ಆ ರಾಬಿನ್ ಹುಡ್ಡು ಈ ವೀರಪ್ಪನ್ನೂ...

ವೀರಪ್ಪನ್... ಪ್ರಚಂಡ ಕಾಡುಗಳ್ಳ. 'ದಂತ ಚೋರ', 'ನರ ಹಂತಕ' ಇತ್ಯಾದಿ ಕುಖ್ಯಾತಿಗಳನ್ನು ಪಡೆದು ತನ್ನದೇ ಆದ ಛಾಪು ಮೂಡಿಸಿದ್ದ ಈತನ ಬಗ್ಗೆ ಹಲವು ಕಾಲ ಜನಮಾನಸದಲ್ಲಿ ಹರಿದಾಡಿದ್ದು ದಂತಕಥೆಗಳೇ. ಆದರೆ, ಈ ಕಥೆಗಳ ನಡುವೆಯೂ ಆತನನ್ನು ಹೀರೋ ಎಂದು ಬಿಂಬಿಸುವ ಕಥೆಗಳಿಗೇನೂ ಕೊರತೆಯಿರಲಿಲ್ಲ. ಆತನಿಗೆ ಬಡವರೆಂದರೆ ಮಮಕಾರ. ತಾನು ದೋಚಿದ್ದ ಹಣವನ್ನೆಲ್ಲ ತಂದು ಬಡವರ ಕಷ್ಟಗಳ ನಿವಾರಣೆಗೆ ಬಳಸುತ್ತಿದ್ದ- ಎಂಬರ್ಥದ ಕಥೆಗಳು ಸುಳಿದಾಡುತ್ತಿದ್ದವು.
ಈ ಕಥೆಗಳು ಎಷ್ಟು ದಿಟವೋ, ಎಷ್ಟು ಸುಳ್ಳೋ ಗೊತ್ತಿಲ್ಲ. ಆದರೆ, ಆತ ಬಡವರಿಗೆ ಸಹಾಯ ಮಾಡ್ತಾನಂತೆ ಎಂಬುದೇ ಪ್ರಧಾನವಾಗಿ, ಆವತ್ತಿನ ಮಟ್ಟಿಗೆ ಆತನನ್ನು 'ಭಾರತದ ರಾಬಿನ್ಹುಡ್' ಎಂಬಂತೆ ಬಿಂಬಿಸಿದ್ದಂತೂ ಸುಳ್ಳಲ್ಲ.
ಇಬ್ಬರಲ್ಲೂ ಸಾಮ್ಯತೆ
ರಾಬಿನ್ಹುಡ್ ಕಳ್ಳನಾಗಿದ್ದಕ್ಕೂ, ವೀರಪ್ಪನ್ ಕಾಡುಗಳನ್ನನಾಗಿದ್ದಕ್ಕೂ ಕಾರಣ ಬೇರೆ. ಇಲ್ಲ... ಎಲ್ಲಿಯ ರಾಬಿನ್ ಹುಡ್, ಎಲ್ಲಿಯ ವೀರಪ್ಪನ್? ಊಹ್ಞೂಂ... ಇಬ್ಬರ ಕಾಲ, ದೇಶ, ಭಾಷೆ, ಸಂಸ್ಕೃತಿ, ಆಲೋಚನೆ, ವ್ಯಕ್ತಿತ್ವ, ಚರಿತ್ರೆ.. ಎಲ್ಲವೂ ಬೇರೆ ಬೇರೆಯದ್ದೇ. ಆತನಾದರೋ ಮಧ್ಯಯುಗದಲ್ಲಿದ್ದ ವ್ಯಕ್ತಿ (ಈ ಬಗ್ಗೆ ಇನ್ನೂ ನಿಖರವಾದ ದಾಖಲೆಗಳಿಲ್ಲ), ಈತ ಇತ್ತೀಚಿನವ. ಆತ ಬಿಲ್ವಿದ್ಯೆ ಹಾಗೂ ಕತ್ತಿವರಸೆಯಲ್ಲಿ ಚಾಣಾಕ್ಷ. ವೀರಪ್ಪನ್ ಒಬ್ಬ ಉತ್ತಮ ಶೂಟರ್. ಆತ, ಶ್ರೀಮಂತರನ್ನು ದೋಚುತ್ತಿದ್ದ. ವೀರಪ್ಪನ್ ಕಾಡು ಹಾಗೂ ಆನೆದಂತಗಳನ್ನು ದೋಚುತ್ತಿದ್ದ. ಹೀಗೆ, ಹಲವು ವಿಷಯಗಳಲ್ಲಿ ವ್ಯತ್ಯಾಸಗಳಿವೆ. ಆದರೂ, ವೀರಪ್ಪನ್ ಹಾಗೂ ರಾಬಿನ್ ಹುಡ್ನಲ್ಲಿ ಸಮಾನವಾಗಿ ಕಂಡಿದ್ದು, ಅದು ಬಡವರಿಗೆ ಸಹಾಯ ಮಾಡುವ ಅಂಶ ಮಾತ್ರ.
ಕಲೆ, ಸಾಹಿತ್ಯ ಪ್ರಪಂಚಕ್ಕೆ ಸ್ಫೂರ್ತಿ
ಇದಕ್ಕೂ ಮಿಗಿಲಾಗಿ ಈ ಇಬ್ಬರಲ್ಲೂ ಇದ್ದ ಮತ್ತೊಂದು ಸಾಮ್ಯತೆಯೆಂದರೆ, ಈ ಇಬ್ಬರೂ ಅನೇಕ ಜಾನಪದ ಕಥೆಗಳಿಗೆ, ಕಾದಂಬರಿಗಳಿಗೆ, ಸಿನಿಮಾಗಳಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಸ್ಫೂರ್ತಿಯಾದವರು. ಆಂಗ್ಲ ಸಾಹಿತ್ಯ ಪ್ರಪಂಚದಲ್ಲಿ, 14ನೇ ಶತಮಾನದಲ್ಲೇ ಹೊರಬಂದ ಪಿಯರ್ಸ್ ಫ್ಲೋಮನ್ ಎಂಬ ಮಹಾಕಾವ್ಯದ 5396ನೇ ಸಾಲಿನಲ್ಲಿ ರಾಬಿನ್ ಹುಡ್ ಬಗ್ಗೆ ಹೇಳಲಾಗಿತ್ತು. ನಂತರ, 16ನೇ ಶತಮಾನದ ಆರಂಭಿಕ 10 ಸಂವತ್ಸರಗಳಲ್ಲಿ ಹುಡ್ ಬಗ್ಗೆ ಸ್ವಾರಸ್ಯಕರ ಕಥೆಗಳು ಹೊರಬಂದವು. ಥಾಮಸ್ ಗಾಯ್ಲೆ ಬರೆದ 'ಡೀನ್ ಆಫ್ ಪ್ಯಾರ್ಕ್', 'ಎ ಗೆಸ್ಟ್ ಆಫ್ ರಾಬಿನ್ಹುಡ್', 'ರಾಬಿನ್ಹುಡ್ ಆ್ಯಂಡ್ ಪಾಟರ್', 'ರಾಬಿನ್ ಹುಡ್ ಆ್ಯಂಡ್ ಶ್ರಿಫ್ ಆಫ್ ನಾಟಿಂಗ್ಹ್ಯಾಮ್', 'ರಾಬಿನ್ಹುಡ್ ಆ್ಯಂಡ್ ಗಯ್ ಆಫ್ ಗಿಸ್ಬಾರ್ನ್'- ಪ್ರಮುಖ ಪುಸ್ತಕಗಳು ರಾಬಿನ್ ಹುಡ್ ಜೀವನವನ್ನಾಧಾರಿಸಿ ಹೊರಬಂದವು.
ಇತ್ತ, ವೀರಪ್ಪನ್ ಸಹ ಕಲಾ ಪ್ರಪಂಚಕ್ಕೆ ಸ್ಫೂರ್ತಿಯಾದವನೇ. ಆತನ ಕುರಿತಂತೆ ಅನೇಕ ಸಿನಿಮಾಗಳು ಬಂದಿವೆ. ಕೆಲ ಸಿನಿಮಾಗಳಲ್ಲಿ ವೀರಪ್ಪನ್ನಂಥ ವ್ಯಕ್ತಿಯನ್ನೇ ಹೋಲುವ ಪಾತ್ರಗಳೂ ಸೃಷ್ಟಿಯಾಗಿವೆ. ಕನ್ನಡದ 'ಚಿನ್ನ', 'ಕುರಿಗಳು ಸಾರ್ ಕುರಿಗಳು' ಮುಂತಾದ ಚಿತ್ರಗಳಲ್ಲಿ ವೀರಪ್ಪನ್ನನ್ನು ಹೋಲಿಸುವ ಪಾತ್ರ ಸೃಷ್ಟಿಯಾದರೆ, 'ವೀರಪ್ಪನ್', 'ಅಟ್ಟಹಾಸ' ಚಿತ್ರಗಳು ಆತನ ಜೀವನ ಕಥೆಯನ್ನೇ ಆಧರಿಸಿ ತಯಾರಾದವು. ಕೇವಲ ಕನ್ನಡ ಮಾತ್ರವಲ್ಲ, ದಕ್ಷಿಣ ಭಾರತದ ಅನೇಕ ಚಿತ್ರಗಳಲ್ಲಿ ವೀರಪ್ಪನ್ನನ್ನು ಹೋಲುವ ಹಲವು ಪಾತ್ರಗಳು ಸೃಷ್ಟಿಯಾಗಿದ್ದವು. ಹಿಂದಿಯ 'ಸರ್ಫರೋಷ್'ನಲ್ಲಿ 'ವೀರನ್' ಎಂಬ ನೆಗೆಟಿವ್ ಶೇಡ್ ಇರುವ ಪಾತ್ರವನ್ನೇ ಸೃಷ್ಟಿಸಲಾಗಿತ್ತು.
ಆತನ ಪ್ರಭಾವ ಹೆಚ್ಚು
ವೀರಪ್ಪನ್ ಆದರೂ ಹೀಗೆ, ಭಾರತೀಯ ಚಿತ್ರರಂಗದ ಮೇಲೆ ಪರಿಣಾಮ ಬೀರಿದರೆ, ರಾಬಿನ್ ಹುಡ್ ಮಾತ್ರ ಪ್ರಪಂಚದ ಬಹುತೇಕ ಚಿತ್ರರಂಗಗಳ ಮೇಲಲ್ಲದೇ ಭಾರತೀಯ ಚಿತ್ರರಂಗದ ಮೇಲೂ ಪ್ರಭಾವ ಬೀರಿದ್ದ. ಉದಾಹರಣೆಗೆ, 1963ರಲ್ಲಿ ಕನ್ನಡದಲ್ಲಿ ಬಂದಿದ್ದ 'ವೀರಕೇಸರಿ' ಚಿತ್ರದ ನಾಯಕನ ಪಾತ್ರ ರಾಬಿನ್ ಹುಡ್ನಿಂದಲೇ ಸ್ಫೂರ್ತಿಗೊಂಡಂತಿತ್ತು.
ಅಷ್ಟೇ ಅಲ್ಲ, ರಾಬಿನ್ಹುಡ್ ವ್ಯಕ್ತಿಗಳ ಮೇಲೂ ಪ್ರಭಾವ ಬೀರಿದ್ದಿದೆ. 19ನೇ ಶತಮಾನದ ಆರಂಭದಲ್ಲಿ ರಾಬಿನ್ಹುಡ್ ಕಥೆಗಳಿಂದ ಸ್ಫೂರ್ತಿಗೊಂಡಿದ್ದ ಯೂರೋಪಿನ ಹಲವು ಯುವಕರು, ಗುಂಪು ಕಟ್ಟಿಕೊಂಡು ಶ್ರೀಮಂತರನ್ನು ದೋಚುವ ಕಾಯಕಕ್ಕಿಳಿದಿದ್ದರು. ಇತ್ತ, ವೀರಪ್ಪನ್ ಸಹ ಅನೇಕ ಅರಣ್ಯಚೋರರಿಗೆ ಸ್ಫೂರ್ತಿಯಾಗಿದ್ದ. ಆತನ ಅವನತಿ ನಂತರ ಅನೇಕ ಮರಿ ವೀರಪ್ಪನ್ಗಳು ಹುಟ್ಟಿಕೊಂಡಿದ್ದನ್ನು ಖುದ್ದು ಪತ್ರಿಕೆಗಳೇ ವರದಿಮಾಡಿದ್ದವು.
ಹೀಗೆ ಕಳ್ಳನಿರಲಿ, ಖದೀಮನಿರಲಿ... ಆತನ ಬಗ್ಗೆ ಎಷ್ಟು ನಕಾರಾತ್ಮಕ ಕಥೆಗಳು ಗುಂಯ್ ಗುಡುತ್ತವೋ, ಅಷ್ಟೇ ಗಮ್ಮತ್ತಿನಲ್ಲಿ ಆತನಲ್ಲಿರುವ ಉತ್ತಮ ಗುಣಗಳೂ ಗಿರಿಗಿಟ್ಲೆ ಹಾಕುತ್ತಿರುತ್ತವೆ. ಇಂಥ ವ್ಯಕ್ತಿಗಳು ಬಹುತೇಕ ಇದೇ ಕಾರಣಕ್ಕೆ ಆಯಾ ಕಾಲಕ್ಕೆ ಮಾತ್ರವಲ್ಲದೆ, ತಲೆಮಾರುಗಳವರೆಗೂ ಪ್ರಪಂಚದಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ.
- ಚೇತನ್ ಓ.ಆರ್.
chethan.media@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


