ ಆಕೆಯ ಮನಸ್ಸಿನಲ್ಲಾಗುವ ಹೊಯ್ದಾಟಗಳನ್ನು ಸುನಂದಾ ತುಂಬಾ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ವಿವರಗಳನ್ನು ಕಟ್ಟುವುದರಲ್ಲಿ ಅವರು ಯಶವಂತ ಚಿತ್ತಾಲರನ್ನು ನೆನಪಿಗೆ ತರುತ್ತಾರೆ. ಮಗ ಸೊಸೆ ಮೊಮ್ಮಗಳು ಮನೆಗೆ ಬಂದಮೇಲೆ ಅವರು ಆಕೆಯೊಂದಿಗೆ ವ್ಯವಹರಿಸುವುದು ಬಹಳ ಮಾನವೀಯವಾಗಿದೆ. ವೃದ್ಧರನ್ನು ಮಕ್ಕಳು ನಿರ್ಲಕ್ಷಿಸುತ್ತಾರೆ ಎನ್ನುವ ಸಾಮಾನ್ಯ ಭಾವನೆಗಳ ನಡುವೆ ಇದೊಂದು ಬೆಚ್ಚಗಿನ ಅನುಭವವನ್ನು ನೀಡುತ್ತದೆ.
ಕತೆಯ ಕೊನೆಯ ಪ್ಯಾರಾ ಇದು: 'ಇಷ್ಟು ಹೊತ್ತಿನ ಆತಂಕ ಅಸಹನೆ ತಲ್ಲಣಗಳೆಲ್ಲ ಕರಗಿ ಸೊಸೆಯ ಕೈಯಿಂದ ಸೂಸುತ್ತಿದ್ದ ಪರಿಮಳದ ಧೂಪದೊಂದಿಗೆ ಸೇರಿ ಎಲ್ಲೆಡೆ ಹರಡಿ, ತನ್ನ ಒಳ ಮನಸ್ಸನ್ನೂ ಶುದ್ಧಿಗೊಳಿಸಿಕೊಳ್ಳುತ್ತ ಇದ್ದಲ್ಲೇ ಉಲ್ಲಸಿತಳಾದಳು ಸುಭದ್ರಕ್ಕ. ಸಂಜೆಯ ನಸುಗತ್ತಲಲ್ಲಿ ಮೈತ್ರಿ ಹಚ್ಚಿದ ವಿದ್ಯುದ್ದೀಪ ಸಂಭ್ರಮದಲ್ಲೇ ಬೆಳಗತೊಡಗಿತು. ಆ ಬೆಳಕಿನ ಪ್ರಕಾಶದಲ್ಲೇ ಸುಭದ್ರಕ್ಕ, ಸಂಬಂಧಗಳ ಬೆಳಕನ್ನು ಎಂದಿಲ್ಲದ ಮೌನದಿಂದ ಆಸ್ವಾದಿಸತೊಡಗಿದಳು.' ಮನಸ್ಸನ್ನು ಆರ್ದ್ರಗೊಳಿಸುವ ಕತೆ ಇದು.
ಹಾಗೆಯೇ ಇನ್ನೊಂದು ಕತೆ 'ನಡು ಹಗಲಿನ ಮೌನ'. ಆಧುನಿಕ ಜಗತ್ತಿನ ಬಾಡಿಗೆ ತಾಯಿಯ ವಸ್ತುವನ್ನು ಇದು ಹೊಂದಿದೆ. ಐವತ್ತು ದಾಟಿದ ಕಲ್ಯಾಣಪುರಕರ, ನಲವತ್ತೈದರ ಪತ್ನಿ ಆಶಾತಾಯಿಗೆ ಮಕ್ಕಳಿಲ್ಲ. ಅವರು ಹೊಸ ಮನೆಯನ್ನು ಕಟ್ಟಿಸುವ ಸಮಯದಲ್ಲಿ ವಾಚ್ಮನ್ ಆಗಿದ್ದ ಶಿವಪ್ಪ ಮತ್ತು ಆತನ ಪತ್ನಿ ನೀಲವ್ವ ನಂತರವೂ ಅವರ ಮನೆಯ ಶೆಡ್ಡಿನಲ್ಲೇ ವಾಸಿಸುತ್ತಾರೆ. ಆಶಾತಾಯಿಗೆ ನೀಲವ್ವನ ಮೂಲಕ ಮಗುವನ್ನು ಪಡೆಯಬೇಕು ಎಂಬ ಆಶೆ ಚಿಗುರುತ್ತದೆ. ನೀಲವ್ವನೊಂದಿಗೆ ಮಾತನಾಡಿ ಆಕೆಯನ್ನು ಒಪ್ಪಿಸುತ್ತಾಳೆ. ಆಕೆಯ ಗಂಡನ ಸಾಲ ಚುಕ್ತಾಮಾಡಿ ವ್ಯವಹಾರ ಕುದುರಿಸುತ್ತಾರೆ. ಆದರೆ ಶಿವಪ್ಪನಿಗೆ ಈ ವಿಷಯ ಹೇಳಿರುವುದಿಲ್ಲ. ಮಗು ಹುಟ್ಟಿದ ಮೇಲೆ ಶಿವಪ್ಪನಿಗೆ ಅನುಮಾನ ಬರಲಾರಂಭಿಸುತ್ತದೆ. ತನ್ನ ಹೆಂಡತಿಯ ಶೀಲದ ಬಗ್ಗೆಯೇ ಆತ ಶಂಕಿಸಲು ಶುರುಮಾಡಿದಾಗ ತನ್ನ ಸಂಸಾರವನ್ನು ಉಳಿಸಿಕೊಳ್ಳಲು ನೀಲವ್ವ ಗಂಡನಿಗೆ ವಿಷಯ ತಿಳಿಸುತ್ತಾಳೆ. ಕೊನೆಗೆ ಅವಳು ಆ ಮಗುವನ್ನು ತೊರೆದು ಹೋಗುತ್ತಾಳೆ.
ಆಧುನಿಕ ತಾಂತ್ರಿಕತೆಯ ಬಗ್ಗೆ ಸಾಮಾನ್ಯ ಜನರಲ್ಲಿ ಸಂಪೂರ್ಣ ತಿಳಿವಳಿಕೆ ಇಲ್ಲದಿದ್ದರೆ ಏನಾಗಬಹುದು ಎಂಬ ಸೂಚನೆ ಒಂದೆಡೆಯಾದರೆ ಕರುಳಬಳ್ಳಿಯನ್ನು ತೊರೆದು ಹೋಗುವಂಥ ಅಮಾನವೀಯ ಮುಖದ ದರ್ಶನ ಮತ್ತೊಂದೆಡೆ. ಬಾಡಿಗೆ ತಾಯಿಯಾದರೇನು, ಒಂಬತ್ತು ತಿಂಗಳು ಹೆತ್ತವಳ ನೋವನ್ನು ಹೆಣ್ಣೊಬ್ಬಳೇ ಗ್ರಹಿಸಬಲ್ಲಳು. ಆ ನೋವಿಗೆ ಸುನಂದಾ ಇಲ್ಲಿ ದನಿಯಾಗಿದ್ದಾರೆ.
ಶೀರ್ಷಿಕೆಯ ಕತೆ 'ಕಂಬಗಳ ಮರೆಯಲ್ಲಿ' ಮಗು ಬಾಸುನ ತಂದೆ ನೀಲಕಂಠ ಪತ್ನಿ ಪ್ರಫುಲ್ಲಾಳಿಗೆ ಕೇಳುವ, 'ಅಂದರೆ? ಜನಿವಾರ ಇಲ್ಲದ ಮಕ್ಕಳಿಗೆ ಹಸಿವೇ ಆಗಬಾರದು ಅಂತ ನಿಮ್ಮ ಸ್ವಾಮಿ ಕಾನೂನು ಬರೆದಿದ್ದಾನೇನು?...' ಎನ್ನುವುದು ಎಲ್ಲ ಬಡವರ, ಅಬ್ರಾಹ್ಮಣರ ಪ್ರಶ್ನೆಯಾಗಿ ಧ್ವನಿಸುತ್ತದೆ.
'ಸುನಂದಾರ ಕತೆಗಳಲ್ಲಿ ಭಯದ, ಆತಂಕದ, ನೋವಿನ ಲಯಗಳಿದ್ದರೂ ಅವು ಪ್ರೀತಿಯ ಮೂಲ ಲಯದಲ್ಲಿ ವಿಶ್ರಾಂತಿ ಪಡೆಯುತ್ತವೆ. ಇದೇ ಅವರು ಕಂಡ ಹಾಗೂ ತೋರಿಸುವ ದರ್ಶನ' ಎಂದು ವಿಮರ್ಶಕ ಜಿ.ಎಸ್. ಆಮೂರ್ ಹೇಳಿರುವ ಮಾತು ಸರಿಯಾಗಿಯೇ ಇದೆ.
ಸುನಂದಾ ಅವರ ಕತೆಗಳಲ್ಲಿ ಅಬ್ಬರದ ಆಕ್ರೋಶವಿಲ್ಲ, ತಣ್ಣಗಿನ ಲೇವಡಿಯಿದೆ. ಇದು ಸರಿಯೇ ಎಂಬ ಪ್ರಶ್ನೆಯಿದೆ. ಹೀಗೆ ಮಾಡಿದ್ದರೆ ಸರಿಹೋಗುತ್ತಿತ್ತಲ್ಲ ಎಂಬ ಕಳಕಳಿ ಇದೆ. ಈ ಕಾರಣಕ್ಕಾಗಿಯೇ ಇವು ಆಪ್ತವೆನ್ನಿಸುತ್ತವೆ.
ಪ್ರ: ಅಂಕಿತ ಪುಸ್ತಕ, ಬೆಂಗಳೂರು, ಪುಟಗಳು 152, ಬೆಲೆ ರು. 130
-ಡಾ. ವಾಸುದೇವ ಶೆಟ್ಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

