

2011ರಲ್ಲಿ ಟೆಸ್ಟ್ ರ್ಯಾಂಕಿಂಗ್ನ ನಂಬರ್ ಒನ್ ಸ್ಥಾನದಲ್ಲಿ ಮಿಂಚುತ್ತಿದ್ದ ಟೀಂ ಇಂಡಿಯಾ, ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾಗಿತ್ತು. ಆಂಗ್ಲ ಪಡೆಯನ್ನು ಹಗುರವಾಗಿ ಪರಿಗಣಿಸಿದ್ದ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ತಂಡಕ್ಕೆ ಯಾವುದೇ ಭೀತಿ ಇರಲಿಲ್ಲ. ಅತ್ತ ಸದಾ ಕಾಡುವ ಸಚಿನ್ ತೆಂಡೂಲ್ಕರ್ ಭಾರತ ತಂಡದಲ್ಲಿರುವುದನ್ನು ಕಂಡು ಇಂಗ್ಲೆಂಡ್ ಒಳಗೊಳಗೇ ಕಂಪಿಸುತ್ತಿತ್ತು. ಆದಾಗ್ಯೂ, ಅರ್ಧ ಶತಕ ಗಳಿಸುವಲ್ಲಿ ಸಚಿನ್ ಒದ್ದಾಡಿದ್ದರು. ಭಾರತ ತಂಡ ಹೀನಾಯವಾಗಿ ಸೋತು, ಆಂಗ್ಲರ ನಾಡಿನಲ್ಲಿ ಮಕಾಡೆ ಮಲಗಿತ್ತು. ಇದು ಸಾಧ್ಯವಾಗಿದ್ದು, ಸಚಿನ್ ಆಡಿದ ಹಿಂದಿನ ಪಂದ್ಯಗಳ ವಿಡಿಯೋದಿಂದ ಎಂದರೆ ನಂಬುತ್ತೀರಾ?
ಇಂಗ್ಲೆಂಡ್ ತಂಡ ಸಚಿನ್ ಅರ್ಧ ಶತಕ ಪೂರೈಸುವವರೆಗೂ ಆನ್ಸೈಡ್ನಲ್ಲಿ ರನ್ ಗಳಿಸುತ್ತಾರೆ ಎಂಬುದನ್ನು ವಿಡಿಯೋ ವಿಶ್ಲೇಷಣೆಯಿಂದ ಅಧ್ಯಯನ ಮಾಡಿದ್ದ ಇಂಗ್ಲೆಂಡ್, ಸಚಿನ್ ಕಟ್ಟಿಹಾಕಲು ವಿಶೇಷ ಬೌಲಿಂಗ್ ತಂತ್ರ ಹೆಣೆದಿತ್ತು!
ಬರೀ ಕ್ರಿಕೆಟ್ನಲ್ಲಿ ಮಾತ್ರವಲ್ಲ, ಫುಟ್ಬಾಲ್, ಹಾಕಿ, ಟೆನಿಸ್, ಬ್ಯಾಡ್ಮಿಂಟನ್, ವಾಲಿಬಾಲ್, ಬಾಸ್ಕೆಟ್ಬಾಲ್ ಸೇರಿದಂತೆ ಎಲ್ಲ ಕ್ರೀಡೆಗಳಲ್ಲೂ ಇಂದು ವಿಡಿಯೋ ವಿಶ್ಲೇಷಣೆ ತುಂಬಾ ಮಹತ್ವದ್ದು. ಆದರೆ, ಫುಟ್ಬಾಲ್ನಲ್ಲಿ ಕ್ರೀಡೆಗಳಿಗಿಂತ ಮುಂದುವರಿದ ತಂತ್ರಜ್ಞಾನ ಬಳಕೆಯಲ್ಲಿದೆ. ಕಾರಣ, ಇಂದು ಅಂಪೈರ್ ತೀರ್ಮಾನ ಅಂತಿಮ ತೀರ್ಮಾನವಲ್ಲ. ಕ್ಯಾಮೆರಾ ತೀರ್ಮಾನವೇ ಅಂತಿಮ ತೀರ್ಮಾನ!
ಅಲ್ಲದೆ, 1983ರ ವಿಶ್ವಕಪ್ನಲ್ಲಿ ಜಿಂಬಾಬ್ವೆ ವಿರುದ್ಧ ಕಪಿಲ್ದೇವ್ ಏಕಾಂಗಿ ಹೋರಾಟ ನಡೆಸಿ, ಅಜೇಯ 175 ರನ್ ಗಳಿಸಿದ್ದ ವಿಡಿಯೋ ನಮಗೆ ಲಭ್ಯವಿಲ್ಲ ಎಂಬ ಕೊರಗು ಇಂದಿಗೂ ಕಾಡುತ್ತಿದೆ.
ಮಹತ್ವದ ಅಂಶ
'ವಿಡಿಯೋ ವಿಶ್ಲೇಷಣೆ ಮಾಡುವುದರಿಂದ ಒಬ್ಬ ಆಟಗಾರ, ತನ್ನ ಬಲ, ದೌರ್ಬಲ್ಯ ಹಾಗೂ ಇತರ ಅಂಶಗಳನ್ನು ಕಲಿಯಬಹುದು. ಇತ್ತೀಚೆಗೆ ಕೆಲ ಸಂಸ್ಥೆಗಳು ಪ್ರತಿಯೊಂದು ಕ್ರೀಡೆಯ ಪ್ರತಿಯೊಬ್ಬ ಆಟಗಾರನ ವಿಡಿಯೋ ವಿಶ್ಲೇಷಣೆಯನ್ನು ಸಂಗ್ರಹಿಸುತ್ತಿವೆ. ಹೀಗಾಗಿ, ಒಬ್ಬ ವಿಡಿಯೋಗ್ರಾಫರ್ಗೆ ತಾನು ವಿಡಿಯೋ ಮಾಡುತ್ತಿರುವ ಆಟದ ನಿಯಮಗಳು, ವಿಡಿಯೋಗ್ರಫಿ, ಎಲೆಕ್ಟ್ರಿಕಲ್ಸ್, ಎಲೆಕ್ಟ್ರಾನಿಕ್ಸ್ ಹಾಗೂ ಕಂಪ್ಯೂಟರ್ ತಂತ್ರಜ್ಞಾನವನ್ನು ಚೆನ್ನಾಗಿ ಅರಿತಿರಬೇಕಾದ್ದು ಅಗತ್ಯವಾಗಿದೆ' ಎನ್ನುತ್ತಾರೆ ವಿಡಿಯೋ ವಿಶ್ಲೇಷಕ ಶಶಿಕುಮಾರ್.
ಆಯ್ಕೆ ಹೇಗೆ?
ಹೆಚ್ಚಿನ ಅವಕಾಶವಿರುವ ಕ್ರಿಕೆಟ್ ಮಟ್ಟಿಗೆ ಹೇಳುವುದಾದರೆ, ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಬಿಸಿಸಿಐ ವಿಡಿಯೋ ವಿಶ್ಲೇಷಕರನ್ನು ಆಯ್ಕೆ ಮಾಡುತ್ತದೆ. ಮೊದಲು ಇವರನ್ನು ಆಯ್ಕೆಮಾಡಿ, ರಾಜ್ಯ ಸಂಸ್ಥೆಗಳು ಬಿಸಿಸಿಐಗೆ ಕಳುಹಿಸಿಕೊಡಬೇಕು. ನಂತರ ಅಲ್ಲಿ ತರಬೇತಿ ನೀಡಿ ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ ಪಾಸ್ ಆದವರು ಆಯ್ಕೆಯಾಗುತ್ತಾರೆ. ಅಲ್ಲದೆ, ಖಾಸಗಿ ಸಂಸ್ಥೆಗಳಲ್ಲಿ ವ್ಯಾಪಕ ಅವಕಾಶಗಳಿವೆ.
ಗಳಿಕೆ ಏನು?
ಬಿಸಿಸಿಐ ಸೇರಿದಂತೆ ಖಾಸಗಿ ಸಂಸ್ಥೆಗಳು ವಿಡಿಯೋ ವಿಶ್ಲೇಷಕರಿಗೆ ಕೈತುಂಬ ಸಂಬಳ ಕೊಡುತ್ತವೆ.
-ಮಲ್ಲಿಕಾರ್ಜುನ ಕರಿಯಪ್ಪನವರ
malluk3@gmail.com