ಖುಷಿ

ಮಗಳನ್ನು ಐಎಎಸ್ ಅಧಿಕಾರಿ ಮಾಡ್ತೀನಿ...

ಮಗಳನ್ನು ಐಎಎಸ್ ಅಧಿಕಾರಿ ಮಾಡ್ತೀನಿ...
Published On :

ಇಷ್ಟು ದಿನ ಕಾಡು- ಮೇಡು, ಕೋರ್ಟು- ಕಚೇರಿ ಅಲೆದಾಡಿ ಸಾಕಾಗಿದೆ. ನಾನು ಜೈಲಿನಲ್ಲಿದ್ದ ಸಂದರ್ಭದಲ್ಲಿ ಮಕ್ಕಳು ತಮಿಳುನಾಡಿನಲ್ಲಿ ಓದುತ್ತಿದ್ದರಿಂದ ಇದೀಗ ಮಕ್ಕಳನ್ನು ನೋಡಿಕೊಂಡು ತಮಿಳುನಾಡಿನ ಮೆಟ್ಟೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ. ಮಕ್ಕಳ ವ್ಯಾಸಂಗ ಮುಗಿದ ನಂತರ ಎಲ್ಲಿ ನೆಲೆಸಬೇಕು ಎಂಬುದನ್ನು ನಿರ್ಧರಿಸುತ್ತೇನೆ. ಇಷ್ಟು ದಿನ ತಮಿಳುನಾಡಿನಲ್ಲಿ ವಾಸವಾಗಿದ್ದರಿಂದ ಇಲ್ಲಿಯೇ ನನ್ನ ಮತ ಇತ್ತು. ಪೆನ್ನಾಗರಂ ಕ್ಷೇತ್ರದಿಂದ  ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡೆ. ಇದೀಗ ತಮಿಳುನಾಡಿನ ಮತಪಟ್ಟಿಯಲ್ಲಿದ್ದ ನನ್ನ ಹೆಸರನ್ನು ತೆಗೆಸಿ, ಕರ್ನಾಟಕದ ಗೋಪಿನಾಥಂನಲ್ಲಿ ಸೇರಿಸಲು ಅರ್ಜಿ ಸಲ್ಲಿಸಿದ್ದೇನೆ. ನನ್ನ ಗಂಡ ಬದುಕಿದ್ದಾಗ ಒಳ್ಳೆಯದು ಮತ್ತು ಕೆಟ್ಟದ್ದು ಎರಡನ್ನೂ ಮಾಡಿದ್ದಾರೆ. ಅವರು ಯಾವ ಒಳ್ಳೆಯ ಕೆಲಸ ಮಾಡಿದ್ದರು. ಅದನ್ನು ಮುಂದುವರಿಸಿಕೊಂಡು ಹೋಗಬೇಕೆಂಬ ಆಲೋಚನೆ ಇದೆ. ಜನರು ನನ್ನ ಬಳಿ ಕಷ್ಟಸುಖ ಹೇಳಿಕೊಳ್ಳುತ್ತಾರೆ. ನಾನು ಅವರ ಕಷ್ಟಸುಖಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕಿದೆ.
ವೀರಪ್ಪನ್ ಇದ್ದಾಗ ಈ ಭಾಗಕ್ಕೆ ಅಧಿಕಾರಿಗಳು ಬರಲು ಹೆದರುತ್ತಿದ್ದರು. ಇದರಿಂದಾಗಿ ಗೋಪಿನಾಥಂ ಸುತ್ತಮುತ್ತಲಿನ ಗ್ರಾಮಗಳು ಅಭಿವೃದ್ಧಿಯಿಂದ ವಂಚಿತವಾಗಿದೆ. ಕನಿಷ್ಠ ಮೂಲಭೂತ ಸೌಕರ್ಯ ಇಲ್ಲವಾಗಿದೆ. ಮನೆ ಮಠ ಇಲ್ಲದೆ ಜನ ಅತಂತ್ರ ಬದುಕು ಸಾಗಿಸುತ್ತಿದ್ದಾರೆ. ಅಂದು ಅಧಿಕಾರಿಗಳ ನಿರ್ಲಕ್ಷ್ಯ, ಪೊಲೀಸರ ಅಟ್ಟಹಾಸಗಳು ಈ ಭಾಗ ಹಿಂದುಳಿಯಲು ಕಾರಣವಾಗಿವೆ. ಇದೀಗ ಇಲ್ಲಿನವರನ್ನು ಎತ್ತಂಗಡಿ ಮಾಡಿಸಲು ಅರಣ್ಯಾಧಿಕಾರಿಗಳು ತಂತ್ರ ರೂಪಿಸಿದ್ದಾರೆ. ಕಿರುಕುಳ ಕೊಡಲಾರಂಭಿಸಿದ್ದಾರೆ. ಇದನ್ನು ಸಹಿಸಲು ನನ್ನಿಂದ ಸಾಧ್ಯವಿಲ್ಲ. ನನ್ನ ಪತಿ ಬದುಕಿದ್ದಾಗ ಈ ಭಾಗದ ಜನತೆಗೆ ತೊಂದರೆಯಾದರೆ ಸಹಿಸುತ್ತಿರಲಿಲ್ಲ. ಇದೀಗ ಇಲ್ಲಿನವರ ಪರ ಹೋರಾಟ ಮಾಡಲು ನಾನು ಅವರೊಂದಿಗೆ ಕೈಜೋಡಿಸುವುದು ಅನಿವಾರ್ಯ. ಅದಕ್ಕಾಗಿ ಹೋರಾಡಲು ನಿರ್ಧರಿಸಿದ್ದೇನೆ.   ಕೊಳ್ಳೇಗಾಲ ತಾಲೂಕಿನ ಗೋಪಿನಾಥಂನಲ್ಲಿ ಮನೆ ಮತ್ತು 7-8 ಎಕರೆ ಜಮೀನಿದ್ದು, ಸದ್ಯಕ್ಕೆ ಅಕ್ಕ (ವೀರಪ್ಪನ್ ಅತ್ತಿಗೆ) ನೋಡಿಕೊಳ್ಳುತ್ತಿದ್ದಾರೆ. ನನಗೂ ಆ ಜಾಗದಲ್ಲಿ ಬೆಳೆದಿದ್ದನ್ನು ಒಂದಿಷ್ಟು ನೀಡುತ್ತಾರೆ. ನಾನು ಜೈಲು ಶಿಕ್ಷೆ ಅನುಭವಿಸಿ ಹಲವು ಪ್ರಕರಣಗಳಿಂದ ಮುಕ್ತಿ ಪಡೆದು, ಹೊರಬಂದ ನಂತರ ಬದುಕು ಕಟ್ಟಿಕೊಳ್ಳಲು ಹೆಣಗಾಡಬೇಕಾಗಿದೆ. ದೊಡ್ಡ ಮಗಳು ವಿದ್ಯಾರಾಣಿಗೆ ಲಗ್ನವಾಗಿದೆ. ಸಣ್ಣವಳು ಪ್ರಭಾರಾಣಿ, ಬಿಎ (ಇಂಗ್ಲಿಷ್ ಮೇಜರ್) ಓದುತ್ತಿದ್ದಾಳೆ. ಅವಳನ್ನು ಐಎಎಸ್ ಅಧಿಕಾರಿ ಮಾಡಬೇಕೆಂಬ ಕನಸು ನನ್ನದು.
ವೀರಪ್ಪನ್ ಕಾರ್ಯಾಚರಣೆ ಸಂದರ್ಭದಲ್ಲಿ ನಮ್ಮ ಕಡೆಯವರು ಸತ್ತಿದ್ದಾರೆ. ವೀರಪ್ಪನ್ ಹಿಡಿಯಲು ಬಂದ ಪೊಲೀಸರು ಸತ್ತಿದ್ದಾರೆ. ಅವರ ಪತ್ನಿಯರು ನನ್ನಂತೆ ವಿಧವೆಯರಾಗಿದ್ದಾರೆ. ಅವರ ಕುಟುಂಬದವರನ್ನು ಸರ್ಕಾರ ಚೆನ್ನಾಗಿ ನೋಡಿಕೊಳ್ಳಬೇಕು. ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಬೇಕು. ಮನೆಯ ಯಜಮಾನನನ್ನು ಕಳೆದುಕೊಂಡ ಅವರಿಗೆ ನೆಮ್ಮದಿ ಕಲ್ಪಿಸಬೇಕು.
ವೀರಪ್ಪನ್ರ ನಾಲ್ವರು ಸಹಚರರಿಗೆ ವಿಧಿಸಿರುವ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ನಾನು  ಹೋರಾಟ ಮಾಡುತ್ತಲೇ ಬಂದಿದ್ದೆ. ಇದೀಗ ಜ್ಞಾನಪ್ರಕಾಶ್, ಸೈಮನ್, ಮೀಸೆಕಾರ ಮಾದಯ್ಯ ಹಾಗೂ ಬಿಲವೇಂದ್ರನ್ಗೆ ಸುಪ್ರೀಂ ಕೋರ್ಟ್ ಮರಣದಂಡನೆ ರದ್ದುಪಡಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ. ಅವರು ಇಷ್ಟು ದಿನ ಶಿಕ್ಷೆ ಅನುಭವಿಸಿದ್ದು ಸಾಕು. ಅವರನ್ನು ಬಿಡುಗಡೆ ಮಾಡಬೇಕಿದೆ. ಆಗಷ್ಟೇ ನನಗೆ ಸ್ವಲ್ಪ ಮಟ್ಟಿಗೆ ಖುಷಿಯಾಗುತ್ತದೆ. ಅವರನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲೂ ಮನವಿ ಮಾಡಿಕೊಳ್ಳುತ್ತೇನೆ.


(ನಿರೂಪಣೆ: ದೇವರಾಜು ಕಪ್ಪಸೋಗೆ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.